
ದೆಹಲಿಯಲ್ಲಿ ಸಿಜೆಪಿ ಪ್ರತಿಭಟನೆಗೆ ತಡೆ: ಅಭಿಜೀತ್ ದಿಪ್ಕೆ ಪೊಲೀಸ್ ವಶಕ್ಕೆ
ದೆಹಲಿಯಲ್ಲಿ ರಾಷ್ಟ್ರಧ್ವಜದೊಂದಿಗೆ ಜಮಾಯಿಸಲು ಸಿಜೆಪಿ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ 6 ಸಾವಿರಕ್ಕೂ ಹೆಚ್ಚು ಪೊಲೀಸ್, ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿತ್ತು.
ದೆಹಲಿಯಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಹಾಗೂ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಲೋಪದೋಷಗಳನ್ನು ವಿರೋಧಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಕರೆ ನೀಡಿದ್ದ 'ಲೆಹ್ರಾ ದೋ ತಿರಂಗಾ' (ತ್ರಿವರ್ಣ ಧ್ವಜ ಹಾರಿಸಿ) ರ‍್ಯಾಲಿಯು ಭಾರಿ ವಿವಾದಕ್ಕೆ ಕಾರಣವಾಗಿದೆ. ಪ್ರತಿಭಟನೆ ಆರಂಭವಾಗುವ ಮುನ್ನವೇ ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರನ್ನು ದೆಹಲಿ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದಿದ್ದಾರೆ.
ದೆಹಲಿಯ ಕನ್ನಾಟ್ ಪ್ಲೇಸ್‌ನ ಸೆಂಟ್ರಲ್ ಪಾರ್ಕ್‌ನಲ್ಲಿ ರಾಷ್ಟ್ರಧ್ವಜದೊಂದಿಗೆ ಜಮಾಯಿಸಲು ಸಿಜೆಪಿ ಕರೆ ನೀಡಿದ್ದ ಹಿನ್ನೆಲೆಯಲ್ಲಿ, ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ದೆಹಲಿ ಪೊಲೀಸರು ಸರ್ವ ಸನ್ನದ್ಧರಾಗಿದ್ದರು. ಕನ್ನಾಟ್ ಪ್ಲೇಸ್ ಸುತ್ತಮುತ್ತ ಸುಮಾರು 6 ಸಾವಿರಕ್ಕೂ ಹೆಚ್ಚು ಪೊಲೀಸ್ ಮತ್ತು ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿತ್ತು. ಸೆಂಟ್ರಲ್ ಪಾರ್ಕ್ ಅನ್ನು ಸಂಪೂರ್ಣವಾಗಿ ಮುಚ್ಚಲಾಗಿದ್ದು, ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಬಿಎನ್‌ಎಸ್ ಸೆಕ್ಷನ್ 163 (ನಿಷೇಧಾಜ್ಞೆ) ಜಾರಿಯಲ್ಲಿದ್ದ ಕಾರಣ ಯಾವುದೇ ಗುಂಪು ಸೇರುವುದಕ್ಕೆ ಅನುಮತಿ ಇರಲಿಲ್ಲ. ಅಭಿಜೀತ್ ದಿಪ್ಕೆ ಅವರಿಗೆ ಪ್ರತಿಭಟನೆಗೆ ಮುನ್ನವೇ ದೆಹಲಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ಕನ್ನಾಟ್ ಪ್ಲೇಸ್ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುವ ಕಾರಣ, ಅಲ್ಲಿ ಮೆರವಣಿಗೆ ಅಥವಾ ಪ್ರತಿಭಟನೆ ನಡೆಸಿದರೆ ಅದು ಕಾನೂನು ಉಲ್ಲಂಘನೆಯಾಗುತ್ತದೆ ಎಂದು ಎಚ್ಚರಿಸಲಾಗಿತ್ತು. ಸಂಜೆ 5 ಗಂಟೆಗೆ ನಡೆಯಬೇಕಿದ್ದ ಪ್ರತಿಭಟನೆಗಾಗಿ ಕನ್ನಾಟ್ ಪ್ಲೇಸ್‌ಗೆ ತೆರಳುತ್ತಿದ್ದ ದಿಪ್ಕೆ ಅವರನ್ನು ದೆಹಲಿ ಪೊಲೀಸರು ತಡೆದು ವಶಕ್ಕೆ ಪಡೆದರು. "ನಿಮ್ಮನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ತೆಗೆದುಕೊಳ್ಳುತ್ತಿದ್ದೇವೆ. ಸೆಕ್ಷನ್ 163 ಜಾರಿಯಲ್ಲಿರುವುದರಿಂದ ಪ್ರತಿಭಟನೆಗೆ ಅವಕಾಶವಿಲ್ಲ," ಎಂದು ಪೊಲೀಸರು ತಿಳಿಸಿದರು. ಈ ಸಂದರ್ಭದಲ್ಲಿ ದಿಪ್ಕೆ ಅವರ ಬೆಂಬಲಿಗರು ಪೊಲೀಸ್ ವಾಹನವನ್ನು ತಡೆದು ಘೋಷಣೆಗಳನ್ನು ಕೂಗಿದರೂ, ಪೊಲೀಸರು ಅವರನ್ನು ನಿಯಂತ್ರಿಸಿ ಕರೆದೊಯ್ದರು.
ಪ್ರಜಾಪ್ರಭುತ್ವದ ಅಭಿವ್ಯಕ್ತಿಯೇ ಅರಾಜಕತೆಯೇ?
ಪೊಲೀಸ್ ವಶಕ್ಕೆ ಪಡೆಯುವ ಮುನ್ನ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದ ಅಭಿಜೀತ್ ದಿಪ್ಕೆ, "ಸರ್ಕಾರದ ಹೊಣೆಗಾರಿಕೆಯನ್ನು ಪ್ರಶ್ನಿಸುವುದು ಅರಾಜಕತೆಯಲ್ಲ, ಅದು ಪ್ರಜಾಪ್ರಭುತ್ವದ ಮೂಲಭೂತ ಅಭಿವ್ಯಕ್ತಿ" ಎಂದಿದ್ದಾರೆ. ದೆಹಲಿಯಲ್ಲಿ ಹೇರಲಾಗಿರುವ ನಿರ್ಬಂಧಗಳನ್ನು ಖಂಡಿಸಿದ್ದ ಅವರು, ರಾಷ್ಟ್ರಧ್ವಜದ ಗೌರವವನ್ನು ಎತ್ತಿಹಿಡಿಯಲು ತಾವು ಕರೆಯ ನೀಡಿದ್ದ ರ‍್ಯಾಲಿಗೆ ಸರ್ಕಾರ ಅಡ್ಡಿಪಡಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ತ್ರಿವರ್ಣ ಧ್ವಜ ಹಾರಿಸುವುದು ಕಾನೂನುಬಾಹಿರವಲ್ಲವಾದರೂ, ಅನುಮತಿಯಿಲ್ಲದೆ ದೊಡ್ಡ ಮಟ್ಟದಲ್ಲಿ ಜನರನ್ನು ಸೇರಿಸಿ ಮೆರವಣಿಗೆ ನಡೆಸುವುದು ಸಾರ್ವಜನಿಕ ಶಾಂತಿ ಮತ್ತು ಭದ್ರತೆಗೆ ಧಕ್ಕೆ ತರಬಹುದು ಎಂಬುದು ಪೊಲೀಸರ ವಾದವಾಗಿದೆ. ಅಲ್ಲದೆ, ಧ್ವಜ ಸಂಹಿತೆಯ ನಿಯಮಗಳ ಬಗ್ಗೆಯೂ ಎಚ್ಚರಿಕೆ ನೀಡಿದ್ದ ಪೊಲೀಸರು, ಶಾಂತಿಯುತ ಪ್ರತಿಭಟನೆಗೆ ನೀಡಲಾದ ನಿರ್ಬಂಧಗಳನ್ನು ಗೌರವಿಸುವಂತೆ ಸೂಚಿಸಿದ್ದರು.
ರಾಜಕೀಯ ಸಂಘರ್ಷದ ತೀವ್ರತೆ
ದೆಹಲಿಯಲ್ಲಿ ನಡೆಯುತ್ತಿರುವ ಈ ಬೆಳವಣಿಗೆಯು ಕೇಂದ್ರ ಸರ್ಕಾರ ಮತ್ತು ವಿಪಕ್ಷಗಳ ನಡುವಿನ ರಾಜಕೀಯ ಸಂಘರ್ಷವನ್ನು ಮತ್ತಷ್ಟು ಹೆಚ್ಚಿಸಿದೆ. ಚುನಾವಣಾ ಆಯೋಗದ ವಿರುದ್ಧದ ಪ್ರತಿಭಟನೆಗಳನ್ನು ದಮನಿಸಲು ಸರ್ಕಾರ ಯತ್ನಿಸುತ್ತಿದೆ ಎಂದು ಸಿಜೆಪಿ ಆರೋಪಿಸಿದ್ದರೆ, ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಪ್ರಾಥಮಿಕ ಕರ್ತವ್ಯ ಎಂದು ಆಡಳಿತ ಪಕ್ಷ ಸಮರ್ಥಿಸಿಕೊಂಡಿದೆ. ರಾಜಧಾನಿಯಲ್ಲಿ ಅಶಾಂತಿ ಸೃಷ್ಟಿಸಲು ಕೆಲವರು ಯುವಕರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಈಗಾಗಲೇ ಕೇಂದ್ರ ರಕ್ಷಣಾ ಸಚಿವರು ಆರೋಪಿಸಿರುವ ಬೆನ್ನಲ್ಲೇ, ಈ ಬಂಧನ ನಡೆದಿರುವುದು ಚರ್ಚೆಗೆ ಗ್ರಾಸವಾಗಿದೆ.
ಸದ್ಯಕ್ಕೆ ಸೆಂಟ್ರಲ್ ಪಾರ್ಕ್ ಸೇರಿದಂತೆ ಕನ್ನಾಟ್ ಪ್ಲೇಸ್‌ನ ಸುತ್ತಮುತ್ತಲಿನ ಪ್ರದೇಶಗಳು ಪೊಲೀಸರ ಕಣ್ಗಾವಲಿನಲ್ಲಿವೆ. ಎನ್‌ಡಿಎಂಸಿ ಪ್ರತಿಭಟನೆಗೆ ಅನುಮತಿ ನೀಡದ ಕಾರಣ, ಸದ್ಯಕ್ಕೆ ಸಿಜೆಪಿಯ ಪ್ರತಿಭಟನಾ ಕಾರ್ಯಕ್ರಮಗಳಿಗೆ ತಡೆ ಬಿದ್ದಂತಾಗಿದೆ. ಆದಾಗ್ಯೂ, ದಿಪ್ಕೆ ಅವರ ಬಂಧನದಿಂದ ಕೆರಳಿರುವ ಕಾರ್ಯಕರ್ತರು ಪ್ರತಿಭಟನೆ ಮುಂದುವರಿಸುವ ಸಾಧ್ಯತೆಗಳಿದ್ದು, ದೆಹಲಿಯಲ್ಲಿ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಹೇಗಿರುತ್ತದೆ ಎಂಬುದು ಕಾದು ನೋಡಬೇಕಿದೆ.

