
ಭಾರತೀಯ ಚಿತ್ರರಂಗದ ದಾರ್ಶನಿಕ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ಇನ್ನಿಲ್ಲ
ಸಿಂಗೀತಂ ಶ್ರೀನಿವಾಸ ರಾವ್ ಅವರಿಗೆ ಕನ್ನಡ ನೆಲದೊಂದಿಗೆ ವಿಶೇಷ ನಂಟು. ನಟ ಶಿವರಾಜ್ಕುಮಾರ್ ಅವರನ್ನು ಆನಂದ್ ಚಿತ್ರದ ಮೂಲಕ ನಾಯಕನಾಗಿ ಪರಿಚಯಿಸಿದ ಕೀರ್ತಿ ಸಿಂಗೀತಂ ಅವರಿಗೆ ಸಲ್ಲುತ್ತದೆ.
ಭಾರತೀಯ ಚಲನಚಿತ್ರರಂಗವು ತನ್ನ ಓರ್ವ ಅತ್ಯಂತ ಪ್ರತಿಭಾವಂತ, ಬಹುಮುಖಿ ಮತ್ತು ಪ್ರಯೋಗಶೀಲ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ (95) ಅವರನ್ನು ಕಳೆದುಕೊಂಡಿದೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚೆನ್ನೈನಲ್ಲಿ ಕೊನೆಯುಸಿರೆಳೆದರು. ಆರು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಚಿತ್ರರಂಗವನ್ನು ತಮ್ಮ ಅದ್ಭುತ ಕಲ್ಪನೆಗಳು ಮತ್ತು ವಿಭಿನ್ನ ನಿರೂಪಣಾ ಶೈಲಿಯಿಂದ ಶ್ರೀಮಂತಗೊಳಿಸಿದ ಸಿಂಗೀತಂ ಅವರ ನಿಧನ, ಕಲಾ ಜಗತ್ತಿಗೆ ತುಂಬಲಾರದ ನಷ್ಟವಾಗಿದೆ.
1931ರ ಸೆಪ್ಟಂಬರ್ 21ರಂದು ಆಂಧ್ರಪ್ರದೇಶದ ಗುಡೂರಿನಲ್ಲಿ ಜನಿಸಿದ ಸಿಂಗೀತಂ ಶ್ರೀನಿವಾಸ ರಾವ್, ಕೇವಲ ಒಬ್ಬ ನಿರ್ದೇಶಕರಾಗಿರಲಿಲ್ಲ; ಅವರು ಚಿತ್ರಕಥೆಗಾರ, ನಿರ್ಮಾಪಕ, ಸಂಗೀತ ನಿರ್ದೇಶಕ ಮತ್ತು ನಟ ಹೀಗೆ ಚಿತ್ರಕಲೆಗೆ ಸಂಬಂಧಿಸಿದ ಪ್ರತಿಯೊಂದು ಮಗ್ಗುಲನ್ನೂ ಬಲ್ಲವರಾಗಿದ್ದರು. ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರವನ್ನು ಅಧ್ಯಯನ ಮಾಡಿದ್ದ ಅವರು, ವಿಜ್ಞಾನ ಮತ್ತು ಕಲೆಯ ಅದ್ಭುತ ಸಂಗಮವನ್ನು ತೆರೆಯ ಮೇಲೆ ತರಬಲ್ಲವರಾಗಿದ್ದರು. ಖ್ಯಾತ ನಿರ್ದೇಶಕ ಕೆ.ವಿ. ರೆಡ್ಡಿ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅವಧಿಯಲ್ಲಿ, ಭಾರತೀಯ ಚಿತ್ರರಂಗದ ಶ್ರೇಷ್ಠ ಕೃತಿಗಳಾದ 'ಮಾಯಾಬಜಾರ್'ನ ನಿರ್ಮಾಣ ಪ್ರಕ್ರಿಯೆಯನ್ನು ಹತ್ತಿರದಿಂದ ನೋಡಿ, ಸಿನಿಮಾ ಕಲೆಗೆ ಬೇಕಾದ ಅಡಿಪಾಯವನ್ನು ಹಾಕಿಕೊಂಡಿದ್ದರು.
ಕನ್ನಡ ಚಿತ್ರರಂಗದ ಮೇಲೆ ಅಳಿಸಲಾಗದ ಛಾಪು
ಸಿಂಗೀತಂ ಶ್ರೀನಿವಾಸ ರಾವ್ ಅವರಿಗೆ ಕನ್ನಡ ನೆಲದೊಂದಿಗೆ ವಿಶೇಷ ನಂಟು. ಕನ್ನಡ ಚಿತ್ರರಂಗದ ದಂತಕಥೆ ಡಾ. ರಾಜ್ಕುಮಾರ್ ಅವರೊಂದಿಗೆ ಅವರು ಹೊಂದಿದ್ದ ಒಡನಾಟ ಚಿತ್ರರಂಗದ ಇತಿಹಾಸದ ಒಂದು ಭಾಗ. 'ಹಾಲು ಜೇನು', 'ಚಲಿಸುವ ಮೋಡಗಳು', 'ಜ್ವಾಲಾಮುಖಿ', 'ಶ್ರುತಿ ಸೇರಿದಾಗ', 'ದೇವತಾ ಮನುಷ್ಯ' ಮುಂತಾದ ಚಿತ್ರಗಳು ಕನ್ನಡ ಸಿನಿಪ್ರಿಯರಿಗೆ ಇಂದಿಗೂ ಅಚ್ಚುಮೆಚ್ಚು. ವಿಶೇಷವಾಗಿ, ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ಕುಮಾರ್ ಅವರನ್ನು 'ಆನಂದ್' ಚಿತ್ರದ ಮೂಲಕ ನಾಯಕನಾಗಿ ಪರಿಚಯಿಸಿದ ಕೀರ್ತಿ ಸಿಂಗೀತಂ ಅವರಿಗೆ ಸಲ್ಲುತ್ತದೆ. ಕನ್ನಡ ಚಿತ್ರಗಳ ಕಥಾ ಹಂದರ ಮತ್ತು ನಿರೂಪಣೆಯಲ್ಲಿ ಅವರು ತಂದ ಹೊಸತನ, ಆ ಕಾಲದ ನಿರ್ದೇಶಕರಿಗೆ ದಿಕ್ಸೂಚಿಯಾಗಿತ್ತು.
ಪ್ರಯೋಗಗಳ ಸರದಾರ
ಸಿಂಗೀತಂ ಅವರ ಕಲೆಗೆ ಯಾವುದೇ ಭಾಷೆಯ ಗಡಿಯಿರಲಿಲ್ಲ. 1974ರ ತಮಿಳು ಚಿತ್ರ 'ಥಿಕ್ಕತ್ರ ಪಾರ್ವತಿ'ಯಿಂದ ರಾಷ್ಟ್ರೀಯ ಪ್ರಶಸ್ತಿಯನ್ನು ಬಾಚಿಕೊಂಡ ಅವರು, ಅಲ್ಲಿಂದ ಮುಂದೆ ಅಸಾಧ್ಯವೆನಿಸುವ ಕಥೆಗಳನ್ನು ದೃಶ್ಯಕಾವ್ಯಗಳನ್ನಾಗಿ ಮಾಡಿದರು. ಸಂಭಾಷಣೆಯೇ ಇಲ್ಲದಿದ್ದರೂ, ಮೌನವನ್ನೇ ಭಾಷೆಯನ್ನಾಗಿ ಮಾಡಿ, ವಿಶ್ವದಾದ್ಯಂತ ಕೊಂಡಾಡಲ್ಪಟ್ಟ 'ಪುಷ್ಪಕ ವಿಮಾನ' ಸಿಂಗೀತಂ ಅವರ ಸೃಜನಶೀಲತೆಗೆ ಸಾಕ್ಷಿ. ನಟ ಕಮಲ್ ಹಾಸನ್ ಅವರೊಂದಿಗೆ ಅವರು ನಡೆಸಿದ ಪ್ರಯೋಗಗಳು ಭಾರತೀಯ ಸಿನಿಮಾದ ದಿಕ್ಕನ್ನೇ ಬದಲಿಸಿದವು. 'ರಾಜಾ ಪಾರ್ವೈ', 'ಅಪೂರ್ವ ಸಹೋದರರು' (ಒಂದೇ ಮೈಯಲ್ಲಿ ಇಬ್ಬರು ವ್ಯಕ್ತಿಗಳಾಗಿ ಕಮಲ್ ಅಭಿನಯ) ಮತ್ತು 'ಮೈಕೆಲ್ ಮದನ ಕಾಮರಾಜನ್' ಚಿತ್ರಗಳು ಇಂದಿಗೂ ತಾಂತ್ರಿಕವಾಗಿ ಅಚ್ಚರಿ ಮೂಡಿಸುತ್ತವೆ. 'ಆದಿತ್ಯ 369' ಚಿತ್ರದ ಮೂಲಕ ಭಾರತೀಯ ಚಿತ್ರರಂಗಕ್ಕೆ 'ಟೈಮ್ ಮೆಷಿನ್' ಕಲ್ಪನೆಯನ್ನು ಪರಿಚಯಿಸಿದವರು ಇವರೇ. 'ಭೈರವ ದ್ವೀಪಂ'ನಂತಹ ಫ್ಯಾಂಟಸಿ ಚಿತ್ರಗಳ ಮೂಲಕ ಪ್ರೇಕ್ಷಕರನ್ನು ಕಲ್ಪನಾ ಲೋಕಕ್ಕೆ ಕರೆದೊಯ್ದಿದ್ದರು.
ವಯಸ್ಸು ಕೇವಲ ಸಂಖ್ಯೆ ಮಾತ್ರ..!
ಸಿಂಗೀತಂ ಶ್ರೀನಿವಾಸ ರಾವ್ ಅವರ ಬದ್ಧತೆಗೆ ಅತ್ಯುತ್ತಮ ಉದಾಹರಣೆಯೆಂದರೆ, ತಮ್ಮ 94ನೇ ವಯಸ್ಸಿನಲ್ಲಿ ಅವರು ನಿರ್ದೇಶಿಸಿದ 'ಸಿಂಗೀತಂ' ಫ್ಯಾಂಟಸಿ ಸಂಗೀತಮಯ ಚಿತ್ರ. ಈ ವಯಸ್ಸಿನಲ್ಲೂ ಹೊಸ ತಲೆಮಾರಿನ ಯುವಕರಿಗೆ ಸರಿಸಾಟಿಯಾಗಿ ಯೋಚಿಸುವ ಮತ್ತು ತಾಂತ್ರಿಕವಾಗಿ ಚಿತ್ರವನ್ನು ರೂಪಿಸುವ ಅವರ ಉತ್ಸಾಹ ಇತರರಿಗೆ ಸ್ಫೂರ್ತಿಯಾಗಿತ್ತು. ಸಿಂಗೀತಂ ಅವರ ಅಗಲಿಕೆಗೆ ಇಡೀ ಭಾರತೀಯ ಚಿತ್ರರಂಗ ಕಂಬನಿ ಮಿಡಿದಿದೆ. ವಿಧಾನ ಪರಿಷತ್ತಿನ ಉಪಸಭಾಪತಿ ಹಾಗೂ ಹಿರಿಯ ಕಲಾವಿದೆ ಡಾ. ಉಮಾಶ್ರೀ ಅವರು ಸಂತಾಪ ವ್ಯಕ್ತಪಡಿಸಿ, "ಸಿಂಗೀತಂ ಶ್ರೀನಿವಾಸ ರಾವ್ ಅವರ ನಿಧನದಿಂದ ಭಾರತೀಯ ಚಿತ್ರರಂಗಕ್ಕೆ ದೊಡ್ಡ ಶೂನ್ಯ ಉಂಟಾಗಿದೆ. ಎರಡು ರಾಷ್ಟ್ರೀಯ ಪ್ರಶಸ್ತಿಗಳು ಮತ್ತು ಮೂರು ರಾಜ್ಯ ಪ್ರಶಸ್ತಿಗಳ ಮೂಲಕ ಅವರು ಕಲಾಸೇವೆಗೆ ಸಲ್ಲಿಸಿದ ಕೊಡುಗೆ ಅನನ್ಯ" ಎಂದು ಸ್ಮರಿಸಿದ್ದಾರೆ.

