
ಸಾಂದರ್ಭಿಕ ಚಿತ್ರ
ಸ್ಮಾರ್ಟ್‌ಫೋನ್‌ಗಳಲ್ಲಿ ಆಧಾರ್ ಆ್ಯಪ್ ಕಡ್ಡಾಯ ಪ್ರಸ್ತಾವನೆ ವಾಪಸ್; ಕಾರಣವೇನು ಗೊತ್ತೇ?
ಬಳಕೆದಾರರ ಡೇಟಾ ಗೌಪ್ಯತೆ ಮತ್ತು ಸಾಧನದ ಸುರಕ್ಷತೆಯ ಬಗ್ಗೆ ಹಲವು ಕಂಪನಿಗಳು ಪ್ರಶ್ನೆಗಳನ್ನು ಎತ್ತಿ, ವೈಯಕ್ತಿಕ ಸಾಧನಗಳಲ್ಲಿ ಸರ್ಕಾರಿ ಆ್ಯಪ್‌ಗಳನ್ನು ಕಡ್ಡಾಯಗೊಳಿಸುವ ಅಗತ್ಯವೇ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದವು.
ಭಾರತದಲ್ಲಿ ಮಾರಾಟವಾಗುವ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ 'ಆಧಾರ್' ಅಪ್ಲಿಕೇಶನ್ ಅನ್ನು ಮೊದಲೇ ಸ್ಥಾಪಿಸಬೇಕು ಎಂಬ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಕೈಬಿಟ್ಟಿದೆ. ಸ್ಮಾರ್ಟ್‌ಫೋನ್ ತಯಾರಕರು ಮತ್ತು ಕೈಗಾರಿಕಾ ಪಾಲುದಾರರು ವ್ಯಕ್ತಪಡಿಸಿದ ತೀವ್ರ ವಿರೋಧ ಹಾಗೂ ಭದ್ರತಾ ಕಳವಳಗಳ ಹಿನ್ನೆಲೆಯಲ್ಲಿ ಐಟಿ ಸಚಿವಾಲಯ ಈ ನಿರ್ಧಾರ ತೆಗೆದುಕೊಂಡಿದೆ.
ಈ ವರ್ಷದ ಆರಂಭದಲ್ಲಿ, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI), ಹೊಸ ಸ್ಮಾರ್ಟ್‌ಫೋನ್‌ಗಳಲ್ಲಿ ಆಧಾರ್ ಆ್ಯಪ್ ಅನ್ನು ಕಡ್ಡಾಯವಾಗಿ ಮೊದಲೇ ಇನ್‌ಸ್ಟಾಲ್ ಮಾಡುವಂತೆ ಸೂಚನೆ ನೀಡುವಂತೆ ಐಟಿ ಸಚಿವಾಲಯವನ್ನು ಕೋರಿತ್ತು. ಆಪಲ್ ಮತ್ತು ಗೂಗಲ್‌ನಂತಹ ಪ್ರಮುಖ ಕಂಪನಿಗಳೊಂದಿಗೆ ಈ ಕುರಿತು ಚರ್ಚೆ ನಡೆಸುವಂತೆ ತಿಳಿಸಲಾಗಿತ್ತು.
ಪ್ರಸ್ತಾವನೆಯನ್ನು ಪರಿಶೀಲಿಸಿದ ನಂತರ, ಐಟಿ ಸಚಿವಾಲಯವು ಅಪ್ಲಿಕೇಶನ್ ಅನ್ನು ಕಡ್ಡಾಯಗೊಳಿಸದಿರಲು ನಿರ್ಧರಿಸಿದೆ ಎಂದು ರಾಯಿಟರ್ಸ್ ವರದಿ ತಿಳಿಸಿದೆ. ಯಾವುದೇ ಅಧಿಕೃತ ಕಾರಣವನ್ನು ಒದಗಿಸದಿದ್ದರೂ, ಎಲೆಕ್ಟ್ರಾನಿಕ್ಸ್ ಮತ್ತು ಸ್ಮಾರ್ಟ್‌ಫೋನ್ ಉದ್ಯಮದ ಪಾಲುದಾರರೊಂದಿಗೆ ಸಮಾಲೋಚನೆಗಳನ್ನು ಅನುಸರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಂಪನಿಗಳ ಪ್ರತಿರೋಧಕ್ಕೆ ಕಾರಣವೇನು?
ಸರ್ಕಾರದ ಈ ನಡೆಯನ್ನು ಸ್ಮಾರ್ಟ್‌ಫೋನ್ ತಯಾರಕರು ಬಲವಾಗಿ ವಿರೋಧಿಸಿ, ಪ್ರಮುಖವಾಗಿ ಮೂರು ಅಂಶಗಳ ಮೇಲೆ ಕಳವಳ ವ್ಯಕ್ತಪಡಿಸಿದ್ದವು. ಬಳಕೆದಾರರ ಡೇಟಾ ಗೌಪ್ಯತೆ ಮತ್ತು ಸಾಧನದ ಸುರಕ್ಷತೆಯ ಬಗ್ಗೆ ಆಪಲ್ ಮತ್ತು ಸ್ಯಾಮ್‌ಸಂಗ್ ಸೇರಿದಂತೆ ಹಲವು ಕಂಪನಿಗಳು ಪ್ರಶ್ನೆಗಳನ್ನು ಎತ್ತಿದ್ದವು. ಭಾರತ-ನಿರ್ದಿಷ್ಟ ಫೋನ್‌ಗಳಿಗಾಗಿ ಪ್ರತ್ಯೇಕ ಉತ್ಪಾದನಾ ಮಾರ್ಗಗಳನ್ನು ರಚಿಸುವುದು ಉತ್ಪಾದನಾ ವೆಚ್ಚವನ್ನು ಹೆಚ್ಚಿಸುತ್ತದೆ ಎಂದು ಕಂಪನಿಗಳು ವಾದಿಸಿದ್ದವು. ವೈಯಕ್ತಿಕ ಸಾಧನಗಳಲ್ಲಿ ಸರ್ಕಾರಿ ಆ್ಯಪ್‌ಗಳನ್ನು ಕಡ್ಡಾಯಗೊಳಿಸುವ ಅಗತ್ಯವೇ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದರು.
ತಜ್ಞರ ಅಭಿಪ್ರಾಯವೇನು ?
ಕಳೆದ ಎರಡು ವರ್ಷಗಳಲ್ಲಿ ಸರ್ಕಾರವು ಇಂತಹ ಹಲವು ಪ್ರಯತ್ನಗಳನ್ನು ಮಾಡಿದೆ. ಕಳೆದ ಡಿಸೆಂಬರ್‌ನಲ್ಲಿ ಟೆಲಿಕಾಂ ಭದ್ರತಾ ಆ್ಯಪ್ ಅನ್ನು ಮೊದಲೇ ಸ್ಥಾಪಿಸಲು ನೀಡಲಾಗಿದ್ದ ನಿರ್ದೇಶನವನ್ನು, ಉದ್ಯಮದ ವಿರೋಧದ ನಂತರ ಕೆಲವೇ ದಿನಗಳಲ್ಲಿ ಹಿಂತೆಗೆದುಕೊಳ್ಳಲಾಗಿತ್ತು. ಈ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿರುವ ತಜ್ಞರು, "ಸರ್ಕಾರವು ಬಳಕೆದಾರರ ಆಯ್ಕೆಯನ್ನು ಗೌರವಿಸುವ ಮತ್ತು ತಾಂತ್ರಿಕ ಪ್ರಾಯೋಗಿಕತೆಯನ್ನು ಅರಿಯುವ ನಿಟ್ಟಿನಲ್ಲಿ ತೆಗೆದುಕೊಂಡಿರುವ ಎಚ್ಚರಿಕೆಯ ಕ್ರಮ ಇದಾಗಿದೆ" ಎಂದು ಶ್ಲಾಘಿಸಿದ್ದಾರೆ.

