BRICS Summit| ಬೆದರಿಕೆಗೆ ಇರಾನ್ ಶರಣಾಗುವುದಿಲ್ಲ: ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್
x

ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

BRICS Summit| ಬೆದರಿಕೆಗೆ ಇರಾನ್ ಶರಣಾಗುವುದಿಲ್ಲ: ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್

ಅಮೆರಿಕ ಮತ್ತು ಇಸ್ರೇಲ್ ಪಡೆಗಳನ್ನು ನಿಜವಾದ ಉಗ್ರಗಾಮಿಗಳು ಎಂದು ಬಣ್ಣಿಸಿದ ಪೆಜೆಶ್ಕಿಯಾನ್, ದಕ್ಷಿಣ ಇರಾನ್‌ನ ಪ್ರಾಥಮಿಕ ಶಾಲೆಯೊಂದರ ಸಮೀಪ ನಡೆದ ಅಮೆರಿಕದ ದಾಳಿಯನ್ನು ಖಂಡಿಸಿದ್ದಾರೆ.


Click the Play button to hear this message in audio format

ಯಾವುದೇ ರೀತಿಯ ಬೆದರಿಕೆ, ದಬ್ಬಾಳಿಕೆ ಅಥವಾ ಒತ್ತಡಕ್ಕೆ ಇರಾನ್ ಶರಣಾಗುವುದಿಲ್ಲ. ರಾಷ್ಟ್ರೀಯ ಹಿತಾಸಕ್ತಿಗಳ ರಕ್ಷಣೆಗೆ ಇರಾನ್ ದೃಢವಾಗಿ ನಿಲ್ಲಲಿದೆ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಹೇಳಿದ್ದಾರೆ.

ನವದೆಹಲಿಯ ಭಾರತ ಮಂಟಪದಲ್ಲಿ ನಡೆದ ಬ್ರಿಕ್ಸ್ ಬಿಸಿನೆಸ್ ಫೋರಂನಲ್ಲಿ ಮಾತನಾಡಿರುವ ಅವರು, ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕೊಲ್ಲಿ ಪ್ರದೇಶದಲ್ಲಿ ಶಾಂತಿಯುತ ಸಹಬಾಳ್ವೆಗೆ ಇರಾನ್ ಬದ್ಧವಾಗಿದೆ. ಆದರೆ ಇರಾನ್ ಸಮಾಜದಲ್ಲಿ ಭಿನ್ನಾಭಿಪ್ರಾಯದ ಬೀಜ ಬಿತ್ತಲು ವಿದೇಶಿ ಶಕ್ತಿಗಳು ನಡೆಸುವ ಪ್ರಯತ್ನಗಳನ್ನು ಸೋಲಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

‘ದಬ್ಬಾಳಿಕೆಗೆ ನಾವು ಶರಣಾಗುವುದಿಲ್ಲ. ಇಸ್ರೇಲ್ ಮತ್ತು ಅಮೆರಿಕವನ್ನು ಎದುರಿಸುತ್ತಿದ್ದೇವೆ. ನಮ್ಮನ್ನು ಬೆದರಿಸಿದರೆ ನಾವು ಕೂಡ ಪ್ರತಿರೋಧಿಸುತ್ತೇವೆ’ ಎಂದು ಪೆಜೆಶ್ಕಿಯಾನ್ ಹೇಳಿದ್ದಾರೆ.

‘ಜನರನ್ನು ಗುರಿಯಾಗಿಸುವ ಬದಲು ಸೈನಿಕರನ್ನು ಎದುರಿಸಿ’

ಅಮೆರಿಕ ಮತ್ತು ಇಸ್ರೇಲ್ ಪಡೆಗಳನ್ನು ‘ನಿಜವಾದ ಉಗ್ರಗಾಮಿಗಳು’ ಎಂದು ಪೆಜೆಶ್ಕಿಯಾನ್ ಟೀಕಿಸಿದ್ದಾರೆ. ದಕ್ಷಿಣ ಇರಾನ್‌ನ ಪ್ರಾಥಮಿಕ ಶಾಲೆಯೊಂದರ ಸಮೀಪ ನಡೆದ ಅಮೆರಿಕದ ದಾಳಿಯನ್ನು ಉಲ್ಲೇಖಿಸಿರುವ ಅವರು, ಆ ಘಟನೆಯಲ್ಲಿ 168 ಮಕ್ಕಳು ಮೃತಪಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ಆಸ್ಪತ್ರೆಗಳು, ಮೂಲಸೌಕರ್ಯಗಳು ಮತ್ತು ಜನರ ಜೀವನೋಪಾಯವನ್ನು ಗುರಿಯಾಗಿಸುವ ಬದಲು ಇರಾನ್‌ನ ಸೈನಿಕರನ್ನು ಎದುರಿಸಬೇಕು ಎಂದು ಅವರು ಹೇಳಿದ್ದಾರೆ.

ಸರಬರಾಜಿನ ಕೊರತೆ ಉಂಟುಮಾಡುವ ಮೂಲಕ ಇರಾನ್ ಜನರನ್ನು ಶರಣಾಗುವಂತೆ ಮಾಡಬಹುದು ಎಂದು ಅಮೆರಿಕ ಮತ್ತು ಇಸ್ರೇಲ್ ಭಾವಿಸಿವೆ. ಆದರೆ ಇರಾನ್ ಜನರು ಶರಣಾಗುವುದಿಲ್ಲ ಎಂದು ಪೆಜೆಶ್ಕಿಯಾನ್ ಹೇಳಿದ್ದಾರೆ.

ಶಾಂತಿಯುತ ಸಹಬಾಳ್ವೆಗೆ ಬದ್ಧ

ಕೊಲ್ಲಿ ಪ್ರದೇಶದಲ್ಲಿ ಶಾಂತಿ ಮತ್ತು ಸಹಬಾಳ್ವೆಯನ್ನು ಇರಾನ್ ಬಯಸುತ್ತಿದೆ ಎಂದು ಪೆಜೆಶ್ಕಿಯಾನ್ ಹೇಳಿದ್ದಾರೆ. ಆದರೆ ದೇಶದ ಆಂತರಿಕ ಸ್ಥಿರತೆಯನ್ನು ದುರ್ಬಲಗೊಳಿಸಲು ವಿದೇಶಿ ಶಕ್ತಿಗಳು ನಡೆಸುವ ಯಾವುದೇ ಪ್ರಯತ್ನವನ್ನು ಇರಾನ್ ಸಹಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ರಾಷ್ಟ್ರೀಯ ಹಿತಾಸಕ್ತಿಗಳ ವಿಚಾರದಲ್ಲಿ ಯಾವುದೇ ಒತ್ತಡಕ್ಕೂ ಇರಾನ್ ಮಣಿಯುವುದಿಲ್ಲ ಎಂಬ ಸಂದೇಶವನ್ನು ಅವರು ತಮ್ಮ ಭಾಷಣದ ಮೂಲಕ ನೀಡಿದ್ದಾರೆ.

ದೆಹಲಿಯಲ್ಲಿ ಬ್ರಿಕ್ಸ್ ಶೃಂಗಸಭೆ

18ನೇ ಬ್ರಿಕ್ಸ್ ಶೃಂಗಸಭೆ ಸೆಪ್ಟೆಂಬರ್ 12 ಮತ್ತು 13ರಂದು ನವದೆಹಲಿಯ ಭಾರತ ಮಂಟಪದಲ್ಲಿ ನಡೆಯುತ್ತಿದೆ. 2026ರ ಜನವರಿ 1ರಂದು ಭಾರತ ನಾಲ್ಕನೇ ಬಾರಿಗೆ ಬ್ರಿಕ್ಸ್ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದೆ.

ಬ್ರಿಕ್ಸ್ ಸ್ಥಾಪನೆಯಾಗಿ 20 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ಬಾರಿಯ ಶೃಂಗಸಭೆಗೆ ವಿಶೇಷ ಮಹತ್ವ ದೊರೆತಿದೆ. ‘ಸ್ಥಿತಿಸ್ಥಾಪಕತ್ವ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆಗಾಗಿ ನಿರ್ಮಾಣ’ ಎಂಬುದು ಈ ಬಾರಿಯ ಶೃಂಗಸಭೆಯ ಧ್ಯೇಯವಾಕ್ಯ.

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್, ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಫೋಸಾ ಸೇರಿದಂತೆ ಹಲವು ರಾಷ್ಟ್ರಗಳ ನಾಯಕರು ಶೃಂಗಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಆಗಮಿಸಿದ್ದಾರೆ.

Read More
Next Story