
SIR row| ರಾಹುಲ್, ಪ್ರಿಯಾಂಕಾ ಬಿಡುಗಡೆ; ಗುರುವಾರ ದೇಶಾದ್ಯಂತ ಕಾಂಗ್ರೆಸ್ 'ಕರಾಳ ದಿನ'
ಸಂಸದರ ಮೇಲಿನ ದೌರ್ಜನ್ಯ ಮತ್ತು ಅಮಾನವೀಯ ವರ್ತನೆಯನ್ನು ಖಂಡಿಸುವುದಾಗಿ ಹೇಳಿರುವ ಕಾಂಗ್ರೆಸ್ ಗುರುವಾರ ದೇಶವ್ಯಾಪಿ ‘ಭಾರತೀಯ ಪ್ರಜಾಪ್ರಭುತ್ವದ ಕರಾಳ ದಿನ’ ಆಚರಿಸಲು ಕರೆ ನೀಡಿದೆ.
ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿನ ಅಕ್ರಮಗಳನ್ನು ಪ್ರಶ್ನಿಸಿ ಮತ್ತು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾದ ವಿರೋಧ ಪಕ್ಷದ ಸಂಸದರನ್ನು ದೆಹಲಿ ಪೊಲೀಸರು ನಡುರಸ್ತೆಯಲ್ಲೇ ತಡೆದು ಬಲವಂತವಾಗಿ ಎಳೆದೊಯ್ದ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ತೀವ್ರ ಪ್ರಕ್ಷುಬ್ಧತೆಗೆ ಕಾರಣವಾಗಿದೆ.
ಲೋಕಸಭಾ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಅವರ ಸೋದರಿ ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ಸೇರಿದಂತೆ ಹಲವು ಮುಖಂಡರನ್ನು ಬಂಧಿಸಿರುವ ರೀತಿಯನ್ನು ಕಾಂಗ್ರೆಸ್ ಖಂಡಿಸಿದೆ. ಸಂಸದರ ಮೇಲಿನ ದೌರ್ಜನ್ಯ ವಾಗಿದೆ ಮತ್ತು ಅಮಾನವೀಯ ವರ್ತನೆಯನ್ನು ಖಂಡಿಸುವುದಾಗಿ ಹೇಳಿರುವ ಕಾಂಗ್ರೆಸ್ ಅಕ್ಟೋಬರ್ 8 (ಗುರುವಾರ) ದೇಶವ್ಯಾಪಿ ‘ಭಾರತೀಯ ಪ್ರಜಾಪ್ರಭುತ್ವದ ಕರಾಳ ದಿನ’ ಆಚರಿಸಲು ಕರೆ ನೀಡಿದೆ.
ರಾಜ್ಯ, ಜಿಲ್ಲಾ ಮತ್ತು ಬ್ಲಾಕ್ ಮಟ್ಟದ ಎಲ್ಲಾ ಕಾಂಗ್ರೆಸ್ ಘಟಕಗಳು ಬೀದಿಗಿಳಿದು ತೀವ್ರ ಪ್ರತಿಭಟನೆ ನಡೆಸುವಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸುತ್ತೋಲೆ ಹೊರಡಿಸಿದ್ದಾರೆ. ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ಕೆಳಗಿಳಿಸುವ ತನಕ ಮತ್ತು ಚುನಾವಣಾ ವ್ಯವಸ್ಥೆಯಲ್ಲಿನ ದೋಷಗಳನ್ನು ಸಂಪೂರ್ಣವಾಗಿ ಸರಿಪಡಿಸುವವರೆಗೂ ಈ ಹೋರಾಟ ನಿಲ್ಲುವುದಿಲ್ಲ ಎಂದು ಕಾಂಗ್ರೆಸ್ ಘೋಷಿಸಿದೆ.
ಜಂತರ್ ಮಂತರ್ ಚಲೋಗೆ ತಡೆ: ರಸ್ತೆಯಲ್ಲೇ ಮಲಗಿ ಪ್ರತಿಭಟಿಸಿದ ಪ್ರಿಯಾಂಕಾ
ಬುಧವಾರ ಮಧ್ಯಾಹ್ನ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಯೋಜಿಸಿದ್ದ ಔತಣಕೂಟದ ಬಳಿಕ, ‘ಇಂಡಿಯಾ’ ಮೈತ್ರಿಕೂಟದ ಸಂಸದರು ದೆಹಲಿಯ ಜಂತರ್ ಮಂತರ್ ಕಡೆಗೆ ಪ್ರತಿಭಟನಾ ಮೆರವಣಿಗೆ ಹೊರಟರು. ಆದರೆ ಜಂತರ್ ಮಂತರ್ಗೆ ಕೇವಲ ನೂರು ಮೀಟರ್ ಅಂತರವಿರುವಾಗಲೇ ಶಾಂಗ್ರಿ-ಲಾ ಹೋಟೆಲ್ ಸಮೀಪ ದೆಹಲಿ ಪೊಲೀಸರು ಬ್ಯಾರಿಕೇಡ್ ಹಾಕಿ ಸಂಸದರನ್ನು ತಡೆದರು. ಕಾಂಗ್ರೆಸ್ ಬಿಡುಗಡೆ ಮಾಡಿದ ಚಿತ್ರ
ಮುಂದೆ ಹೋಗಲು ಬಿಡದ ಹಿನ್ನೆಲೆಯಲ್ಲಿ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ರಸ್ತೆಯಲ್ಲೇ ಕುಳಿತು, ಬಳಿಕ ಮಲಗಿ ಧರಣಿ ಆರಂಭಿಸಿದರು. ಮಹಿಳಾ ಪೊಲೀಸರು ಸೇರಿದಂತೆ ಭದ್ರತಾ ಸಿಬ್ಬಂದಿ ಅವರನ್ನು ಬಲವಂತವಾಗಿ ಎತ್ತಿ ಸಾಗಿಸಿದರು.
ಪ್ರಿಯಾಂಕಾ ಆಕ್ರೋಶ
“ಚುನಾವಣಾ ಆಯುಕ್ತರನ್ನು ಭೇಟಿಯಾಗಲು ಬಯಸುವ ಸಂಸದರ ಜತೆ ಸರ್ಕಾರ ನಡೆದುಕೊಳ್ಳುವ ರೀತಿ ಇದು. ನಮ್ಮನ್ನು ನೆಲಕ್ಕೆ ತಳ್ಳಿ ಎಳೆದೊಯ್ದಿದ್ದಾರೆ. ಪೊಲೀಸರು ನನ್ನ ಮೈಮೇಲೆ ಪರಚಿದ್ದಾರೆ. ನಾವು ಇಲ್ಲಿಂದ ಕದಲುವುದಿಲ್ಲ," ಎಂದು ಪ್ರಿಯಾಂಕಾ ಆರೋಪಿಸಿದ್ದಾರೆ.
ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ತೀವ್ರ ಬಲಪ್ರಯೋಗ ಮಾಡಿದ್ದು, ಈ ವೇಳೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಅವರ ಕೈಗೆ ಗಾಯಗಳಾಗಿವೆ. ಕಾಂಗ್ರೆಸ್ ಸಂಸದ ಶಫಿ ಪರಂಬಿಲ್ ಅವರನ್ನು ಪೊಲೀಸರು ಎಳೆದೊಯ್ಯುವಾಗ ಭಾರೀ ನೂಕಾಟ-ಜಟಾಪಟಿ ನಡೆಯಿತು. ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರ ಕೈಗೆ ಗಾಯಗಳಾಗಿವೆ.
ವಶಕ್ಕೆ ಪಡೆದ ಸಂಸದರನ್ನು ಕರೆದೊಯ್ಯುತ್ತಿದ್ದ ದೆಹಲಿ ಪೊಲೀಸ್ ಬಸ್ನ ಟೈರ್ಗಳನ್ನು ಕಸ್ತೂರಬಾ ಗಾಂಧಿ ಮಾರ್ಗದಲ್ಲಿ ಆಕ್ರೋಶಗೊಂಡ ಕಾಂಗ್ರೆಸ್ ಕಾರ್ಯಕರ್ತರು ಪಂಕ್ಚರ್ ಮಾಡಿದರು.
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಬಾರಾಖಂಬಾ ರೋಡ್ ಪೊಲೀಸ್ ಠಾಣೆಯಲ್ಲಿ ಇರಿಸಲಾಯಿತು. ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಕೇರಳ ಸಿಎಂ ವಿ.ಡಿ. ಸತೀಶನ್, ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್ ಮುಂತಾದ ನಾಯಕರು ಠಾಣೆಯ ಹೊರಗೆ ಧರಣಿ ಕುಳಿತರು.
ಪ್ರಿಯಾಂಕಾ ಗಾಂಧಿ, ಮಹುವಾ ಮೊಯಿತ್ರಾ ಸೇರಿದಂತೆ ಇತರ ಮುಖಂಡರನ್ನು ಛತ್ರಸಾಲ್ ಕ್ರೀಡಾಂಗಣಕ್ಕೆ ಕರೆದೊಯ್ಯಲಾಯಿತು. ದೀರ್ಘ ಗಂಟೆಗಳ ಹೈಡ್ರಾಮಾದ ನಂತರ, ರಾತ್ರಿ 8 ಗಂಟೆಯ ಸುಮಾರಿಗೆ ಸಂಸದರನ್ನು ಪೊಲೀಸರು ಬಿಡುಗಡೆ ಮಾಡಿದರು.
‘45 ಅಲ್ಲ, 100 ಎಫ್ಐಆರ್ ಆದರೂ ಹೆದರಲ್ಲ’: ರಾಹುಲ್ ಗಾಂಧಿ
ಮಂಗಳವಾರ ಆಕಾಶವಾಣಿ ಭವನಕ್ಕೆ ಅಕ್ರಮ ಪ್ರವೇಶ ಮಾಡಿದ ಆರೋಪದಡಿ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಿರುದ್ಧ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, “ಈಗಾಗಲೇ ನನ್ನ ಮೇಲೆ 45 ಎಫ್ಐಆರ್ಗಳಿವೆ. ನನ್ನ ಮೇಲೆ 100 ಎಫ್ಐಆರ್ ದಾಖಲಾದರೂ ಸ್ವಾಗತಿಸುತ್ತೇನೆ. ಪ್ರತಿಯೊಂದು ಎಫ್ಐಆರ್ ಕೂಡ ನನಗೆ ಗೌರವದ ಪದಕವಿದ್ದಂತೆ,” ಎಂದು ತಿರುಗೇಟು ನೀಡಿದರು. ರಾಹುಲ್ ಗಾಂಧಿ ಸುತ್ತುವರೆದ ಪೊಲೀಸರು. ಕಾಂಗ್ರೆಸ್ ಬಿಡುಗಡೆ ಮಾಡಿದ ಚಿತ್ರ
ಬಂಧನದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್, “ಅಮಿತ್ ಶಾ, ನರೇಂದ್ರ ಮೋದಿ, ಜ್ಞಾನೇಶ್ ಕುಮಾರ್ ಮತ್ತು ಮೋಹನ್ ಭಾಗವತ್ ಇವರೆಲ್ಲ ಸೇರಿ ಏನೇ ದಬ್ಬಾಳಿಕೆ ನಡೆಸಲಿ, ಕೊನೆಗೆ ಇವರೆಲ್ಲರನ್ನೂ ನ್ಯಾಯದ ಕಟಕಟೆಗೆ ತಂದು ನಿಲ್ಲಿಸುವುದು ಖಚಿತ. ಇದು ನನ್ನ ಗ್ಯಾರಂಟಿ. ಇದು ಕೇಂದ್ರ ಸರ್ಕಾರದ ಭಯ ಮತ್ತು ಸೋಲಿನ ಭೀತಿಯ ಪ್ರತಿಕ್ರಿಯೆ,” ಎಂದು ಕಿಡಿಕಾರಿದರು.
ಎಐಸಿಸಿ ಆಕ್ರೋಶ
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹೊರಡಿಸಿರುವ ಸುತ್ತೋಲೆಯಲ್ಲಿ, “ಜನಪ್ರತಿನಿಧಿಗಳ ಮೇಲೆ ನಡೆದಿರುವ ಈ ದೌರ್ಜನ್ಯ ಪ್ರಜಾಪ್ರಭುತ್ವ ವಿರೋಧಿ ಕೃತ್ಯ. ಮತದಾರರ ಪಟ್ಟಿ ಕುರಿತು ಪ್ರಶ್ನಿಸಿದವರ ಮೇಲೆ ನಡೆಸಿರುವ ದಾಳಿಯು ನೇರವಾಗಿ ಭಾರತದ ಸಂವಿಧಾನದ ಮೇಲಾದ ದಾಳಿಯಾಗಿದೆ,” ಎಂದು ಹೇಳಿದ್ದಾರೆ.
ಮತದಾರರ ಪಟ್ಟಿ ಅಕ್ರಮ ಹಾಗೂ ಚುನಾವಣಾ ಆಯೋಗದ ನಿಲುವನ್ನು ವಿರೋಧಿಸಿ ಅಕ್ಟೋಬರ್ 8 ರಂದು ದೇಶಾದ್ಯಂತ ಕಾಂಗ್ರೆಸ್ ಕರಾಳ ದಿನ ಆಚರಿಸಲಿದ್ದು, ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ. ಅಲ್ಲದೆ, ಸಿಇಸಿ ರಾಜೀನಾಮೆಗೆ ಆಗ್ರಹಿಸಿ ಅಕ್ಟೋಬರ್ 10 ರಂದು ಜಂತರ್ ಮಂತರ್ನಲ್ಲಿ ಯುವ ಪ್ರತಿಭಟನೆಗೂ ಕರೆ ನೀಡಲಾಗಿದೆ.

