
‘ಅಪರಾಧ ಮಾಡಿದ್ರೆ ಸಾಯುತ್ತೇವೆ ಎಂಬ ಭಯ ಇರಬೇಕು’: ದೆಹಲಿ ಪೊಲೀಸರಿಗೆ ಸುಪ್ರೀಂ ಕೋರ್ಟ್ ಸೂಚನೆ
ದೆಹಲಿ ಮತ್ತು ಸುತ್ತಮುತ್ತ ವರದಿಯಾಗುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕ್ರಣಗಳ ಬಗ್ಗೆ ಸ್ವಯಂಪ್ರೇರಿತ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಅಪರಾಧಿಗಳ ಮನಸ್ಸಿನಲ್ಲಿ ಪೊಲೀಸರ ಭಯ ಮೂಡಬೇಕು ಎಂದು ದೆಹಲಿ ಪೊಲೀಸರಿಗೆ ಸೂಚಿನೆ ನೀಡಿದೆ.
ದೆಹಲಿ ಹಾಗೂ ಸುತ್ತಮುತ್ತ ಇತ್ತೀಚೆಗೆ ವರದಿಯಾಗಿರುವ ಅತ್ಯಾಚಾರ ಪ್ರಕರಣಗಳನ್ನು ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್, ಲೈಂಗಿಕ ಅಪರಾಧಗಳನ್ನು ತಡೆಯಲು ದೆಹಲಿ ಪೊಲೀಸರಿಗೆ ಕಠಿಣ ಸೂಚನೆ ನೀಡಿದೆ. ಲೈಂಗಿಕ ಅಪರಾಧಗಳಿಗೆ ಮುಂದಾಗುವವರ ಮನಸ್ಸಿನಲ್ಲಿ ಪೊಲೀಸರ ಬಗ್ಗೆ ಭಯ ಮೂಡಿಸುವ ರೀತಿಯಲ್ಲಿ ಕಾನೂನು ಜಾರಿ ವ್ಯವಸ್ಥೆ ಕಾರ್ಯನಿರ್ವಹಿಸಬೇಕು ಎಂದು ನ್ಯಾಯಾಲಯ ಹೇಳಿದೆ.
“ಇನ್ನು ಯಾವುದೇ ಅಪರಾಧ ಮಾಡಿದರೆ ತಮಗೆ ಸಾವೇ ಶಿಕ್ಷೆ” ಎಂಬ ಭಯ ಅಪರಾಧಿಗಳ ಮನಸ್ಸಿನಲ್ಲಿ ಮೂಡಬೇಕು ಎಂಬ ಅರ್ಥದಲ್ಲಿ ಸುಪ್ರೀಂ ಕೋರ್ಟ್ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಇತ್ತೀಚೆಗೆ ದೆಹಲಿ ಮತ್ತು ಸುತ್ತಮುತ್ತ ನಡೆದ ಹಲವು ಅತ್ಯಾಚಾರ ಪ್ರಕರಣಗಳ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ. ಸ್ಲೀಪರ್ ಬಸ್ನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವೂ ಇದರಲ್ಲಿ ಸೇರಿದೆ.
ಪೊಲೀಸರ ಪೂರ್ವಭಾವಿ ಕ್ರಮಗಳ ಬಗ್ಗೆ ಪ್ರಶ್ನೆ
ದಕ್ಷಿಣ ದೆಹಲಿಯ ಉದ್ಯಾನವೊಂದರಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಉಲ್ಲೇಖಿಸಿದ ಸುಪ್ರೀಂ ಕೋರ್ಟ್, ಬಾಲಕಿಯರ ಕಾಲೇಜಿನಿಂದ ಕೇವಲ ಎರಡು ಕಿಲೋಮೀಟರ್ ದೂರದಲ್ಲೇ ಇಂತಹ ಘಟನೆ ನಡೆದಿರುವುದನ್ನು ಗಂಭೀರವಾಗಿ ಪರಿಗಣಿಸಿದೆ. ಅಪರಾಧಿಗಳ ಬಗ್ಗೆ ಸ್ಥಳೀಯರಿಂದ ಪೊಲೀಸರಿಗೆ ಮುನ್ನೆಚ್ಚರಿಕೆ ಮಾಹಿತಿ ನೀಡಲಾಗಿತ್ತು ಎಂಬ ಅಂಶವನ್ನೂ ನ್ಯಾಯಾಲಯ ಪ್ರಸ್ತಾಪಿಸಿತು. ಇಂತಹ ಪರಿಸ್ಥಿತಿಯಲ್ಲಿ ಅಪರಾಧ ನಡೆಯದಂತೆ ತಡೆಯಲು ದೆಹಲಿ ಪೊಲೀಸರು ಯಾವ ರೀತಿಯ ಪೂರ್ವಭಾವಿ ಕ್ರಮಗಳನ್ನು ಕೈಗೊಂಡಿದ್ದರು ಎಂದು ನ್ಯಾಯಾಲಯ ಪ್ರಶ್ನಿಸಿತು.
“ಇಂತಹ ಅಪರಾಧಗಳನ್ನು ಹೇಗೆ ತಡೆಯಬಹುದು? ಇವುಗಳನ್ನು ನಿಲ್ಲಿಸುವುದನ್ನು ಖಚಿತಪಡಿಸಿಕೊಳ್ಳಬೇಕು. ನಾವು ಒಟ್ಟಾಗಿ ಕೆಲಸ ಮಾಡಿದರೆ ಬದಲಾವಣೆ ತರಬಹುದು” ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಅಪರಾಧ ತಡೆಗೆ ‘ವಾರ್ ರೂಂ’?
ರಾಷ್ಟ್ರ ರಾಜಧಾನಿಯಲ್ಲಿ ಲೈಂಗಿಕ ಅಪರಾಧಗಳನ್ನು ತಡೆಯಲು ಸಮನ್ವಯಿತ ವ್ಯವಸ್ಥೆ ರೂಪಿಸುವ ಕುರಿತು ಕೂಡ ಸುಪ್ರೀಂ ಕೋರ್ಟ್ ಮಾಹಿತಿ ಕೇಳಿದೆ. ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರ ನೇತೃತ್ವದಲ್ಲಿ ಅಪರಾಧ ತಡೆಗೆ ವಿಶೇಷ ‘ವಾರ್ ರೂಂ’ ರಚಿಸುವ ಸಾಧ್ಯತೆ ಕುರಿತು ನ್ಯಾಯಾಲಯ ಮಾಹಿತಿ ಕೇಳಿದೆ.
ಅಪರಾಧ ನಡೆದ ಬಳಿಕ ಕ್ರಮ ಕೈಗೊಳ್ಳುವುದಕ್ಕಿಂತ, ಇಂತಹ ಘಟನೆಗಳು ನಡೆಯುವ ಮುನ್ನವೇ ಅಪಾಯದ ಪ್ರದೇಶಗಳು, ಅಪರಾಧಿಗಳ ಚಟುವಟಿಕೆಗಳು ಮತ್ತು ಲಭ್ಯವಾಗುವ ಮುನ್ನೆಚ್ಚರಿಕೆ ಮಾಹಿತಿಯನ್ನು ಆಧರಿಸಿ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂಬುದನ್ನು ನ್ಯಾಯಾಲಯದ ವಿಚಾರಣೆ ಒತ್ತಿ ಹೇಳಿದೆ.
ದೆಹಲಿ ಮತ್ತು ಸುತ್ತಮುತ್ತ ವರದಿಯಾಗುತ್ತಿರುವ ಲೈಂಗಿಕ ಅಪರಾಧಗಳ ಕುರಿತು ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿರುವ ವಿಚಾರಣೆ ಮುಂದುವರಿದಿದ್ದು, ಅಪರಾಧ ತಡೆಗೆ ಪೊಲೀಸರು ಕೈಗೊಳ್ಳಬೇಕಾದ ಕ್ರಮಗಳ ಕುರಿತು ನ್ಯಾಯಾಲಯದ ನಿರ್ದೇಶನಗಳು ಮಹತ್ವ ಪಡೆದಿವೆ.

