
ಎಐ ಆಧಾರಿತ ಚಿತ್ರ
ಬಿಹಾರದಲ್ಲಿ ಭೀಕರ ದೋಣಿ ದುರಂತ: ಗಂಗಾ ನದಿಯಲ್ಲಿ ದೋಣಿ ಪಲ್ಟಿಯಾಗಿ ಇಬ್ಬರು ಸಾವು, ಹಲವರು ನಾಪತ್ತೆ
ದೋಣಿ ಮುಳುಗುತ್ತಿದ್ದಂತೆ ಘಟನಾ ಸ್ಥಳದ ಸಮೀಪದಲ್ಲಿದ್ದ ಇತರ ದೋಣಿ ಚಾಲಕರು ಹಾಗೂ ಸ್ಥಳೀಯ ಮೀನುಗಾರರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದು, ನದಿಯಲ್ಲಿದ್ದ ಸುಮಾರು ಏಳು ಜನರನ್ನು ಸುರಕ್ಷಿತವಾಗಿ ರಕ್ಷಿಸಿ ದಂಡೆಗೆ ಕರೆತರಲಾಗಿದೆ.
ಬಿಹಾರದ ಪಾಟ್ನಾ ಜಿಲ್ಲೆಯ ಬಾರ್ಹ್ ಉಪವಿಭಾಗದ ಉಮಾನಾಥ್ ಗಂಗಾ ಘಾಟ್ ಬಳಿ ಗುರುವಾರ ಬೆಳಿಗ್ಗೆ ಭೀಕರ ದೋಣಿ ದುರಂತ ಸಂಭವಿಸಿದೆ. ಗಂಗಾ ನದಿಯಲ್ಲಿ ಪ್ರಯಾಣಿಕರಿದ್ದ ಸಣ್ಣ ದೋಣಿಯೊಂದು ಪಲ್ಟಿಯಾಗಿದ್ದು, ಇಬ್ಬರು ಮೃತಪಟ್ಟಿರುವುದು ದೃಢಪಟ್ಟಿದೆ. ಇನ್ನು ಹಲವರು ನದಿಯಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ ಎಂದು ಶಂಕಿಸಲಾಗಿದೆ.
ಸ್ಥಳೀಯ ಮೂಲಗಳ ಪ್ರಕಾರ, ಇಂದು ಬೆಳಿಗ್ಗೆ ಸುಮಾರು 14 ರಿಂದ 15 ಜನ ಗ್ರಾಮಸ್ಥರು ದೋಣಿಯ ಮೂಲಕ ದಿಯಾರಾ ಪ್ರದೇಶದ ಕಡೆಗೆ ತೆರಳುತ್ತಿದ್ದರು. ಆದರೆ, ನದಿಯ ಮಧ್ಯಭಾಗ ತಲುಪುತ್ತಿದ್ದಂತೆ ಭಾರಿ ವೇಗದಲ್ಲಿ ಬೀಸಿದ ಬಲವಾದ ಗಾಳಿಯ ಹೊಡೆತಕ್ಕೆ ನಿಯಂತ್ರಣ ತಪ್ಪಿದ ಸಣ್ಣ ದೋಣಿ ನದಿಯಲ್ಲೇ ಉಲ್ಟಾ ಪಲ್ಟಿಯಾಗಿದೆ.
ಸ್ಥಳೀಯರಿಂದ ರಕ್ಷಣಾ ಕಾರ್ಯಾಚರಣೆ
ದೋಣಿ ಮುಳುಗುತ್ತಿದ್ದಂತೆ ಘಟನಾ ಸ್ಥಳದ ಸಮೀಪದಲ್ಲಿದ್ದ ಇತರ ದೋಣಿ ಚಾಲಕರು ಹಾಗೂ ಸ್ಥಳೀಯ ಮೀನುಗಾರರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಮತ್ತೊಂದು ದೋಣಿಯ ಸಹಾಯದಿಂದ ನದಿಯಲ್ಲಿದ್ದ ಸುಮಾರು ಏಳು ಜನರನ್ನು ಸುರಕ್ಷಿತವಾಗಿ ರಕ್ಷಿಸಿ ದಂಡೆಗೆ ಕರೆತರಲಾಗಿದೆ.
ಎಸ್‌ಡಿಆರ್‌ಎಫ್ ಆಗಮನ
ಘಟನೆ ನಡೆದ ತಕ್ಷಣವೇ ಎಸ್‌ಡಿಆರ್‌ಎಫ್ (ರಾಜ್ಯ ವಿಪತ್ತು ನಿರ್ವಹಣಾ ಪಡೆ) ತಂಡಗಳು ಹಾಗೂ ಸ್ಥಳೀಯ ಮುಳುಗುತಜ್ಞರು ಸ್ಥಳಕ್ಕೆ ಧಾವಿಸಿದ್ದಾರೆ. ಸದ್ಯ ನದಿಯಲ್ಲಿ ನಾಪತ್ತೆಯಾಗಿರುವ ಉಳಿದ ಐದರಿಂದ ಆರು ಜನರಿಗಾಗಿ ತೀವ್ರ ಶೋಧ ಕಾರ್ಯ ಆರಂಭವಾಗಿದೆ. ಗಂಗಾ ನದಿಯಲ್ಲಿ ನೀರಿನ ಹರಿವು ಹೆಚ್ಚಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಕಡೇ ಸವಾಲು ಎದುರಾಗಿದೆ. ಇಲ್ಲಿಯವರೆಗೆ ನಿಖರವಾಗಿ ಎಷ್ಟು ಜನರು ಮುಳುಗಿದ್ದಾರೆ ಎಂಬ ಅಧಿಕೃತ ಮಾಹಿತಿ ಲಭ್ಯವಾಗಿಲ್ಲವಾದರೂ, ಪೊಲೀಸರು ಮತ್ತು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಇದ್ದು, ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ. ಮುಳುಗಿದವರಲ್ಲಿ ಬಹುತೇಕರು ತರಕಾರಿ ವ್ಯಾಪಾರಕ್ಕಾಗಿ ನದಿ ದಾಟುತ್ತಿದ್ದ ಮಹಿಳೆಯರು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

