
ಸೆ.12-13ರಂದು ನವದೆಹಲಿಯಲ್ಲಿ 18ನೇ BRICS ಶೃಂಗಸಭೆ ನಡೆಯಲಿದೆ.
ಭಾರತದಲ್ಲಿ ಸೆ.12ರಿಂದ ಎರಡು ದಿನಗಳ BRICS ಶೃಂಗಸಭೆ
ಸೆ.12 ಮತ್ತು13ರಂದು ನವದೆಹಲಿ ನಡೆಯಲಿರುವ 18ನೇ BRICS ಶೃಂಗಸಭೆಯಲ್ಲಿ ಜಾಗತಿಕ ವ್ಯಾಪಾರ, ಡಿಜಿಟಲ್ ಪಾವತಿ, AI, ಇಂಧನ ಭದ್ರತೆ ಸೇರಿ 7 ವಿಚಾರಗಳ ಚರ್ಚೆ ನಡೆಯಲಿದೆ.
18ನೇ ಬ್ರಿಕ್ಸ್ (BRICS) ನಾಯಕರ ಶೃಂಗಸಭೆಗೆ ಭಾರತ ಸಜ್ಜಾಗಿದೆ. ಸೆಪ್ಟೆಂಬರ್ 12 ಮತ್ತು 13ರಂದು ನವದೆಹಲಿಯ ಭಾರತ್ ಮಂಟಪದಲ್ಲಿ ಶೃಂಗಸಭೆ ನಡೆಯಲಿದ್ದು, 11 ಸದಸ್ಯ ರಾಷ್ಟ್ರಗಳು ಒಂದೇ ವೇದಿಕೆಯಲ್ಲಿ ಸೇರಲಿವೆ. 2026ರಲ್ಲಿ ಬ್ರಿಕ್ಸ್ ಸ್ಥಾಪನೆಯಾಗಿ 20 ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಭಾರತದ ಅಧ್ಯಕ್ಷತೆಯ ಈ ಶೃಂಗಸಭೆ ವಿಶೇಷ ಮಹತ್ವ ಪಡೆದುಕೊಂಡಿದೆ.
2006ರಲ್ಲಿ ಬ್ರೆಜಿಲ್, ರಷ್ಯಾ, ಭಾರತ ಮತ್ತು ಚೀನಾ ಒಳಗೊಂಡ ಬಿಆರ್‌ಐಸಿ ಒಕ್ಕೂಟ ಆರಂಭವಾಗಿತ್ತು. ಬಳಿಕ ದಕ್ಷಿಣ ಆಫ್ರಿಕಾ ಸೇರ್ಪಡೆಯೊಂದಿಗೆ ಬ್ರಿಕ್ಸ್ ಆಯಿತು. ನಂತರ ಈ ಗುಂಪು ಈಜಿಪ್ಟ್, ಇಥಿಯೋಪಿಯಾ, ಇರಾನ್, ಯುಎಇ, ಇಂಡೋನೇಷ್ಯಾ ಮತ್ತು ಸೌದಿ ಅರೇಬಿಯಾಗಳನ್ನು ಒಳಗೊಂಡಂತೆ ವಿಸ್ತರಿಸಿದೆ. 2025ರಲ್ಲಿ ಇಂಡೋನೇಷ್ಯಾ ಪೂರ್ಣ ಸದಸ್ಯ ರಾಷ್ಟ್ರವಾಯಿತು.
ಭಾರತದ 2026ರ ಅಧ್ಯಕ್ಷತೆಯ ಪ್ರಮುಖ ಘೋಷವಾಕ್ಯ ಸ್ಥಿತಿಸ್ಥಾಪಕತ್ವ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆಗಾಗಿ ನಿರ್ಮಾಣ (Building for Resilience, Innovation, Cooperation and Sustainability) ಆಗಿದ್ದು, ಮಾನವೀಯತೆ ಮತ್ತು ಜನಕೇಂದ್ರಿತ ಅಭಿವೃದ್ಧಿಗೆ ಒತ್ತು ನೀಡಲಾಗಿದೆ.
ಜಾಗತಿಕ ದಕ್ಷಿಣಕ್ಕೆ ಹೆಚ್ಚಿನ ಧ್ವನಿ
ಜಾಗತಿಕ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಅಭಿವೃದ್ಧಿಶೀಲ ಮತ್ತು ಉದಯೋನ್ಮುಖ ರಾಷ್ಟ್ರಗಳ ಪಾತ್ರ ಹೆಚ್ಚಿಸುವುದು ಭಾರತದ ಪ್ರಮುಖ ಗುರಿಯಾಗಿದೆ. ವಿಶ್ವಸಂಸ್ಥೆ, ಅಂತಾರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವಬ್ಯಾಂಕ್‌ನಂತಹ ಜಾಗತಿಕ ಸಂಸ್ಥೆಗಳಲ್ಲಿ ಸುಧಾರಣೆ ತರಬೇಕೆಂಬ ಬೇಡಿಕೆಯನ್ನು ಭಾರತ ಮುಂದಿಡುವ ಸಾಧ್ಯತೆಯಿದೆ.
ಆದರೆ ಬ್ರಿಕ್ಸ್ ಅನ್ನು ಪಾಶ್ಚಿಮಾತ್ಯ ರಾಷ್ಟ್ರಗಳ ವಿರುದ್ಧದ ಮೈತ್ರಿಯಾಗಿ ರೂಪಿಸುವ ಬದಲು, ಅಭಿವೃದ್ಧಿ ಮತ್ತು ಸಾಮಾನ್ಯ ಹಿತಾಸಕ್ತಿಗಳ ವಿಚಾರದಲ್ಲಿ ಸಹಕಾರದ ವೇದಿಕೆಯಾಗಿ ಉಳಿಸಿಕೊಳ್ಳಲು ಭಾರತ ಬಯಸಿದೆ.
ವ್ಯಾಪಾರ ಮತ್ತು ಪೂರೈಕೆ ಸರಪಳಿ
ಯುದ್ಧ, ನಿರ್ಬಂಧಗಳು, ರಕ್ಷಣಾತ್ಮಕ ವ್ಯಾಪಾರ ನೀತಿಗಳು ಹಾಗೂ ಜಾಗತಿಕ ಪೂರೈಕೆ ಸರಪಳಿಯಲ್ಲಿನ ಅಡಚಣೆಗಳ ಹಿನ್ನೆಲೆಯಲ್ಲಿ ಬ್ರಿಕ್ಸ್ ರಾಷ್ಟ್ರಗಳ ನಡುವೆ ಹೆಚ್ಚು ಸ್ಥಿರ ಮತ್ತು ವೈವಿಧ್ಯಮಯ ವ್ಯಾಪಾರ ವ್ಯವಸ್ಥೆ ರೂಪಿಸುವುದು ಮತ್ತೊಂದು ಪ್ರಮುಖ ವಿಚಾರವಾಗಿದೆ. ಭಾರತವು ಬ್ರಿಕ್ಸ್ ರಾಷ್ಟ್ರಗಳ ನಡುವಿನ ವ್ಯಾಪಾರ ಹೆಚ್ಚಿಸುವುದು, ಸೇವಾ ವಲಯದ ವ್ಯಾಪಾರ ವಿಸ್ತರಿಸುವುದು ಮತ್ತು ಅಗತ್ಯ ಸರಕುಗಳು ಹಾಗೂ ಕಚ್ಚಾ ವಸ್ತುಗಳ ಪೂರೈಕೆಗೆ ಒತ್ತು ನೀಡುತ್ತಿದೆ.
ಡಿಜಿಟಲ್ ಪಾವತಿ ವ್ಯವಸ್ಥೆಗೆ ಒತ್ತು
ಬ್ರಿಕ್ಸ್ ರಾಷ್ಟ್ರಗಳ ನಡುವಿನ ಹಣಕಾಸು ವಹಿವಾಟುಗಳನ್ನು ಸುಲಭ ಮತ್ತು ಕಡಿಮೆ ವೆಚ್ಚದಲ್ಲಿ ಮಾಡುವ ಕುರಿತು ಚರ್ಚೆ ನಡೆಯುವ ಸಾಧ್ಯತೆಯಿದೆ. ಸ್ಥಳೀಯ ಕರೆನ್ಸಿಗಳ ಬಳಕೆ ಮತ್ತು ಡಿಜಿಟಲ್ ಹಣಕಾಸು ಮೂಲಸೌಕರ್ಯಕ್ಕೆ ಉತ್ತೇಜನ ನೀಡುವುದು ಭಾರತದ ಪ್ರಮುಖ ಆದ್ಯತೆ.
ಒಂದು ಸಾಮಾನ್ಯ ಬ್ರಿಕ್ಸ್ ಕರೆನ್ಸಿ ರೂಪಿಸುವುದಕ್ಕಿಂತ, ಪರಸ್ಪರ ಸಂಪರ್ಕ ಹೊಂದಿದ ಡಿಜಿಟಲ್ ಪಾವತಿ ವ್ಯವಸ್ಥೆಗಳ ಮೂಲಕ ವಹಿವಾಟು ಸುಗಮಗೊಳಿಸುವ ಪ್ರಾಯೋಗಿಕ ಮಾರ್ಗವನ್ನು ಭಾರತ ಬೆಂಬಲಿಸುತ್ತಿದೆ. UPI ಅನುಭವ ಈ ವಿಚಾರದಲ್ಲಿ ಭಾರತಕ್ಕೆ ಪ್ರಮುಖ ಬಲವಾಗಿದೆ.
AI ಮತ್ತು ತಂತ್ರಜ್ಞಾನಕ್ಕೆ ಆದ್ಯತೆ
ಕೃತಕ ಬುದ್ಧಿಮತ್ತೆ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಸಂಶೋಧನೆ, ಸ್ಟಾರ್ಟ್‌ಅಪ್‌ಗಳು ಮತ್ತು ತಂತ್ರಜ್ಞಾನ ಸಹಕಾರವನ್ನು ಬ್ರಿಕ್ಸ್ ವೇದಿಕೆಯ ಪ್ರಮುಖ ಭಾಗವನ್ನಾಗಿ ಮಾಡಲು ಭಾರತ ಬಯಸಿದೆ. ಬ್ರಿಕ್ಸ್ ಸ್ಟಾರ್ಟ್‌ಅಪ್‌ಗಳಿಗಾಗಿ ನವೋದ್ಯಮ ನಿಧಿ, ಇನ್‌ಕ್ಯುಬೇಟರ್ ಜಾಲ ಮತ್ತು ಹಂಚಿಕೆಯ ಸಂಶೋಧನಾ ಭಂಡಾರದಂತಹ ಪ್ರಸ್ತಾವನೆಗಳಿಗೂ ಒತ್ತು ನೀಡಲಾಗಿದೆ. ಅಭಿವೃದ್ಧಿಶೀಲ ರಾಷ್ಟ್ರಗಳು ತಂತ್ರಜ್ಞಾನವನ್ನು ಕೇವಲ ಬಳಸುವುದಲ್ಲದೆ, ಅದರ ಅಭಿವೃದ್ಧಿ ಮತ್ತು ನಿಯಮ ರೂಪಿಸುವಿಕೆಯಲ್ಲಿ ಭಾಗಿಯಾಗಬೇಕು ಎಂಬುದು ಭಾರತದ ನಿಲುವಾಗಿದೆ.
ಇಂಧನ ಭದ್ರತೆ ಮತ್ತು ಹವಾಮಾನ
ಬ್ರಿಕ್ಸ್ ಗುಂಪಿನಲ್ಲಿ ಪ್ರಮುಖ ತೈಲ ಮತ್ತು ಅನಿಲ ಉತ್ಪಾದಕ ರಾಷ್ಟ್ರಗಳ ಜೊತೆಗೆ ದೊಡ್ಡ ಪ್ರಮಾಣದ ಇಂಧನ ಬಳಕೆದಾರ ರಾಷ್ಟ್ರಗಳೂ ಇವೆ. ಹೀಗಾಗಿ ಇಂಧನ ಭದ್ರತೆ, ಕೈಗೆಟುಕುವ ಇಂಧನ ಮತ್ತು ಹವಾಮಾನ ಬದಲಾವಣೆಯನ್ನು ಎದುರಿಸುವ ವಿಚಾರಗಳು ಶೃಂಗಸಭೆಯಲ್ಲಿ ಪ್ರಮುಖವಾಗಲಿವೆ.
ಆರ್ಥಿಕ ಬೆಳವಣಿಗೆಗೆ ಅಗತ್ಯವಾದ ಕೈಗೆಟುಕುವ ಮತ್ತು ವಿಶ್ವಾಸಾರ್ಹ ಇಂಧನ ಪೂರೈಕೆಯೊಂದಿಗೆ ಸ್ವಚ್ಛ ಇಂಧನದತ್ತ ಪರಿವರ್ತನೆಯನ್ನೂ ಸಮತೋಲನಗೊಳಿಸುವುದು ಭಾರತದ ಉದ್ದೇಶವಾಗಿದೆ.
ಆರ್ಥಿಕ ಅಪರಾಧಿಗಳ ವಿರುದ್ಧ ಸಹಕಾರ
ಆರ್ಥಿಕ ಅಪರಾಧಗಳಲ್ಲಿ ಭಾಗಿಯಾಗಿ ವಿದೇಶಗಳಿಗೆ ಪರಾರಿಯಾಗಿರುವವರನ್ನು ಪತ್ತೆಹಚ್ಚುವುದು ಮತ್ತು ಅಕ್ರಮ ಆಸ್ತಿಗಳನ್ನು ವಾಪಸ್ ಪಡೆಯಲು ಬ್ರಿಕ್ಸ್ ರಾಷ್ಟ್ರಗಳ ನಡುವೆ ವೇಗದ ಮಾಹಿತಿ ಹಂಚಿಕೆ ವ್ಯವಸ್ಥೆ ರೂಪಿಸುವ ಪ್ರಸ್ತಾವನೆಯನ್ನು ಭಾರತ ಮುಂದಿಡುವ ಸಾಧ್ಯತೆಯಿದೆ.
ಹಣಕಾಸು ಹಾಗೂ ತನಿಖಾ ಮಾಹಿತಿಯ ಹಂಚಿಕೆ, ಆಸ್ತಿ ವಶಪಡಿಸಿಕೊಳ್ಳುವ ಸಹಕಾರ ಮತ್ತು ತನಿಖಾ ಸಂಸ್ಥೆಗಳ ನಡುವಿನ ಸಂಪರ್ಕವನ್ನು ಬಲಪಡಿಸುವ ಮೂಲಕ ದೀರ್ಘಕಾಲ ತೆಗೆದುಕೊಳ್ಳುವ ಪ್ರಕ್ರಿಯೆಗಳನ್ನು ವೇಗಗೊಳಿಸುವುದು ಇದರ ಉದ್ದೇಶವಾಗಿದೆ.
ವಿಸ್ತರಿಸಿದ ಬ್ರಿಕ್ಸ್ ಅನ್ನು ಪರಿಣಾಮಕಾರಿಯಾಗಿಸುವ ಸವಾಲು
11 ಪೂರ್ಣ ಸದಸ್ಯ ರಾಷ್ಟ್ರಗಳೊಂದಿಗೆ ಬ್ರಿಕ್ಸ್ ವಿಸ್ತರಿಸಿರುವುದರಿಂದ ಸದಸ್ಯ ರಾಷ್ಟ್ರಗಳ ರಾಜಕೀಯ ಮತ್ತು ಆರ್ಥಿಕ ಹಿತಾಸಕ್ತಿಗಳಲ್ಲೂ ವ್ಯತ್ಯಾಸ ಹೆಚ್ಚಾಗಿದೆ. ಭಾರತ, ಚೀನಾ, ರಷ್ಯಾ, ಸೌದಿ ಅರೇಬಿಯಾ, ಇರಾನ್, ಬ್ರೆಜಿಲ್ ಮತ್ತು ಯುಎಇ ಸೇರಿದಂತೆ ಹಲವು ರಾಷ್ಟ್ರಗಳು ಜಾಗತಿಕ ವಿಚಾರಗಳಲ್ಲಿ ವಿಭಿನ್ನ ನಿಲುವು ಹೊಂದಿವೆ.
ಹೀಗಾಗಿ ಎಲ್ಲರನ್ನೂ ಒಗ್ಗೂಡಿಸಿ ಪ್ರಾಯೋಗಿಕ ಸಹಕಾರಕ್ಕೆ ಒತ್ತು ನೀಡುವುದು ಭಾರತದ ಪ್ರಮುಖ ಸವಾಲಾಗಿದೆ. ಭಾರತದ ಅಧ್ಯಕ್ಷತೆಯ ಅವಧಿಯಲ್ಲಿ ಸುಮಾರು 30 ನಗರಗಳಲ್ಲಿ 400ಕ್ಕೂ ಹೆಚ್ಚು ಸಭೆಗಳನ್ನು ಆಯೋಜಿಸಲಾಗಿದ್ದು, ದೆಹಲಿ ಶೃಂಗಸಭೆಯಲ್ಲಿ ಈ ಚರ್ಚೆಗಳು ಸ್ಪಷ್ಟ ಫಲಿತಾಂಶಗಳಾಗಿ ಹೊರಹೊಮ್ಮಲಿವೆಯೇ ಎಂಬುದು ಕುತೂಹಲ ಮೂಡಿಸಿದೆ.
ಬ್ರಿಕ್ಸ್ ಅನ್ನು G7ಗೆ ಪರ್ಯಾಯವಾಗಿ ರೂಪಿಸುವುದು ಅಥವಾ ತಕ್ಷಣವೇ ಹೊಸ ಜಾಗತಿಕ ಹಣಕಾಸು ವ್ಯವಸ್ಥೆ ನಿರ್ಮಿಸುವುದಕ್ಕಿಂತ, ವ್ಯಾಪಾರ, ತಂತ್ರಜ್ಞಾನ, ಇಂಧನ, ಅಭಿವೃದ್ಧಿ ಮತ್ತು ಜಾಗತಿಕ ದಕ್ಷಿಣದ ಸಹಕಾರಕ್ಕೆ ಪರಿಣಾಮಕಾರಿ ವೇದಿಕೆಯನ್ನಾಗಿ ಮಾಡುವುದು ಭಾರತದ ಪ್ರಮುಖ ಗುರಿಯಾಗಿದೆ.

