
ಕಾವೇರಿ ನೀರು ಬಿಡುಗಡೆಗೆ ತ.ನಾಡು ಒತ್ತಡ; ಮಳೆ, ಒಳಹರಿವು ಪರಿಶೀಲಿಸಿ ತೀರ್ಮಾನ
ಕರ್ನಾಟಕ-ತಮಿಳುನಾಡು ಪರ ಅಧಿಕಾರಿಗಳ ವಾದ ಆಲಿಸಿದ ಪ್ರಾಧಿಕಾರದ ಅಧ್ಯಕ್ಷರು ತಕ್ಷಣಕ್ಕೆ ಯಾವುದೇ ಅಂತಿಮ ಆದೇಶ ನೀಡಿಲ್ಲ. ಮುಂದಿನ ವಾರ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಮತ್ತು ಒಳಹರಿವಿನ ಪ್ರಮಾಣ ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಉಭಯ ರಾಷ್ಟ್ರಗಳಿಗೆ ತಿಳಿಸಿದ್ದಾರೆ.
ಕಾವೇರಿ ನೀರು ಹಂಚಿಕೆ ವಿಚಾರವಾಗಿ ಕರ್ನಾಟಕ ಮತ್ತು ತಮಿಳುನಾಡು ನಡುವಿನ ಜಟಾಪಟಿ ಮತ್ತೊಂದು ಹಂತ ತಲುಪಿಸದೆ. ನವದೆಹಲಿಯಲ್ಲಿ ಬುಧವಾರ ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮಹತ್ವದ ಸಭೆಯಲ್ಲಿ ತಮಿಳುನಾಡಿನ ನೀರು ಬಿಡುಗಡೆಯ ಬೇಡಿಕೆಗೆ ಕರ್ನಾಟಕ ತೀವ್ರ ವಿರೋಧ ವ್ಯಕ್ತಪಡಿಸಿದೆ. ಕರ್ನಾಟಕದಲ್ಲಿ ಎದುರಾಗಿರುವ ಭೀಕರ ಬರ ಪರಿಸ್ಥಿತಿ ಮತ್ತು ರಾಜಧಾನಿ ಬೆಂಗಳೂರಿನ ಕುಡಿಯುವ ನೀರಿನ ಅಗತ್ಯತೆ ಪ್ರತಿಪಾದಿಸಿದ ಅಧಿಕಾರಿಗಳು, ಸದ್ಯಕ್ಕೆ ನದಿಪಾತ್ರದ ಕೆಳಗಿರುವ ರಾಜ್ಯಗಳಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿದೆ.
ಕರ್ನಾಟಕ ಹಾಗೂ ತಮಿಳುನಾಡು ಪರ ಅಧಿಕಾರಿಗಳ ಸುದೀರ್ಘ ವಾದ ಆಲಿಸಿದ ಪ್ರಾಧಿಕಾರದ ಅಧ್ಯಕ್ಷರು, ತಕ್ಷಣಕ್ಕೆ ಯಾವುದೇ ಅಂತಿಮ ಆದೇಶ ನೀಡುವುದಿಲ್ಲ. ಮುಂದಿನ ವಾರ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಮತ್ತು ಒಳಹರಿವಿನ ಪ್ರಮಾಣವನ್ನು ಮೇಲ್ವಿಚಾರಣೆ ನಡೆಸಿ, ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಎರಡೂ ರಾಜ್ಯಗಳಿಗೆ ತಿಳಿಸಿದ್ದಾರೆ.
ಸಭೆಯಲ್ಲಿ ನಡೆದಿದ್ದೇನು?
ಕರ್ನಾಟಕದ ಜಲಾಶಯಗಳಲ್ಲಿ ನೀರಿಲ್ಲದೆ ಬರ ಆವರಿಸಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಕಾವೇರಿ ಪಾತ್ರದ ನಗರ ಹಾಗೂ ಗ್ರಾಮಗಳ ಕುಡಿಯುವ ನೀರಿನ ಅಭಾವ ನೀಗಿಸುವುದು ಸರ್ಕಾರದ ಮೊದಲ ಆದ್ಯತೆ ಎಂದು ರಾಜ್ಯದ ಅಧಿಕಾರಿಗಳು ಪ್ರತಿಪಾದಿಸಿದರು. ಜುಲೈ 22ರ ಅಂಕಿಸಂಖ್ಯೆಗಳಂತೆ ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದ ಪ್ರಮುಖ ಜಲಾಶಯಗಳಲ್ಲಿ ಒಟ್ಟು ನೀರು ಸಂಗ್ರಹಣಾ ಸಾಮರ್ಥ್ಯದಲ್ಲಿ ಕೇವಲ ಶೇ 52 ರಷ್ಟಿದೆ.
ಕಬಿನಿ ಜಲಾಶಯದ ಗರಿಷ್ಠ ಸಂಗ್ರಹ ಸಾಮರ್ಥ್ಯವಾದ 19.516 ಟಿಎಂಸಿ ಅಡಿಗಳಲ್ಲಿ ಪ್ರಸ್ತುತ 13.019 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಜುಲೈ ಅಂತ್ಯ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಮುಂಗಾರು ಚುರುಕು ಪಡೆಯುವ ಸಾಧ್ಯತೆ ಇದೆ. ಮುಂಬರುವ ದಿನಗಳಲ್ಲಿ ನೀರಿನ ಹೊರಹರಿವಿಗೆ ಕನಿಷ್ಠ 4 ಟಿಎಂಸಿಯಿಂದ 5 ಟಿಎಂಸಿ ಅಗತ್ಯವಿದ್ದು, ಸುಮಾರು 1 ಟಿಎಂಸಿಯಿಂದ 2 ಟಿಎಂಸಿ ನೀರನ್ನು ತುರ್ತು ಬಫರ್ ಆಗಿ ಕಾಯ್ದಿರಿಸಿಕೊಳ್ಳಬೇಕಾಗಿದೆ. ಪ್ರಸ್ತುತ ಸಾಮಾನ್ಯ ಹರಿವಿನಂತೆ ಮುಂಬರುವ ಕೆಲವು ದಿನಗಳಲ್ಲಿ ದಿನಕ್ಕೆ ಕೇವಲ 1000 ದಿಂದ 2000 ಕ್ಯುಸೆಕ್ ಒಳಹರಿವು ಮಾತ್ರ ದಾಖಲಾಗುತ್ತಿದೆ ಎಂದು ವಿವರಿಸಿದ್ದಾರೆ.

