
ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್
ಮೀಸಲಾತಿ ರದ್ದತಿಗೆ ಬಿಜೆಪಿಯಿಂದ ಸಂವಿಧಾನ ತಿದ್ದುಪಡಿ ತಂತ್ರ: ಕಾಂಗ್ರೆಸ್ ಗಂಭೀರ ಆರೋಪ!
ಪ್ರಸ್ತುತ ಇರುವ 543 ಲೋಕಸಭಾ ಕ್ಷೇತ್ರಗಳ ಬಲದ ಮೇಲೆಯೇ ಮುಂಬರುವ 2029 ರ ಸಾರ್ವತ್ರಿಕ ಚುನಾವಣೆಗೆ 'ನಾರಿ ಶಕ್ತಿ ವಂದನ ಅಧಿನಿಯಮ'ವನ್ನು ತಕ್ಷಣ ಜಾರಿಗೆ ತರಬೇಕು ಎಂದು ಜೈರಾಮ್ ರಮೇಶ್ ಸವಾಲು ಹಾಕಿದರು.
ಸಂವಿಧಾನ ತಿದ್ದುಪಡಿ ಮಾಡುವ ಮೂಲಕ ದೇಶದಲ್ಲಿ ಮೀಸಲಾತಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಲು ಬಿಜೆಪಿ ಸಂಖ್ಯಾಬಲದ ಹುಡುಕಾಟದಲ್ಲಿದೆ. ಇದಕ್ಕಾಗಿಯೇ ಲೋಕಸಭೆಯಲ್ಲಿ ಮೂರನೇ ಎರಡರಷ್ಟು (2/3) ಬಹುಮತವನ್ನು ಪಡೆಯಲು ಅದು ವಿಫಲ ಯತ್ನ ನಡೆಸುತ್ತಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.
ಈ ಕುರಿತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಬುಧವಾರ (ಜೂ.24) ಮಾತನಾಡಿದ್ದು, ಮಹಿಳಾ ಮೀಸಲಾತಿಯ ನೆಪದಲ್ಲಿ ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆಯನ್ನು ಮುನ್ನೆಲೆಗೆ ತರುವುದು ಕೇಸರಿ ಪಕ್ಷದ ಮೊದಲ ತಂತ್ರವಾಗಿದೆ. ಆದರೆ ಅದರ "ನಿಜವಾದ ಮತ್ತು ಅಂತಿಮ ಗುರಿ" ಸಂವಿಧಾನ ಬದ್ಧವಾಗಿರುವ ಮೀಸಲಾತಿಯನ್ನು ಸಂಪೂರ್ಣವಾಗಿ ಕೊನೆಗೊಳಿಸುವುದಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ ಎಂದು ಪಿಟಿಐ ತಿಳಿಸಿದೆ.
ಕೇಂದ್ರ ಸರ್ಕಾರಕ್ಕೆ ಮಹಿಳಾ ಮೀಸಲಾತಿಯ ಬಗ್ಗೆ ನಿಜವಾದ ಕಾಳಜಿ ಇದ್ದರೆ, ಅದನ್ನು ಕ್ಷೇತ್ರ ಪುನರ್ವಿಂಗಡಣೆಗೆ ಲಿಂಕ್ ಮಾಡಬಾರದು. ಬದಲಿಗೆ, ಪ್ರಸ್ತುತ ಇರುವ 543 ಲೋಕಸಭಾ ಕ್ಷೇತ್ರಗಳ ಬಲದ ಮೇಲೆಯೇ ಮುಂಬರುವ 2029 ರ ಸಾರ್ವತ್ರಿಕ ಚುನಾವಣೆಗೆ 'ನಾರಿ ಶಕ್ತಿ ವಂದನ ಅಧಿನಿಯಮ'ವನ್ನು ತಕ್ಷಣ ಜಾರಿಗೆ ತರಬೇಕು ಎಂದು ಸವಾಲು ಹಾಕಿದರು.
ವಿಪಕ್ಷಗಳ ವಿಭಜನೆಗೆ ಅಮಿತ್ ಶಾ ಯತ್ನ
ವಿರೋಧ ಪಕ್ಷಗಳಲ್ಲಿ ಬಿರುಕು ಉಂಟುಮಾಡಲು ಗೃಹ ಸಚಿವ ಅಮಿತ್ ಶಾ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ಹಿರಿಯ ಕಾಂಗ್ರೆಸ್ ನಾಯಕರು, ಲೋಕಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತ ಪಡೆಯಲು ಬಿಜೆಪಿ ನಡೆಸುತ್ತಿರುವ ತಂತ್ರಗಳನ್ನು ಬಿಚ್ಚಿಟ್ಟಿದ್ದಾರೆ. ಕಳೆದ ಏ. 17 ರಂದು ಲೋಕಸಭೆಯಲ್ಲಿ ಸಂವಿಧಾನ ತಿದ್ದುಪಡಿ ಮಸೂದೆಗಳನ್ನು ಅಂಗೀಕರಿಸಲು ಸರ್ಕಾರ ವಿಫಲವಾದ ಹಿನ್ನೆಲೆಯಲ್ಲಿ, ಇತ್ತೀಚಿನ ರಾಜಕೀಯ ಪಕ್ಷಾಂತರಗಳನ್ನು ಅವರು ಇದಕ್ಕೆ ತಳುಕು ಹಾಕಿದ್ದಾರೆ.
"ಭಾರತೀಯ ರಾಜಕೀಯದ ಸ್ವಯಂ ಘೋಷಿತ ಚಾಣಕ್ಯ ಏ. 17 ರಂದು ಲೋಕಸಭೆಯಲ್ಲಿ ತೀವ್ರ ಮುಖಭಂಗ ಅನುಭವಿಸಿದರು. ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಅವರಿಗೆ 298 ಕ್ಕಿಂತ ಹೆಚ್ಚು ಮತಗಳನ್ನು ಸಂಗ್ರಹಿಸಲು ಸಾಧ್ಯವಾಗಲಿಲ್ಲ. ಈಗ ಆ ಅವಮಾನದ ಸೇಡನ್ನು ತೀರಿಸಿಕೊಳ್ಳಲು ಮತ್ತು ಮೂರನೇ ಎರಡರಷ್ಟು ಬಹುಮತ ತಲುಪಲು ಅವರು ಪಕ್ಷ ಒಡೆಯುವ ರಾಜಕಾರಣ ಅನುಸರಿಸುತ್ತಿದ್ದಾರೆ" ಎಂದು ಅಮಿತ್ ಶಾ ವಿರುದ್ಧ ಹರಿಹಾಯ್ದರು. ಬಿಜೆಪಿಯು ಚುನಾವಣಾ ಪ್ರಚಾರದ ವೇಳೆ 400 ಕ್ಕೂ ಹೆಚ್ಚು ಸೀಟು ಘೋಷಣೆ ಕೂಗಿದ್ದೇ ಸಂವಿಧಾನ ತಿದ್ದುಪಡಿ ಮಾಡಿ ಮೀಸಲಾತಿ ಕೊನೆಗೊಳಿಸಲು ಎಂದು ರಮೇಶ್ ಪುನರುಚ್ಚರಿಸಿದರು.
'ಕ್ಷೇತ್ರ ಪುನರ್ವಿಂಗಡಣೆ ಕೇವಲ ಮುಖವಾಡ'
ಬಿಜೆಪಿಯ ತಕ್ಷಣದ ಗುರಿ ಪುನರ್ವಿಂಗಡಣೆ ನಿರ್ಣಯವಾಗಿದ್ದರೂ, ಅದರ ವಿಶಾಲ ಮತ್ತು ಅಂತಿಮ ಉದ್ದೇಶ ಮೀಸಲಾತಿಯನ್ನು ದುರ್ಬಲಗೊಳಿಸುವುದೇ ಆಗಿದೆ. ಈ ನಿಟ್ಟಿನಲ್ಲಿ ಆರ್‌ಎಸ್‌ಎಸ್ ಮತ್ತು ಬಿಜೆಪಿ ನಾಯಕರ ಹಳೆಯ ಹೇಳಿಕೆಗಳೇ ಸಾಕ್ಷಿ ಎಂದು ಅವರು ಉಲ್ಲೇಖಿಸಿದರು. ಏ. 17 ರಂದು ನಡೆದ ಮತದಾನದ ವೇಳೆ ವಿರೋಧ ಪಕ್ಷಗಳು ವಿರೋಧಿಸಿದ್ದು ಮಹಿಳಾ ಮೀಸಲಾತಿಯನ್ನಲ್ಲ, ಬದಲಾಗಿ ಅದರೊಂದಿಗೆ ತಳುಕು ಹಾಕಲಾಗಿದ್ದ ಕ್ಷೇತ್ರ ಪುನರ್ವಿಂಗಡಣೆಯ ಅಪಾಯಕಾರಿ ಪ್ರಸ್ತಾಪವನ್ನು ವಿರೋಧಿಸಿದವು ಎಂದು ಸ್ಪಷ್ಟಪಡಿಸಿದ ಅವರು, "ಸಂಸದರ ಸಂಖ್ಯೆಯನ್ನು 500 ರಿಂದ 815 ಕ್ಕೆ ಹೆಚ್ಚಿಸಲು ಸರ್ಕಾರ ಬಯಸಿದೆ. ಈಗಿರುವ 500 ಕ್ಕೂ ಹೆಚ್ಚು ಸಂಸದರಿಗೇ ಮಾತನಾಡಲು ಸರಿಯಾಗಿ ಅವಕಾಶ ಸಿಗುತ್ತಿಲ್ಲ, ಇನ್ನು 815 ಸಂಸದರನ್ನು ತಂದು ಏನು ಮಾಡುತ್ತಾರೆ?" ಎಂದು ಪ್ರಶ್ನಿಸಿದರು. ಅಲ್ಲದೆ, ಕ್ಷೇತ್ರ ಪುನರ್ವಿಂಗಡಣೆ ನಡೆಸುವಲ್ಲಿ ಚುನಾವಣಾ ಆಯೋಗದ ವಿಶ್ವಾಸಾರ್ಹತೆಯನ್ನೂ ಅವರು ಇದೇ ವೇಳೆ ಪ್ರಶ್ನಿಸಿದರು.
ಸಂಖ್ಯಾಬಲದ ಲೆಕ್ಕಾಚಾರ ಹೀಗಿದೆ
ಸಾಂವಿಧಾನಿಕ ತಿದ್ದುಪಡಿಗಳಿಗೆ ಅಗತ್ಯವಿರುವ ಸಂಖ್ಯಾಬಲದ ಕೊರತೆ ಬಿಜೆಪಿಗೆ ಇನ್ನೂ ಇದೆ ಎಂದು ರಮೇಶ್ ಸಮರ್ಥಿಸಿಕೊಂಡರು. ಏ. 17 ರಂದು ನಡೆದ ಮತದಾನದ ಲೆಕ್ಕಾಚಾರದಂತೆ ಮಸೂದೆಯ ಪರ ಬಿದ್ದ ಮತಗಳು 298, ಮಸೂದೆಯ ವಿರುದ್ಧ ಬಿದ್ದ ಮತಗಳು 230, ಮೂರನೇ ಎರಡರಷ್ಟು ಬಹುಮತಕ್ಕೆ ಅಗತ್ಯವಿದ್ದ ಕನಿಷ್ಠ ಮತಗಳು 352. ಅಗತ್ಯವಿದ್ದ ಮತಗಳಿಗಿಂತ ಸರ್ಕಾರ ತೀರಾ ಕಡಿಮೆ ಮತಗಳನ್ನು ಪಡೆದಿದ್ದರಿಂದ ತಿದ್ದುಪಡಿ ಮಸೂದೆ ಬಿದ್ದುಹೋಯಿತು. ಬಿಜೆಪಿ ಎಷ್ಟೇ ಪ್ರಯತ್ನಿಸಿದರೂ ಲೋಕಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತವನ್ನು ಪಡೆಯಲು ಸಾಧ್ಯವಿಲ್ಲ ಎಂದು ಜೈರಾಮ್ ರಮೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

