
ಮೆಟಾ ಸಂಸ್ಥೆಗೆ ಸಮನ್ಸ್: ಪಿಎಂ ಮೋದಿ ಪೋಸ್ಟ್ ಬಗ್ಗೆ ವಿವರಣೆ ಕೋರಿದ ಭಾರತ ಸರ್ಕಾರ
ಪ್ರಧಾನಿ ಮೋದಿ ಪೋಸ್ಟ್ ಡಿಲೀಟ್ ಹಾಗೂ ಆಲ್ಗರಿದಮ್ ಕಾರ್ಯವೈಖರಿ ಕುರಿತು ವಿವರಣೆ ನೀಡಲು ಮೆಟಾ ಸಾರ್ವಜನಿಕ ನೀತಿ ಮುಖ್ಯಸ್ಥ ಜೋಯಲ್ ಕಪ್ಲಾನ್‌ಗೆ ಕೇಂದ್ರ ಸರ್ಕಾರ ಸಮನ್ಸ್ ನೀಡಿದೆ.
ಮೆಟಾ ಸಂಸ್ಥೆಯ ಸಾರ್ವಜನಿಕ ನೀತಿ ವಿಭಾಗದ ಮುಖ್ಯಸ್ಥ ಜೋಯಲ್ ಕಪ್ಲಾನ್ ಹಾಗೂ ಇನ್‌ಸ್ಟಾಗ್ರಾಮ್‌ನ ತಾಂತ್ರಿಕ ಅಧಿಕಾರಿಗೆ ಕೇಂದ್ರ ಸರ್ಕಾರ ಸಮನ್ಸ್ ಜಾರಿ ಮಾಡಿದ್ದು, ಆಗಸ್ಟ್ 5ರಂದು ಸಭೆಗೆ ಹಾಜರಾಗುವಂತೆ ಸೂಚಿಸಿದೆ ಎಂದು ಉನ್ನತ ಸರ್ಕಾರಿ ಮೂಲಗಳನ್ನು ತಿಳಿಸಿವೆ.
ಮೆಟಾ ಸಂಸ್ಥೆಯ ಆಲ್ಗರಿದಮ್ ಹೇಗೆ ಕೆಲಸ ಮಾಡುತ್ತದೆ ಮತ್ತು ಕೆಲವು ನಿರ್ದಿಷ್ಟ ವಿಷಯಗಳಿಗೆ ಹೆಚ್ಚಿನ ವೀಕ್ಷಣೆ ಅಥವಾ ವಿಸಿಬಿಲಿಟಿ ಏಕೆ ಸಿಗುತ್ತದೆ ಎಂಬುದನ್ನು ತಿಳಿದುಕೊಳ್ಳಲು ಸರ್ಕಾರ ಈ ಸಭೆಯನ್ನು ಕರೆದಿದೆ.
ಸರ್ಕಾರದ ಕಳವಳ ಮತ್ತು ಪ್ರಮುಖ ದೂರುಗಳು
ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಪೋಸ್ಟ್‌ಗಳಿಗೆ, ವಿಶೇಷವಾಗಿ ಸರ್ಕಾರದ ವಿರುದ್ಧ ವಿಮರ್ಶಾತ್ಮಕವಾಗಿರುವ ಪೋಸ್ಟ್‌ಗಳಿಗೆ ಅಪಾರ ಪ್ರಮಾಣದ ಟ್ರ್ಯಾಕ್ಷನ್ ಮತ್ತು ಪ್ರಚಾರ ಸಿಗುತ್ತಿದೆ ಎಂದು ಬಂದಿರುವ ಸಾಲು ಸಾಲು ದೂರುಗಳ ಕುರಿತು ಅಧಿಕಾರಿಗಳು ಮೆಟಾ ಪ್ರತಿನಿಧಿಗಳ ಬಳಿ ಕಳವಳ ವ್ಯಕ್ತಪಡಿಸುವ ನಿರೀಕ್ಷೆಯಿದೆ.
ಪಿಎಂ ಮೋದಿ ಪೋಸ್ಟ್ ಡಿಲೀಟ್: ಲಿಖಿತ ಕ್ಷಮಾಪಣೆಗೆ ಆಗ್ರಹ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪೋಸ್ಟ್ ಒಂದನ್ನು ಡಿಲೀಟ್ ಮಾಡಲು ಕಾರಣವಾದ ತಾಂತ್ರಿಕ ದೋಷದ ಕುರಿತು ಮೆಟಾ ಸಂಸ್ಥೆಯಿಂದ ಸರ್ಕಾರ ಲಿಖಿತ ವಿವರಣೆಯನ್ನು ಕೇಳಲಿದೆ. ಇದರೊಂದಿಗೆ ಪ್ರಧಾನಿಯವರ ಪೋಸ್ಟ್ ತೆಗೆದುಹಾಕಿದ್ದಕ್ಕಾಗಿ ಮೆಟಾ ಸಂಸ್ಥೆಯಿಂದ ಲಿಖಿತ ಕ್ಷಮಾಪಣೆ ಕೋರಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಸಾಮಾಜಿಕ ಜಾಲತಾಣಗಳ ವಿಷಯ ನಿಯಂತ್ರಣ, ಆಲ್ಗರಿದಮ್ ಪಾರದರ್ಶಕತೆ ಹಾಗೂ ಹೊಣೆಗಾರಿಕೆಯ ಕುರಿತು ಜಾಗತಿಕವಾಗಿ ತನಿಖೆ ಮತ್ತು ಪರಿಶೀಲನೆ ತೀವ್ರಗೊಂಡಿರುವ ಬೆನ್ನಲ್ಲೇ ಕೇಂದ್ರ ಸರ್ಕಾರದ ಈ ನಡೆ ತೀವ್ರ ಕುತೂಹಲ ಮೂಡಿಸಿದೆ.

