ಮದ್ಯದ ಅಮಲಿನಲ್ಲಿ ಗಲಾಟೆ ಮಾಡುತ್ತಿದ್ದ ಯುವಕರನ್ನು ಪ್ರಶ್ನಿಸಿದ್ದಕ್ಕೆ ಮಣಿಪುರಿ ಗಾಯಕನ ಮೇಲೆ ಹಲ್ಲೆ; ಚಿಕಿತ್ಸೆ ಫಲಿಸದೆ ಸಾವು
x

ಮದ್ಯದ ಅಮಲಿನಲ್ಲಿ ಗಲಾಟೆ ಮಾಡುತ್ತಿದ್ದ ಯುವಕರನ್ನು ಪ್ರಶ್ನಿಸಿದ್ದಕ್ಕೆ ಮಣಿಪುರಿ ಗಾಯಕನ ಮೇಲೆ ಹಲ್ಲೆ; ಚಿಕಿತ್ಸೆ ಫಲಿಸದೆ ಸಾವು

ದೆಹಲಿಯ ಕಿಲೋಕರಿಯಲ್ಲಿ ಮನೆಯ ಹೊರಗೆ ಮದ್ಯಪಾನ ಮಾಡಿ ಗಲಾಟೆ ಮಾಡುತ್ತಿದ್ದವರನ್ನು ಪ್ರಶ್ನಿಸಿದ್ದ 54 ವರ್ಷದ ಮಣಿಪುರಿ ಸಂಗೀತಗಾರ ಸಿ. ವಿಕ್ರಮ್ ಸಿಂಗ್ ಮೇಲೆ ಹಲ್ಲೆ ಹತ್ಯೆ ಮಾಡಿದ್ದಾರೆ. ಪ್ರಕರಣದಲ್ಲಿ 7 ಮಂದಿಯನ್ನು ಅರೆಸ್ಟ್‌ ಮಾಡಲಾಗಿದೆ.


Click the Play button to hear this message in audio format

ಮನೆಯ ಹೊರಗೆ ಗದ್ದಲ ಮಾಡುತ್ತಾ ಮದ್ಯಪಾನ ಮಾಡುತ್ತಿದ್ದವರನ್ನು ಪ್ರಶ್ನಿಸಿದ 54 ವರ್ಷದ ಮಣಿಪುರಿ ಹಿನ್ನೆಲೆ ಗಾಯಕ ಹಲ್ಲೆಗೊಳಗಾಗಿ ಮೃತಪಟ್ಟಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದು, ಒಬ್ಬ ಅಪ್ರಾಪ್ತನನ್ನು ವಶಕ್ಕೆ ಪಡೆದಿದ್ದಾರೆ.

ಮೃತರನ್ನು ಮಣಿಪುರ ಮೂಲದ ಸಿ. ವಿಕ್ರಮ್ ಸಿಂಗ್ ಎಂದು ಗುರುತಿಸಲಾಗಿದೆ. ಅವರು ಹಲವು ವರ್ಷಗಳಿಂದ ದೆಹಲಿಯ ಕಿಲೋಕರಿ ಗ್ರಾಮದ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರು. ಸೋಮವಾರ ಮುಂಜಾನೆ ಅವರ ಮನೆಯ ಹೊರಗೆ ಡೆಲಿವರಿ ಕೆಲಸಗಾರರು ಹಾಗೂ ಧಾಬಾ ಸಿಬ್ಬಂದಿಯ ಗುಂಪೊಂದು ಜೋರಾಗಿ ಮಾತನಾಡುತ್ತಾ, ಮದ್ಯಪಾನ ಮಾಡಿ ಗದ್ದಲ ಮಾಡುತ್ತಿತ್ತು ಎನ್ನಲಾಗಿದೆ.

ಈ ವೇಳೆ ಸಿಂಗ್ ಅವರು ಮನೆಯ ಹೊರಗೆ ಗದ್ದಲ ಮಾಡದಂತೆ ಮತ್ತು ಶಬ್ದ ಕಡಿಮೆ ಮಾಡುವಂತೆ ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಗುಂಪು ಅವರ ಮೇಲೆ ಹಲ್ಲೆ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೂರ್ಯನಗರ ಕಾಲೋನಿ ಪೊಲೀಸ್ ಠಾಣೆಗೆ ಸಿಂಗ್ ಮೇಲೆ ಹಲ್ಲೆ ನಡೆದಿರುವ ಕುರಿತು PCR ಕರೆ ಬಂದಿತ್ತು. ಪ್ರಾಥಮಿಕ ತನಿಖೆಯಲ್ಲಿ ಸಿಂಗ್ ಅವರು ಮೈತೇಯಿ ಸಮುದಾಯಕ್ಕೆ ಸೇರಿದವರು ಎಂಬುದು ತಿಳಿದುಬಂದಿದೆ. ಆರೋಪಿಗಳು ಸಿಂಗ್‌ಗೆ ಹೊಡೆದು, ಗುದ್ದಿ ಗಂಭೀರವಾಗಿ ಗಾಯಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಲ್ಲೆಯಿಂದ ಗಾಯಗೊಂಡ ಸಿಂಗ್ ಅವರನ್ನು ಅವರ ಪುತ್ರ ಯೈಫಾಬಾ ಅವರು ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಕಾರಣವಾದ ಪರಿಸ್ಥಿತಿ ಹಾಗೂ ಸಿಂಗ್ ಅವರ ಸಾವಿನ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಅಭಿಮಾನಿಗಳಿಗೆ ಆಘಾತ

ದೆಹಲಿ ವಿಶ್ವವಿದ್ಯಾಲಯದ ನಾರ್ತ್ ಈಸ್ಟ್ ಸ್ಟೂಡೆಂಟ್ಸ್ ಸೊಸೈಟಿ (NESSDU) ಸಿಂಗ್ ಅವರ ಸಾವಿಗೆ ಸಂತಾಪ ಸೂಚಿಸಿದೆ. ಅವರನ್ನು ‘ಗೌರವಾನ್ವಿತ ಮಣಿಪುರಿ ಸಂಗೀತಗಾರ’ ಎಂದು ಸಂಘಟನೆ ಬಣ್ಣಿಸಿದೆ. ಆರು ಮಂದಿ ವ್ಯಕ್ತಿಗಳು ಸಿಂಗ್ ಅವರ ಅಪಾರ್ಟ್‌ಮೆಂಟ್‌ನ ಹೊರಗೆ ಮದ್ಯಪಾನ ಮಾಡುತ್ತಾ ಗದ್ದಲ ಮಾಡುತ್ತಿದ್ದ ವೇಳೆ, ಶಬ್ದ ಕಡಿಮೆ ಮಾಡುವಂತೆ ಮನವಿ ಮಾಡಲು ಸಿಂಗ್ ಕೆಳಗೆ ಬಂದಿದ್ದರು. ಈ ವೇಳೆ ಗುಂಪು ಅವರ ಮೇಲೆ ಹಲ್ಲೆ ನಡೆಸಿದ್ದು, ಗಂಭೀರ ಗಾಯಗಳಾಗಿದ್ದವು ಎಂದು ವರದಿಗಳನ್ನು ಉಲ್ಲೇಖಿಸಿ NESSDU ತಿಳಿಸಿದೆ.

ಈ ಘಟನೆಯನ್ನು ‘ಅರ್ಥಹೀನ ಹಿಂಸಾಚಾರ’ ಎಂದು ಕರೆದಿರುವ ವಿದ್ಯಾರ್ಥಿ ಸಂಘಟನೆ, ಪ್ರಕರಣದ ಕುರಿತು ತ್ವರಿತ, ನ್ಯಾಯಸಮ್ಮತ ಹಾಗೂ ಸಂಪೂರ್ಣ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳನ್ನು ಒತ್ತಾಯಿಸಿದೆ.

ಏಳು ಮಂದಿ ಬಂಧನ, ಅಪ್ರಾಪ್ತ ವಶಕ್ಕೆ

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿರುವ ಆರೋಪಿಗಳನ್ನು ಭರತ್ ಕುಮಾರ್ (19), ಪ್ರಮೋದ್ (26), ರಮ್ಜಾನ್ ಖಾನ್ (22), ದೀಪಾಂಶು (21), ಮೋಹನ್ ವಿಶ್ವಕರ್ಮ (32), ವಿಜಯ್ (36) ಮತ್ತು ಮನ್ನು (26) ಎಂದು ಗುರುತಿಸಲಾಗಿದೆ. ಒಬ್ಬ ಅಪ್ರಾಪ್ತನನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳೆಲ್ಲರೂ ವಿವಿಧ ಧಾಬಾಗಳು ಮತ್ತು ಆಹಾರ ಮಳಿಗೆಗಳಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಹಲ್ಲೆಯ ನಿಖರ ಕಾರಣ ಹಾಗೂ ಸಿಂಗ್ ಅವರ ಸಾವಿಗೆ ಸಂಬಂಧಿಸಿದ ಇತರ ಆಯಾಮಗಳ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read More
Next Story