
ಉಗ್ರರು ನಿಮ್ಮನ್ನು ಕೊಲ್ಲಲಿದ್ದಾರೆ... ಕೇಂದ್ರ ಸಚಿವ ಚಿರಾಗ್ ಪಾಸ್ವಾನ್‌ಗೆ ಜೀವ ಬೆದರಿಕೆ
ಚಿರಾಗ್ ಪಾಸ್ವಾನ್ ಅವರ ಕಚೇರಿಗೆ ಎರಡು ಮೊಬೈಲ್ ನಂಬರ್‌ಗಳನ್ನು ಒಳಗೊಂಡಿದ್ದ ಸಹಿ ಇಲ್ಲದ ಪತ್ರವೊಂದು ಬಂದಿದೆ. ಪತ್ರವನ್ನು ಪರಿಶೀಲಿಸಿದಾಗ ಸಚಿವರಿಗೆ ಜೀವ ಬೆದರಿಕೆ ಹಾಕಿರುವುದು ಕಂಡುಬಂದಿದೆ.
ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವ ಹಾಗೂ ಲೋಕ ಜನಶಕ್ತಿ ಪಾರ್ಟಿ (ರಾಮ್ ವಿಲಾಸ್) ಮುಖ್ಯಸ್ಥ ಚಿರಾಗ್ ಪಾಸ್ವಾನ್ ಅವರಿಗೆ ಉಗ್ರರಿಂದ ಕೊಲೆ ಬೆದರಿಕೆ ಬಂದಿದೆ ಎಂದು ಅವರ ಕಚೇರಿ ಮಂಗಳವಾರ ತಿಳಿಸಿದೆ. ಈಗಾಗಲೇ Z ಭದ್ರತೆ ಹೊಂದಿರುವ ಚಿರಾಗ್ ಪಾಸ್ವಾನ್ ಅವರ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸುವಂತೆ ಅವರ ಕಚೇರಿ ಕೇಂದ್ರ ಗೃಹ ಸಚಿವಾಲಯಕ್ಕೆ ಮನವಿ ಮಾಡಿದೆ.
ಚಿರಾಗ್ ಪಾಸ್ವಾನ್ ಅವರ ಕಚೇರಿಗೆ ಎರಡು ಮೊಬೈಲ್ ನಂಬರ್‌ಗಳನ್ನು ಒಳಗೊಂಡಿದ್ದ ಸಹಿ ಇಲ್ಲದ ಪತ್ರವೊಂದು ಸಚಿವಾಲಯಕ್ಕೆ ಬಂದಿದೆ. ಪತ್ರವನ್ನು ತೆರದು ಪರಿಶೀಲಿಸಿದಾಗ ಕೇಂದ್ರ ಸಚಿವರ ಜೀವಕ್ಕೆ ನೇರ ಬೆದರಿಕೆ ಹಾಕಿರುವುದು ಕಂಡುಬಂದಿದೆ ಎಂದು ಪಾಸ್ವಾನ್ ಅವರ ಹೆಚ್ಚುವರಿ ಖಾಸಗಿ ಕಾರ್ಯದರ್ಶಿ ಅಲೋಕ್ ಕುಮಾರ್ ಸಿಂಗ್ ಅವರು ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಪತ್ರದಲ್ಲಿದ್ದ ಬೆದರಿಕೆಯ ಸಂದೇಶದಲ್ಲಿ, ‘ನಿಮ್ಮನ್ನು ಶೀಘ್ರದಲ್ಲೇ ಉಗ್ರರು ಕೊಲ್ಲಲಿದ್ದಾರೆ’ ಎಂದು ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಚಿವರ ಸುರಕ್ಷತೆ ಮತ್ತು ಭದ್ರತೆಯ ಬಗ್ಗೆ ಆತಂಕ ವ್ಯಕ್ತಪಡಿಸಲಾಗಿದೆ. ಈ ಬೆದರಿಕೆ ಸಂದೇಶದ ಮೂಲ, ಅದರ ನೈಜತೆ ಹಾಗೂ ಅದು ಯಾವ ಸಂದರ್ಭಗಳಲ್ಲಿ ಕಳುಹಿಸಲಾಯಿತು ಎಂಬುದರ ಕುರಿತು ತುರ್ತಾಗಿ ಸಮಗ್ರ ತನಿಖೆ ನಡೆಸುವಂತೆ ಗೃಹ ಸಚಿವಾಲಯಕ್ಕೆ ಮನವಿ ಮಾಡಲಾಗಿದೆ.
ಭದ್ರತೆ ಹೆಚ್ಚಳಕ್ಕೆ ಮನವಿ
ಅಲ್ಲದೆ, ಚಿರಾಗ್ ಪಾಸ್ವಾನ್ ಅವರ ಭದ್ರತಾ ವ್ಯವಸ್ಥೆಯನ್ನು ಮರುಪರಿಶೀಲಿಸಿ, ಅಗತ್ಯವಿದ್ದರೆ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸುವಂತೆ ಸಚಿವರ ಕಚೇರಿ ಮನವಿ ಮಾಡಿದೆ. ವಿಶೇಷವಾಗಿ ಸಚಿವರ ಮುಂಬರುವ ಸಾರ್ವಜನಿಕ ಕಾರ್ಯಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ.
ಈ ಕುರಿತು ಬರೆದಿರುವ ಪತ್ರದ ಪ್ರತಿಯನ್ನು ಕೇಂದ್ರ ಗೃಹ ಸಚಿವರ ಖಾಸಗಿ ಕಾರ್ಯದರ್ಶಿ ಹಾಗೂ ದೆಹಲಿ ಪೊಲೀಸ್ ಆಯುಕ್ತರಿಗೂ ಕಳುಹಿಸಲಾಗಿದೆ. ಚಿರಾಗ್ ಪಾಸ್ವಾನ್ ಅವರು ಲೋಕ ಜನಶಕ್ತಿ ಪಾರ್ಟಿ (ರಾಮ್ ವಿಲಾಸ್) ಮುಖ್ಯಸ್ಥರಾಗಿದ್ದು, ಪ್ರಸ್ತುತ ಕೇಂದ್ರ ಸರ್ಕಾರದಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

