ದೆಹಲಿಯಲ್ಲಿ ಸಿಜೆಪಿ ಪ್ರತಿಭಟನೆ: ಜಂತರ್ ಮಂತರ್ ಬಳಿ ಭಾರಿ ಭದ್ರತೆ
x

ಈ ವಾರದ ಆರಂಭದಲ್ಲಿ ನವದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿಕಾಕ್ರಾಚ್ ಜನತಾ ಪಾರ್ಟಿ ವಕ್ತಾರರಾದ ವಿಜೇತಾ ದಹಿಯಾ, ಸೌರವ್ ದಾಸ್ ಮತ್ತು ಅಶುತೋಷ್ ರಂಕಾ. 

ದೆಹಲಿಯಲ್ಲಿ ಸಿಜೆಪಿ ಪ್ರತಿಭಟನೆ: ಜಂತರ್ ಮಂತರ್ ಬಳಿ ಭಾರಿ ಭದ್ರತೆ

ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದು, ದೆಹಲಿ ಪೊಲೀಸರು ಭಾರಿ ಭದ್ರತೆ ನಿಯೋಜಿಸಿದ್ದಾರೆ.


Click the Play button to hear this message in audio format

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಡಿಜಿಟಲ್ ಸಂಘಟನೆಯಾದ ಕಾಕ್ರಾಚ್ ಜನತಾ ಪಾರ್ಟಿ (ಸಿಜೆಪಿ) ಶನಿವಾರ ಜಂತರ್ ಮಂತರ್‌ನಲ್ಲಿ ಪ್ರತಿಭಟನಾ ರ‍್ಯಾಲಿ ನಡೆಸಲು ಸಿದ್ಧತೆ ನಡೆಸಿದೆ. ಆದರೆ ಈ ರ‍್ಯಾಲಿಗೆ ಸಂಘಟಕರು ದೆಹಲಿ ಪೊಲೀಸರಿಂದ ಯಾವುದೇ ಅಧಿಕೃತ ಅನುಮತಿಯನ್ನು ಪಡೆದಿಲ್ಲ ಎಂದು ತಿಳಿದುಬಂದಿದೆ.

ಪರೀಕ್ಷಾ ಅಕ್ರಮಗಳ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಮೂಡಿರುವ ಆತಂಕಕ್ಕೆ ಸರ್ಕಾರವೇ ಹೊಣೆ ಎಂದು ಆರೋಪಿಸಿರುವ ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ, ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ವಿದ್ಯಾರ್ಥಿಗಳು ಮತ್ತು ಬೆಂಬಲಿಗರಿಗೆ ಕರೆ ನೀಡಿದ್ದಾರೆ. ಅಮೆರಿಕದ ಬೋಸ್ಟನ್‌ನಲ್ಲಿ ಸಾರ್ವಜನಿಕ ಸಂಪರ್ಕ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿರುವ ಅಭಿಜೀತ್, ಈ ರ್ಯಾಲಿಯ ನೇತೃತ್ವ ವಹಿಸಲು ಅಮೆರಿಕದಿಂದ ಭಾರತಕ್ಕೆ ಮರಳುತ್ತಿದ್ದಾರೆ. ಅವರ ಈ ಹೋರಾಟಕ್ಕೆ ಪರಿಸರ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಕೂಡ ಬೆಂಬಲ ಸೂಚಿಸಿದ್ದು, ಪ್ರತಿಭಟನೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ನಡುವೆ, ಸಂಘಟಕರಿಂದ ಯಾವುದೇ ಅಧಿಕೃತ ಅರ್ಜಿ ಸಲ್ಲಿಕೆಯಾಗದಿದ್ದರೂ ಮುಂಜಾಗ್ರತಾ ಕ್ರಮವಾಗಿ ದೆಹಲಿಯಾದ್ಯಂತ 1,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂದೇಶಗಳ ಆಧಾರದ ಮೇಲೆ ಪೊಲೀಸರು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಭದ್ರತಾ ವ್ಯವಸ್ಥೆಗಳ ಕುರಿತು ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿದ್ದು, ಎಲ್ಲಾ ಜಿಲ್ಲಾ ಘಟಕಗಳನ್ನು ಅಲರ್ಟ್ ಮಾಡಲಾಗಿದೆ. ಅನುಮತಿ ಇಲ್ಲದೆ ಯಾವುದೇ ಪ್ರತಿಭಟನೆಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಪೊಲೀಸರು, ಪ್ರಸ್ತುತ ಪರಿಸ್ಥಿತಿಗೆ ತಕ್ಕಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಮತ್ತೊಂದೆಡೆ, ಈ ಪ್ರತಿಭಟನೆಗೆ ಕೆಲವು ರಾಜಕೀಯ ಪಕ್ಷಗಳ ಬೆಂಬಲ ಇರುವ ಶಂಕೆ ವ್ಯಕ್ತವಾಗಿದ್ದು, ಗುಪ್ತಚರ ಸಂಸ್ಥೆಗಳು ಆ ನಿಟ್ಟಿನಲ್ಲಿ ತನಿಖೆ ನಡೆಸುತ್ತಿವೆ.

ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿರುವ ಅಭಿಜೀತ್ ದಿಪ್ಕೆ ಅವರ ಪೋಷಕರು ಸದ್ಯ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಅವರ ಸ್ನೇಹಿತರು ಆತಂಕ ವ್ಯಕ್ತಪಡಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಅವರ ನಿವಾಸದ ಬಳಿ 10 ಪೊಲೀಸರು ಮತ್ತು ಒಬ್ಬ ಅಧಿಕಾರಿಯನ್ನು ಒಳಗೊಂಡ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ ಎಂದು ಸ್ಥಳೀಯ ಇನ್ಸ್‌ಪೆಕ್ಟರ್ ರಮೇಶ್ವರ್ ಗಾಡೆ ತಿಳಿಸಿದ್ದಾರೆ. ಕಳೆದ ತಿಂಗಳು ನ್ಯಾಯಾಲಯದ ವಿಚಾರಣೆಯೊಂದರಲ್ಲಿ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಬಳಸಿದ ಕೆಲವು ಪದಗಳ ವಿರುದ್ಧ ವ್ಯಂಗ್ಯಾತ್ಮಕವಾಗಿ ಆರಂಭಗೊಂಡ ಈ ಸಿಜೆಪಿ ಸಂಘಟನೆಯು, ಇದೀಗ ಯುವಜನರ ದೊಡ್ಡ ರಾಜಕೀಯ ಆಂದೋಲನವಾಗಿ ಮಾರ್ಪಟ್ಟಿರುವುದು ಗಮನಾರ್ಹವಾಗಿದೆ.

Read More
Next Story