
ಬಿಹಾರದಲ್ಲಿ ಮತ್ತೊಂದು ಯುವತಿ ಮೇಲೆ ದೌರ್ಜನ್ಯ; ಸಮಸ್ತಿಪುರ ಘಟನೆ ವಿಡಿಯೋ ವೈರಲ್
ಬಿಹಾರದ ಸಮಸ್ತಿಪುರದ ಜಗತ್ಸಿಂಗ್ಪುರ ಗ್ರಾಮದಲ್ಲಿ ಯುವತಿ ಹಾಗೂ ಯುವಕನಿಗೆ ಕಿರುಕುಳ ನೀಡಿದ ಆರೋಪದ ವಿಡಿಯೋ ವೈರಲ್ ಆಗಿದೆ. ಜಮುಯಿ ಪ್ರಕರಣದಲ್ಲಿ ಈಗಾಗಲೇ ಮೂವರ ಬಂಧನವಾಗಿದೆ.
ಬಿಹಾರದ ಜಮುಯಿಯಲ್ಲಿ ಯುವತಿ ಮೇಲೆ ಲೈಂಗಿಕ ಕಿರುಕುಳದ ಘಟನೆ ಕ್ಯಾಮೆರಾದಲ್ಲಿ ಸೆರೆಯಾದ ಬೆನ್ನಲ್ಲೇ, ಇದೀಗ ಸುಮಾರು 131 ಕಿ.ಮೀ ದೂರದ ಸಮಸ್ತಿಪುರದಿಂದಲೂ ಇದೇ ರೀತಿಯ ಮತ್ತೊಂದು ಆಘಾತಕಾರಿ ಘಟನೆ ವರದಿಯಾಗಿದೆ. ಸಮಸ್ತಿಪುರದ ಜಗತ್ಸಿಂಗ್ಪುರ ಗ್ರಾಮದಲ್ಲಿ ಯುವತಿ ಹಾಗೂ ಆಕೆಯೊಂದಿಗೆ ಬೈಕ್ನಲ್ಲಿ ತೆರಳುತ್ತಿದ್ದ ಯುವಕನನ್ನು ಕೆಲವರು ಅಡ್ಡಗಟ್ಟಿ ಕಿರುಕುಳ ನೀಡಿರುವ ಘಟನೆ ನಡೆದಿದೆ.
ಯುವತಿ ಮತ್ತು ಯುವಕ ಗ್ರಾಮೀಣ ರಸ್ತೆಯಲ್ಲಿ ಫೋಟೋ ತೆಗೆದುಕೊಳ್ಳಲು ನಿಂತಿದ್ದ ವೇಳೆ ಏಕಾಏಕಿ ಕೆಲವರು ಅಲ್ಲಿಗೆ ಬಂದು ಅವರನ್ನು ಸುತ್ತುವರಿದಿದ್ದಾರೆ ಎಂದು ಸ್ಥಳೀಯ ವರದಿಗಳು ತಿಳಿಸಿವೆ. ನಂತರ ಯುವತಿಗೆ ಅವಾಚ್ಯವಾಗಿ ನಿಂದಿಸಿ, ಆಕೆಯನ್ನು ರಸ್ತೆಯಲ್ಲಿ ತಳ್ಳಾಡಿಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಘಟನೆಯ ವಿಡಿಯೋ ಬುಧವಾರ ಬೆಳಕಿಗೆ ಬಂದಿದೆ.
ವೈರಲ್ ಆಗಿರುವ ವಿಡಿಯೋವನ್ನು ಗಮನಿಸಿದ ಕೂಡಲೇ ಪೊಲೀಸರು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ವಿಡಿಯೋದಲ್ಲಿರುವವರು ಜಗತ್ಸಿಂಗ್ಪುರ ಗ್ರಾಮದ ಸ್ಥಳೀಯರು ಎಂದು ಕೆಲವರು ಹೇಳಿದ್ದರೂ, ಆರೋಪಿಗಳ ಗುರುತು ಹಾಗೂ ಸ್ಥಳದ ಬಗ್ಗೆ ಪೊಲೀಸರು ಇನ್ನಷ್ಟೇ ಖಚಿತಪಡಿಸಿಕೊಳ್ಳಬೇಕಿದೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಮತ್ತು ಯಾರನ್ನೂ ಬಿಡುವುದಿಲ್ಲ ಎಂದು ತಿಳಿಸಿದ್ದಾರೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.
First Jamui. Now Samastipur. 🚨
— Harpreet Sandhu (@TheHarpreetTake) September 24, 2026
Same script. Same shame. Same question: how many videos until the streets belong to women again?
She stopped for a photograph. They surrounded her, twisted her arm, abused her, and put hands where no one has the right to.
@SamastipurPolice… pic.twitter.com/fbPpeMQMhi
ಜಮುಯಿಯಲ್ಲಿ ನಡೆದಿತ್ತು ಭೀಕರ ಘಟನೆ
ಕೆಲ ದಿನಗಳ ಹಿಂದೆ ಬಿಹಾರದ ಜಮುಯಿಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳಾದ ಬಾಲಕ ಹಾಗೂ ಬಾಲಕಿಗೆ ಕಿರುಕುಳ ನೀಡಿದ ಆರೋಪದಡಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಲವರು ಬಿಹಾರ ಪೊಲೀಸರನ್ನು ಒತ್ತಾಯಿಸಿದ್ದರು.
ವೈರಲ್ ಆಗಿರುವ ವಿಡಿಯೋದಲ್ಲಿ ಬಾಲಕ ಹಾಗೂ ಬಾಲಕಿಯನ್ನು ಕೆಲವರು ಸುತ್ತುವರಿದಿರುವುದು ಕಾಣಿಸುತ್ತದೆ. ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬ ಬಾಲಕನ ಅಂಗಿಯ ಕಾಲರ್ ಹಿಡಿದು ಆತನನ್ನು ಬಾಲಕಿಯಿಂದ ದೂರ ಎಳೆದಿದ್ದಾನೆ. ಬಾಲಕಿ ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ, ಮುಖ ಮುಚ್ಚಿಕೊಂಡಿದ್ದ ಮತ್ತೊಬ್ಬ ವ್ಯಕ್ತಿ ಆಕೆಯನ್ನು ಹಿಂದಿನಿಂದ ಹಿಡಿದಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ಶನಿವಾರ ಸಂಜೆ ಕೋಚಿಂಗ್ ತರಗತಿಗೆ ತೆರಳಿ ವಾಪಸ್ ಬರುವಾಗ ಇಬ್ಬರೂ ಸ್ಕೂಟರ್ನಲ್ಲಿ ಹೊರಗೆ ಹೋಗಿದ್ದರು ಎನ್ನಲಾಗಿದೆ. ಈ ವೇಳೆ ಅವರನ್ನು ಕೆಲವರು ಅಡ್ಡಗಟ್ಟಿ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಆರೋಪಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಬಿಹಾರ ಪೊಲೀಸರನ್ನು ಟ್ಯಾಗ್ ಮಾಡಿ ಹಲವರು ಒತ್ತಾಯಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ.

