SIR Protests| ಮತ್ತೆ ಆಖಾಡಕ್ಕಿಳಿದ ಜಿರಳೆ ನಾಯಕರು; ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದೇನು?
ಅಮೆರಿಕದ ಹಾರ್ವರ್ಡ್ ಕೆನಡಿ ಶಾಲೆಯ ವಿದ್ಯಾರ್ಥಿ ಸಂಘಟನೆಯಾದ 'ಕ್ಯಾಸ್ಟ್ಲೆಸ್ ಕಾಕಸ್' ದೆಹಲಿ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದು, ಬಂಧಿತರನ್ನು ತಕ್ಷಣ ಬಿಡುಗಡೆ ಮಾಡುವಂತೆ ಮತ್ತು ಚುನಾವಣಾ ಸುಧಾರಣೆ ತರುವಂತೆ ಆಗ್ರಹಿಸಿದೆ.
ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆ (SIR) ಹಿಂಪಡೆಯಲು ಹಾಗೂ ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ನಡೆಸುತ್ತಿರುವ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ದೇಶವನ್ನು ಅಂತರ್ಯುದ್ಧದಂತಹ ಪರಿಸ್ಥಿತಿಗೆ ತಳ್ಳಲಾಗುತ್ತಿದೆ ಎಂದು ಭಾನುವಾರ ಬಿಡುಗಡೆಯಾದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಶಾಂತಿಯುತವಾಗಿ ಸೇರುವ ಜನರನ್ನು ಅಕ್ರಮವಾಗಿ ವಶಕ್ಕೆ ಪಡೆಯಬಾರದು ಎಂದು ಸುಪ್ರೀಂ ಕೋರ್ಟ್ ಭಾನುವಾರ ಸ್ಪಷ್ಟ ನಿರ್ದೇಶನ ನೀಡಿದ್ದರೂ, ದೆಹಲಿಯಲ್ಲಿ ಪೊಲೀಸರ ಕ್ರಮಗಳು ಮುಂದುವರಿದಿವೆ. ಸಿಪಿಎಂ ರಾಜ್ಯಸಭಾ ಸಂಸದ ಜಾನ್ ಬ್ರಿಟ್ಟಾಸ್ ಹಾಗೂ ಎಡಪಂಥೀಯ ವಿದ್ಯಾರ್ಥಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ದಿದ್ದಾರೆ.
ಸುಪ್ರೀಂ ಕೋರ್ಟ್ ಎಚ್ಚರಿಕೆ
ಪ್ರತಿಭಟನೆಯ ಹಿನ್ನೆಲೆಯಲ್ಲಿ ಮೆಟ್ರೋ ಹಾಗೂ ರೈಲು ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬಾರದು ಎಂಬ ಆದೇಶ ಉಲ್ಲಂಘನೆಯಾಗಿದೆ ಎಂದು ಸಲ್ಲಿಕೆಯಾದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೋಯ್ಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರಿದ್ದ ವಿಶೇಷ ಪೀಠವು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ದೆಹಲಿ ಮೆಟ್ರೋ ನಿಯಮಿತವಾಗಿ ಸಂಚರಿಸುವಂತೆ ಮತ್ತು ವಕೀಲರು ಹಾಗೂ ಪತ್ರಕರ್ತರ ಕರ್ತವ್ಯ ನಿರ್ವಹಣೆಗೆ ಅಡ್ಡಿಯಾಗದಂತೆ ಕ್ರಮವಹಿಸಲು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಸೂಚಿಸಿದೆ.
ಸಿಜೆಪಿ ಸುದ್ದಿಗೋಷ್ಠಿ
ಸಿಜೆಪಿ ಮುಖಂಡ ಸೌರವ್ ದಾಸ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, "ಸರ್ಕಾರ ತನ್ನದೇ ನಾಗರಿಕರ ವಿರುದ್ಧ ಯುದ್ಧ ಸಾರಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ 48 ಗಂಟೆಗಳ ಗಡುವು ನೀಡಿರುವ ಸಂಘಟನೆ, ರಾಜೀನಾಮೆ ನೀಡದಿದ್ದರೆ ಅನಿರ್ದಿಷ್ಟಾವಧಿ ಧರಣಿ ಹಾಗೂ ದೇಶವ್ಯಾಪಿ "ಚುನಾವಣಾ ಆಯೋಗ ಸರಿಪಡಿಸಿ" (ಇಲೆಕ್ಷನ್ ಕಮಿಷನ್ ಠೀಕ್ ಕರೋ) ಅಭಿಯಾನ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದೆ.
ಬಿಜೆಪಿ ಪ್ರತಿಕ್ರಿಯೆ
ಬಿಜೆಪಿ ಸಂಸದ ತರುಣ್ ಚುಘ್ ಪೊಲೀಸರ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ದೆಹಲಿಯ ಕಾನೂನು ಸುವ್ಯವಸ್ಥೆ ಕಾಪಾಡುವುದು ಆಡಳಿತದ ಜವಾಬ್ದಾರಿ. ದೇಶದ ಜನತೆಯ ಚಿತ್ತ ಪ್ರತಿಭಟನಾಕಾರರ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.
ಅಮೆರಿಕದ ಹಾರ್ವರ್ಡ್ ಕೆನಡಿ ಶಾಲೆಯ ವಿದ್ಯಾರ್ಥಿ ಸಂಘಟನೆಯಾದ 'ಕ್ಯಾಸ್ಟ್ಲೆಸ್ ಕಾಕಸ್' ದೆಹಲಿ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದು, ಬಂಧಿತರನ್ನು ತಕ್ಷಣ ಬಿಡುಗಡೆ ಮಾಡುವಂತೆ ಮತ್ತು ಚುನಾವಣಾ ಸುಧಾರಣೆ ತರುವಂತೆ ಆಗ್ರಹಿಸಿದೆ.
ದೆಹಲಿಯ ಘಟನೆಗಳ ಬೆನ್ನಲ್ಲೇ ಮುಂಬೈನ ಶಿವಾಜಿ ಪಾರ್ಕ್ನಲ್ಲಿ ಪ್ರತಿಭಟನೆಗೆ ಕರೆ ನೀಡಲಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಸಿಜೆಪಿಯ ಕಾನೂನು ವಿಭಾಗದ ಮುಖ್ಯಸ್ಥೆ ರತ್ನ ಸಿಂಗ್ ಅವರು ಪೊಲೀಸರು ಕಾರ್ಯಕರ್ತರ ಮನೆಗಳಿಗೆ ತೆರಳಿ ಬೆದರಿಕೆ ಹಾಕಿದ್ದಾರೆ ಮತ್ತು ತಮ್ಮನ್ನು ಜಂಗ್ಪುರದಲ್ಲಿ ಸುಮಾರು ಒಂಬತ್ತು ಗಂಟೆಗಳ ಕಾಲ ಅಕ್ರಮವಾಗಿ ತಡೆಹಿಡಿದಿದ್ದರು ಎಂದು ಆರೋಪಿಸಿದ್ದಾರೆ.

