
ಸಚಿವ ಅಶ್ವಿನಿ ವೈಷ್ಣವ್
14 ಖಾರಿಫ್ ಬೆಳೆಗಳ ಬೆಂಬಲ ಬೆಲೆ ಏರಿಕೆ; ಸೂರ್ಯಕಾಂತಿಗೆ ಬಂಪರ್ ಲಾಭ
2026-27ರ ಮಾರುಕಟ್ಟೆ ಹಂಗಾಮಿಗಾಗಿ 14 ಪ್ರಮುಖ ಖಾರಿಫ್ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಗಣನೀಯವಾಗಿ ಹೆಚ್ಚಿಸಲು ಅನುಮೋದನೆ ನೀಡಲಾಗಿದೆ. ಕೃಷಿ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ದೇಶದ ರೈತರಿಗೆ ಅನುಕೂಲ ಕಲ್ಪಿಸುವ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.
2026-27ರ ಮಾರುಕಟ್ಟೆ ಹಂಗಾಮಿಗಾಗಿ 14 ಪ್ರಮುಖ ಖಾರಿಫ್ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಗಣನೀಯವಾಗಿ ಹೆಚ್ಚಿಸಲು ಅನುಮೋದನೆ ನೀಡಲಾಗಿದೆ. ಕೃಷಿ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿದೆ.
ಸೂರ್ಯಕಾಂತಿ ಬೆಳೆಗಾರರಿಗೆ ಬಂಪರ್ ಕೊಡುಗೆ
ಈ ಬಾರಿಯ ಬೆಲೆ ಏರಿಕೆಯಲ್ಲಿ ಸೂರ್ಯಕಾಂತಿ ಬೀಜವು ಅತಿ ಹೆಚ್ಚು ಲಾಭ ಪಡೆದಿದೆ. ಪ್ರತಿ ಕ್ವಿಂಟಲ್‌ಗೆ 622 ರೂ. ಹೆಚ್ಚಳವಾಗಿದ್ದು, ಇದರೊಂದಿಗೆ ಒಟ್ಟು ಬೆಂಬಲ ಬೆಲೆ 8,343 ರೂ. ತಲುಪಿದೆ. ಉಳಿದಂತೆ ಹತ್ತಿಗೆ 557 ರೂ. ಹಾಗೂ ಎಳ್ಳಿಗೆ 500 ರೂ. ಏರಿಕೆಯನ್ನು ಘೋಷಿಸಲಾಗಿದೆ.
ಸೂರ್ಯಕಾಂತಿ ಬೀಜ 8,343 ರೂ (622 ರೂ. ಏರಿಕೆ), ತೊಗರಿ ಬೇಳೆ 8,450 ರೂ, ಎ ದರ್ಜೆಯ ಭತ್ತ 2,461 ರೂ, ಹೈಬ್ರಿಡ್ ಜೋಳ 4,023 ರೂ, ಸಜ್ಜೆ 2,900 ರೂ ನಂತೆ ಮಾರಾಟವಾಗುತ್ತಿದೆ.
ರೈತರಿಗೆ 2.60 ಲಕ್ಷ ಕೋಟಿ ರೂ. ಲಾಭ
ಸಚಿವ ಸಂಪುಟ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, "ಈ ಖಾರಿಫ್ ಹಂಗಾಮಿನಲ್ಲಿ ರೈತರಿಗೆ ಅಂದಾಜು 2 ಲಕ್ಷ 60 ಸಾವಿರ ಕೋಟಿ ರೂ.ಗಳಷ್ಟು ಹಣ ಪಾವತಿ ಮಾಡುವ ಗುರಿ ಹೊಂದಲಾಗಿದೆ. ಸುಮಾರು 824 ಲಕ್ಷ ಮೆಟ್ರಿಕ್ ಟನ್ ಬೆಳೆಗಳನ್ನು ಸರ್ಕಾರವೇ ನೇರವಾಗಿ ಖರೀದಿಸಲಿದೆ" ಎಂದು ಹೇಳಿದರು.
2019ರ ನೀತಿಯಂತೆ, ಉತ್ಪಾದನಾ ವೆಚ್ಚಕ್ಕಿಂತ ಕನಿಷ್ಠ ಶೇ. 50ರಷ್ಟು ಲಾಭವನ್ನು ರೈತರಿಗೆ ಖಚಿತಪಡಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ಗುಜರಾತ್‌ನಲ್ಲಿ ಮೊದಲ ಸೆಮಿ ಹೈ ಸ್ಪೀಡ್ ಕಾರಿಡಾರ್
ಕೃಷಿ ಕ್ಷೇತ್ರದ ಜೊತೆಗೆ ಸಾರಿಗೆ ಸಂಪರ್ಕಕ್ಕೂ ಕೇಂದ್ರ ಸಂಪುಟವು ಬೃಹತ್ ಕೊಡುಗೆ ನೀಡಿದೆ. ದೇಶದ ಮೊದಲ ಸೆಮಿ ಹೈ ಸ್ಪೀಡ್ ರೈಲು ಕಾರಿಡಾರ್‌ಗೆ ಸರ್ಕಾರ ಅಸ್ತು ಎಂದಿದೆ.
ಒಟ್ಟು 20,667 ಕೋಟಿ ರೂ ವೆಚ್ಚದ ಯೋಜನೆಯಡಿ 134 ಕಿ.ಮೀ ಬ್ರಾಡ್‌ಗೇಜ್ ಮಾರ್ಗ ನಿರ್ಮಿಸಲಾಗುವುದು. ಸಂಪೂರ್ಣ ಸ್ವದೇಶಿ ತಂತ್ರಜ್ಞಾನದಡಿ 'ನಮೋ ಭಾರತ್' ರೈಲುಗಳನ್ನು ಈ ಮಾರ್ಗದಲ್ಲಿ ಕಾರ್ಯಾಚರಣೆಗೆ ಬಿಡಲಾಗುವುದು. ಅಹಮದಾಬಾದ್ನ ಸಬರಮತಿ, ಧೋಲೆರಾ ವಿಶೇಷ ಹೂಡಿಕೆ ವಲಯ (SIR), ಧೋಲೆರಾ ವಿಮಾನ ನಿಲ್ದಾಣ ಮತ್ತು ಲೋಥಾಲ್ ಬಂದರು ಪ್ರದೇಶಗಳನ್ನು ಈ ರೈಲು ಸಂಪರ್ಕಿಸಲಿದೆ.
ಈ ಯೋಜನೆಯು ಕೈಗಾರಿಕಾ ಕಾರಿಡಾರ್ಗಳಿಗೆ ವೇಗ ನೀಡಲಿದ್ದು, ಸರಕು ಮತ್ತು ಪ್ರಯಾಣಿಕರ ಸಾಗಣೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದೆ ಎಂದು ನಿರೀಕ್ಷಿಸಲಾಗಿದೆ.

