
ನೂತನ ಸಾರಥಿ ನಿತಿನ್ ನಬಿನ್: ಯುವಕರಿಗೆ ಅಗ್ರ ಪಟ್ಟ ಕಟ್ಟುವ ಕಾಂಗ್ರೆಸ್ ಹಾದಿಯಲ್ಲಿ ಬಿಜೆಪಿ
45 ವರ್ಷ ವಯಸ್ಸಿನ ಯುವ ನಾಯಕ ಈಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ. ಹಾಗೆ ಮಾಡುವ ಮೂಲಕ ಮೋದಿ-ಶಾ ಜೋಡಿಯ ಕೈಚಳಕ ಕೆಲಸ ಮಾಡಿದೆ. ಇದು ಕೈ ಪಕ್ಷದ ಒಂದು ಕಾಲದ ಕಾರ್ಯತಂತ್ರದ ಪಡಿಯಚ್ಚು.
“ಮಾಸ್ಟರ್-ಸ್ಟ್ರೋಕ್!” ಆಡಳಿತ ಪಕ್ಷ ಇಡುವ ಪ್ರತಿಯೊಂದು ಹೆಜ್ಜೆಯನ್ನೂ ಹೀಗೆಂದು ಬಣ್ಣಿಸುತ್ತ ಮುಖಸ್ತುತಿ ಮಾಡಲಾಗುತ್ತದೆ. ಚುನಾವಣೆಯ ಮೇಲೆ ಪ್ರಾಬಲ್ಯವನ್ನು ಸಾಧಿಸಿರುವ ಇಂತಹ ಸಮಯದಲ್ಲಿ ಯಾವುದೇ ರೀತಿಯ ಅಪಾಯಗಳನ್ನು ಎದುರಿಸಲು ಪಕ್ಷ ಸನ್ನದ್ಧವಾಗಿದೆ. ಹಾಗಾಗಿ ನೂತನ ಅಧ್ಯಕ್ಷ ನಿತಿನ್ ನಬಿನ್ ಅವರ ನೇಮಕವನ್ನು ಅತ್ಯಂತ ಸಕಾಲಿಕವಾಗಿ ಕೈಗೊಳ್ಳಲಾಗಿರುವ ಒಂದು ʼಪೀಳಿಗೆಯ ಬದಲಾವಣೆʼಯ ಸಂಕೇತ ಎಂದು ಕೊಂಡಾಡಲಾಗುತ್ತಿದೆ. ಅದೇ ರೀತಿ ವಯಸ್ಸಿನಲ್ಲಿ ತಮಗಿಂತ ತೀರಾ ಕಿರಿಯರಾದ ʼಅಧ್ಯಕ್ಷʼರ ಮಾತನ್ನು ಶಿರಸಾವಹಿಸಿ ಪಾಲಿಸುವ ಒಬ್ಬ ಸಾಮಾನ್ಯ ಕಾರ್ಯಕರ್ತ ತಾವೆಂದು ಹೇಳಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಚಾರ ಪ್ರೇರಿತ ಮಾತನ್ನು ಮೂರನೇ ಬಾರಿ ಪ್ರಧಾನಿಯಾದವರ ʼವಿನಯವಂತಿಕೆʼ ಎಂದು ಅತಿಯಾಗಿಯೂ ಬಿಂಬಿಸಲಾಗುತ್ತಿದೆ.
ಆದರೆ ಇಂತಹ ಭಟ್ಟಂಗಿತನದ ಮಾತುಗಳು ಬಿಜೆಪಿಯ ಸ್ವಂತ ಇತಿಹಾಸವನ್ನು ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಈ ಕೇಸರಿ ಪಕ್ಷವು ತನ್ನ ಹಿಂದಿನ ʼಅಟಲ್-ಆಡ್ಚಾಣಿ ಯುಗʼದ ಕಾರ್ಯವೈಖರಿಯಿಂದ ಹೇಗೆ ಬದಲಾಗಿದೆ ಎಂಬುದನ್ನು ಮರೆಮಾಚುತ್ತವೆ.
ಹೀಗೆಲ್ಲ ವಿಶ್ಲೇಷಣೆ ಮಾಡುವವರು ಭಾರತದ ರಾಜಕೀಯ ಭೂಪಟವನ್ನು ಆಳುತ್ತಿದ್ದ ಕಾಲದಲ್ಲಿ ಕಾಂಗ್ರೆಸ್ ಪಕ್ಷವು ಹೇಗೆ ವರ್ತಿಸುತ್ತಿತ್ತೋ ಅದೇ ಹಾದಿಯಲ್ಲಿ ಬಿಜೆಪಿ ಕೂಡ ಸಾಗಿದೆ ಎಂಬುದನ್ನು ಗಮನಿಸುವ ಗೋಜಿಗೆ ಹೋಗುತ್ತಿಲ್ಲ.
ತಮ್ಮ ನಲವತ್ತೈದನೇ ವಯಸ್ಸಿನಲ್ಲಿ ಗುರುತರ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡಿರುವ ನಬಿನ್ ಅವರು ಬಿಜೆಪಿಯ ಅತ್ಯಂತ ಕಿರಿಯ ಅಧ್ಯಕ್ಷರು ಎಂಬುದರಲ್ಲಿ ಎರಡು ಮಾತಿಲ್ಲ. ಈ ವಯಸ್ಸಿನಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸಲು ಕಠಿಣ ಪರಿಶ್ರಮ ಮತ್ತು ಎಡೆಬಿಡದ ಓಡಾಟವನ್ನು ಸಮರ್ಥವಾಗಿ ನಿರ್ವಹಿಸಬಲ್ಲರು. ಮೋದಿ ಅವರು ತಮ್ಮ ಸಹೋದ್ಯೋಗಿಗಳಿಂದ ನಿರೀಕ್ಷಿಸುತ್ತಿರುವುದು ಕೂಡ ಇದನ್ನೇ ಆಗಿದೆ. ಆದರೆ ಬಿಜೆಪಿ ಪದಾಧಿಕಾರಿಗಳು ಹೇಳದೇ ಇರುವ ಒಂದು ಮಾತು ಕೂಡ ಇದೆ; ಅದೆಂದರೆ ಮೋದಿ ಯುಗಕ್ಕಿಂತ ಮೊದಲಿನಿಂದಲೂ ಪಕ್ಷವು ಯುವ ನಾಯಕರಿಗೆ ಪ್ರಮುಖ ಪಾತ್ರಗಳ ಹೊಣೆಯನ್ನು ಹೊರಿಸುವ ಸಂಪ್ರದಾಯವನ್ನು ಮೊದಲಿನಿಂದಲೂ ಹೊಂದಿದೆ.
ಮುಂಚೂಣಿಗೆ ಬಂದ ಯುವ ನಾಯಕರು
ಸ್ವತಃ ನರೇಂದ್ರ ಮೋದಿ ಅವರು ಸಂಘದ ನಾನಾ ಜವಾಬ್ದಾರಿಗಳಿಗೆ ಹೆಗಲು ಕೊಟ್ಟ ಬಳಿಕವೇ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಆಗ ಅವರಿಗಿನ್ನೂ 52 ವರ್ಷ ವಯಸ್ಸು. ಈಗ 66 ವರ್ಷ ವಯಸ್ಸಾಗಿರುವ ಶಿವರಾಜ್ ಸಿಂಗ್ ಚವ್ಹಾಣ್ ಅವರು ಮೊದಲ ಬಾರಿಗೆ ಮಧ್ಯ ಪ್ರದೇಶದ ಮುಖ್ಯಮಂತ್ರಿಯಾದಾಗ ಅವರಿಗೆ ಕೇವಲ 46 ವರ್ಷ ವಯಸ್ಸು. ಅದೇ ರೀತಿ ಅವರ ಛತ್ತೀಸಗಢದ ಸಹವರ್ತಿ ರಮಣ್ ಸಿಂಗ್ ಅವರು ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಅವರ ವಯಸ್ಸು 51 ವರ್ಷ.
ಇನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಉದಾಹರಣೆಯನ್ನೇ ತೆಗೆದುಕೊಳ್ಳಿ, ಅವರು ಉತ್ತರ ಪ್ರದೇಶ ಮುಖ್ಯಮಂತ್ರಿಯಾದಾಗ 51 ವರ್ಷ ವಯಸ್ಸು ಮತ್ತು 2005ರಲ್ಲಿ ಮೊದಲ ಬಾರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಪದವಿಯ ಹೊಣೆ ಹೊತ್ತಾಗ 55 ವರ್ಷ. ಅವರ ಉತ್ತರಾಧಿಕಾರಿಯಾಗಿ ನಿತಿನ್ ಗಡ್ಕರಿ ಅವರು ಅಧಿಕಾರ ವಹಿಸಿಕೊಂಡಾಗ ಅವರ ವಯಸ್ಸು ಕೇವಲ 48 ವರ್ಷ ಮಾತ್ರ.
ಅದೇ ರೀತಿ ದಿವಂಗತ ಸುಷ್ಮಾ ಸ್ವರಾಜ್ ಅವರು ದೆಹಲಿಯ ಮುಖ್ಯಮಂತ್ರಿ ಪದವಿಯನ್ನು ವಹಿಸಿಕೊಂಡ ಸಂದರ್ಭದಲ್ಲಿ ಅವರಿಗೆ ಕೇವಲ 44 ವರ್ಷ ವಯಸ್ಸು. ಬಳಿಕ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕಿಯೂ ಆದರು. ಆಗ ಅವರಿಗೆ 57 ವರ್ಷ ವಯಸ್ಸು. 2009ರಲ್ಲಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿ ಹೊಣೆ ವಹಿಸಿಕೊಂಡಾಗ ಅರುಣ್ ಜೇಟ್ಲಿ ಅವರಿಗೆ 56 ವರ್ಷ.
ಬಿಜೆಪಿಯ ನಿರ್ಣಾಯಕ ಜವಾಬ್ದಾರಿಗಳನ್ನು (ಪಕ್ಷದ ಅಧ್ಯಕ್ಷರು, ಮುಖ್ಯಮಂತ್ರಿಗಳು ಅಥವಾ ಕೇಂದ್ರ ಸಚಿವರು)ವಹಿಸಿಕೊಂಡ ಇತರ ಯುವ ನಾಯಕರಲ್ಲಿ ಮೋದಿ ಅವರ ಅತ್ಯಾಪ್ತ ಅಮಿತ್ ಶಾ (49ನೇ ವಯಸ್ಸಿನಲ್ಲಿ ಬಿಜೆಪಿ ಅಧ್ಯಕ್ಷ), ದಿ.ಪ್ರಮೋದ್ ಮಹಾಜನ್, ಅನಂತ್ ಕುಮಾರ್, ಗೋಪಿನಾಥ್ ಮುಂಡೆ, ಶಹನವಾಜ್ ಹುಸೇನ್, ಮುಖ್ತಾರ್ ಅಬ್ಬಾಸ್ ನಖ್ವಿ, ಉಮಾ ಭಾರತಿ, ಬಿಪ್ಲವ್ ದೇವ್ ಮುಂತಾದವರು ಈ ಪಟ್ಟಿಯಲ್ಲಿ ಇದ್ದಾರೆ.
ಪಕ್ಷದಲ್ಲಿ ಇತಿಹಾಸವೇ ಹೀಗಿರುವಾಗ ನಿತಿನ್ ನಬಿನ್ ಅವರು ಬಿಜೆಪಿ ಅಧ್ಯಕ್ಷ ಪದವಿಯನ್ನು ಅಲಂಕರಿಸಿದ ಅತ್ಯಂತ ಕಿರಿಯ ನಾಯಕ ಎಂಬುದನ್ನು ಒಪ್ಪಿಕೊಳ್ಳಬಹುದಾದರೂ ಅವರು ಪಕ್ಷದೊಳಗೆ ಯಾವುದೇ ಹೊಸ ಮೈಲಿಗಲ್ಲನ್ನು ಸ್ಥಾಪಿಸುತ್ತಿಲ್ಲ ಎಂಬುದನ್ನೂ ಗಮನಿಸಬೇಕು. ನಬಿನ್ ಅವರ ಆಯ್ಕೆಯನ್ನು ʼಚುನಾವಣೆʼ ಎಂದು ಕರೆಯುವುದು ಮೂರ್ಖತನವಾಗುತ್ತದೆ. ಯಾಕೆಂದರೆ ಬಿಜೆಪಿಯ 45 ವರ್ಷಗಳ ಇತಿಹಾಸದಲ್ಲಿ ಪಕ್ಷದ ಅಧ್ಯಕ್ಷರನ್ನು ಯಾವತ್ತೂ ಸರ್ವಾನುಮತದಿಂದಲೇ ಆಯ್ಕೆ ಮಾಡಲಾಗುತ್ತದೆ. ಬದಲಾಗಿ ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳಿರುವ ನೈಜ ಚುನಾವಣೆಯ ಮೂಲಕ ಅಲ್ಲ.
ಮೋದಿ-ಶಾ ಜೋಡಿಯ ಮೇಲುಗೈ
ಆದರೆ ನಬಿನ್ ಅವರ ಈ ಆಯ್ಕೆಯು ಪಕ್ಷದ ಮೇಲೆ ಮೋದಿ-ಶಾ ಜೋಡಿಯ ಆಟವೇ ಮೇಲುಗೈ ಸಾಧಿಸಿದೆ, ಅವರ ಹಿಡಿತವೇ ಬಿಗಿಯಾಗಿದೆ ಎಂಬುದರ ಸ್ಪಷ್ಟ ಸೂಚನೆಯಾಗಿದೆ. ಇಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ನೇಮಕದಂತಹ ಪ್ರಮುಖ ನಿರ್ಧಾರಗಳನ್ನು ಪಕ್ಷದ ಇತರ ಹಿರಿಯ ನಾಯಕರೊಂದಿಗೆ ಯಾವುದೇ ಚರ್ಚೆ ನಡೆಸದೇ ಕೈಗೊಳ್ಳಲಾಗುತ್ತಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ,.
ಪಕ್ಷದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅಧಿಕೃತ ಅಧ್ಯಕ್ಷೀಯ ಅಭ್ಯರ್ಥಿಗೆ ಸವಾಲು ಹಾಕುವ ಹಂತಕ್ಕೆ ತಲುಪಿದ್ದ ಏಕೈಕ ನಾಯಕರಾದ ಕೇಂದ್ರದ ಮಾಜಿ ಸಚಿವ ಯಶವಂತ್ ಸಿನ್ಹಾ ಅವರು ಅಂದಿನ ಘಟನೆಯನ್ನು ಹೀಗೆ ನೆನಪಿಸಿಕೊಳ್ಳುತ್ತಾರೆ; “೨೦೧೩ರಲ್ಲಿ ಅಧಿಕೃತ ಅಭ್ಯರ್ಥಿಯ ವಿರುದ್ಧ (ಹಣಕಾಸಿನ ಅಕ್ರಮದ ಆರೋಪ ಎದುರಿಸುತ್ತಿದ್ದ ನಿತಿನ್ ಗಡ್ಕರಿ ಅವರಿಗೆ ಮತ್ತೊಂದು ಅವಧಿಗೆ ಅವಕಾಶ ನೀಡಲು ನಿರ್ಧರಿಸಿದಾಗ) ಪ್ರತಿಭಟನೆಯ ಸಂಕೇತವಾಗಿ ಅಧ್ಯಕ್ಷೀಯ ಚುನಾವಣೆಯನ್ನು ಸ್ಪರ್ಧಿಸಲು ನಿರ್ಧರಿಸಿದೆ. ಆಗ ಪಕ್ಷದ ಇಡೀ ನಾಯಕತ್ವವು ನನ್ನ ಕಳವಳವನ್ನು ಮುಂದಿಟ್ಟುಕೊಂಡು ಸುದೀರ್ಘ ಚರ್ಚೆ ನಡೆಸಿತು. ಅಂತಿಮವಾಗಿ ಮತ್ತೊಬ್ಬರನ್ನು (ರಾಜನಾಥ್ ಸಿಂಗ್) ಅಧಿಕೃತ ಅಭ್ಯರ್ಥಿಯನ್ನಾಗಿ ಮಾಡಲು ನಿರ್ಧರಿಸಲಾಯಿತು. ನನ್ನ ಆಕ್ಷೇಪಣೆಗಳಿಗೆ ಪರಿಹಾರ ಸಿಕ್ಕಿದ ಕಾರಣದಿಂದಾಗಿ ನಾಮಪತ್ರವನ್ನು ಹೊಂದಿದ್ದರೂ ಚುನಾವಣೆಗೆ ಸ್ಪರ್ಧಿಸಲಿಲ್ಲ.”
ಮೋದಿ ಅವರ ಬಿಜೆಪಿ ಹಿಂದಿನ ಕಾಲದಂತಿಲ್ಲ ಎಂದು ಮಾತು ಮುಂದುವರಿಸುವ ಸಿನ್ಹಾ ಅವರು, “ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್.ಕೆ.ಆಡ್ವಾಣಿ ಅವರ ಕಾಲದಲ್ಲಿ ಪಕ್ಷವು ತೀರಾ ಸಣ್ಣ ನೇಮಕಾತಿ ಮಾಡಬೇಕಿದ್ದರೂ ಸಹೋದ್ಯೋಗಿಗಳ ಜೊತೆ ಸಮಾಲೋಚನೆ ನಡೆಸುತ್ತಿತ್ತು ಮತ್ತು ಸಂಸದೀಯ ಮಂಡಳಿಯ ಔಪಚಾರಿಕ ಸಭೆಗಳನ್ನು ಕರೆಯಲಾಗುತ್ತಿತ್ತು. ಆದರೆ ಇಂದು ಅಂತಹುದಕ್ಕೆಲ್ಲ ಕಿಮ್ಮತ್ತಿಲ್ಲ. ಯಾಕೆಂದರೆ ಕೇವಲ ಇಬ್ಬರು ವ್ಯಕ್ತಿಗಳೇ ಎಲ್ಲ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ ಮತ್ತು ಪಕ್ಷದಲ್ಲಿ ಯಾರೊಬ್ಬರಿಗೂ ಕೂಡ ಅವರ ಮುಂದೆ ನಿಂತು ಮಾತನಾಡುವ ಧೈರ್ಯವೇ ಇಲ್ಲ,” ಎಂದು ನಿಷ್ಠುರ ನುಡಿಯಲ್ಲಿ ಹೇಳುತ್ತಾರೆ.
ಮೋದಿ ಮತ್ತು ಶಾ ಅವರ ಪಕ್ಷದ ನಿರ್ವಹಣೆಯ ಬಗ್ಗೆ ತಿಂಗಳುಗಟ್ಟಲೆ ಟೀಕೆಗಳನ್ನು ಮಾಡಿ ಪಕ್ಷ ತೊರೆದ ಒಬ್ಬ ಅತೃಪ್ತ ವ್ಯಕ್ತಿಯ ಪ್ರಲಾಪ ಎಂದು ಯಶವಂತ ಸಿನ್ಹಾ ಅವರ ಮಾತುಗಳನ್ನು ತಳ್ಳಿಹಾಕಬಹುದು. ಆದರೆ, ಬಿಜೆಪಿಯಲ್ಲೇ ಸೇವೆಯಲ್ಲಿರುವ ಸ್ಪಷ್ಟ ಕಾರಣಗಳಿಗಾಗಿ ಅನಾಮಧೇಯರಾಗಿ ಉಳಿಯಲು ಇಚ್ಛಿಸಿದ, ಕನಿಷ್ಠ ಮೂವರು ಹಿರಿಯ ನಾಯಕರು 'ದಿ ಫೆಡರಲ್' ಜೊತೆ ಮಾತನಾಡುತ್ತಾ,"ಅಧಿಕೃತ ಘೋಷಣೆ ಹೊರಬೀಳುವ ಕೆಲವೇ ಗಂಟೆಗಳ ಮೊದಲು ನಬಿನ್ ಬಿಜೆಪಿ ಅಧ್ಯಕ್ಷರಾಗುತ್ತಾರೆ ಎಂಬ ವಿಷಯ ಆ ಇಬ್ಬರನ್ನು (ಮೋದಿ ಮತ್ತು ಶಾ) ಹೊರತುಪಡಿಸಿ ಬೇರೆ ಯಾರಿಗೂ ತಿಳಿದಿರಲಿಲ್ಲ" ಎಂದು ಒಪ್ಪಿಕೊಂಡಿದ್ದಾರೆ.
ನಬಿನ್ ಅವರ ಸ್ಥಾನಕ್ಕೆ ಸಂಭವನೀಯ ಅಭ್ಯರ್ಥಿಯೆಂದು ಬಿಂಬಿಸಲಾಗಿದ್ದ ಒಬ್ಬ ಕೇಂದ್ರ ಸಚಿವರು 'ದಿ ಫೆಡರಲ್'ಗೆ ಹೀಗೆ ಹೇಳಿದರು: "ಪಕ್ಷವು ಈಗ ಹೆಜ್ಜೆ ಹಾಕುತ್ತಿರುವ ರೀತಿಯ ಬಗ್ಗೆ ನೀವು ಒಂದು ಸಂಗತಿಯನ್ನು ಅರ್ಥಮಾಡಿಕೊಳ್ಳಬೇಕು; ಒಂದು ವೇಳೆ ನಿಮ್ಮ ಹೆಸರು ಚರ್ಚೆಯಾಗುತ್ತಿದೆ ಎಂದರೆ ನೀವು ಆ ಹುದ್ದೆಯ ರೇಸ್‌ನಿಂದ ಹೊರಬಿದ್ದಿದ್ದೀರಿ ಎಂದೇ ಅರ್ಥ. ಯಾರಿಗೆ ಯಾವ ಜವಾಬ್ದಾರಿ ಸಿಗುತ್ತದೆ ಎಂಬುದು ಕೇವಲ ಇಬ್ಬರಿಗೆ ಮಾತ್ರ ತಿಳಿದಿರುತ್ತದೆ. ಅವರ ಅಭಿಪ್ರಾಯ ಮಾತ್ರ ಇಲ್ಲಿ ಮುಖ್ಯವಾಗುತ್ತದೆ. ಉಳಿದಂತೆ ಹಿರಿತನ, ಅನುಭವ, ಕಠಿಣ ಪರಿಶ್ರಮ, ಸಹೋದ್ಯೋಗಿಗಳೊಂದಿಗಿನ ಬಾಂಧವ್ಯ, ಅಥವಾ ಸಂಘದ (ಆರ್‌ಎಸ್‌ಎಸ್) ಜೊತೆಗಿನ ಸಂಬಂಧ ಯಾವುದೂ ಗಣನೆಗೆ ಬರುವುದಿಲ್ಲ.”
ವಿವಾದಾತ್ಮಕ ಆಯ್ಕೆಗಳು
ಇಂದಿನ ಬಿಜೆಪಿಯ ಈ ವಾಸ್ತವವೇ, ಅಟಲ್-ಅಡ್ವಾಣಿ ಯುಗದ ನಾಯಕರು 'ಅರ್ಹ ಅಭ್ಯರ್ಥಿಗಳು' ಅಥವಾ 'ಸಹಜ ಆಯ್ಕೆ' ಎಂದು ಭಾವಿಸಬಹುದಾದ ನಾಯಕರನ್ನು ಬದಿಗೊತ್ತಿ, ಅವರ ಬದಲಿಗೆ ಈವರೆಗೆ ಯಾವುದೇ ಪರೀಕ್ಷೆಗೆ ಒಡ್ಡಿಕೊಳ್ಳದ, ಅನುಭವವಿಲ್ಲದ ಮತ್ತು ಕೆಲವೊಮ್ಮೆ ವಿವಾದಾತ್ಮಕ ಅಥವಾ ವಿಫಲ ಹೊಂದಿದ ವ್ಯಕ್ತಿಗಳನ್ನು ನಾಯಕತ್ವದ ನಾನಾ ಪಾತ್ರಗಳ ಎತ್ತರಕ್ಕೆ ಏರಿಸುವಂತೆ ಮಾಡಿದೆ.
ಹರಿಯಾಣದ ಮುಖ್ಯಮಂತ್ರಿಯಾಗಿ ಮನೋಹರ್ ಲಾಲ್ ಖಟ್ಟರ್ ಅವರ ನೇಮಕ ಅಥವಾ ಆ ಸಮಯದಲ್ಲಿ ಮತ್ತು ನಂತರದ ದಿನಗಳಲ್ಲಿ ಹಿಮಾಚಲ ಪ್ರದೇಶದಲ್ಲಿ ಜೈರಾಮ್ ಠಾಕೂರ್, ಉತ್ತರಾಖಂಡದಲ್ಲಿ ತ್ರಿವೇಂದ್ರ ಸಿಂಗ್ ರಾವತ್, ತೀರತ್ ಸಿಂಗ್ ರಾವತ್ ಮತ್ತು ಪುಷ್ಕರ್ ಸಿಂಗ್ ಧಾಮಿ, ತ್ರಿಪುರಾದಲ್ಲಿ ಬಿಪ್ಲಬ್ ದೇಬ್, ರಾಜಸ್ಥಾನದಲ್ಲಿ ಭಜನ್ ಲಾಲ್ ಶರ್ಮಾ, ಮಧ್ಯಪ್ರದೇಶದಲ್ಲಿ ಮೋಹನ್ ಯಾದವ್, ಒಡಿಶಾದಲ್ಲಿ ಮೋಹನ್ ಮಾಝಿ ಇವರೆಲ್ಲರ ಆಯ್ಕೆಗಳು ಈ ಹೊಸ ಪದ್ಧತಿಗೆ ಉದಾಹರಣೆಗಳಾಗಿವೆ. ಮೋದಿಯವರನ್ನೇ ತನ್ನ ಏಕೈಕ ಆಧಾರಸ್ತಂಭವೆಂದು ನಂಬಿರುವ ಪಕ್ಷದಲ್ಲಿ ಈಗ ಇದು ಒಪ್ಪಿತ ಸಂಪ್ರದಾಯವಾಗಿ ಬದಲಾಗಿದೆ.
ಕಾಂಗ್ರೆಸ್ ಪ್ಲೇಬುಕ್-ನಿಂದ
ಪಕ್ಷದಲ್ಲಿ ದೀರ್ಘಕಾಲದಿಂದ ಮೂಲೆಗುಂಪಾಗಿರುವ ಬಿಜೆಪಿಯ ಮಾಜಿ ಮುಖ್ಯಮಂತ್ರಿಯೊಬ್ಬರು, ಇಂದಿನ ಪಕ್ಷದ ಕಾರ್ಯವೈಖರಿಯು “ಇಂದಿರಾ ಗಾಂಧಿಯವರ ನೇತೃತ್ವದ ಕಾಂಗ್ರೆಸ್ ನಲ್ಲಿ ನಾವೆಲ್ಲರೂ ಯಾವುದನ್ನು ಇಷ್ಟಪಡುತ್ತಿರಲಿಲ್ಲವೋ ಈಗ ಅವರದ್ದೇ ಫೋಟೊಕಾಪಿಯಾಗಿ ಮಾರ್ಪಟ್ಟಿದೆ,” ಎಂದು ಹೇಳುತ್ತಾರೆ. ಇಂದಿರಾ ಗಾಂಧಿ ಅವರು ಮುಖ್ಯಮಂತ್ರಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಮತ್ತು ರಾಜ್ಯ ಅಧ್ಯಕ್ಷರಂತಹ ಪ್ರಮುಖ ಸ್ಥಾನಗಳಿಗೆ ವ್ಯಕ್ತಿಯ ಅನುಭವಕ್ಕಿಂತ ಮಿಗಿಲಾಗಿ ತಮಗೆ ವೈಯಕ್ತಿಕವಾಗಿ ಯಾರು ಇಷ್ಟವಾಗುತ್ತಾರೋ ಅವರನ್ನೇ ನೇಮಿಸುತ್ತಿದ್ದರು.
“ಐದು ದಶಕಗಳ ಬಳಿಕ ಇಂದಿರಾ ಗಾಂಧಿಯವರು ಪಕ್ಷದಲ್ಲಿ ಪ್ರೋತ್ಸಾಹಿಸಿದ ವ್ಯಕ್ತಿಗಳಿಂದಾಗಿ ಮತ್ತು ಅವರು ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗಾಗಿ ರೂಪಸಿದ ಮಾದರಿಯಿಂದಾಗಿ ಇಂದು ಕಾಂಗ್ರೆಸ್ ಭಾರೀ ಬೆಲೆ ತೆರಬೇಕಾದ ಪರಿಸ್ಥಿತಿ ಬಂದಿದೆ. ಕಾಂಗ್ರೆಸ್ ತನಗೆ ತಾನೇ ಮಾಡಿಕೊಂಡ ಇಂತಹ ಪರಿಸ್ಥಿತಿಯಿಂದ ನಾವು ಪಾಠ ಕಲಿಯದೇ ಹೋದರೆ ೨೦, ೩೦ ಅಥವಾ ೪೦ ವರ್ಷಗಳ ನಂತರ ನಾವೂ ಕೂಡ ಇಂತಹುದೇ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ. ಆದರೆ ಮೋದಿ ಮತ್ತು ಶಾ ಅವರಿಗೆ ಇಂತಹ ವಿಚಾರಗಳ ಬಗ್ಗೆ ಯಾವುದೇ ಚಿಂತೆಯಿಲ್ಲ ಎಂಬುದು ಸ್ಪಷ್ಟ. ಯಾಕೆಂದರೆ ಆ ಪತನವನ್ನು ನೋಡಲು ಅವರು ಆಗ ಇರುವುದಿಲ್ಲ. ಹಾಗಾಗಿ ಅವರು ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ ಅಗತ್ಯ ಇರುವುದಿಲ್ಲ,” ಎಂದು ಆ ಮಾಜಿ ಮುಖ್ಯಮಂತ್ರಿ ವಿಶ್ಲೇಷಿಸುತ್ತಾರೆ,
ವಾಸ್ತವವಾಗಿ ಯುವಕರನ್ನು ಪಕ್ಷದ ಪ್ರಮುಖ ನಾಯಕತ್ವದ ಪಾತ್ರಗಳಿಗೆ ಭಡ್ತಿ ನೀಡುವ ಕ್ರಮವು ಮೋದಿ ಮತ್ತು ಶಾ ಅವರು ನೇರವಾಗಿ ಕಾಂಗ್ರೆಸ್ ಕಾರ್ಯತಂತ್ರದಿಂದಲೇ ಎರವಲು ಪಡೆದಂತೆ ಕಾಣುತ್ತಿದೆ.
1970ರ ದಶಕದ ಉತ್ತರಾರ್ಧದ ತುರ್ತುಪರಿಸ್ಥಿತಿಯ ನಂತರದ ಅವಧಿಯಿಂದ ಆರಂಭಿಸಿ 1980ರ ದಶಕದವರೆಗೆ, ಮೊದಲು ಇಂದಿರಾ ಗಾಂಧಿಯವರ ನೇತೃತ್ವದಲ್ಲಿ ಮತ್ತು ನಂತರ ರಾಜೀವ್ ಗಾಂಧಿಯವರ ಅಡಿಯಲ್ಲಿ, ಕಾಂಗ್ರೆಸ್ ಪಕ್ಷವು ಆ ಅವಧಿಯಲ್ಲಿ ಅನುಭವವಿಲ್ಲದ ಮತ್ತು ಯಾವುದೇ ಅಗ್ನಿಪರೀಕ್ಷೆಗೆ ಒಳಗಾಗದ ಹಲವಾರು ಯುವ ನಾಯಕರನ್ನು ಪಕ್ಷದ ನಾಯಕತ್ವದ ನಾನಾ ಶ್ರೇಣಿಗಳಿಗೆ ಭಡ್ತಿ ನೀಡಿತು. ಅವರಿಗೆ ರಾಜ್ಯಸಭಾ ನಾಮನಿರ್ದೇಶನಗಳು, ಸಚಿವ ಸ್ಥಾನಗಳು ಮತ್ತು ಪಕ್ಷದ ಪ್ರಮುಖ ಹುದ್ದೆಗಳನ್ನು ನೀಡುವ ಮೂಲಕ ಪುರಸ್ಕರಿಸಲಾಯಿತು.
ಗುಲಾಂ ನಬಿ ಆಜಾದ್, ಆನಂದ್ ಶರ್ಮಾ, ದಿಗ್ವಿಜಯ ಸಿಂಗ್, ರಮೇಶ್ ಚೆನ್ನಿತ್ತಾಲ, ಸುರೇಶ್ ಪಚೌರಿ, ಅಂಬಿಕಾ ಸೋನಿ ಮತ್ತು ಇತರ ಹಲವರು ಆ ಹಂತದಲ್ಲಿಯೇ ತಮ್ಮ ಬದುಕಿನ 'ದೊಡ್ಡ ರಾಜಕೀಯ ಅವಕಾಶ'ವನ್ನು ಪಡೆದಿದ್ದರು. ಕಾಲಾನಂತರದಲ್ಲಿ, ಇವರಲ್ಲಿ ಕೆಲವರು ಚುನಾವಣಾ ರಣತಂತ್ರಗಳಲ್ಲಿ ಪಳಗಿದ ನಾಯಕರಾಗಿ ಹೊರಹೊಮ್ಮಿದರು, ಕೆಲವರು ಸಾಂಘಿಕ ಕೆಲಸಗಳಲ್ಲಿ ಉತ್ತಮ ಪ್ರದರ್ಶನ ನೀಡಿದರು, ಇನ್ನು ಕೆಲವರು ಸಂಪೂರ್ಣ ಅವಕಾಶವಾದಿಗಳಾಗಿ ಬದಲಾದರು. ಇವರು ಪಕ್ಷದ ಪರಿಸ್ಥಿತಿ ಚೆನ್ನಾಗಿರುವ ತನಕ ಮಾತ್ರ ಪಕ್ಷಕ್ಕೆ ಅಂಟಿಕೊಂಡಿದ್ದು, ಪಕ್ಷದ ಚುನಾವಣಾ ಗ್ರಾಫ್-ನಲ್ಲಿ ಕುಸಿತ ಕಾಣುತ್ತಿದ್ದಂತೆಯೇ ಪಕ್ಷಾಂತರಕ್ಕೆ ಮೋರೆ ಹೋದರು.
ನಂತರ, ರಾಹುಲ್ ಗಾಂಧಿಯವರು ಮೊದಲು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ನಂತರ 2013 ರಲ್ಲಿ ಪಕ್ಷದ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗ, ಹಿರಿಯರಿಗಿಂತ ಹೆಚ್ಚಾಗಿ ಯುವಕರಿಗೆ ಪ್ರಮುಖ ಪಾತ್ರಗಳನ್ನು ನೀಡಲು ಮತ್ತು ಅವರನ್ನು ಉತ್ತೇಜಿಸಲು ಮತ್ತೊಮ್ಮೆ ಹೊಸ ಒತ್ತು ನೀಡುವ ಕ್ರಮ ಶುರುವಾಯಿತು.
ದೇಶದ ನಾನಾ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಹುದ್ದೆಗಳಿಗೆ ಹೊಸ ಸರಣಿ ನೇಮಕಾತಿಗಳೇ ನಡೆದವು; ಮಧ್ಯಪ್ರದೇಶದಲ್ಲಿ ಅರುಣ್ ಯಾದವ್, ಜಾರ್ಖಂಡ್ನಲ್ಲಿ ಅಜೋಯ್ ಕುಮಾರ್, ತ್ರಿಪುರಾದಲ್ಲಿ ಪ್ರದ್ಯೋತ್ ಮಾಣಿಕ್ಯ ದೇವ್ ವರ್ಮಾ, ರಾಜಸ್ಥಾನದಲ್ಲಿ ಸಚಿನ್ ಪೈಲಟ್, ಗುಜರಾತ್ನಲ್ಲಿ ಅಮಿತ್ ಚಾವ್ಡಾ—ಹಾಗೆಯೇ ಯುಪಿಎ ಕಾಲದ ಕೇಂದ್ರ ಸಚಿವರಾದ ಮಿಲಿಂದ್ ದಿಯೋರಾ, ಜಿತಿನ್ ಪ್ರಸಾದ, ಜ್ಯೋತಿರಾದಿತ್ಯ ಸಿಂಧಿಯಾ ಸೇರಿದಂತೆ ಹಲವರನ್ನು ನೇಮಿಸಿ ಮುಂಚೂಣಿಗೆ ತರಲಾಯಿತು. ಈ ಹೊಸ ಪಲ್ಲಟವು ಪಕ್ಷದ ಹಳೆಯ ತಲೆಮಾರು (ವಿಪರ್ಯಾಸವೆಂದರೆ ಇವರು ಕೂಡ ಒಂದು ಕಾಲದಲ್ಲಿ ಇದೇ ರೀತಿಯ ಬದಲಾವಣೆಯ ಫಲಾನುಭವಿಗಳಾಗಿದ್ದರು) ಮತ್ತು 'ಯಂಗ್ ಟರ್ಕ್'ಗಳು ಎಂದು ಕರೆಯಲ್ಪಡುವ ಯುವ ನಾಯಕರ ನಡುವೆ ದೀರ್ಘಕಾಲದ ಸಂಘರ್ಷಕ್ಕೆ ಕಾರಣವಾಯಿತು. ಈ ಸಂಘರ್ಷವು ಕಾಲಾನಂತರದಲ್ಲಿ ಪಕ್ಷಕ್ಕೆ ಭಾರೀ ನಷ್ಟವನ್ನು ಉಂಟುಮಾಡಿತು ಮತ್ತು ಇಂದು ಕೂಡ ಕಾಂಗ್ರೆಸ್ಸನ್ನು ಅದು ಕಾಡುತ್ತಲೇ ಇದೆ.
ಮೋದಿಯ ಇಚ್ಛೆಯರಿತು ನಡೆದರೆ…
ಆ ಸೀಮಿತ ಅರ್ಥದಲ್ಲಿ ನಬಿನ್ ಅದೃಷ್ಟವಂತರಿರಬಹುದು. ಏಕೆಂದರೆ, ಮೋದಿಯವರ ಬಿಜೆಪಿಯಲ್ಲಿ ಪಕ್ಷದ ಆಂತರಿಕ ಪ್ರಜಾಪ್ರಭುತ್ವದ ಕೊರತೆಯಿರಬಹುದು ಮತ್ತು ಅದು ಕೇವಲ ತನ್ನ ಅಧಿನಾಯಕನ ಇಚ್ಛೆಯಂತೆ ಕಾರ್ಯನಿರ್ವಹಿಸಬಹುದು. ಆದರೆ ಕಾಂಗ್ರೆಸ್ಗೆ ಭಿನ್ನವಾಗಿ ಬಿಜೆಪಿ ಹೊಂದಿರುವ ಹೆಮ್ಮೆಯ ವಿಷಯವೆಂದರೆ ಅದರ ಆಂತರಿಕ ಪಕ್ಷದ ಶಿಸ್ತು. ಸಂಘವು ದಶಕಗಳಿಂದ ಕಲಿಸಿಕೊಟ್ಟಿರುವ ಈ ಶಿಸ್ತು, ಆ ಹಿನ್ನೆಲೆಯಿಂದ ಬಂದ ನಾಯಕರು ತಿರಸ್ಕಾರಕ್ಕೆ, ಅವಮಾನಕ್ಕೆ ಅಥವಾ ಮೂಲೆಗುಂಪು ಮಾಡಿದಾಗಲೂ ಕೂಡ (ಅಪರೂಪದ ವಿನಾಯಿತಿಗಳನ್ನು ಹೊರತುಪಡಿಸಿ) ಬಹಿರಂಗವಾಗಿ ಬಂಡಾಯವೇಳುವುದನ್ನು ತಡೆಯುತ್ತದೆ.
ಮೋದಿ ಅವರು ನಬಿನ್ ಅವರನ್ನು ತಮ್ಮ ಮುಖ್ಯಸ್ಥರೆಂದು ತೋರಿಸಿ, ತಮ್ಮನ್ನು ತಾವು ಒಬ್ಬ ʼಸಾಮಾನ್ಯ ಕಾರ್ಯಕರ್ತʼ ಎಂದು ಕರೆದುಕೊಂಡಾಗ, ಅವರು ತಮ್ಮ ಸಹೋದ್ಯೋಗಿಗಳಿಗೆ ವೈಯಕ್ತಿಕ ವಿನಯವನ್ನು ಪ್ರದರ್ಶಿಸುತ್ತಿಲ್ಲ. ಬದಲಿಗೆ, "ಪಕ್ಷದ ಈ ಹೊಸ ಅಧ್ಯಕ್ಷರು ನನ್ನ ಆಯ್ಕೆ, ಮತ್ತು ಬಂಡಾಯದ ಮನಸ್ಥಿತಿಯಲ್ಲಿರುವ ಯಾರೇ ಆಗಲಿ ಶಿಸ್ತಿಗೆ ಅಂಟಿಕೊಂಡಿರಬೇಕು ಅಥವಾ ಮೂಲೆಗುಂಪಾಗಲು ಸಿದ್ಧರಿರಬೇಕು" ಎಂಬುದನ್ನು ನೆನಪಿಸುತ್ತಿದ್ದಾರೆ. ಏಕೆಂದರೆ ಬಿಜೆಪಿಯ ಶಿಸ್ತು ಈಗ ನೇರವಾಗಿ ಮತ್ತು ಅವಿಭಾಜ್ಯವಾಗಿ ಮೋದಿಯವರ ಇಚ್ಛೆಯೊಂದಿಗೇ ತಳಕು ಹಾಕಿಕೊಂಡಿದೆ ಎಂಬುದು ನಿಚ್ಚಳವಾಗಿ ಗೋಚರಿಸುತ್ತಿದೆ.

