
ಪಾನ್ ಕಾರ್ಡ್ ಇರದವರು ನಡೆಸುವ ಅಧಿಕ ಮೌಲ್ಯದ ವಹಿವಾಟು ಪತ್ತೆಗೆ ಸಿಡಿಬಿಟಿಯಿಂದ ಹೊಸ ವ್ಯವಸ್ಥೆ ಜಾರಿ
ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು ಮತ್ತು ಇತರ ನಿರ್ದಿಷ್ಟ ಸಂಸ್ಥೆಗಳು ಈ ನಿರ್ದಿಷ್ಟ ವಹಿವಾಟುಗಳ ಕುರಿತು ಹೇಗೆ ವರದಿ ಮಾಡಬೇಕು ಎಂಬುದನ್ನು ಸಿಬಿಡಿಟಿ ತನ್ನ ಅಧಿಸೂಚನೆಯಲ್ಲಿ ವಿವರಿಸಿದೆ.
ಪಾನ್ ಕಾರ್ಡ್ ಹೊಂದಿರದ ವ್ಯಕ್ತಿಯೊಬ್ಬರು ನಡೆಸುವ ಹೆಚ್ಚು ಮೌಲ್ಯದ ನಿರ್ದಿಷ್ಟ ವಹಿವಾಟುಗಳ ಕುರಿತಂತೆ ಆದಾಯ ತೆರಿಗೆ ಇಲಾಖೆಗೆ ವರದಿ ಮಾಡಲು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ಹೊಸ ವ್ಯವಸ್ಥೆಯೊಂದನ್ನು ಪರಿಚಯಿಸಿದೆ.
ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು ಮತ್ತು ಇತರ ನಿರ್ದಿಷ್ಟ ಸಂಸ್ಥೆಗಳು ಈ ನಿರ್ದಿಷ್ಟ ವಹಿವಾಟುಗಳ ಕುರಿತು ಹೇಗೆ ವರದಿ ಮಾಡಬೇಕು ಎಂಬುದನ್ನು ಸಿಬಿಡಿಟಿ ತನ್ನ ಅಧಿಸೂಚನೆಯಲ್ಲಿ ವಿವರಿಸಿದೆ. ಈ ಹೊಸ ಉಪಕ್ರಮವು ದೇಶಾದ್ಯಂತ ಸೆ. 15 ರಿಂದ ಜಾರಿಗೆ ಬಂದಿದೆ.
ಏನಿದು ಸಮಸ್ಯೆ?
ಹಣಕಾಸು, ಬ್ಯಾಂಕಿಂಗ್ ಮತ್ತು ಆಸ್ತಿಗೆ ಸಂಬಂಧಿಸಿದ ವಹಿವಾಟುಗಳಿಗೆ ಪಾನ್ ಕಾರ್ಡ್ ಅಗತ್ಯವಿದೆ. ಆದರೆ, ಒಬ್ಬ ವ್ಯಕ್ತಿಯ ಬಳಿ ಪಾನ್ ಕಾರ್ಡ್ ಇರದೇ ಹೋದರೆ ಅವರು ನಡೆಸುವಂತಹ ವಹಿವಾಟುಗಳಿಗೆ ಯಾವ ರೀತಿಯಲ್ಲಿ ಸಮಸ್ಯೆಯಾಗಲಿದೆ ಎಂಬ ಪ್ರಶ್ನೆ ಎದುರಾಗಿದೆ.
ಸಾಮಾನ್ಯವಾಗಿ ಹೊಸ ಆದಾಯ ತೆರಿಗೆ ನಿಯಮಗಳಡಿ ಪಾನ್ ಕಾರ್ಡ್ ಹೊಂದಿರದ ವ್ಯಕ್ತಿ 'ಫಾರ್ಮ್ 97' (Form 97) ನಲ್ಲಿ ಘೋಷಣೆ ಸಲ್ಲಿಸಬಹುದು. ವಹಿವಾಟು ನಿರ್ವಹಿಸುವ ಸಂಸ್ಥೆಯು ಆ ಘೋಷಣೆಯ ವಿವರಗಳನ್ನು ಆದಾಯ ತೆರಿಗೆ ಇಲಾಖೆಗೆ ವರದಿ ಮಾಡಲಿದೆ. ಈಗ ಅಂತಹ ವರದಿಯನ್ನು 'ಫಾರ್ಮ್ 98' (Form 98) ಮೂಲಕ ಸಲ್ಲಿಸಲಾಗುತ್ತಿದೆ.
ನಿಖರವಾದ ಬದಲಾವಣೆ ಏನು?
ಹೊಸ ವ್ಯವಸ್ಥೆಯು ಒಂದು ಸರಳ ಪ್ರಕ್ರಿಯೆಗೆ ಆಸ್ಪದ ನೀಡಲಿದೆ. ಪಾನ್ ಕಾರ್ಡ್ ಇಲ್ಲದಿದ್ದರೆ ಆ ವ್ಯಕ್ತಿಯು ಫಾರ್ಮ್ 97 ಸಲ್ಲಿಸಬೇಕು. ಅದನ್ನು ಬ್ಯಾಂಕ್/ಇತರ ಸಂಸ್ಥೆಗಳು ಆ ವರದಿಯನ್ನು ಫಾರ್ಮ್ 98 ರಲ್ಲಿ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ಒದಗಿಸಲಿವೆ. ಈ ಪ್ರಕ್ರಿಯೆಯು ಹೇಗೆ ಕಾರ್ಯನಿರ್ವಹಿಸಲಿದೆ ಎಂಬುದನ್ನು CBDT ತನ್ನ ಅಧಿಸೂಚನೆಯಲ್ಲಿ ವಿವರವಾಗಿ ಉಲ್ಲೇಖಿಸಿದೆ.
ವರದಿ ಮಾಡುವ ಸಂಸ್ಥೆಗಳು ಮೊದಲು ಆದಾಯ ತೆರಿಗೆ ಇಲಾಖೆಯಲ್ಲಿ ನೋಂದಾಯಿಸಿಕೊಳ್ಳಬೇಕು ಮತ್ತು 'ITDREIN' ಎಂಬ ವಿಶಿಷ್ಟ ಸಂಖ್ಯೆ ಪಡೆದಿರಬೇಕು. ನಂತರ ಅವರು ಫಾರ್ಮ್ 98 ಸಲ್ಲಿಸಲು ನಿಗದಿತ ವ್ಯವಸ್ಥೆ ಬಳಸುತ್ತಾರೆ. ಒಂದು ವೇಳೆ ಅವರು ತಪ್ಪು ಮಾಡಿದರೆ, ಹೊಸ ಕಾರ್ಯವಿಧಾನದಲ್ಲಿ ತಿದ್ದುಪಡಿ ಸಲ್ಲಿಸಲು ಅವಕಾಶ ಸಿಗಲಿದೆ. ತಪ್ಪಾದ ವರದಿಯನ್ನು ರದ್ದುಗೊಳಿಸಲು ಕೂಡ ಒಂದು ಕಾರ್ಯವಿಧಾನವನ್ನು ಅಧಿಸೂಚನೆಯಲ್ಲಿ ವಿವರಿಸಲಾಗಿದೆ.
ಯಾರ ಮೇಲೆ ಪರಿಣಾಮ ಬೀರುತ್ತದೆ?
ಪಾನ್ ಕಾರ್ಡ್ ಹೊಂದಿರದ ಅತಿ ಹೆಚ್ಚು ಮೌಲ್ಯದ ನಿರ್ದಿಷ್ಟ ವಹಿವಾಟುಗಳ ಬಗ್ಗೆ ವರದಿ ಮಾಡುವಾಗ ಬ್ಯಾಂಕ್ಗಳು, ಹಣಕಾಸು ಸಂಸ್ಥೆಗಳು ಮತ್ತು ಇತರ ಸಂಸ್ಥೆಗಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ. ಅದೇನೆಂದರೆ, ಗ್ರಾಹಕರು ನೀಡಿದ ಮಾಹಿತಿಯನ್ನು ಸರಿಯಾಗಿ ದಾಖಲಿಸಲಾಗಿದೆಯೇ ಅಥವಾ ತೆರಿಗೆ ಇಲಾಖೆಗೆ ವರದಿ ಮಾಡಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಸಾಮಾನ್ಯ ಜನರಿಗೆ, ತಮ್ಮ ಬಳಿ ಪಾನ್ ಕಾರ್ಡ್ ಇಲ್ಲದಿದ್ದಾಗ ಮತ್ತು ಸಾಮಾನ್ಯವಾಗಿ ಪಾನ್ ಅಗತ್ಯವಿರುವ ವಹಿವಾಟನ್ನು ನಡೆಸುವಾಗ ಮಾತ್ರ ಈ ಬದಲಾವಣೆ ಮುಖ್ಯವಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಅಗತ್ಯವಿರುವ ಘೋಷಣೆ ನೀಡಬೇಕಾಗಲಿದೆ.
PAN ಇಲ್ಲದವರು ಫಾರ್ಮ್ -97 ಸಲ್ಲಿಸಬೇಕೇ?
ಪಾನ್ ಕಾರ್ಡ್ ಹೊಂದಿರದವರು ಫಾರ್ಮ್-97 ಸಲ್ಲಿಸುವುದು ಕಡ್ಡಾಯವಲ್ಲ. ನಿರ್ದಿಷ್ಟ ವಹಿವಾಟುಗಳಿಗೆ ಸಂಬಂಧಿಸಿದ ನಿಯಮಗಳ ವ್ಯಾಪ್ತಿಗೆ ಬರುವ ಸಂದರ್ಭಗಳಲ್ಲಿ ಮಾತ್ರ ಫಾರ್ಮ್ 97 ಪ್ರಸ್ತುತವಾಗಿರಲಿದೆ. ಈ ಅಧಿಸೂಚನೆಯ ಅರ್ಥವೇನೆಂದರೆ, ಪಾನ್ ಇಲ್ಲದ ಪ್ರತಿಯೊಬ್ಬ ವ್ಯಕ್ತಿಯೂ ಕಡ್ಡಾಯವಾಗಿ 'ಫಾರ್ಮ್ 97' ಭರ್ತಿ ಮಾಡಬೇಕೆಂದಿಲ್ಲ.
ಈ ಅವಶ್ಯಕತೆಯು ವಹಿವಾಟಿನ ಸ್ವರೂಪ ಮತ್ತು ಆದಾಯ ತೆರಿಗೆ ನಿಯಮಗಳಡಿಯಲ್ಲಿ ನಿರ್ದಿಷ್ಟಪಡಿಸಿದ ಸಂದರ್ಭಗಳನ್ನು ಅವಲಂಬಿಸಿರುತ್ತದೆ.
ಹಳೆಯ ವಹಿವಾಟುಗಳ ವಿಷಯವೇನು?
ಹಳೆಯ ವಹಿವಾಟುಗಳಲ್ಲಿ ಅನುಸರಿಸಿದ ಕಾರ್ಯವಿಧಾನಗಳು ಕೂಡ ಅಧಿಸೂಚನೆಯ ಒಂದು ಪ್ರಮುಖ ಭಾಗವಾಗಿವೆ. 2025-26ರ ಹಣಕಾಸು ವರ್ಷ ಮತ್ತು ಅದಕ್ಕಿಂತ ಹಿಂದಿನ ವರ್ಷಗಳಿಗೆ ಸಂಬಂಧಿಸಿದ ವಹಿವಾಟುಗಳನ್ನು 'ಫಾರ್ಮ್ 61' ಬಳಸುವ ಹಳೆಯ ವ್ಯವಸ್ಥೆಯಡಿಯೇ ವರದಿ ಮಾಡುವುದನ್ನು ಮುಂದುವರಿಸಲಾಗಿತ್ತು. ಇಲ್ಲಿ ಹಳೆಯ ವಹಿವಾಟುಗಳು ಇದ್ದಕ್ಕಿದ್ದಂತೆ ಹೊಸ 'ಫಾರ್ಮ್ 98' ವ್ಯವಸ್ಥೆಗೆ ವರ್ಗಾವಣೆಯಾಗುವುದಿಲ್ಲ. ಆಯಾ ವರ್ಷಗಳಿಗೆ ಸಂಬಂಧಿಸಿದ ವರದಿ ಮಾಡುವಿಕೆ, ತಿದ್ದುಪಡಿಗಳು ಮತ್ತು ಅಳಿಸುವಿಕೆಗೆ ಹಳೆಯ ನಿಯಮಗಳೇ ಅನ್ವಯವಾಗುತ್ತವೆ.
ಹೊಸ ವ್ಯವಸ್ಥೆ ಏಕೆ ಮುಖ್ಯ?
ಸಿಡಿಬಿಟಿಯ ಹೊಸ ವ್ಯವಸ್ಥೆಯಿಂದ ಹೆಚ್ಚಿನ ಮೌಲ್ಯದ ವಹಿವಾಟುಗಳ ಮೇಲೆ ನಿಗಾ ಇಡಲು ಆದಾಯ ತೆರಿಗೆ ಇಲಾಖೆಗೆ ಸುಲಭವಾಗಲಿದೆ. ಬ್ಯಾಂಕ್ಗಳು ಮತ್ತು ಇತರ ವರದಿ ಮಾಡುವ ಸಂಸ್ಥೆಗಳು ತಾವು ಸಲ್ಲಿಸಿದ ದಾಖಲೆಗಳು ಮತ್ತು ವರದಿಯನ್ನು ನಿಖರವಾಗಿ ಇಟ್ಟುಕೊಳ್ಳಬೇಕಾಗುತ್ತದೆ.
ತೆರಿಗೆದಾರರು ಅಥವಾ ಆಸ್ತಿ ವಹಿವಾಟು ಮಾಡುವವರಿಗೆ ಒದಗಿಸಲಾದ ಮಾಹಿತಿಯು ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಇದು ಅನುವು ಮಾಡಿಕೊಡಲಿದೆ. ಆದ್ದರಿಂದ, ಈ ಅಧಿಸೂಚನೆಯು ಹೊಸ ತೆರಿಗೆಯನ್ನು ಪರಿಚಯಿಸುವುದಕ್ಕಿಂತ ಹೆಚ್ಚಾಗಿ, ಮಾಹಿತಿಯನ್ನು ಹೇಗೆ ವರದಿ ಮಾಡಬೇಕು ಎಂಬುದರ ಕುರಿತಾಗಿದೆ.
ತಜ್ಞರು ಹೇಳುವುದೇನು?
'ರಾಸ್ತೋಗಿ ಚೇಂಬರ್ಸ್' ಸ್ಥಾಪಕ ಅಭಿಷೇಕ್ ಎ. ರಾಸ್ತೋಗಿ ಹೇಳುವ ಪ್ರಕಾರ, ನೋಂದಣಿ, ವರದಿ, ತಪ್ಪುಗಳನ್ನು ತಿದ್ದುವಿಕೆ ಮತ್ತು ಅಜಾಗರೂಕತೆಯಿಂದ ಸಲ್ಲಿಸಿದ ವರದಿಗಳನ್ನು ಅಳಿಸುವ ಪ್ರಕ್ರಿಯೆಗೆ ಈ ಅಧಿಸೂಚನೆಯು ಸ್ಪಷ್ಟವಾದ ಮಾರ್ಗಸೂಚಿ ಒದಗಿಸುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವ್ಯಕ್ತಿಯು ಸಲ್ಲಿಸಿದ 'ಫಾರ್ಮ್ 97' ಮತ್ತು ವರದಿ ಮಾಡುವ ಸಂಸ್ಥೆಯು ಸಲ್ಲಿಸಿದ 'ಫಾರ್ಮ್ 98' ನಡುವಿನ ಸಂಪರ್ಕವು ಬ್ಯಾಂಕ್ಗಳು, ಹಣಕಾಸು ಸಂಸ್ಥೆಗಳು ಮತ್ತು ಹೆಚ್ಚಿನ ಮೌಲ್ಯದ ವಹಿವಾಟುಗಳನ್ನು ನಿರ್ವಹಿಸುವ ಇತರ ಸಂಸ್ಥೆಗಳಿಗೆ ಮುಖ್ಯವಾಗಿರಲಿವೆ.
ತೆರಿಗೆ ವ್ಯವಸ್ಥೆಯು ಹಳೆಯ 1961ರ ಕಾನೂನಿನಿಂದ ಹೊಸ ಚೌಕಟ್ಟಿಗೆ ಬದಲಾಗುತ್ತಿರುವಾಗಲೂ ನಿರಂತರತೆ ಕಾಯ್ದುಕೊಳ್ಳಲು 2025-26 ಮತ್ತು ಹಿಂದಿನ ವರ್ಷಗಳಿಗೆ 'ಫಾರ್ಮ್ 61' ಮುಂದುವರಿಸಿರುವುದು ಉತ್ತಮ ಕ್ರಮ ಎಂದು ರಾಸ್ತೋಗಿ ಹೇಳಿದ್ದಾರೆ.
ಒಟ್ಟಾರೆ, ಈ ಬದಲಾವಣೆಯು ಮುಖ್ಯವಾಗಿ ಆದಾಯ ತೆರಿಗೆ ಇಲಾಖೆಗೆ ನಿರ್ದಿಷ್ಟವಾದ ಹೆಚ್ಚಿನ ಮೌಲ್ಯದ ವಹಿವಾಟುಗಳನ್ನು ವರದಿ ಮಾಡುವ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡಲಿದೆ. ಆದಾಗ್ಯೂ, ನಿಮ್ಮ ಬಳಿ ಪಾನ್ ಇಲ್ಲದಿದ್ದರೂ ನಿಯಮಗಳ ವ್ಯಾಪ್ತಿಗೆ ಬರುವ ವಹಿವಾಟು ನಡೆಸಿದರೆ, 'ಫಾರ್ಮ್ 97' ಒದಗಿಸಬೇಕಾಗಬಹುದು. ಆಗ ಬ್ಯಾಂಕ್ ಅಥವಾ ಇತರ ಸಂಸ್ಥೆಗಳು 'ಫಾರ್ಮ್ 98' ಮೂಲಕ ಸಂಬಂಧಿತ ವಿವರಗಳನ್ನು ವರದಿ ಮಾಡಲಿವೆ. 2025-26ರ ಹಣಕಾಸು ವರ್ಷ ಮತ್ತು ಅದಕ್ಕಿಂತ ಹಿಂದಿನ ವರ್ಷಗಳಿಗೆ ಸಂಬಂಧಿಸಿದ ವಹಿವಾಟುಗಳಿಗೆ 'ಫಾರ್ಮ್ 61' ಅನ್ವಯಿಸುವುದನ್ನು ಮುಂದುವರಿಸಲಾಗಿದೆ.

