
ಇಂಧನ ಉಳಿತಾಯಕ್ಕಾಗಿ ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ ವಾರದಲ್ಲಿ 2 ದಿನ ‘ವರ್ಕ್ ಫ್ರಮ್ ಹೋಮ್’ ನೀಡುವಂತೆ ದೆಹಲಿ ಸರ್ಕಾರ ಸಲಹೆ ನೀಡಿದೆ.
ವಾರಕ್ಕೆ 2 ದಿನ 'ವರ್ಕ್ ಫ್ರಮ್ ಹೋಮ್' ಕೊಡಿ: ಖಾಸಗಿ ಕಂಪೆನಿಗಳಿಗೆ ದೆಹಲಿ ಸರ್ಕಾರ ಮನವಿ
ಇಂಧನ ಉಳಿತಾಯಕ್ಕಾಗಿ ದೆಹಲಿಯ ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ ವಾರದಲ್ಲಿ ಎರಡು ದಿನಗಳ ಕಾಲ ಮನೆಯಿಂದಲೇ ಕೆಲಸ ಮಾಡಲು ದೆಹಲಿ ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಿದೆ.
ಜಾಗತಿಕ ಅನಿಶ್ಚಿತತೆ ಮತ್ತು ಹೆಚ್ಚುತ್ತಿರುವ ಇಂಧನ ಅಭಾವದ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂಧನ ಉಳಿತಾಯಕ್ಕೆ ದೆಹಲಿ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ರಾಜಧಾನಿಯ ಎಲ್ಲಾ ಖಾಸಗಿ ಕಂಪನಿಗಳು ಮತ್ತು ವಾಣಿಜ್ಯ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ವಾರದಲ್ಲಿ ಕನಿಷ್ಠ ಎರಡು ದಿನಗಳ ಕಾಲ ಮನೆಯಿಂದಲೇ ಕೆಲಸ ಮಾಡಲು (ವರ್ಕ್ ಫ್ರಮ್ ಹೋಮ್) ಅವಕಾಶ ನೀಡಬೇಕು ಎಂದು ಕಾರ್ಮಿಕ ಇಲಾಖೆಯು ದೆಹಲಿ ಸರ್ಕಾರಕ್ಕೆ ಅಧಿಕೃತವಾಗಿ ಸಲಹೆ ನೀಡಿದೆ.
ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಇತ್ತೀಚೆಗೆ ಚಾಲನೆ ನೀಡಿದ 90 ದಿನಗಳ "ಮೇರಾ ಭಾರತ್, ಮೇರಾ ಯೋಗ್ ದಾನ್" ಅಭಿಯಾನದ ಭಾಗವಾಗಿ ಈ ಹೊಸ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗಿದೆ. ಸಂಪನ್ಮೂಲಗಳನ್ನು ವಿವೇಚನೆಯಿಂದ ಬಳಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ನೀಡಿದ್ದ ಇತ್ತೀಚಿನ ಕರೆಯನ್ನು ಆಧರಿಸಿ ದೆಹಲಿ ಸರ್ಕಾರವು ಈ ಇಂಧನ ಉಳಿತಾಯ ಡ್ರೈವ್ ಅನ್ನು ತೀವ್ರಗೊಳಿಸಿದೆ. ಈಗಾಗಲೇ ದೆಹಲಿ ಸರ್ಕಾರದ ಇಲಾಖೆಗಳಲ್ಲಿ ವಾರಕ್ಕೆ ಎರಡು ದಿನ ಮನೆಯಿಂದಲೇ ಕೆಲಸ ಮಾಡುವ ನಿಯಮವನ್ನು ಕಡ್ಡಾಯಗೊಳಿಸಿದ್ದು, ಇದೀಗ ಖಾಸಗಿ ವಲಯವೂ ಇದಕ್ಕೆ ಕೈಜೋಡಿಸುವಂತೆ ಕೋರಲಾಗಿದೆ. ಕಾರ್ಮಿಕ ಇಲಾಖೆ ಪ್ರಕಾರ, ದೆಹಲಿಯಲ್ಲಿ ದೈನಂದಿನ ಕಚೇರಿ ಪ್ರಯಾಣದಿಂದಲೇ ಅತಿ ಹೆಚ್ಚು ಇಂಧನ ವ್ಯಯವಾಗುತ್ತಿದ್ದು, ಕೊರೊನಾ ಸಾಂಕ್ರಾಮಿಕ ಹಾಗೂ ಮಾಲಿನ್ಯ ನಿಯಂತ್ರಣದ ಸಂದರ್ಭಗಳಲ್ಲಿ 'ವರ್ಕ್ ಫ್ರಮ್ ಹೋಮ್' ಯಶಸ್ವಿಯಾಗಿ ಜಾರಿಯಾಗಿದ್ದನ್ನು ಇಲ್ಲಿ ಉಲ್ಲೇಖಿಸಲಾಗಿದೆ.
ಈ ಇಂಧನ ಉಳಿತಾಯ ಅಭಿಯಾನಕ್ಕೆ ಸಹಕರಿಸುವಂತೆ ಐಟಿ ಸಂಸ್ಥೆಗಳು, ಕಾರ್ಖಾನೆಗಳು, ಅಂಗಡಿ ಮುಂಗಟ್ಟುಗಳು ಹಾಗೂ ವಾಣಿಜ್ಯ ಸಂಸ್ಥೆಗಳಿಗೆ ಸರ್ಕಾರ ಮನವಿ ಮಾಡಿದೆ. ಕಚೇರಿಗಳ ಕೆಲಸದ ಸಮಯವನ್ನು ಒಂದೇ ಬಾರಿಗೆ ಆರಂಭಿಸದೆ ಹಂತ ಹಂತವಾಗಿ (ಸ್ಟ್ಯಾಗರ್ಡ್ ಟೈಮಿಂಗ್ಸ್) ನಿಗದಿಪಡಿಸುವುದು, ಉದ್ಯೋಗಿಗಳು ಕಾರ್-ಪೂಲಿಂಗ್ ಹಾಗೂ ಸಾರ್ವಜನಿಕ ಸಾರಿಗೆಯನ್ನು ಹೆಚ್ಚಾಗಿ ಬಳಸುವಂತೆ ಪ್ರೋತ್ಸಾಹಿಸುವುದು ಮತ್ತು ಕಚೇರಿಯ ಕೆಲಸಗಳಿಗಾಗಿ ಅನಗತ್ಯವಾಗಿ ವಾಹನಗಳನ್ನು ಬಳಸುವುದನ್ನು ಕಡಿಮೆ ಮಾಡಲು ಸೂಚಿಸಲಾಗಿದೆ.
ನೇರ ಭೇಟಿಯ ಬದಲಾಗಿ ವರ್ಚುವಲ್ ಅಥವಾ ಆನ್‌ಲೈನ್ ಸಭೆಗಳನ್ನು ನಡೆಸಲು ಕಂಪನಿಗಳಿಗೆ ಸಲಹೆ ನೀಡಲಾಗಿದೆ. ಆದರೆ, ಆಸ್ಪತ್ರೆಗಳು, ವಿದ್ಯುತ್, ನೀರು ಮತ್ತು ನೈರ್ಮಲ್ಯದಂತಹ ತುರ್ತು ಹಾಗೂ ಅತ್ಯಗತ್ಯ ಸೇವೆಗಳನ್ನು ಒದಗಿಸುವ ಸಂಸ್ಥೆಗಳಿಗೆ ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ. ಇದರೊಂದಿಗೆ, ಪೆಟ್ರೋಲ್, ಡೀಸೆಲ್ ಮತ್ತು ಸಿಎನ್‌ಜಿ ಉಳಿತಾಯದ ರಾಷ್ಟ್ರೀಯ ಪ್ರಾಮುಖ್ಯತೆಯ ಬಗ್ಗೆ ಉದ್ಯೋಗಿಗಳಲ್ಲಿ ಜಾಗೃತಿ ಮೂಡಿಸುವಂತೆ ಮತ್ತು ಸ್ವದೇಶಿ ಉತ್ಪನ್ನಗಳಿಗೆ ಆದ್ಯತೆ ನೀಡಿ ದೇಶದ ಆರ್ಥಿಕತೆಯನ್ನು ಬಲಪಡಿಸುವಂತೆ ದೆಹಲಿ ಸರ್ಕಾರವು ಖಾಸಗಿ ವಲಯಕ್ಕೆ ವಿನಂತಿಸಿದೆ.

