ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಳ: ಹೊಟೇಲ್‌, ರೆಸ್ಟೋರೆಂಟ್‌ಗಳಿಗೆ ಕಠಿಣ ನಿಯಮ
x

ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಳ: ಹೊಟೇಲ್‌, ರೆಸ್ಟೋರೆಂಟ್‌ಗಳಿಗೆ ಕಠಿಣ ನಿಯಮ

ದೆಹಲಿಯಲ್ಲಿ ವಾಯು ಗುಣಮಟ್ಟ ಕಳಪೆ ವರ್ಗಕ್ಕೆ ಕುಸಿದ ಹಿನ್ನೆಲೆಯಲ್ಲಿ GRAP ಮೊದಲ ಹಂತ ಜಾರಿಯಾಗಿದೆ. ಹೋಟೆಲ್‌ಗಳ ತಂದೂರ್‌ಗಳಲ್ಲಿ ಕಲ್ಲಿದ್ದಲು ಬಳಕೆಗೆ ನಿರ್ಬಂಧ, ವಾಹನಗಳ ಹೊಗೆ ಮತ್ತು ಧೂಳು ನಿಯಂತ್ರಣಕ್ಕೆ ಸರ್ಕಾರದ ಕ್ರಮಗಳೇನು?


ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಸುತ್ತಮುತ್ತಲಿನ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್‌) ವಾಯುಮಾಲಿನ್ಯ ಹೆಚ್ಚಾಗಿದ್ದು, ವಾಯು ಗುಣಮಟ್ಟ ನಿರ್ವಹಣಾ ಆಯೋಗ (ಸಿಎಕ್ಯೂಎಂ) ಬುಧವಾರದಿಂದ ಹಂತವಾರು ಪ್ರತಿಕ್ರಿಯಾ ಕಾರ್ಯಯೋಜನೆ (ಜಿಆರ್‌ಎಪಿ) ಮೊದಲ ಹಂತದ ಕ್ರಮಗಳನ್ನು ಜಾರಿಗೊಳಿಸಿದೆ. ದೆಹಲಿಯ ವಾಯು ಗುಣಮಟ್ಟ ‘ಕಳಪೆ’ ವರ್ಗಕ್ಕೆ ಕುಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಜಿಆರ್‌ಎಪಿ ಮೊದಲ ಹಂತದಡಿ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ತೆರೆದ ಪ್ರದೇಶದ ಆಹಾರ ಮಳಿಗೆಗಳ ತಂದುರ್‌ಗಳಲ್ಲಿ ಕಲ್ಲಿದ್ದಲು ಹಾಗೂ ಕಟ್ಟಿಗೆಯನ್ನು ಇಂಧನವಾಗಿ ಬಳಸುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ಡೀಸೆಲ್ ಜನರೇಟರ್‌ಗಳ ಬಳಕೆಯ ಮೇಲೂ ನಿಯಂತ್ರಣ ಹೇರಲಾಗಿದೆ. ಸಿಎಕ್ಯೂಎಂ ಅಂಕಿಅಂಶಗಳ ಪ್ರಕಾರ, ಅಕ್ಟೋಬರ್ 21ರಂದು ಮಧ್ಯಾಹ್ನ 2 ಗಂಟೆಗೆ ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 244ಕ್ಕೆ ಏರಿಕೆಯಾಗಿದೆ. ಹಿಂದಿನ ದಿನ ಇದು 179ರಷ್ಟಿದ್ದು, ಮಧ್ಯಮ ವರ್ಗದಲ್ಲಿತ್ತು. ಇದೀಗ ಕಳಪೆ ವರ್ಗಕ್ಕೆ ತಲುಪಿದೆ.

ಭಾರತೀಯ ಹವಾಮಾನ ಇಲಾಖೆ ಮತ್ತು ಭಾರತೀಯ ಉಷ್ಣವಲಯ ಹವಾಮಾನ ಸಂಸ್ಥೆಯ ಮುನ್ಸೂಚನೆಗಳ ಪ್ರಕಾರ, ಮುಂದಿನ ಕೆಲವು ದಿನಗಳಲ್ಲೂ ವಾಯು ಗುಣಮಟ್ಟ ಕಳಪೆಯಾಗಿಯೇ ಮುಂದುವರಿಯುವ ಸಾಧ್ಯತೆಯಿದೆ. ಚಳಿಗಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಮಾಲಿನ್ಯ ಹೆಚ್ಚಳದ ಆತಂಕ ಎದುರಾಗಿದೆ. ನೆರೆಯ ರಾಜ್ಯಗಳಲ್ಲಿ ಬೆಳೆ ತ್ಯಾಜ್ಯ ಸುಡುವುದು, ಗಾಳಿಯ ವೇಗ ಕಡಿಮೆಯಾಗುವುದು ಮತ್ತು ತಾಪಮಾನ ಇಳಿಕೆಯಾಗುವುದು ದೆಹಲಿ-ಎನ್‌ಸಿಆರ್‌ ಪ್ರದೇಶದ ಮಾಲಿನ್ಯಕ್ಕೆ ಪ್ರಮುಖ ಕಾರಣಗಳಾಗಿವೆ.

ನವೆಂಬರ್ 1ರಿಂದ ಚಳಿಗಾಲದ ಮಾಲಿನ್ಯ ನಿಯಂತ್ರಣ ಕ್ರಮ

ದೆಹಲಿ ಸರ್ಕಾರವು ನವೆಂಬರ್ 1ರಿಂದ ಚಳಿಗಾಲದ ಮಾಲಿನ್ಯ ನಿಯಂತ್ರಣ ಕಾರ್ಯಯೋಜನೆಯನ್ನು ಜಾರಿಗೊಳಿಸಲು ಸಿದ್ಧತೆ ನಡೆಸಿದೆ. ವಾಹನಗಳ ಹೊಗೆ, ನಿರ್ಮಾಣ ಕಾಮಗಾರಿಗಳ ಧೂಳು ಮತ್ತು ಕೈಗಾರಿಕಾ ಮಾಲಿನ್ಯ ನಿಯಂತ್ರಣಕ್ಕೆ ಈ ಯೋಜನೆಯಲ್ಲಿ ಆದ್ಯತೆ ನೀಡಲಾಗಿದೆ.

ಮಾನ್ಯ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಇಲ್ಲದ ವಾಹನಗಳಿಗೆ ಇಂಧನ ನೀಡದಿರುವ ‘ಪ್ರಮಾಣಪತ್ರ ಇಲ್ಲದಿದ್ದರೆ ಇಂಧನವೂ ಇಲ್ಲ’ ನೀತಿಯನ್ನೂ ಜಾರಿಗೊಳಿಸುವುದಾಗಿ ಸರ್ಕಾರ ಘೋಷಿಸಿದೆ. ಜೊತೆಗೆ, ಬಿಎಸ್‌-6 ಹೊರಸೂಸುವಿಕೆ ಮಾನದಂಡಗಳನ್ನು ಪೂರೈಸದ ದೆಹಲಿಯ ಹೊರರಾಜ್ಯಗಳಲ್ಲಿ ನೋಂದಣಿಯಾದ ವಾಹನಗಳ ಪ್ರವೇಶಕ್ಕೂ ನಿರ್ಬಂಧ ವಿಧಿಸುವ ಪ್ರಸ್ತಾವವಿದೆ. ಇದಕ್ಕೆ ಕೆಲವು ವಿನಾಯಿತಿಗಳು ಅನ್ವಯಿಸಲಿವೆ.

ಇದಲ್ಲದೆ, ಶೇ. 50ರಷ್ಟು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ವ್ಯವಸ್ಥೆ, ನಿರ್ಮಾಣ ಚಟುವಟಿಕೆಗಳ ಮೇಲಿನ ನಿರ್ಬಂಧ, ಧೂಳು ನಿಯಂತ್ರಣದ ಕಟ್ಟುನಿಟ್ಟಿನ ಮೇಲ್ವಿಚಾರಣೆ ಮತ್ತು ಯಂತ್ರಗಳ ಮೂಲಕ ರಸ್ತೆ ಸ್ವಚ್ಛಗೊಳಿಸುವ ಕಾರ್ಯವನ್ನು ಹೆಚ್ಚಿಸುವ ಕ್ರಮಗಳನ್ನೂ ಸರ್ಕಾರ ಘೋಷಿಸಿದೆ.

ಜಿಆರ್‌ಎಪಿ ಮೊದಲ ಹಂತವು ಎಕ್ಯೂಐ 201ರಿಂದ 300ರ ನಡುವೆ ಇದ್ದಾಗ ಅನ್ವಯಿಸುತ್ತದೆ. ಮಾಲಿನ್ಯದ ಪ್ರಮಾಣ ಹೆಚ್ಚಾದಂತೆ ಮುಂದಿನ ಹಂತಗಳಲ್ಲಿ ಇನ್ನಷ್ಟು ಕಠಿಣ ಕ್ರಮಗಳನ್ನು ಜಾರಿಗೊಳಿಸಲಾಗುತ್ತದೆ. ದೆಹಲಿ ಮಾತ್ರವಲ್ಲದೆ ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಎನ್‌ಸಿಆರ್‌ ಪ್ರದೇಶಗಳಲ್ಲೂ ಈ ನಿರ್ದೇಶನಗಳನ್ನು ತಕ್ಷಣ ಜಾರಿಗೊಳಿಸುವಂತೆ ಸಂಬಂಧಪಟ್ಟ ಸಂಸ್ಥೆಗಳಿಗೆ ಸೂಚಿಸಲಾಗಿದೆ.

Read More
Next Story