ಅಯೋಧ್ಯೆ ರಾಮಮಂದಿರ ದೇಣಿಗೆ ಕಳ್ಳತನ ಆರೋಪ: ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್‌ಗೆ SIT ಕ್ಲೀನ್‌ಚಿಟ್
x

ಅಯೋಧ್ಯೆ ರಾಮಮಂದಿರ ದೇಣಿಗೆ ಕಳ್ಳತನ ಆರೋಪ: ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್‌ಗೆ SIT ಕ್ಲೀನ್‌ಚಿಟ್

ದೇಣಿಗೆ ಕಳ್ಳತನದ ಆರೋಪಗಳು ಕೇಳಿಬಂದ ಬಳಿಕ ಚಂಪತ್ ರಾಯ್‌ ಮತ್ತು ಅನಿಲ್ ಮಿಶ್ರಾ ಅವರು ರಾಮಮಂದಿರ ನಿರ್ವಹಣೆಯ ಹೊಣೆ ಹೊತ್ತಿರುವ ಟ್ರಸ್ಟ್‌ನ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು.


ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ಕಳ್ಳತನವಾಗಿದೆ ಎಂಬ ಆರೋಪದ ಕುರಿತು ತನಿಖೆ ನಡೆಸಿದ ವಿಶೇಷ ತನಿಖಾ ತಂಡ (SIT), ಶ್ರೀರಾಮ ಜನ್ಮಭೂಮಿ ಕ್ಷೇತ್ರ ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್‌ ಹಾಗೂ ಟ್ರಸ್ಟ್‌ನ ಮಾಜಿ ಸದಸ್ಯ ಅನಿಲ್ ಮಿಶ್ರಾ ಅವರಿಗೆ ಕ್ಲೀನ್‌ಚಿಟ್ ನೀಡಿದೆ.

ದೇಣಿಗೆ ಕಳ್ಳತನದ ಆರೋಪಗಳು ಕೇಳಿಬಂದ ಬಳಿಕ ಚಂಪತ್ ರಾಯ್‌ ಮತ್ತು ಅನಿಲ್ ಮಿಶ್ರಾ ಅವರು ರಾಮಮಂದಿರ ನಿರ್ವಹಣೆಯ ಹೊಣೆ ಹೊತ್ತಿರುವ ಟ್ರಸ್ಟ್‌ನ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಇದೀಗ SIT ತನಿಖೆಯಲ್ಲಿ ಇಬ್ಬರ ವಿರುದ್ಧ ಯಾವುದೇ ಆರೋಪ ಸಾಬೀತಾಗಿಲ್ಲ ಎಂದು ತಿಳಿದುಬಂದಿದೆ. ಉತ್ತರ ಪ್ರದೇಶ ಗೃಹ ಇಲಾಖೆ ಸೋಮವಾರ ಅಯೋಧ್ಯೆ ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣದ ಕುರಿತು SIT ಸಲ್ಲಿಸಿರುವ ಅಂತಿಮ ವರದಿಯನ್ನು ಮುಂದಿನ ಕ್ರಮಕ್ಕಾಗಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಹಸ್ತಾಂತರಿಸಿದೆ.

ಜೂನ್ 13ರಂದು SIT ರಚನೆ

ಟ್ರಸ್ಟ್‌ನ ಮನವಿ ಮೇರೆಗೆ ಉತ್ತರ ಪ್ರದೇಶ ಸರ್ಕಾರ ಜೂನ್ 13ರಂದು ಮೂರು ಸದಸ್ಯರ ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ಲಖನೌ ವಿಭಾಗೀಯ ಆಯುಕ್ತ ವಿಜಯ್ ವಿಶ್ವಾಸ್ ಪಂತ್ ಅವರ ನೇತೃತ್ವದಲ್ಲಿ SIT ರಚಿಸಲಾಗಿತ್ತು. ರೇಂಜ್ ಇನ್ಸ್‌ಪೆಕ್ಟರ್ ಜನರಲ್ ಕಿರಣ್ ಎಸ್. ಹಾಗೂ ವಿಶೇಷ ಕಾರ್ಯದರ್ಶಿ (ಹಣಕಾಸು) ನೀಲ್ ರತನ್ ಕುಮಾರ್ ತಂಡದ ಇತರ ಸದಸ್ಯರಾಗಿದ್ದರು. ಸುಪ್ರೀಂ ಕೋರ್ಟ್ ಈ ವಿಚಾರದಲ್ಲಿ ಮಧ್ಯಪ್ರವೇಶಿಸುವುದಕ್ಕೂ ಮುನ್ನವೇ ರಾಜ್ಯ ಸರ್ಕಾರ SIT ರಚಿಸಿತ್ತು.

ಜೂನ್ 23ರಂದು ಪ್ರಾಥಮಿಕ ವರದಿ

SIT ಜೂನ್ 23ರಂದು ತನ್ನ ಪ್ರಾಥಮಿಕ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿತ್ತು. ವರದಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಕಠಿಣ ಶಿಫಾರಸುಗಳನ್ನು ಮಾಡಲಾಗಿತ್ತು. ಈ ಪ್ರಾಥಮಿಕ ವರದಿಯ ಆಧಾರದ ಮೇಲೆ ಟ್ರಸ್ಟ್ ಸದಸ್ಯ ಕೃಷ್ಣಮೋಹನ್ ಅವರು ಶ್ರೀರಾಮ ಜನ್ಮಭೂಮಿ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದ್ದರು. ಇದರ ಆಧಾರದ ಮೇಲೆ ಜೂನ್ 25ರಂದು ಪ್ರಕರಣದಲ್ಲಿ FIR ದಾಖಲಾಗಿತ್ತು.

8 ಮಂದಿ ವಿರುದ್ಧ FIR

FIRನಲ್ಲಿ ಅವಿನಾಶ್ ಶುಕ್ಲಾ, ಅನೂಕಲ್ಪ್ ಮಿಶ್ರಾ, ಲವಕುಶ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ, ರಾಮಶಂಕರ್ ಮಿಶ್ರಾ, ಸುಭಾಷ್ ಶ್ರೀವಾಸ್ತವ ಹಾಗೂ ರಾಮ್ ಶಂಕರ್ ಯಾದವ್ ಅಲಿಯಾಸ್ ಟಿನ್ನು ಸೇರಿದಂತೆ ಎಂಟು ಮಂದಿಯನ್ನು ಆರೋಪಿಗಳಾಗಿ ಹೆಸರಿಸಲಾಗಿತ್ತು. ಜೊತೆಗೆ ಇತರ ಅಪರಿಚಿತ ವ್ಯಕ್ತಿಗಳ ವಿರುದ್ಧವೂ ಪ್ರಕರಣ ದಾಖಲಿಸಲಾಗಿತ್ತು.

ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸಂಬಂಧಿತ ಸೆಕ್ಷನ್‌ಗಳು ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 13(1)(a) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

SIT ಸಲ್ಲಿಸಿದ್ದ ಪ್ರಾಥಮಿಕ ವರದಿಯೇ ನಂತರ FIR ದಾಖಲಿಸಲು ಹಾಗೂ ಪ್ರಕರಣದಲ್ಲಿ ಬಂಧನ ಸೇರಿದಂತೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಆಧಾರವಾಗಿತ್ತು. ಇದೀಗ ಅಂತಿಮ ವರದಿಯಲ್ಲಿ ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಹಾಗೂ ಮಾಜಿ ಸದಸ್ಯ ಅನಿಲ್ ಮಿಶ್ರಾ ಅವರ ವಿರುದ್ಧ ಯಾವುದೇ ಆರೋಪ ಸಾಬೀತಾಗಿಲ್ಲ ಎಂದು SIT ಸ್ಪಷ್ಟಪಡಿಸಿರುವುದು ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ.

Read More
Next Story