
ಕಾಂಗ್ರೆಸ್‌ನಲ್ಲಿ ಮಹತ್ವದ ಬದಲಾವಣೆ; ರಾಜ್ಯಗಳಿಗೆ ಹೊಸ ಉಸ್ತುವಾರಿಗಳ ನೇಮಕ
ಕರ್ನಾಟಕ ಕಾಂಗ್ರೆಸ್ ಉಸ್ತುವಾರಿಯಾಗಿರುವ ರಣದೀಪ್ ಸಿಂಗ್ ಸುರ್ಜೇವಾಲ ಅವರಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದ್ದು, ಕರ್ನಾಟಕದ ಜೊತೆಗೆ ಗುಜರಾತ್ ಕಾಂಗ್ರೆಸ್ ಉಸ್ತುವಾರಿಯನ್ನೂ ವಹಿಸಲಾಗಿದೆ.
ಮುಂಬರುವ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಹೈಕಮಾಂಡ್ ಸಂಘಟನಾತ್ಮಕ ಬದಲಾವಣೆಗಳಿಗೆ ಮುಂದಾಗಿದೆ. ಚುನಾವಣೆ ಎದುರಿಸಲು ಈಗಿನಿಂದಲೇ ಸಿದ್ಧತೆ ಆರಂಭಿಸಿರುವ ಪಕ್ಷ, ವಿವಿಧ ರಾಜ್ಯಗಳಿಗೆ AICC ಪ್ರಧಾನ ಕಾರ್ಯದರ್ಶಿಗಳನ್ನು ಉಸ್ತುವಾರಿಗಳಾಗಿ ನೇಮಕ ಮಾಡಿದೆ. ಈ ಮೂಲಕ ಆಯಾ ರಾಜ್ಯಗಳಲ್ಲಿ ಪಕ್ಷದ ಸಂಘಟನೆ ಹಾಗೂ ಚುನಾವಣಾ ಸಿದ್ಧತೆಗಳನ್ನು ಬಲಪಡಿಸುವ ಜವಾಬ್ದಾರಿಯನ್ನು ಹಿರಿಯ ನಾಯಕರಿಗೆ ವಹಿಸಲಾಗಿದೆ.
ಕಾಂಗ್ರೆಸ್‌ನ ಹಿರಿಯ ನಾಯಕ ಭೂಪೇಶ್ ಬಘೇಲ್ ಅವರನ್ನು ಅಸ್ಸಾಂ ಕಾಂಗ್ರೆಸ್ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿಯಾಗಿರುವ ರಣದೀಪ್ ಸಿಂಗ್ ಸುರ್ಜೇವಾಲ ಅವರಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದ್ದು, ಕರ್ನಾಟಕದ ಜೊತೆಗೆ ಗುಜರಾತ್ ಕಾಂಗ್ರೆಸ್ ಉಸ್ತುವಾರಿಯನ್ನೂ ವಹಿಸಲಾಗಿದೆ. ಮುಂದಿನ ದಿನಗಳಲ್ಲಿ ನಡೆಯಲಿರುವ ಚುನಾವಣೆಗಳ ಹಿನ್ನೆಲೆಯಲ್ಲಿ ಈ ನೇಮಕಾತಿಗಳು ಮಹತ್ವ ಪಡೆದಿವೆ.
ಇನ್ನು ಸಚಿನ್ ಪೈಲಟ್ ಅವರಿಗೆ ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಜವಾಬ್ದಾರಿ ನೀಡಲಾಗಿದೆ. ಸುಖದೇವ್ ಭಗತ್ ಅವರನ್ನು ಛತ್ತೀಸ್‌ಗಢ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ. ಸಿರಿವೆಳ್ಳ ಪ್ರಸಾದ್ ಅವರಿಗೆ ಮಹಾರಾಷ್ಟ್ರ ಕಾಂಗ್ರೆಸ್ ಉಸ್ತುವಾರಿ ಹೊಣೆ ನೀಡಲಾಗಿದ್ದು, ಕರ್ನಾಟಕ ವಿಧಾನ ಪರಿಷತ್ ಸದಸ್ಯ ಪಿ.ವಿ. ಮೋಹನ್ ಅವರನ್ನು ಆಂಧ್ರಪ್ರದೇಶ ಕಾಂಗ್ರೆಸ್ ಉಸ್ತುವಾರಿಯಾಗಿ ನೇಮಿಸಿ ಕಾಂಗ್ರೆಸ್ ಹೈಕಮಾಂಡ್ ಆದೇಶ ಹೊರಡಿಸಿದೆ.

