ಕಾವೇರಿ ಕಿಚ್ಚು: ತಮಿಳುನಾಡಿಗೆ ನಿತ್ಯ 3,500 ಕ್ಯೂಸೆಕ್ ನೀರು ಹರಿಸಲು CWMA ಆದೇಶ, ಕರ್ನಾಟಕಕ್ಕೆ ಮತ್ತೆ ಅನ್ಯಾಯ
x

ಕಾವೇರಿ ಕಿಚ್ಚು: ತಮಿಳುನಾಡಿಗೆ ನಿತ್ಯ 3,500 ಕ್ಯೂಸೆಕ್ ನೀರು ಹರಿಸಲು CWMA ಆದೇಶ, ಕರ್ನಾಟಕಕ್ಕೆ ಮತ್ತೆ ಅನ್ಯಾಯ

ಕರ್ನಾಟಕ ಮೇಲ್ಮನವಿಯನ್ನು ಪರಿಶೀಲಿಸಿದ ಪ್ರಾಧಿಕಾರ, ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 3,500 ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಿದೆ.


Click the Play button to hear this message in audio format

ರಾಜ್ಯದಲ್ಲಿ ತೀವ್ರ ಮಳೆ ಕೊರತೆ ಹಾಗೂ ಬರದ ಭೀತಿಯ ನಡುವೆಯೂ ಕರ್ನಾಟಕದ ಮೇಲ್ಮನವಿಯನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ತಳ್ಳಿ ಹಾಕಿದೆ. ಮುಂದಿನ 15 ದಿನಗಳವರೆಗೆ ಒಟ್ಟು 4.5 ಟಿಎಂಸಿ ನೀರು ತಮಿಳುನಾಡಿಗೆ ಹರಿಸಲೇಬೇಕು ಎಂದು ಹೇಳಿ ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶವನ್ನು ಎತ್ತಿ ಹಿಡಿದಿದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆಯಿಂದಾಗಿ ಜಲಾಶಯಗಳು ಬರಿದಾಗಿರುವ ಬೆನ್ನಲ್ಲೇ ಕರ್ನಾಟಕಕ್ಕೆ ಇದು ಮತ್ತೊಂದು ಆಘಾತ ನೀಡಿದಂತಿದೆ. ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶ ಪ್ರಶ್ನಿಸಿ ಕರ್ನಾಟಕ ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಶೀಲಿಸಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ, ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 3,500 ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಿದೆ. ದೆಹಲಿಯಲ್ಲಿ ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ತುರ್ತು ಸಭೆಯಲ್ಲಿ ಉಭಯ ರಾಜ್ಯಗಳ ಅಧಿಕಾರಿಗಳ ಸುದೀರ್ಘ ವಾದ-ಪ್ರತಿವಾದಗಳು ಪ್ರಾಧಿಕಾರ ಆಲಿಸಿತು.

ಕರ್ನಾಟಕದ ವಾದವೇನು?

ರಾಜ್ಯದ ಪರವಾಗಿ ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ನೇತೃತ್ವದ ಅಧಿಕಾರಿಗಳ ನಿಯೋಗವು ರಾಜ್ಯದ ವಾಸ್ತವ ಸ್ಥಿತಿಯನ್ನು ಅಂಕಿ-ಅಂಶಗಳೊಂದಿಗೆ ಪ್ರಾಧಿಕಾರದ ಮುಂದಿಟ್ಟರು. ಕಾವೇರಿ ಕೊಳ್ಳದ ಕೆಆರ್‌ಎಸ್‌, ಕಬಿನಿ, ಹಾರಂಗಿ ಮತ್ತು ಹೇಮಾವತಿ ಜಲಾಶಯಗಳಲ್ಲಿ ಸದ್ಯಕ್ಕೆ ಒಟ್ಟು 36.69 ಟಿಎಂಸಿ ನೀರು ಮಾತ್ರ ಲಭ್ಯವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಬರೋಬ್ಬರಿ 99 ಟಿಎಂಸಿ ನೀರು ಸಂಗ್ರಹವಿತ್ತು.

ಈ ವರ್ಷ ಬಿಳಿಗುಂಡ್ಲು ಬಳಿ ನಿತ್ಯ ಕೇವಲ 178 ಕ್ಯೂಸೆಕ್ ಹರಿವಿದ್ದು, ಜೂನ್ ಮತ್ತು ಜುಲೈ ಅವಧಿಯಲ್ಲಿ ಒಟ್ಟು ಹರಿದದ್ದು ಕೇವಲ 3.55 ಟಿಎಂಸಿ ಮಾತ್ರ. ಆದರೆ, ಕಳೆದ ವರ್ಷ ಇದೇ ಸಮಯದಲ್ಲಿ ನಿತ್ಯ 30,748 ಕ್ಯೂಸೆಕ್ ಹರಿವಿದ್ದು, ಒಟ್ಟು 116.92 ಟಿಎಂಸಿ ನೀರು ತಮಿಳುನಾಡಿಗೆ ತಲುಪಿತ್ತು. ಸಾಮಾನ್ಯ ವರ್ಷಗಳಲ್ಲಿ ಈ ವೇಳೆಗೆ 40 ಟಿಎಂಸಿ ನೀರು ಹರಿಸಲಾಗುತ್ತಿತ್ತು. ಆದರೆ ಈ ಬಾರಿ ಭೀಕರ ಮಳೆ ಕೊರತೆಯಿಂದ ಜಲಾಶಯಗಳಲ್ಲಿ ನೀರಿಲ್ಲ. ಬಿಳಿಗುಂಡ್ಲುವಿನಲ್ಲಿ 3,500 ಕ್ಯೂಸೆಕ್ ಹರಿವು ದಾಖಲಿಸಲು ಜಲಾಶಯಗಳಿಂದ ದುಪ್ಪಟ್ಟು ನೀರು ಬಿಡಬೇಕಾಗುತ್ತದೆ. ಇದು ನಮ್ಮ ಕುಡಿಯುವ ನೀರಿನ ಅಭಾವವನ್ನು ಮತ್ತಷ್ಟು ಬಿಗಿಗೊಳಿಸಲಿದೆ ಎಂದು ವಾದ ಮಂಡಿಸಿದರು.

ತಮಿಳುನಾಡು ವಾದವೇನು?

ವರ್ಚುವಲ್ ಮೂಲಕ ಭಾಗವಹಿಸಿದ್ದ ತಮಿಳುನಾಡು ಅಧಿಕಾರಿಗಳು ಕರ್ನಾಟಕದ ವಾದಕ್ಕೆ ವಿರೋಧ ವ್ಯಕ್ತಪಡಿಸಿದರು. ಕರ್ನಾಟಕದ ಜಲಾಶಯಗಳಿಗೆ 36 ಟಿಎಂಸಿ ಒಳಹರಿವು ಬಂದಿದ್ದರೂ ಸಂಕಷ್ಟ ಸೂತ್ರವನ್ನು ಸರಿಯಾಗಿ ಪಾಲಿಸಿಲ್ಲ.

ಕಳೆದ ಎರಡು ತಿಂಗಳಲ್ಲಿ ಬಿಳಿಗುಂಡ್ಲುವಿನಲ್ಲಿ ಕೇವಲ 3.5 ಟಿಎಂಸಿ ನೀರು ಮಾತ್ರ ದಾಖಲಾಗಿದೆ. ಸಂಕಷ್ಟ ಸೂತ್ರದನ್ವಯ ಕರ್ನಾಟಕ ಇನ್ನೂ 9.46 ಟಿಎಂಸಿ ನೀರನ್ನು ಬಾಕಿ ಉಳಿಸಿಕೊಂಡಿದೆ. CWRC ಆದೇಶಿಸಿದ 3,500 ಕ್ಯೂಸೆಕ್ ನೀರು ತೀರಾ ಕಡಿಮೆಯಾಗಿದ್ದು, ಹೆಚ್ಚುವರಿ ನೀರು ಬಿಡುವಂತೆ ಸೂಚಿಸಬೇಕು ಎಂದು ಮನವಿ ಮಾಡಿದರು. ಎರಡೂ ರಾಜ್ಯಗಳ ವಾದ ಆಲಿಸಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಕರ್ನಾಟಕದ ಭೀಕರ ಮಳೆ ಅಭಾವದ ಮನವಿಯನ್ನು ಪುರಸ್ಕರಿಸದೆ CWRCಯ 3,500 ಕ್ಯೂಸೆಕ್ ಆದೇಶವನ್ನೇ ಎತ್ತಿಹಿಡಿಯಿತು.

ಬಿಳಿಗುಂಡ್ಲು ಮಾಪನ ಕೇಂದ್ರದಲ್ಲಿ ಪ್ರತಿದಿನ 3,500 ಕ್ಯೂಸೆಕ್ ತಲುಪಬೇಕಾದರೆ, ಕರ್ನಾಟಕವು ತನ್ನ ಜಲಾಶಯಗಳಿಂದ ಕನಿಷ್ಠ 6,000 ರಿಂದ 7,000 ಕ್ಯೂಸೆಕ್ ನೀರನ್ನು ಹರಿಸಬೇಕಾದ ಅನಿವಾರ್ಯತೆ ಈಗ ಎದುರಾಗಲಿದೆ.

ಕರ್ನಾಟಕದಲ್ಲಿ ಪ್ರತಿಭಟನೆ ತೀವ್ರ

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಿಂದಾಗಿ ಕಾವೇರಿ ಜಲಾನಯನ ಪ್ರದೇಶವಾದ ಮಂಡ್ಯ, ಮೈಸೂರು, ಚಾಮರಾಜನಗರ ಹಾಗೂ ಬೆಂಗಳೂರಿನ ಕುಡಿಯುವ ನೀರಿನ ಪೂರೈಕೆಗೆ ಕಂಟಕ ಎದುರಾಗುವ ಭೀತಿ ಎದುರಾಗಿದೆ. ಜಲಾಶಯಗಳಲ್ಲಿ ಕೃಷಿಗೂ ನೀರಿಲ್ಲದೇ ಬೆಳೆಗಳು ಒಣಗುತ್ತಿದ್ದು, ಕಾವೇರಿ ನಿರ್ಧಾರದಿಂದ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರ್ಕಾರ ಮುಂದಿನ ಕಾನೂನು ಕ್ರಮಗಳ ಬಗ್ಗೆ ತಜ್ಞರೊಂದಿಗೆ ಸಮಾಲೋಚನೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಮಂಡ್ಯದಲ್ಲಿ ಕನ್ನಡ ಸಂಘಟನೆಗಳು ತಮಿಳುನಾಡು ಸಿಎಂ ವಿಜಯ್‌ ಅಭಿನಯದ ಜನನಾಯಗನ್ ಚಿತ್ರ ಪ್ರದರ್ಶನಕ್ಕೆ ಅಡ್ಡಿಪಡಿಸಿದರು. ಮೈಸೂರಿನಲ್ಲಿ ಕನ್ನಡ ಸಂಘಟನೆಗಳು ಖಾಲಿ ಕೊಡಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು. ಕೂಡಲೇ ರಾಜ್ಯ ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದ ವಿರುದ್ಧ ಕಾನೂನು ಸಮರ ನಡೆಸುವಂತೆ ಒತ್ತಾಯಿಸಿದ್ದಾರೆ.

Read More
Next Story