
2024ರ ನೀಟ್ ಪೇಪರ್ ಲೀಕ್ ಪ್ರಕರಣದ ಕಿಂಗ್‌ಪಿನ್‌ಗೆ ಸಿಬಿಐ ಕ್ಲೀನ್ ಚಿಟ್
ಪ್ರಕರಣದ ಆರಂಭದಲ್ಲಿ ತಲೆಮರೆಸಿಕೊಂಡಿದ್ದ ಸಂಜೀವ್ ಮುಖಿಯಾನನ್ನು ನಂತರ ಬಿಹಾರ ಪೊಲೀಸರು ಬಂಧಿಸಿದ್ದರು. ಎಫ್‌ಐಆರ್‌ನಲ್ಲಿ ಹೆಸರಿದ್ದ ಕಾರಣ ಸಿಬಿಐ ಕೂಡ ಆತನನ್ನು ವಶಕ್ಕೆ ಪಡೆದು ಸುದೀರ್ಘ ವಿಚಾರಣೆ ನಡೆಸಿತ್ತು.
ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ 2024ರ ನೀಟ್-ಯುಜಿ (NEET-UG) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಮುಖ್ಯ ಸೂತ್ರಧಾರ/ಕಿಂಗ್‌ಪಿನ್ ಎಂದು ಶಂಕಿಸಲಾಗಿದ್ದ ಸಂಜೀವ್ ಕುಮಾರ್ ಅಲಿಯಾಸ್ ಸಂಜೀವ್ ಮುಖಿಯಾಗೆ ಸಿಬಿಐ (CBI) ಶುಕ್ರವಾರ ಕ್ಲೀನ್ ಚಿಟ್ ನೀಡಿದೆ. ತನಿಖೆಯ ವೇಳೆ ಸಂಜೀವ್ ಮುಖಿಯಾ ಅವರಿಗೆ ಈ ಪೇಪರ್ ಲೀಕ್ ಹಾಗೂ ಪ್ರಶ್ನೆಪತ್ರಿಕೆ ವಿತರಣೆಯ ಜಾಲದೊಂದಿಗೆ ಯಾವುದೇ ನೇರ ಸಂಪರ್ಕವಿರುವುದು ಕಂಡುಬಂದಿಲ್ಲ ಎಂದು ಸಿಬಿಐ ಸ್ಪಷ್ಟಪಡಿಸಿದೆ.
ಬೀಹಾರ್ ಪೊಲೀಸರ ಶಂಕೆ ಮತ್ತು ಸಿಬಿಐ ತನಿಖೆ
2024ರಲ್ಲಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾದಾಗ ಬಿಹಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಸಂಜೀವ್ ಮುಖಿಯಾ ಈ ಹಿಂದೆ ಹಲವು ಪೇಪರ್ ಲೀಕ್ ಪ್ರಕರಣಗಳಲ್ಲಿ ಭಾಗಿಯಾಗಿದ್ದರಿಂದ, ಈ ಪ್ರಕರಣದಲ್ಲೂ ಆತನ ಕೈವಾಡವಿರಬಹುದು ಎಂಬ ಶಂಕೆಯ ಮೇಲೆ ಎಫ್‌ಐಆರ್‌ನಲ್ಲಿ ಆತನ ಹೆಸರನ್ನು ಸೇರಿಸಲಾಗಿತ್ತು.
ಬಳಿಕ ಈ ಪ್ರಕರಣದ ತನಿಖೆಯನ್ನು ಸಿಬಿಐ ವಹಿಸಿಕೊಂಡಿತ್ತು. ಆಳವಾದ ತನಿಖೆ ನಡೆಸಿದ ಸಿಬಿಐ, ಪ್ರಶ್ನೆಪತ್ರಿಕೆ ಕಳವು, ಅದನ್ನು ಹಂಚಿಕೆ ಮಾಡಿದ ಜಾಲ ಹಾಗೂ ಅದರ ಲಾಭ ಪಡೆದ ಪ್ರತಿಯೊಬ್ಬ ವ್ಯಕ್ತಿಯನ್ನು ಗುರುತಿಸಿ ಪಾಟ್ನಾ ನ್ಯಾಯಾಲಯಕ್ಕೆ 45 ಜನರ ವಿರುದ್ಧ ಹಲವು ಚಾರ್ಜ್‌ಶೀಟ್‌ಗಳನ್ನು (ದೋಷಾರೋಪ ಪಟ್ಟಿ) ಸಲ್ಲಿಸಿತ್ತು.
ಸಿಬಿಐ ನೀಡಿದ ಸ್ಪಷ್ಟನೆ ಏನು?
ಈ ಕುರಿತು ಮಾಹಿತಿ ನೀಡಿರುವ ಸಿಬಿಐ ವಕ್ತಾರರು, "ಸುದೀರ್ಘ ತನಿಖೆಯ ಸಮಯದಲ್ಲಿ 2024ರ ನೀಟ್-ಯುಜಿ ಪ್ರಶ್ನೆಪತ್ರಿಕೆ ಕಳವು ಅಥವಾ ವಿತರಣೆಯಲ್ಲಿ ಸಂಜೀವ್ ಮುಖಿಯಾ ಅವರ ಪಾತ್ರವಿರುವುದಕ್ಕೆ ಯಾವುದೇ ಆಧಾರಗಳು ಸಿಕ್ಕಿಲ್ಲ. ಈ ಸಂಚಿನಲ್ಲಿ ಭಾಗಿಯಾದ ಪ್ರತಿಯೊಬ್ಬ ನಿಜವಾದ ಆರೋಪಿಯನ್ನು ಗುರುತಿಸಿ, ಯಾರೂ ಕಾನೂನಿನಿಂದ ತಪ್ಪಿಸಿಕೊಳ್ಳದಂತೆ ಕ್ರಮ ಕೈಗೊಳ್ಳಲಾಗಿದೆ" ಎಂದು ತಿಳಿಸಿದ್ದಾರೆ.
ಪ್ರಕರಣದ ಆರಂಭದಲ್ಲಿ ತಲೆಮರೆಸಿಕೊಂಡಿದ್ದ ಸಂಜೀವ್ ಮುಖಿಯಾನನ್ನು ನಂತರ ಬಿಹಾರ ಪೊಲೀಸರು ಬಂಧಿಸಿದ್ದರು. ಎಫ್‌ಐಆರ್‌ನಲ್ಲಿ ಹೆಸರಿದ್ದ ಕಾರಣ ಸಿಬಿಐ ಕೂಡ ಆತನನ್ನು ವಶಕ್ಕೆ ಪಡೆದು ಸುದೀರ್ಘ ವಿಚಾರಣೆ ನಡೆಸಿತ್ತು. ಆದರೆ, ಆತನ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಸಿಗದ ಕಾರಣ ಸಿಬಿಐ ಆತನ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿಲ್ಲ.
ಜೈಲಿನಲ್ಲೇ ಉಳಿಯಲಿದ್ದಾನೆ ಸಂಜೀವ್ ಮುಖಿಯಾ
ಸಿಬಿಐ ಸಲ್ಲಿಸಿದ ನೀಟ್-ಯುಜಿ 2024 ಪ್ರಕರಣದಲ್ಲಿ ಯಾವುದೇ ಸಾಕ್ಷ್ಯಗಳಿಲ್ಲದ ಕಾರಣ ಸಂಜೀವ್ ಮುಖಿಯಾಗೆ ಜಾಮೀನು ದೊರೆತಿದೆ. ಆದಾಗ್ಯೂ, ಬಿಹಾರ ಪೊಲೀಸರು ತನಿಖೆ ನಡೆಸುತ್ತಿರುವ ಇತರ ಹಲವು ಪೇಪರ್ ಲೀಕ್ ಪ್ರಕರಣಗಳಲ್ಲಿ ಆರೋಪಿಯಾಗಿರುವುದರಿಂದ ಆತ ಇನ್ನೂ ನ್ಯಾಯಾಂಗ ಬಂಧನದಲ್ಲೇ (ಜೈಲಿನಲ್ಲಿ) ಮುಂದುವರಿಯಲಿದ್ದಾನೆ ಎಂದು ಸಿಬಿಐ ತಿಳಿಸಿದೆ.

