
ಬ್ಯಾರಿಕೇಡ್ ದಾಟಿ ಜಂತರ್ ಮಂತರ್ಗೆ ಪ್ರವೇಶಿಸಿದ್ದ ಸಿಜೆಪಿ ನಾಯಕರ ಬಂಧನ
ದೆಹಲಿ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಿದ ಸಿಜೆಪಿ ನಾಯಕರಾದ ಸೌರವ್ ದಾಸ್, ಅಶುತೋಷ್ ರಂಕಾ ಮತ್ತು ಅಜಿಂಕ್ಯ ಶಿಂಧೆ ಬಂಧನವಾಗಿದೆ.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಾಯಕರಾದ ಸೌರವ್ ದಾಸ್, ಅಶುತೋಷ್ ರಂಕಾ ಮತ್ತು ಅಜಿಂಕ್ಯ ಶಿಂಧೆ ಅವರನ್ನು ದೆಹಲಿ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಿದ್ದಾರೆ. ಜಂತರ್ ಮಂತರ್ನಲ್ಲಿ ಅನುಮತಿ ಇಲ್ಲದೆ ಪ್ರವೇಶಿಸಿದ ಆರೋಪದ ಜೊತೆಗೆ, ಶಾಂತಿ ಕಾಪಾಡುವ ಸಂಬಂಧ ನೀಡಿದ್ದ ಮುಚ್ಚಳಿಕೆ ಉಲ್ಲಂಘನೆ ಮತ್ತು ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಗಳನ್ನೂ ಅವರ ವಿರುದ್ಧ ದಾಖಲಿಸಲಾಗಿದೆ.
ಮಂಗಳವಾರ ಮುಂಜಾನೆ ಪೊಲೀಸ್ ಬ್ಯಾರಿಕೇಡ್ಗಳನ್ನು ದಾಟಿ ಜಂತರ್ ಮಂತರ್ ಪ್ರವೇಶಿಸಿದ ಮೂವರು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕೆಂದು ಘೋಷಣೆಗಳನ್ನು ಕೂಗಿದ್ದರು. ಬಳಿಕ ಅವರನ್ನು ವಶಕ್ಕೆ ಪಡೆಯಲಾಯಿತು. ಬೆಳಗ್ಗೆ ಸುಮಾರು 8 ಗಂಟೆಗೆ ಮಂದಿರ ಮಾರ್ಗದಲ್ಲಿರುವ ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು.
ಇದಕ್ಕೂ ಮೊದಲು ಶನಿವಾರ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಬಂಧನಕ್ಕೊಳಗಾಗಿದ್ದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ, 50 ಸಾವಿರ ರೂಪಾಯಿ ಮುಚ್ಚಳಿಕೆ ನೀಡಿ ಬಿಡುಗಡೆಯಾಗಿದ್ದರು. ಒಂದು ವರ್ಷದ ಅವಧಿಯಲ್ಲಿ ಶಾಂತಿಭಂಗಕ್ಕೆ ಕಾರಣವಾಗುವ ಯಾವುದೇ ಕೃತ್ಯದಲ್ಲಿ ಭಾಗಿಯಾಗುವುದಿಲ್ಲ ಎಂದು ಅವರು ಒಪ್ಪಿಕೊಂಡಿದ್ದರು. ಇದೀಗ ಆ ಷರತ್ತುಗಳನ್ನು ಉಲ್ಲಂಘಿಸಿದ ಆರೋಪವೂ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮೂವರನ್ನು ಪುನರಾವರ್ತಿತ ಅಪರಾಧಿಗಳೆಂದು ಪರಿಗಣಿಸಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.
ಸಿಜೆಪಿಯ ಕಾನೂನು ತಂಡದ ಮುಖ್ಯಸ್ಥೆ ರತ್ನಾ ಸಿಂಗ್, ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಈ ಬಂಧನದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಜಂತರ್ ಮಂತರ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಸೌರವ್ ದಾಸ್, ಅಶುತೋಷ್ ರಂಕಾ ಮತ್ತು ಅಜಿಂಕ್ಯ ಶಿಂಧೆ ಅವರನ್ನು ಬಂಧಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಅತಿಕ್ರಮ ಪ್ರವೇಶ, ಮುಚ್ಚಳಿಕೆ ಉಲ್ಲಂಘನೆ ಮತ್ತು ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಗಳನ್ನು ಅವರು ಉಲ್ಲೇಖಿಸಿದ್ದಾರೆ.
ಬಂಧಿತರಿಗೆ ತಡರಾತ್ರಿಯವರೆಗೂ ವಕೀಲರನ್ನು ಭೇಟಿಯಾಗಲು ಅವಕಾಶ ನೀಡಲಿಲ್ಲ. ಮುಂಜಾನೆ 3 ಗಂಟೆಗೆ ಖಾಸಗಿ ವಾಹನದಲ್ಲಿ ಅವರನ್ನು ಸಂಸತ್ ಮಾರ್ಗ ಪೊಲೀಸ್ ಠಾಣೆಗೆ ಕರೆತರಲಾಯಿತು ಎಂದು ರತ್ನಾ ಸಿಂಗ್ ಆರೋಪಿಸಿದ್ದಾರೆ. ಮೂವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ತಿಹಾರ್ ಜೈಲಿಗೆ ಕಳುಹಿಸುವ ಸಾಧ್ಯತೆಯೂ ಇದೆ ಎಂದು ಅವರು ಹೇಳಿದ್ದಾರೆ.
ಎಸ್ಐಆರ್ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಿಜೆಪಿ ಸೇರಿದಂತೆ ವಿವಿಧ ಸಂಘಟನೆಗಳು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿವೆ. ಈ ನಡುವೆ ಪ್ರತಿಭಟನೆಗಳ ನಿಯಂತ್ರಣಕ್ಕೆ ದೆಹಲಿ ಪೊಲೀಸರು ಭದ್ರತೆಯನ್ನು ಹೆಚ್ಚಿಸಿದ್ದಾರೆ.
ಅಕ್ಟೋಬರ್ 11ರಂದು ದೆಹಲಿ ಪೊಲೀಸ್ ಆಯುಕ್ತ ಅನುರಾಗ್ ಕುಮಾರ್ ಹೊರಡಿಸಿದ ಆದೇಶದ ಪ್ರಕಾರ, ರಾಮಲೀಲಾ ಮೈದಾನ, ಬುರಾರಿ ಮೈದಾನ ಮತ್ತು ಸಿಬಿಡಿ ಮೈದಾನಗಳನ್ನು ಪ್ರತಿಭಟನೆ ಹಾಗೂ ಸಾರ್ವಜನಿಕ ಸಭೆಗಳಿಗೆ ನಿಗದಿತ ಸ್ಥಳಗಳೆಂದು ಗುರುತಿಸಲಾಗಿದೆ. ಇದೇ ವೇಳೆ, ಅನುಮತಿ ಪಡೆದ ಪ್ರತಿಭಟನಾ ಸ್ಥಳಗಳ ಪಟ್ಟಿಯಿಂದ ಜಂತರ್ ಮಂತರನ್ನು ಕೈಬಿಡಲಾಗಿದೆ.
ಈ ನಿರ್ಧಾರವನ್ನು ಸಿಜೆಪಿ ವಿರೋಧಿಸಿದೆ. ರಾಜಧಾನಿಯ ಪ್ರಮುಖ ಕೇಂದ್ರದಿಂದ ಪ್ರತಿಭಟನೆಗಳನ್ನು ದೂರ ಸರಿಸುವುದರಿಂದ ಜನರ ಗಮನ ಸೆಳೆಯುವ ಹಾಗೂ ಪ್ರತಿಭಟನೆಗಳ ಪ್ರಭಾವವನ್ನು ಹೆಚ್ಚಿಸುವ ಅವಕಾಶ ಕಡಿಮೆಯಾಗಲಿದೆ ಎಂದು ಪಕ್ಷ ಆಕ್ಷೇಪ ವ್ಯಕ್ತಪಡಿಸಿದೆ.

