
LPG Shortage : ಕಾಳ ಸಂತೆ ಹಾವಳಿ ತಪ್ಪಿಸಲು ಎಲ್‌ಪಿಜಿ ಬುಕಿಂಗ್ ಅವಧಿ 25 ದಿನಗಳಿಗೆ ಏರಿಸಿದ ಸರ್ಕಾರ
ದೇಶೀಯ ಮಾರುಕಟ್ಟೆಯಲ್ಲಿನ ಹೆಚ್ಚುತ್ತಿರುವ ಬೇಡಿಕೆಯನ್ನು ಸರಿದೂಗಿಸಲು, ತೈಲ ಸಂಸ್ಕರಣಾಗಾರಗಳಿಗೆ (ರಿಫೈನರಿ) ಎಲ್‌ಪಿಜಿ ಉತ್ಪಾದನೆಯನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸುವಂತೆ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ದೇಶಾದ್ಯಂತ ಅಡುಗೆ ಅನಿಲದ (ಎಲ್‌ಪಿಜಿ) ಕಾಳಸಂತೆ ಹಾಗೂ ಅಕ್ರಮ ದಾಸ್ತಾನು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ತಡೆಯಲು ಹಾಗೂ ನೈಜ ಗ್ರಾಹಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು, ಎಲ್‌ಪಿಜಿ ಸಿಲಿಂಡರ್ ಕಾಯ್ದಿರಿಸುವ (ಬುಕಿಂಗ್) ಅವಧಿಯನ್ನು 21 ದಿನಗಳಿಂದ 25 ದಿನಗಳಿಗೆ ವಿಸ್ತರಿಸಲಾಗಿದೆ ಎಂದು ಸರ್ಕಾರಿ ಉನ್ನತ ಮೂಲಗಳು ತಿಳಿಸಿವೆ.
ಅಕ್ರಮ ದಾಸ್ತಾನು ಹಾಗೂ ಕೃತಕ ಅಭಾವಕ್ಕೆ ಬ್ರೇಕ್
ಇತ್ತೀಚಿನ ದಿನಗಳಲ್ಲಿ ಎಲ್‌ಪಿಜಿ ಗ್ರಾಹಕರ ಬುಕಿಂಗ್ ಮಾದರಿಯಲ್ಲಿ ಅಸಹಜ ಬದಲಾವಣೆಗಳು ಸರ್ಕಾರದ ಗಮನಕ್ಕೆ ಬಂದಿದ್ದವು. ಈ ಹಿಂದೆ ಸರಾಸರಿ 55 ದಿನಗಳಿಗೊಮ್ಮೆ ಅಡುಗೆ ಅನಿಲ ಬುಕ್ ಮಾಡುತ್ತಿದ್ದ ಅನೇಕರು, ದಿಢೀರನೆ ಕೇವಲ 15 ದಿನಗಳ ಅಂತರದಲ್ಲಿ ಮರು ಬುಕಿಂಗ್ ಮಾಡಲು ಆರಂಭಿಸಿದ್ದರು. ಈ ರೀತಿಯ ಅಸಾಮಾನ್ಯ ಬುಕಿಂಗ್ ಪ್ರವೃತ್ತಿಯು ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಸಲು ಮತ್ತು ಗೃಹಬಳಕೆಯ ಸಿಲಿಂಡರ್‌ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ನಡೆಯುತ್ತಿರುವ ಹುನ್ನಾರ ಎಂಬುದನ್ನು ಅರಿತ ಸರ್ಕಾರ, ಈ ಅಕ್ರಮಕ್ಕೆ ತಕ್ಷಣವೇ ಕಡಿವಾಣ ಹಾಕುವ ಉದ್ದೇಶದಿಂದ ಬುಕಿಂಗ್ ಅವಧಿಯ ಮಿತಿಯನ್ನು ಪರಿಷ್ಕರಿಸಿದೆ.
ಉತ್ಪಾದನೆ ಹೆಚ್ಚಳ ಹಾಗೂ ಗೃಹಬಳಕೆಗೆ ಆದ್ಯತೆ
ದೇಶೀಯ ಮಾರುಕಟ್ಟೆಯಲ್ಲಿನ ಹೆಚ್ಚುತ್ತಿರುವ ಬೇಡಿಕೆಯನ್ನು ಸರಿದೂಗಿಸಲು, ತೈಲ ಸಂಸ್ಕರಣಾಗಾರಗಳಿಗೆ (ರಿಫೈನರಿ) ಎಲ್‌ಪಿಜಿ ಉತ್ಪಾದನೆಯನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸುವಂತೆ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಅಲ್ಲದೆ, ವಾಣಿಜ್ಯ ಉದ್ದೇಶದ ಅನಿಲ ಸಂಪರ್ಕಗಳಿಗಿಂತ ಗೃಹಬಳಕೆಯ (ಡೊಮೆಸ್ಟಿಕ್) ಸಿಲಿಂಡರ್ ಪೂರೈಕೆಗೆ ಮೊದಲ ಆದ್ಯತೆ ನೀಡುವಂತೆ ತೈಲ ಕಂಪನಿಗಳಿಗೆ ನಿರ್ದೇಶಿಸಲಾಗಿದೆ. ಎಷ್ಟೇ ಬೇಡಿಕೆ ಬಂದರೂ ಸಾಮಾನ್ಯ ಗೃಹಬಳಕೆಯ ಗ್ರಾಹಕರಿಗೆ ಯಾವುದೇ ಕಾರಣಕ್ಕೂ ಅಡುಗೆ ಅನಿಲದ ಕೊರತೆಯಾಗದಂತೆ ನೋಡಿಕೊಳ್ಳುವುದು ಸರ್ಕಾರದ ಪ್ರಥಮ ಆದ್ಯತೆಯಾಗಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಜಾಗತಿಕ ಮಟ್ಟದಲ್ಲಿ ಹೊಸ ಪಾಲುದಾರರ ಶೋಧ
ಭವಿಷ್ಯದಲ್ಲಿ ದೇಶಕ್ಕೆ ಎಲ್‌ಪಿಜಿ ಕೊರತೆಯಾಗದಂತೆ ದೀರ್ಘಕಾಲೀನ ಮುನ್ನೆಚ್ಚರಿಕೆ ವಹಿಸಿರುವ ಭಾರತ, ಜಾಗತಿಕ ಮಟ್ಟದಲ್ಲಿ ಹೊಸ ಎಲ್‌ಪಿಜಿ ಪಾಲುದಾರ ರಾಷ್ಟ್ರಗಳ ಹುಡುಕಾಟದಲ್ಲಿದೆ. ಪೂರೈಕೆ ಜಾಲವನ್ನು ವಿಸ್ತರಿಸುವ ನಿಟ್ಟಿನಲ್ಲಿ ಸರ್ಕಾರದ ಪ್ರಯತ್ನಗಳಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಈಗಾಗಲೇ ಅಲ್ಜೀರಿಯಾ, ಆಸ್ಟ್ರೇಲಿಯಾ, ಕೆನಡಾ ಹಾಗೂ ನಾರ್ವೆಯಂತಹ ಪ್ರಮುಖ ರಾಷ್ಟ್ರಗಳು ಭಾರತಕ್ಕೆ ಅಡುಗೆ ಅನಿಲ ಪೂರೈಸಲು ಆಸಕ್ತಿ ತೋರಿ, ಒಪ್ಪಂದಕ್ಕಾಗಿ ಸಂಪರ್ಕಿಸಿವೆ ಎಂದು ತಿಳಿದುಬಂದಿದೆ.

