
ತುರ್ತು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ವಿವಿಧ ಜಿಲ್ಲೆಗಳಲ್ಲಿ 27 ಎಸ್‌ಡಿಆರ್‌ಎಫ್ ಹಾಗೂ 10 ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದೆ.
ಬಿಹಾರದಲ್ಲಿ ಭೀಕರ ಪ್ರವಾಹ: 14 ಜಿಲ್ಲೆಗಳಲ್ಲಿ 40 ಲಕ್ಷಕ್ಕೂ ಹೆಚ್ಚು ಜನ ಅತಂತ್ರ
ನೇಪಾಳದ ಜಲಾನಯನ ಪ್ರದೇಶಗಳಲ್ಲಿ ಸುರಿದ ಭಾರಿ ಮಳೆಯ ಪರಿಣಾಮವೂ ನದಿಗಳ ನೀರಿನ ಮಟ್ಟ ಏರಿಕೆಗೆ ಕಾರಣವಾಗಿದೆ. ಗಂಗಾ, ಕೋಸಿ ಸೇರಿದಂತೆ ಹಲವು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
ಬಿಹಾರದಲ್ಲಿ ಕಳೆದ ಐದು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ 14 ಜಿಲ್ಲೆಗಳಲ್ಲಿ 40.45 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹದಿಂದ ಬಾಧಿತರಾಗಿದ್ದಾರೆ. 84 ಬ್ಲಾಕ್‌ಗಳ 517 ಗ್ರಾಮ ಪಂಚಾಯಿತಿಗಳ ಜನರು ಪ್ರವಾಹದ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ವಿಪತ್ತು ನಿರ್ವಹಣಾ ಇಲಾಖೆ ತಿಳಿಸಿದೆ. ಪಾಟ್ನಾ, ಭೋಜ್‌ಪುರ, ಸಾರಣ್, ವೈಶಾಲಿ, ಭಾಗಲ್ಪುರ ಮತ್ತು ಬೇಗುಸರಾಯ್ ಸೇರಿದಂತೆ ಹಲವು ಜಿಲ್ಲೆಗಳು ಪ್ರವಾಹ ಪೀಡಿತವಾಗಿವೆ.
ನೇಪಾಳದ ಜಲಾನಯನ ಪ್ರದೇಶಗಳಲ್ಲಿ ಸುರಿದ ಭಾರಿ ಮಳೆಯ ಪರಿಣಾಮವೂ ನದಿಗಳ ನೀರಿನ ಮಟ್ಟ ಏರಿಕೆಗೆ ಕಾರಣವಾಗಿದೆ. ಗಂಗಾ, ಗಂಡಕ್, ಕೋಸಿ, ಬುರ್ಹಿ ಗಂಡಕ್, ಪುನ್ಪುನ್, ಬಾಗ್ಮತಿ ಮತ್ತು ಘಾಘ್ರಾ ನದಿಗಳು ಹಲವು ಕಡೆ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಭಾಗಲ್ಪುರದ ಸುಲ್ತಾನ್‌ಗಂಜ್‌ನಲ್ಲಿ ಗಂಗಾ ನದಿ ಬುಧವಾರ ಬೆಳಗ್ಗೆ 9 ಗಂಟೆಗೆ 36.78 ಮೀಟರ್ ಮಟ್ಟ ತಲುಪಿದ್ದು, 2021ರ ಆಗಸ್ಟ್ 17ರಂದು ದಾಖಲಾಗಿದ್ದ 36.75 ಮೀಟರ್‌ನ ಹಿಂದಿನ ಗರಿಷ್ಠ ಪ್ರವಾಹ ಮಟ್ಟವನ್ನು ಮೀರಿದೆ.
ಪ್ರವಾಹಪೀಡಿತರ ನೆರವಿಗಾಗಿ ವಿವಿಧ ಜಿಲ್ಲೆಗಳಲ್ಲಿ 793 ಸಮುದಾಯ ಅಡುಗೆ ಕೇಂದ್ರಗಳನ್ನು ನಡೆಸಲಾಗುತ್ತಿದೆ. 15 ಪರಿಹಾರ ಶಿಬಿರಗಳಲ್ಲಿ 13,446 ಜನರಿಗೆ ಆಶ್ರಯ ಕಲ್ಪಿಸಲಾಗಿದೆ. ಆಹಾರ, ವಸತಿ, ವೈದ್ಯಕೀಯ ಸೇವೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಶಿಬಿರಗಳಲ್ಲಿ ಒದಗಿಸಲಾಗುತ್ತಿದೆ. ಸ್ಥಳಾಂತರ ಮತ್ತು ಸಾರಿಗೆ ಕಾರ್ಯಕ್ಕಾಗಿ 1,872 ದೋಣಿಗಳನ್ನು ನಿಯೋಜಿಸಲಾಗಿದೆ. ಸುಮಾರು 29,400 ಒಣ ಪಡಿತರ ಪ್ಯಾಕೆಟ್‌ಗಳು ಮತ್ತು 5,464 ಕ್ವಿಂಟಾಲ್ ಪಶು ಆಹಾರವನ್ನು ವಿತರಿಸಲಾಗಿದೆ.
ಬೆಳೆ ಹಾನಿ ಸಮಗ್ರ ಸಮೀಕ್ಷೆಗೆ ಸೂಚನೆ
ಪ್ರವಾಹದಿಂದ ಉಂಟಾಗಿರುವ ಬೆಳೆ ಹಾನಿಯನ್ನು ಶೀಘ್ರವಾಗಿ ಹಾಗೂ ನಿಖರವಾಗಿ ಅಂದಾಜು ಮಾಡುವಂತೆ ಕೃಷಿ ಸಚಿವ ವಿಜಯ್ ಕುಮಾರ್ ಸಿನ್ಹಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ರೈತರಿಗೆ ಸಾಧ್ಯವಿರುವ ಎಲ್ಲ ನೆರವು ಒದಗಿಸುವಂತೆ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ತಂಡಗಳ ನಿಯೋಜನೆ
ತುರ್ತು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ವಿವಿಧ ಜಿಲ್ಲೆಗಳಲ್ಲಿ 27 ಎಸ್‌ಡಿಆರ್‌ಎಫ್ ಹಾಗೂ 10 ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದೆ. ಮುಂದಿನ ಎರಡು ದಿನಗಳಲ್ಲಿ ಬಿಹಾರದ ಕೆಲವೆಡೆ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದ್ದು, ಒಂದೆರಡು ಕಡೆ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

