Question paper scandal: CJP releases manifesto, demands resignation of Union Education Minister!
x

ಸಾಂದರ್ಭಿಕ ಚಿತ್ರ

ಪ್ರಶ್ನೆಪತ್ರಿಕೆ ಹಗರಣ: ಸಿಜೆಪಿಯಿಂದ ಪ್ರಣಾಳಿಕೆ ಬಿಡುಗಡೆ, ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ!

ಪರೀಕ್ಷಾ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಿ ಪತ್ರಿಕೆ ಸೋರಿಕೆಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು, ಪರೀಕ್ಷೆಗಳು ಮುಗಿದ ತಕ್ಷಣ ನಿಗದಿತ ಅವಧಿಯಲ್ಲಿ ಪಾರದರ್ಶಕವಾಗಿ ಫಲಿತಾಂಶ ಘೋಷಿಸಬೇಕು ಎಂದು ತಿಳಿಸಿದ್ದಾರೆ.


Click the Play button to hear this message in audio format

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಸರಣಿ ಅಕ್ರಮಗಳು ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ 'ಕಾಕ್ರೋಚ್ ಜನತಾ ಪಕ್ಷ' (CJP) ದೇಶವ್ಯಾಪಿ ಪ್ರತಿಭಟನೆಯನ್ನು ಮಾಡಲು ಸಿದ್ಧತೆ ನಡೆಸಿದೆ. ಇದರೊಂದಿಗೆ ಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ಸಂಬಂಧಿಸಿದ ಮಹತ್ವದ 'ಶೈಕ್ಷಣಿಕ ಪ್ರಣಾಳಿಕೆ'ಯನ್ನು ಪಕ್ಷವು ಇಂದೇ ಬಿಡುಗಡೆ ಮಾಡಲಿದೆ ಎಂದು ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ತಿಳಿಸಿದ್ದಾರೆ.

ಗುರುವಾರ (ಜೂ.11) ಪುಣೆಯಲ್ಲಿ ಆಯೋಜಿಸಲಾಗಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದ ಪ್ರಮುಖ ಶೈಕ್ಷಣಿಕ ಕೇಂದ್ರವಾದ ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯದ (SPPU) ಆವರಣದಲ್ಲಿ ಇಂದು ಸಂಜೆ ಶಾಂತಿಯುತ ಪ್ರತಿಭಟನೆ ನಡೆಯಲಿದೆ. ಈ ಪ್ರತಿಭಟನೆಯಲ್ಲಿ ಖ್ಯಾತ ಹವಾಮಾನ ಮತ್ತು ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಂವಿಧಾನದ ಚೌಕಟ್ಟಿನಲ್ಲಿ ಶಾಂತಿಯುತ ಹೋರಾಟ

"ನಾವು ಇಂದಿನಿಂದ ಎಸ್‌ಎಸ್‌ಪಿಯು (SSPU) ಆವರಣದಲ್ಲಿ ನಮ್ಮ ರಾಷ್ಟ್ರವ್ಯಾಪಿ ಚಳುವಳಿಯನ್ನು ಆರಂಭಿಸುತ್ತಿದ್ದೇವೆ. ನಮ್ಮ ಈ ಹೋರಾಟ ಸಂಪೂರ್ಣವಾಗಿ ಸಂವಿಧಾನದ ಚೌಕಟ್ಟಿನೊಳಗೆ ಮತ್ತು ಶಾಂತಿಯುತವಾಗಿ ಇರಲಿದೆ. ಇದೇ ಸಂದರ್ಭದಲ್ಲಿ ಯುವ ಸಮೂಹದ ಧ್ವನಿಯಾಗಿ ನಮ್ಮ ಶಿಕ್ಷಣ ಪ್ರಣಾಳಿಕೆಯನ್ನು ಮುನ್ನೆಲೆಗೆ ತರುತ್ತಿದ್ದೇವೆ" ಎಂದು ದೀಪ್ಕೆ ತಿಳಿಸಿದರು.

ಪ್ರಣಾಳಿಕೆಯ ಪ್ರಮುಖ ಅಂಶಗಳೇನು ?

ಪರೀಕ್ಷಾ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಿ ಪತ್ರಿಕೆ ಸೋರಿಕೆಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು. ಪರೀಕ್ಷೆಗಳು ಮುಗಿದ ತಕ್ಷಣ ನಿಗದಿತ ಅವಧಿಯಲ್ಲಿ ಪಾರದರ್ಶಕವಾಗಿ ಫಲಿತಾಂಶ ಘೋಷಿಸುವುದು. ಪ್ರವೇಶ ಪ್ರಕ್ರಿಯೆಗಳು ಹಾಗೂ ಉದ್ಯೋಗ ನೇಮಕಾತಿಗಳಲ್ಲಿ ಭ್ರಷ್ಟಾಚಾರ ಮುಕ್ತ ವ್ಯವಸ್ಥೆ ನಿರ್ಮಿಸುವುದು. ಪರೀಕ್ಷಾ ಮಂಡಳಿ ಹಾಗೂ ಜವಾಬ್ದಾರಿಯುತ ಅಧಿಕಾರಿಗಳನ್ನು ವೈಫಲ್ಯಗಳಿಗೆ ಹೊಣೆಗಾರರನ್ನಾಗಿ ಮಾಡುವುದು. ಪರೀಕ್ಷೆಗಳ ವಿಳಂಬ ಮತ್ತು ಅಕ್ರಮಗಳಿಂದ ಲಕ್ಷಾಂತರ ವಿದ್ಯಾರ್ಥಿಗಳು ಎದುರಿಸುತ್ತಿರುವ ಮಾನಸಿಕ ಹಾಗೂ ಭವಿಷ್ಯದ ಆತಂಕಗಳನ್ನು ನಿವಾರಿಸುವುದಾಗಿದೆ.

ಜಂತರ್ ಮಂತರ್‌ನಲ್ಲಿ ಸಮಾರೋಪ

ಈ ಅಭಿಯಾನವು ಕೇವಲ ಪುಣೆಗೆ ಸೀಮಿತವಾಗಿರದೆ ಜೈಪುರ, ಲಕ್ನೋ, ಅಮೃತಸರ ಮತ್ತು ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಿಗೆ ವಿಸ್ತರಿಸಲಿದೆ. ಅಂತಿಮವಾಗಿ ಜೂನ್ 20 ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆಯೊಂದಿಗೆ ಈ ಆಂದೋಲನ ಮುಕ್ತಾಯಗೊಳ್ಳಲಿದೆ ಎಂದು ಸಂಘಟಕರು ತಿಳಿಸಿದ್ದಾರೆ. "ದೇಶದ ಒಂದು ಕೋಟಿಗೂ ಹೆಚ್ಚು ಯುವಕರ ಹಾಗೂ ವಿದ್ಯಾರ್ಥಿಗಳ ಭವಿಷ್ಯವನ್ನು ಅಪಾಯಕ್ಕೆ ತಳ್ಳಿರುವ ಕೇಂದ್ರ ಶಿಕ್ಷಣ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಅಲ್ಲಿಯವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ" ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ನಮ್ಮ ಖಾತೆಗಳ ಅಮಾನತು

ಯುವಕರ ಸಮಸ್ಯೆಗಳನ್ನು ಆಲಿಸುವ ಬದಲು ಸರ್ಕಾರವು ಸಿಜೆಪಿಯ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಅಮಾನತುಗೊಳಿಸುತ್ತಿದೆ ಎಂದು ದೀಪ್ಕೆ ಆರೋಪಿಸಿದರು. "ನಾವು ಸರ್ಕಾರದೊಂದಿಗೆ ಮಾತುಕತೆಗೆ ಸಿದ್ಧರಿದ್ದೇವೆ. ಆದರೆ ಸರ್ಕಾರ ನಮ್ಮನ್ನು ನಕಲಿ ಎಂದು ಕರೆಯುವ ಬದಲು ಯುವಕರು ಎದುರಿಸುತ್ತಿರುವ ನೈಜ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ಯುವಶಕ್ತಿಯನ್ನು ನಿರ್ಲಕ್ಷಿಸಲು ಯಾರಿಂದಲೂ ಸಾಧ್ಯವಿಲ್ಲ" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಇತ್ತೀಚಿನ ದಿನಗಳಲ್ಲಿ ನೀಟ್‌-ಯುಜಿ 2026 ಹಾಗೂ ಸಿಬಿಎಸ್‌ಇ ಮೌಲ್ಯಮಾಪನ ಅಕ್ರಮಗಳ ವಿರುದ್ಧ ಡಿಜಿಟಲ್ ವೇದಿಕೆಯಲ್ಲಿ ಭಾರಿ ಸದ್ದು ಮಾಡಿದ್ದ ಸಿಜೆಪಿ, ಜೂ. 6 ರಂದು ದೆಹಲಿಯಲ್ಲಿ ಯುವಕರು ಮತ್ತು ಪೋಷಕರನ್ನು ಒಳಗೊಂಡ ಬೃಹತ್ ಪ್ರತಿಭಟನೆಯನ್ನು ನಡೆಸಿ ದೇಶದ ಗಮನ ಸೆಳೆದಿತ್ತು.

Read More
Next Story