ಗುಂಡು ಹಾರಿಸಿ ಪತ್ನಿ, ಇಬ್ಬರು ಅರ್ಚಕರ ಹತ್ಯೆ- ಮಕ್ಕಳನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದ ಆರೋಪಿಯ ಶೂಟೌಟ್‌
x

ಗುಂಡು ಹಾರಿಸಿ ಪತ್ನಿ, ಇಬ್ಬರು ಅರ್ಚಕರ ಹತ್ಯೆ- ಮಕ್ಕಳನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದ ಆರೋಪಿಯ ಶೂಟೌಟ್‌

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿ ಅರವಿಂದ್ ಆಕ್ರಮಣಕಾರಿ ವರ್ತನೆ ತೋರುತ್ತಿದ್ದ ಎನ್ನಲಾಗಿದೆ. ಆತನ ತಾಯಿ ಹಾಗೂ ಪತ್ನಿ ಹಿಂದೊಮ್ಮೆ ಅರವಿಂದ್‌ ವಿರುದ್ಧ ದೂರು ನೀಡಿದ್ದರು.


Click the Play button to hear this message in audio format

ಉತ್ತರ ಪ್ರದೇಶದ ಆಜಂಗಢದಲ್ಲಿ ಪತ್ನಿ ಹಾಗೂ ಇಬ್ಬರು ಅರ್ಚಕರಿಗೆ ಗುಂಡು ಹಾರಿಸಿ, ಮೂವರು ಮಕ್ಕಳನ್ನು ಒತ್ತೆಯಾಳಾಗಿಸಿಕೊಂಡಿದ್ದ ವ್ಯಕ್ತಿಯೊಬ್ಬ ಪೊಲೀಸರ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದಾನೆ. ಸುಮಾರು ಏಳು ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯ ವೇಳೆ ಆರೋಪಿ ತನ್ನ ಪುತ್ರನಿಗೂ ಗುಂಡು ಹಾರಿಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಆರೋಪಿ ಹಾಗೂ ಆತನ ಪುತ್ರನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ಸಂಜೆ ಸುಮಾರು 6 ಗಂಟೆಗೆ ಅರವಿಂದ್ ಸಿಂಗ್ ಎಂಬಾತ ಮನೆಗೆ ಮರಳಿದ್ದಾನೆ. ಈ ವೇಳೆ ಆತನ ಪತ್ನಿ ಬಬಿತಾ ಸಿಂಗ್ (32) ಇಬ್ಬರು ಅರ್ಚಕರಾದ ಮಹೇಂದ್ರ ಪಾಠಕ್ (60) ಮತ್ತು ಅಖಿಲೇಶ್ ಮಿಶ್ರಾ (50) ಅವರೊಂದಿಗೆ ಧಾರ್ಮಿಕ ಪೂಜೆಯಲ್ಲಿ ತೊಡಗಿದ್ದರು. ಇದನ್ನು ಕಂಡ ಅರವಿಂದ್ ಆಕ್ಷೇಪ ವ್ಯಕ್ತಪಡಿಸಿದ್ದು, ಮಾತಿನ ಚಕಮಕಿ ನಡೆದಿದೆ. ಬಳಿಕ ಕೋಪಗೊಂಡ ಆತ ತನ್ನ ಪರವಾನಗಿ ಹೊಂದಿದ್ದ ಬಂದೂಕಿನಿಂದ ಮೊದಲು ಪತ್ನಿಗೆ, ನಂತರ ಇಬ್ಬರು ಅರ್ಚಕರಿಗೆ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ. ನಂತರ ತನ್ನ ಮೂವರು ಮಕ್ಕಳನ್ನು ಕೊಠಡಿಯೊಳಗೆ ಕರೆದೊಯ್ದು ಬಾಗಿಲು ಹಾಕಿಕೊಂಡಿದ್ದಾನೆ.

ಏಳು ಗಂಟೆಗಳ ಕಾರ್ಯಾಚರಣೆ

ವಾರಾಣಸಿ ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ನವೀನ್ ಅರೋರಾ ಅವರ ಪ್ರಕಾರ, ಸುಮಾರು ಏಳು ಗಂಟೆಗಳ ಕಾಲ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸಿದ್ದಾರೆ. ಆದರೆ ಆರೋಪಿ ಮನೆಯೊಳಗಿಂದಲೇ ಗುಂಡು ಹಾರಿಸಿದ ಬಳಿಕ ಪೊಲೀಸರು ಅನಿವಾರ್ಯವಾಗಿ ಕಾರ್ಯಾಚರಣೆ ನಡೆಸಿದ್ದಾರೆ.

ಎಸ್‌ಎಸ್‌ಪಿ ಹಾಗೂ ವಿಶೇಷ ಕಾರ್ಯಾಚರಣೆ ಪಡೆಯ ಸಿಬ್ಬಂದಿ ಮನೆಯ ಬಾಗಿಲು ಒಡೆದು ಒಳನುಗ್ಗಿದ್ದು, ಅರವಿಂದ್ ಪೊಲೀಸರತ್ತ ಗುಂಡು ಹಾರಿಸಿದ್ದಾನೆ. ಈ ವೇಳೆ ಪೊಲೀಸರು ಪ್ರತಿದಾಳಿ ನಡೆಸಿದ್ದಾರೆ. ಗುಂಡೇಟಿನಿಂದ ಗಾಯಗೊಂಡಿದ್ದ ಅರವಿಂದ್ ಹಾಗೂ ಆತನ ಪುತ್ರನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ವೇಳೆ ಇಬ್ಬರೂ ಮೃತಪಟ್ಟಿದ್ದಾರೆ ಎಂದು ಆಜಂಗಢ ಎಸ್‌ಎಸ್‌ಪಿ ಅನಿಲ್ ಕುಮಾರ್ ತಿಳಿಸಿದ್ದಾರೆ.

ಮಾನಸಿಕವಾಗಿ ಅಸ್ವಸ್ಥನಾಗಿದ್ದನೇ?

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಅರವಿಂದ್ ಆಕ್ರಮಣಕಾರಿ ವರ್ತನೆ ತೋರುತ್ತಿದ್ದ ಎನ್ನಲಾಗಿದೆ. ಆತನ ತಾಯಿ ಹಾಗೂ ಪತ್ನಿ ಈ ಹಿಂದೆ ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸುತ್ತಿದ್ದ ಬಗ್ಗೆ ದೂರು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅರವಿಂದ್‌ನ ವರ್ತನೆಯಿಂದ ಆತಂಕಗೊಂಡಿದ್ದ ತಾಯಿ ಮತ್ತು ಪತ್ನಿ ಆತನಿಗೆ ಯಾವುದೋ ದುಷ್ಟಶಕ್ತಿಯ ಪ್ರಭಾವವಿದೆ ಎಂದು ಭಾವಿಸಿ ಧಾರ್ಮಿಕ ಪೂಜೆ ಆಯೋಜಿಸಿದ್ದರು ಎನ್ನಲಾಗಿದೆ. ಈ ಪೂಜೆಗೆ ಅರವಿಂದ್ ಆಕ್ಷೇಪ ವ್ಯಕ್ತಪಡಿಸಿ ಅರ್ಚಕರೊಂದಿಗೆ ವಾಗ್ವಾದ ನಡೆಸಿದ್ದಾನೆ. ಈ ವೇಳೆ ಕೋಪಗೊಂಡ ಆತ ಪತ್ನಿ ಹಾಗೂ ಇಬ್ಬರು ಅರ್ಚಕರ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯರ ಪ್ರಕಾರ, ಪೂಜೆಗೆ ಐವರು ಅರ್ಚಕರು ಮನೆಗೆ ಬಂದಿದ್ದರು. ಗುಂಡಿನ ದಾಳಿ ಆರಂಭವಾದಾಗ ಮೂವರು ಅಲ್ಲಿಂದ ತಪ್ಪಿಸಿಕೊಂಡಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸ್ಥಳದಲ್ಲಿ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದ್ದು, ಮುಂದಿನ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ.

Read More
Next Story