
‘ಹೋರಾಟ ಈಗಷ್ಟೇ ಆರಂಭವಾಗಿದೆ’: ಸಿಜೆಪಿ ನಾಯಕರ ಎಚ್ಚರಿಕೆ; ದೇಶಾದ್ಯಂತ ಪ್ರತಿಭಟನೆ ವಿಸ್ತರಿಸುವ ಘೋಷಣೆ
ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ವಿರುದ್ಧ ಸಿಜೆಪಿ ಹೋರಾಟ ತೀವ್ರಗೊಳಿಸಿದೆ. ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿರುವ ನಾಯಕರು ದೇಶಾದ್ಯಂತ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದಾರೆ. ಬಿಜೆಪಿ ಆರೋಪಗಳಿಗೆ ಪ್ರತಿಪಕ್ಷದ ಪ್ರತಿಕ್ರಿಯೆಯೂ ಸದ್ದು ಮಾಡಿದೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸುತ್ತಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಾಯಕರು, ತಮ್ಮ ಹೋರಾಟವನ್ನು ದೇಶಾದ್ಯಂತ ವಿಸ್ತರಿಸುವುದಾಗಿ ಘೋಷಿಸಿದ್ದಾರೆ. ದೆಹಲಿ ಪೊಲೀಸರ ವಶದಿಂದ ಭಾನುವಾರ ಬಿಡುಗಡೆಯಾದ ಬಳಿಕ ಮಾತನಾಡಿದ ಪತ್ರಿಕಾಗೋಷ್ಟಿ ನಡೆಸಿ ನಾಯಕರು, ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಲು ಅವಕಾಶ ನೀಡಬೇಕೆಂದು ಆಗ್ರಹಿಸಿದ್ದಾರೆ.
ಶನಿವಾರ ಜಂತರ್ ಮಂತರ್ ಬಳಿ ಜಮಾಯಿಸಲು ಯತ್ನಿಸಿದ ನೂರಾರು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಭಾನುವಾರವೂ ಯುವ ಪ್ರತಿಭಟನಾಕಾರರ ಗುಂಪುಗಳು ಪ್ರತಿಭಟನಾ ಸ್ಥಳ ತಲುಪಲು ಪ್ರಯತ್ನಿಸಿದವು.
ಸಿಜೆಪಿ ಸಹ ಸಂಚಾಲಕ ಆಶುತೋಷ್ ರಾಂಕಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಹೋರಾಟ ಈಗಷ್ಟೇ ಆರಂಭವಾಗಿದೆ. ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ ಪ್ರತಿಭಟನೆ ನಿಲ್ಲುವುದಿಲ್ಲ” ಎಂದು ಹೇಳಿದ್ದಾರೆ. ಸಿಜೆಪಿ ನಾಯಕ ಸೌರವ್ ದಾಸ್ ಕೂಡ ಪ್ರತಿಭಟನೆ ದೆಹಲಿಗೆ ಮಾತ್ರ ಸೀಮಿತವಾಗದೆ ದೇಶದಾದ್ಯಂತ ನಡೆಯಲಿದೆ ಎಂದು ಘೋಷಿಸಿದ್ದಾರೆ. ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಸಿಜೆಪಿ ಮುಖ್ಯಸ್ಥ ಅಭಿಜೀತ್ ದಿಪ್ಕೆ ಅವರು ಬಿಡುಗಡೆಯಾದ ಬಳಿಕ ಮಹಾರಾಷ್ಟ್ರದಲ್ಲಿರುವ ತಮ್ಮ ಊರಿಗೆ ತೆರಳಿದ್ದು, ಅಜ್ಜಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ತೆರಳಿದ್ದಾರೆ. ಬಿಡುಗಡೆಯ ಷರತ್ತುಗಳ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ಅವರು, ಪ್ರತಿಭಟನೆ ನಡೆಸುವುದಿಲ್ಲ ಎಂಬ ಯಾವುದೇ ಬಾಂಡ್ಗೆ ಸಹಿ ಹಾಕಿಲ್ಲ. ಮತ್ತೆ ಬೀದಿಗಿಳಿದು ಹೋರಾಟ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.
ವಿಮಾನದಿಂದಲೇ ವಶಕ್ಕೆ ಪಡೆದಿದ್ದ ಪೊಲೀಸರು
ಮುಂಬೈನಿಂದ ದೆಹಲಿಗೆ ಬಂದ ವಿಮಾನ ಇಳಿದ ಬಳಿಕ ಶನಿವಾರ ಬೆಳಗ್ಗೆ ರಾಂಕಾ, ದಾಸ್ ಮತ್ತು ದಿಪ್ಕೆ ಅವರನ್ನು ವಿಮಾನದೊಳಗಿನಿಂದಲೇ ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಿ, ಭಾನುವಾರ ಬೆಳಗ್ಗೆ ದೆಹಲಿ ಕ್ಯಾಂಟೋನ್ಮೆಂಟ್ನ ಕಾರ್ಯನಿರ್ವಾಹಕ ದಂಡಾಧಿಕಾರಿಯ ಮುಂದೆ ಹಾಜರುಪಡಿಸಲಾಯಿತು. ಒಂದು ವರ್ಷದ ಅವಧಿಯಲ್ಲಿ ಶಾಂತಿಭಂಗ ಉಂಟುಮಾಡಬಾರದು ಎಂಬ ಷರತ್ತಿನೊಂದಿಗೆ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ವಿಮಾನದೊಳಗಿಂದ ತಮ್ಮನ್ನು ವಶಕ್ಕೆ ಪಡೆದ ಕ್ರಮವನ್ನು ರಾಂಕಾ ಖಂಡಿಸಿದ್ದು, ಇದನ್ನು ಅಪಹರಣ ಎಂದು ಆರೋಪಿಸಿದ್ದಾರೆ. ಬಿಡುಗಡೆಯ ಷರತ್ತಿನಲ್ಲಿ ಶಾಂತಿಭಂಗ ಉಂಟುಮಾಡಬಾರದು ಎಂದು ಹೇಳಲಾಗಿದೆಯೇ ಹೊರತು ಪ್ರತಿಭಟನೆ ನಡೆಸಬಾರದು ಎಂದು ಇಲ್ಲ ಎಂದು ಸಿಜೆಪಿ ಹೇಳಿದೆ. ಶಾಂತಿಯುತ ಪ್ರತಿಭಟನೆ ಸಂವಿಧಾನ ನೀಡಿರುವ ಹಕ್ಕು ಎಂದು ಸಂಘಟನೆ ಪ್ರತಿಪಾದಿಸಿದೆ.
“ಶಾಂತಿಭಂಗಕ್ಕೆ ಕಾರಣವಾಗಿರುವುದು ನರೇಂದ್ರ ಮೋದಿ, ಅಮಿತ್ ಶಾ ಮತ್ತು ಜ್ಞಾನೇಶ್ ಕುಮಾರ್” ಎಂದು ರಾಂಕಾ ಆರೋಪಿಸಿದ್ದಾರೆ. ಪ್ರತಿಭಟನೆಗೆ ಜಂತರ್ ಮಂತರ್ ಅನ್ನು ಮುಕ್ತಗೊಳಿಸಬೇಕು ಎಂದು ನಾಯಕರು ಒತ್ತಾಯಿಸಿದ್ದಾರೆ. ಬಂಧನದಲ್ಲಿದ್ದಾಗ ಅಭಿಜೀತ್ ದಿಪ್ಕೆ ಅವರಿಗೆ ಅಜ್ಜಿಯ ಸಾವಿನ ಸುದ್ದಿ ತಿಳಿಸಿದ ರೀತಿಯೂ ಅಮಾನವೀಯವಾಗಿತ್ತು ಎಂದು ರಾಂಕಾ ಆಕ್ಷೇಪಿಸಿದ್ದಾರೆ. ಸಿಜೆಪಿಯ ಕಾನೂನು ತಂಡದ ಮುಖ್ಯಸ್ಥೆ ರತ್ನಾ ಸಿಂಗ್, ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಕಾರ್ಯಕರ್ತರ ಕುಟುಂಬದವರಿಗೆ ಪೊಲೀಸರು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಗುಪ್ತಚರ ಇಲಾಖೆ ಸಿಬ್ಬಂದಿ ತಮ್ಮ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದರು ಎಂದೂ ಅವರು ಹೇಳಿದ್ದಾರೆ.
‘ತುರ್ತು ಪರಿಸ್ಥಿತಿಯನ್ನು ನೆನಪಿಸುವ ವಾತಾವರಣ’
ಕಳೆದ 72 ಗಂಟೆಗಳ ಬೆಳವಣಿಗೆಗಳು 1975ರಿಂದ 1977ರವರೆಗೆ ದೇಶದಲ್ಲಿ ಜಾರಿಯಲ್ಲಿದ್ದ ತುರ್ತು ಪರಿಸ್ಥಿತಿಯನ್ನು ನೆನಪಿಸುತ್ತಿವೆ ಎಂದು ರಾಂಕಾ ಹೇಳಿದ್ದಾರೆ. ಪ್ರಧಾನಿ ಮೋದಿ ಅವರ ಆಡಳಿತದಲ್ಲಿ ರೈಲುಗಳ ಸಂಚಾರ ರದ್ದುಗೊಂಡಿದೆ ಎಂದು ಟೀಕಿಸಿದ ಅವರು, 1975ರ ತುರ್ತು ಪರಿಸ್ಥಿತಿಯಲ್ಲೂ ರೈಲುಗಳನ್ನು ಈ ರೀತಿ ಸ್ಥಗಿತಗೊಳಿಸಿರಲಿಲ್ಲ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರ ತುರ್ತು ಪರಿಸ್ಥಿತಿಯಂಥ ವಾತಾವರಣ ಸೃಷ್ಟಿಸಿದೆ ಎಂದು ಸೌರವ್ ದಾಸ್ ಆರೋಪಿಸಿದ್ದು, ಪ್ರತಿಭಟನಾಕಾರರ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಬಹುದಿತ್ತು ಎಂದಿದ್ದಾರೆ.
ಶನಿವಾರದ ಪ್ರತಿಭಟನೆಯ ಹಿನ್ನೆಲೆಯಲ್ಲಿ ದೆಹಲಿ ಮೆಟ್ರೋದ 45 ನಿಲ್ದಾಣಗಳನ್ನು ಮುಚ್ಚಲಾಗಿತ್ತು. ರೈಲ್ವೆ ಇಲಾಖೆಯೂ ಸುಮಾರು 250 ರೈಲುಗಳ ಸಂಚಾರವನ್ನು ರದ್ದುಗೊಳಿಸಿತ್ತು. ಭಾನುವಾರ ಸುಪ್ರೀಂ ಕೋರ್ಟ್ಗೆ ಅಧಿಕಾರಿಗಳು ನೀಡಿದ ಮಾಹಿತಿಯ ಪ್ರಕಾರ, ರೈಲು ಮತ್ತು ಮೆಟ್ರೋ ಸೇವೆಗಳು ಮತ್ತೆ ಸಾಮಾನ್ಯ ಸ್ಥಿತಿಗೆ ಮರಳಿದ್ದವು.
ಬಾಂಗ್ಲಾ ಸಾಹಿಬ್ ಗುರುದ್ವಾರಕ್ಕೆ ಪೊಲೀಸರು ಶೂ ಧರಿಸಿ, ತಲೆ ಮುಚ್ಚಿಕೊಳ್ಳದೆ ಪ್ರವೇಶಿಸಿದ್ದರು ಮತ್ತು ಪ್ರತಿಭಟನಾಕಾರರನ್ನು ಬಲವಂತವಾಗಿ ತೆರವುಗೊಳಿಸಿದ್ದರು ಎಂದು ದಾಸ್ ಆರೋಪಿಸಿದ್ದಾರೆ. ಪ್ರತಿಭಟನಾಕಾರರಿಗೆ ಬೆಂಬಲ ನೀಡುವಂತೆ ಸಿಖ್ ಸಮುದಾಯಕ್ಕೆ ಮನವಿ ಮಾಡಿದ್ದಾರೆ.
ವಿದ್ಯಾರ್ಥಿ ಒಕ್ಕೂಟದ ನಾಯಕಿ ಆಯಿಷೆ ಘೋಷ್, “ಜಂತರ್ ಮಂತರ್ 2.0 ಆರಂಭವಾಗಿದೆ. ನಾವು ಬೀದಿಯಲ್ಲಿದ್ದೇವೆ, ಅಲ್ಲಿಯೇ ಉಳಿಯುತ್ತೇವೆ. ಸಂವಿಧಾನದ ಚೌಕಟ್ಟಿನಲ್ಲಿ ಹೋರಾಟ ನಡೆಸುತ್ತೇವೆ” ಎಂದು ಹೇಳಿದ್ದಾರೆ. ಬಿಜೆಪಿ ಬೆಂಬಲಿತ ಬಲಪಂಥೀಯ ಗುಂಪುಗಳು ಸಿಜೆಪಿ ಪ್ರತಿಭಟನಾಕಾರರ ಮೇಲೆ ದಾಳಿ ನಡೆಸಲು ಅವಕಾಶ ನೀಡಲಾಯಿತು ಎಂದೂ ಅವರು ಆರೋಪಿಸಿದ್ದಾರೆ.
ಶನಿವಾರದ ಪ್ರತಿಭಟನೆಯಲ್ಲಿ ರಾಜಕಾರಣಿಗಳು ಸೇರಿದಂತೆ ಕನಿಷ್ಠ 3,000 ಮಂದಿಯನ್ನು ವಶಕ್ಕೆ ಪಡೆಯಲಾಗಿತ್ತು. ಕೆಲವು ಅಂದಾಜುಗಳ ಪ್ರಕಾರ ಈ ಸಂಖ್ಯೆ 7,000ದವರೆಗೂ ತಲುಪಿತ್ತು. ಬಳಿಕ ಬಹುತೇಕ ಮಂದಿಯನ್ನು ಅದೇ ರಾತ್ರಿ ಬಿಡುಗಡೆ ಮಾಡಲಾಗಿತ್ತು. ಯೂಟ್ಯೂಬರ್ ಧ್ರುವ್ ರಾಠಿ ಕೂಡ ಬಿಡುಗಡೆಗೊಂಡವರಲ್ಲಿ ಸೇರಿದ್ದರು.
ಸಿಜೆಪಿ ವಿರುದ್ಧ ಬಿಜೆಪಿಯ ಆರೋಪ
ಸಿಜೆಪಿ ಪ್ರತಿಪಕ್ಷಗಳ ಅಂಗಸಂಸ್ಥೆಯಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ವಿದೇಶಿ ಶಕ್ತಿಗಳ ನಿರ್ದೇಶನದಂತೆ ಭಾರತದ ಹಿತಾಸಕ್ತಿಗೆ ಹಾನಿ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್ ದೂರಿದ್ದಾರೆ.
ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ಸಿಜೆಪಿಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ‘ಬಿ-ಟೀಮ್’ ಎಂದು ಟೀಕಿಸಿದ್ದಾರೆ. ಶನಿವಾರ ವಶಕ್ಕೆ ಪಡೆದು ಬಿಡುಗಡೆ ಮಾಡಲಾದ ನಾಲ್ವರು ಮಾಜಿ ಮುಖ್ಯಮಂತ್ರಿಗಳಲ್ಲಿ ಕೇಜ್ರಿವಾಲ್ ಕೂಡ ಒಬ್ಬರಾಗಿದ್ದರು. ಮತದಾರರ ಪಟ್ಟಿಯ ಪರಿಷ್ಕರಣೆ ವಿಚಾರವಾಗಿ ರಾಹುಲ್ ಗಾಂಧಿ ಹಲವು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನೊಂದೆಡೆ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ ಎಂದು ಹೇಳಿದ್ದಾರೆ. ಆದರೆ, ಅರಾಜಕತೆ ಸೃಷ್ಟಿಸುವುದು ಯಾರ ಹಕ್ಕು ಕೂಡ ಅಲ್ಲ ಎಂಬುದನ್ನು ಮರೆಯಬಾರದು ಎಂದು ಅವರು ಎಚ್ಚರಿಸಿದ್ದಾರೆ.

