ಭಾರತದ AI ಶೃಂಗಸಭೆಯಿಂದ ಹೊರಗುಳಿದ ಬಿಲ್ ಗೇಟ್ಸ್- ಎಪ್ಸ್ಟೀನ್ ಫೈಲ್ಸ್ ವಿವಾದ ಕಾರಣವೇ?
x
ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್(ಸಂಗ್ರಹ ಚಿತ್ರ)

ಭಾರತದ AI ಶೃಂಗಸಭೆಯಿಂದ ಹೊರಗುಳಿದ ಬಿಲ್ ಗೇಟ್ಸ್- ಎಪ್ಸ್ಟೀನ್ ಫೈಲ್ಸ್ ವಿವಾದ ಕಾರಣವೇ?

ನವದೆಹಲಿಯಲ್ಲಿ ನಡೆಯುತ್ತಿರುವ 'ಇಂಡಿಯಾ AI ಇಂಪ್ಯಾಕ್ಟ್ ಸಮ್ಮಿಟ್ 2026' ರಲ್ಲಿ ಬಿಲ್ ಗೇಟ್ಸ್ ಭಾಷಣ ರದ್ದಾಗಿದೆ. ಜೆಫ್ರಿ ಎಪ್ಸ್ಟೀನ್ ಪ್ರಕರಣದ ವಿವಾದವೇ ಇದಕ್ಕೆ ಕಾರಣವೇ? ವಿವರ ಇಲ್ಲಿದೆ.


ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಇಂದು ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಪ್ರತಿಷ್ಠಿತ 'ಇಂಡಿಯಾ AI ಇಂಪ್ಯಾಕ್ಟ್ ಶೃಂಗಸಭೆ'ನಲ್ಲಿ ಕೀವರ್ಡ್ ಭಾಷಣ ಮಾಡುವುದಿಲ್ಲ ಎಂದು ಗೇಟ್ಸ್ ಫೌಂಡೇಶನ್ ಇಂದು ಬೆಳಿಗ್ಗೆ ಸ್ಪಷ್ಟಪಡಿಸಿದೆ. ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಪ್ರಕರಣಕ್ಕೆ ಸಂಬಂಧಿಸಿದ ಕಡತಗಳಲ್ಲಿ ಬಿಲ್ ಗೇಟ್ಸ್ ಹೆಸರು ಕೇಳಿಬಂದಿರುವ ವಿವಾದದ ನಡುವೆಯೇ ಈ ಬೆಳವಣಿಗೆ ನಡೆದಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಗೇಟ್ಸ್ ಫೌಂಡೇಶನ್ ಹೇಳಿದ್ದೇನು?

ಬಿಲ್ ಗೇಟ್ಸ್ ಅವರ ಬದಲಿಗೆ ಗೇಟ್ಸ್ ಫೌಂಡೇಶನ್‌ನ ಆಫ್ರಿಕಾ ಮತ್ತು ಭಾರತ ಕಚೇರಿಗಳ ಅಧ್ಯಕ್ಷರಾದ ಅಂಕುರ್ ವೋರಾ ಅವರು ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಬಿಲ್ ಗೇಟ್ಸ್ ಅವರು ಇಂದು ಬೆಳಿಗ್ಗೆ 11:50ಕ್ಕೆ ಭಾರತ್ ಮಂಟಪದಲ್ಲಿ 12 ನಿಮಿಷಗಳ ಕಾಲ ಭಾಷಣ ಮಾಡಬೇಕಿತ್ತು. ಆದರೆ, ವಿವಾದದ ಹಿನ್ನೆಲೆಯಲ್ಲಿ ಅವರ ಭಾಗವಹಿಸುವಿಕೆ ಅನುಮಾನವಾಗಿತ್ತು.

ಶೃಂಗಸಭೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಲ್ ಗೇಟ್ಸ್ ಅವರ ಹೆಸರನ್ನು 'ಜಾಗತಿಕ ತಂತ್ರಜ್ಞಾನ ನಾಯಕರು' ಮತ್ತು 'ಮುಖ್ಯ ಭಾಷಣಕಾರರ' ಪಟ್ಟಿಯಲ್ಲಿ ಪ್ರಮುಖವಾಗಿ ಪ್ರಕಟಿಸಲಾಗಿತ್ತು. ಆದರೆ, ಬುಧವಾರ ಬೆಳಿಗ್ಗೆ ಇದ್ದಕ್ಕಿದ್ದಂತೆ ಅವರ ಹೆಸರು ಪಟ್ಟಿಯಿಂದ ನಾಪತ್ತೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಯಿತು. ಇದು ಸರ್ಕಾರ ಅಥವಾ ಆಯೋಜಕರು ವಿವಾದದಿಂದ ದೂರವಿರಲು ಕೈಗೊಂಡ ಕ್ರಮವೋ ಅಥವಾ ಗೇಟ್ಸ್ ಫೌಂಡೇಶನ್ ಮನವಿಯೋ ಎಂಬುದು ಇನ್ನೂ ಕುತೂಹಲ ಮೂಡಿಸಿದೆ.

ವಿವಾದದ ಹಿನ್ನೆಲೆ

ಕಳೆದ ತಿಂಗಳು ಅಮೆರಿಕದ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿದ ಎಪ್ಸ್ಟೀನ್ ಕಡತಗಳಲ್ಲಿ ಬಿಲ್ ಗೇಟ್ಸ್ ಹೆಸರನ್ನು ಉಲ್ಲೇಖಿಸಲಾಗಿದೆ. ಜೆಫ್ರಿ ಎಪ್ಸ್ಟೀನ್ ಬರೆದಿದ್ದ ಎನ್ನಲಾದ ಇಮೇಲ್ ಒಂದರಲ್ಲಿ, ಗೇಟ್ಸ್ ಅವರ ವೈಯಕ್ತಿಕ ಜೀವನ ಮತ್ತು ಸಂಬಂಧಗಳ ಬಗ್ಗೆ ಆಘಾತಕಾರಿ ಆರೋಪಗಳನ್ನು ಮಾಡಲಾಗಿತ್ತು. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಲ್ ಗೇಟ್ಸ್, "ಆ ಇಮೇಲ್ ಸುಳ್ಳು, ಅದು ಎಂದಿಗೂ ರವಾನೆಯಾಗಿರಲಿಲ್ಲ. ಎಪ್ಸ್ಟೀನ್ ಜೊತೆ ಕಳೆದ ಪ್ರತಿ ನಿಮಿಷಕ್ಕೂ ನಾನು ವಿಷಾದಿಸುತ್ತೇನೆ," ಎಂದು ಆಸ್ಟ್ರೇಲಿಯಾದ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದರು.

ಭಾರತ AI ಇಂಪ್ಯಾಕ್ಟ್ ಸಮ್ಮಿಟ್ 2026

ಫೆಬ್ರವರಿ 16 ರಿಂದ 20 ರವರೆಗೆ ನವದೆಹಲಿಯ ಭಾರತ್ ಮಂಟಪದಲ್ಲಿ ಈ ಬೃಹತ್ ಶೃಂಗಸಭೆ ನಡೆಯುತ್ತಿದೆ. 'ಜನರು, ಭೂಮಿ ಮತ್ತು ಪ್ರಗತಿ' (People, Planet, Progress) ಎಂಬ ಮೂರು ಸೂತ್ರಗಳ ಅಡಿಯಲ್ಲಿ ಈ ಸಮ್ಮಿಟ್ ಆಯೋಜಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಇದರ ಎಕ್ಸ್‌ಪೋವನ್ನು ಉದ್ಘಾಟಿಸಿದ್ದರು.

Read More
Next Story