
ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆಗೆ ಟೈಫಾಯ್ಡ್- ಅನಾರೋಗ್ಯದ ನಡುವೆಯೂ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಪಟ್ಟು
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋ ಸಂದೇಶದಲ್ಲಿ, ತಾವು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಪ್ರಸ್ತುತ ಚಿಕಿತ್ಸೆ ಪಡೆಯುತ್ತಿರುವುದಾಗಿ ದೀಪ್ಕೆ ಹೇಳಿದ್ದಾರೆ.
ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ ತಮಗೆ ಟೈಫಾಯ್ಡ್ ಜ್ವರ ತಗಲಿರುವುದಾಗಿ ಶನಿವಾರ ತಿಳಿಸಿದ್ದಾರೆ. ಆದರೆ, ತಮ್ಮ ಅನಾರೋಗ್ಯದ ಕಾರಣಕ್ಕೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋ ಸಂದೇಶದಲ್ಲಿ, ತಾವು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಪ್ರಸ್ತುತ ಚಿಕಿತ್ಸೆ ಪಡೆಯುತ್ತಿರುವುದಾಗಿ ದೀಪ್ಕೆ ಹೇಳಿದ್ದಾರೆ. ತಮ್ಮ ಅನಾರೋಗ್ಯದ ನಡುವೆಯೂ ದೇಶದಾದ್ಯಂತ ಚಳವಳಿಯನ್ನು ಜೀವಂತವಾಗಿರಿಸಿದ್ದಕ್ಕಾಗಿ ಸಿಜೆಪಿ ಬೆಂಬಲಿಗರಿಗೆ ಧನ್ಯವಾದ ಅರ್ಪಿಸಿದ ಅವರು, ಈ ಹೋರಾಟ ಖಂಡಿತವಾಗಿಯೂ ತನ್ನ ಗುರಿಯನ್ನು ತಲುಪಲಿದೆ ಎಂದಿದ್ದಾರೆ.
Have been diagnosed with typhoid, but the fight will go on until Dharmendra Pradhan resigns! pic.twitter.com/8iHSZdF6K7
— Abhijeet Dipke (@abhijeet_dipke) July 25, 2026
ಅಭಿಜಿತ್ ದೀಪ್ಕೆ ವಿಡಿಯೋದಲ್ಲೇನಿದೆ?
"ನಿಮಗೆ ತಿಳಿದಿರುವಂತೆ, ನಾನು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದೆ. ಈಗ ವೈದ್ಯಕೀಯ ವರದಿ ಬಂದಿದ್ದು, ನನಗೆ ಟೈಫಾಯ್ಡ್ ಇರುವುದು ದೃಢಪಟ್ಟಿದೆ. ಚಿಕಿತ್ಸೆ ಮುಂದುವರಿದಿದ್ದು, ಪ್ರತಿದಿನ ಐವಿ ಡ್ರಿಪ್ಸ್ ನೀಡಲಾಗುತ್ತಿದೆ. ಆದರೆ ದೇಶದಾದ್ಯಂತ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ಎಲ್ಲಾ ಬೆಂಬಲಿಗರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ."
ಹೋರಾಟವನ್ನು ಬೃಹತ್ ಮಟ್ಟದಲ್ಲಿ ವಿಸ್ತರಿಸಿದ್ದಕ್ಕಾಗಿ ಬೆಂಬಲಿಗರನ್ನು ಅಭಿನಂದಿಸಿದ ದೀಪ್ಕೆ, ನಿರಂತರ ಶಾಂತಿಯುತ ಪ್ರತಿಭಟನೆಯು ಶಿಕ್ಷಣ ಸಚಿವ ಪ್ರಧಾನ್ ಅವರ ರಾಜೀನಾಮೆಯ ಪ್ರಮುಖ ಬೇಡಿಕೆಯನ್ನು ಈಡೇರಿಸಲು ನೆರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. "ಈ ಚಳವಳಿಯನ್ನು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಯಶಸ್ವಿಗೊಳಿಸಿದ್ದಕ್ಕಾಗಿ ನಿಮ್ಮೆಲ್ಲರಿಗೂ ಅಭಿನಂದನೆಗಳು. ನಾವು ಇದೇ ರೀತಿ ಪ್ರತಿಭಟನೆಯನ್ನು ಮುಂದುವರಿಸಿದರೆ ಖಂಡಿತವಾಗಿಯೂ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಪಡೆಯುತ್ತೇವೆ ಎಂಬ ಭರವಸೆ ನನಗಿದೆ" ಎಂದು ಅವರು ಹೇಳಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಡೆದಿರುವ ಅಕ್ರಮಗಳ ವಿರುದ್ಧ ಸಿಜೆಪಿ ನೇತೃತ್ವದಲ್ಲಿ ಆರಂಭವಾಗಿರುವ ಈ ಆಂದೋಲನವು, ಪರೀಕ್ಷಾ ವ್ಯವಸ್ಥೆಯಲ್ಲಿ ಹೊಣೆಗಾರಿಕೆ, ನೇಮಕಾತಿ ಮತ್ತು ಪ್ರವೇಶ ಪರೀಕ್ಷೆಗಳಲ್ಲಿ ಸುಧಾರಣೆಗಳು ಹಾಗೂ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸುತ್ತಿದೆ.
ಈ ಹೋರಾಟಕ್ಕೆ ಲಡಾಖ್‌ನ ಹೋರಾಟಗಾರ ಸೋನಮ್ ವಾಂಗ್ಚುಕ್ ಸೇರಿದಂತೆ ಹಲವು ಸಾರ್ವಜನಿಕ ಗಣ್ಯರು ಬೆಂಬಲ ಸೂಚಿಸಿದ್ದರು. ವಾಂಗ್ಚುಕ್ ಅವರು ಜೂನ್ 28 ರಂದು ಆಂದೋಲನಕ್ಕೆ ಸೇರ್ಪಡೆಗೊಂಡು ಬರೋಬ್ಬರಿ 26 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಶಾಂತಿಯುತ ಪ್ರತಿಭಟನಾಕಾರರ ವಿರುದ್ಧ ಯಾವುದೇ ಪ್ರಕರಣಗಳನ್ನು ದಾಖಲಿಸುವುದಿಲ್ಲ, ಸಂಸತ್ತಿನಲ್ಲಿ ಪರೀಕ್ಷಾ ಸುಧಾರಣೆಗಳು ಮತ್ತು ಹೊಣೆಗಾರಿಕೆಯ ಕುರಿತು ಚರ್ಚಿಸಲಾಗುವುದು ಹಾಗೂ ನೀಟ್ ಪೇಪರ್ ಲೀಕ್ ನಂತರ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಗಳ ಕುಟುಂಬಗಳಿಗೆ ಪರಿಹಾರವನ್ನು ಧನಾತ್ಮಕವಾಗಿ ಪರಿಗಣಿಸಲಾಗುವುದು ಎಂದು ಕೇಂದ್ರ ಸರ್ಕಾರ ಲಿಖಿತ ಭರವಸೆ ನೀಡಿದ ನಂತರ ವಾಂಗ್ಚುಕ್ ಈ ವಾರದ ಆರಂಭದಲ್ಲಿ ತಮ್ಮ ಉಪವಾಸವನ್ನು ಕೊನೆಗೊಳಿಸಿದ್ದರು.
ಸೋನಮ್ ವಾಂಗ್ಚುಕ್ ತಮ್ಮ ಉಪವಾಸವನ್ನು ಅಂತ್ಯಗೊಳಿಸಿದ್ದರೂ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡುವವರೆಗೆ ದೆಹಲಿಯ ಜಂತರ್ ಮಂತರ್‌ನಲ್ಲಿ ತಮ್ಮ ಪ್ರತಿಭಟನೆ ಮುಂದುವರಿಯಲಿದೆ ಎಂದು ಸಿಜೆಪಿ ಸ್ಪಷ್ಟಪಡಿಸಿದೆ.

