
ಅಯೋಧ್ಯೆ ರಾಮಮಂದಿರ ದೇಣಿಗೆ ಹಗರಣ: ಕಳೆದ 5 ವರ್ಷಗಳ ಖಾತೆಯ ಮರು-ಆಡಿಟ್‌ಗೆ ಎಸ್‌ಐಟಿ ಆದೇಶ
ಅಯೋಧ್ಯೆ ರಾಮಮಂದಿರ ದೇಣಿಗೆ ದುರುಪಯೋಗ ಪ್ರಕರಣದಲ್ಲಿ ಎಸ್‌ಐಟಿ ತನಿಖೆ ತೀವ್ರಗೊಳಿಸಿದೆ. ಟ್ರಸ್ಟ್‌ನ ಕಳೆದ 5 ವರ್ಷಗಳ ಆರ್ಥಿಕ ವ್ಯವಹಾರಗಳ ಮರು ಆಡಿಟ್‌ಗೆ ಆದೇಶಿಸಲಾಗಿದೆ. ಚಂಪತ್ ರಾಯ್ ರಾಜೀನಾಮೆ ನೀಡಿದ್ದಾರೆ.
ಅಯೋಧ್ಯೆಯ ರಾಮಮಂದಿರದ ದೇಣಿಗೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ತನಿಖೆ ಈಗ ಮತ್ತಷ್ಟು ತೀವ್ರಗೊಂಡಿದೆ. ಪ್ರಾಥಮಿಕ ತನಿಖೆಯಲ್ಲಿ ಭಾರಿ ಪ್ರಮಾಣದ ಅಕ್ರಮಗಳು ನಡೆದಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ, 'ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್'ನ ಕಳೆದ 5 ವರ್ಷಗಳ ಆರ್ಥಿಕ ವ್ಯವಹಾರಗಳ ಸಂಪೂರ್ಣ ಮರು-ಆಡಿಟ್ ನಡೆಸಲು ವಿಶೇಷ ತನಿಖಾ ತಂಡ (SIT) ನಿರ್ಧರಿಸಿದೆ.
ಈ ಮರು-ಆಡಿಟ್ ಪ್ರಕ್ರಿಯೆಯು ಮಂದಿರ ನಿರ್ಮಾಣದ ವೆಚ್ಚಗಳು ಮಾತ್ರವಲ್ಲದೆ, ಭಕ್ತರು ನೀಡಿದ ಚಿನ್ನ, ಬೆಳ್ಳಿ ಮತ್ತು ಒಡವೆಗಳ ದೇಣಿಗೆಯನ್ನೂ ಒಳಗೊಂಡಿರಲಿದೆ ಎಂದು ಮೂಲಗಳು ತಿಳಿಸಿವೆ.
ಚಂಪತ್ ರಾಯ್, ಅನಿಲ್ ಮಿಶ್ರಾ ರಾಜೀನಾಮೆ; ಜುಲೈ 6ಕ್ಕೆ ಟ್ರಸ್ಟ್ ಸಭೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಈಗಾಗಲೇ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಟ್ರಸ್ಟಿ ಅನಿಲ್ ಮಿಶ್ರಾ ಮತ್ತು ಗೋಪಾಲ್ ರಾವ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದೆ. ಈಗಾಗಲೇ ಚಂಪತ್ ರಾಯ್ ಮತ್ತು ಅನಿಲ್ ಮಿಶ್ರಾ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಜುಲೈ 6 ರಂದು ನಡೆಯಲಿರುವ ಟ್ರಸ್ಟ್‌ನ ನಿರ್ಣಾಯಕ ಸಭೆಯಲ್ಲಿ ಇವರ ರಾಜೀನಾಮೆ ಅಂಗೀಕಾರದ ಕುರಿತು ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ.
ದೇಣಿಗೆ ಎಣಿಕೆ ಕಾರ್ಯದಲ್ಲಿ ತೊಡಗಿದ್ದ ಪ್ರಮುಖ ಆರೋಪಿ ಅವಿನಾಶ್ ಶುಕ್ಲಾನನ್ನು ಅಯೋಧ್ಯೆ ಪೊಲೀಸರು 24 ಗಂಟೆಗಳ ಕಾಲ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಹಗರಣದಲ್ಲಿ ಇದುವರೆಗೆ ಬಂಧಿತರಾಗಿರುವವರಿಂದ ಜಪ್ತಿ ಮಾಡಲಾದ ನಗದು ಮತ್ತು ಚಿನ್ನಾಭರಣಗಳ ವಿವರ ಹೀಗಿದೆ:
• ನಗದು ರಿಕವರಿ: ಅವಿನಾಶ್ ಶುಕ್ಲಾ (20.39 ಲಕ್ಷ ರೂ.), ಕರುಣೇಶ್ ಪಾಂಡೆ (18.07 ಲಕ್ಷ ರೂ.), ಅನುಕಲ್ಪ್ ಮಿಶ್ರಾ (16.82 ಲಕ್ಷ ರೂ.), ಲವಕುಶ್ ಮಿಶ್ರಾ (14.25 ಲಕ್ಷ ರೂ.), ರಮಾಶಂಕರ್ ಮಿಶ್ರಾ (7.32 ಲಕ್ಷ ರೂ.) ಮತ್ತು ರಮಾಶಂಕರ್ ಯಾದವ್ (1 ಲಕ್ಷ ರೂ.).
• ಇತರ ಜಪ್ತಿ: ಸುಮಾರು 11 ಗ್ರಾಂ ಚಿನ್ನ, 375 ಗ್ರಾಂ ಬೆಳ್ಳಿ ಮತ್ತು 1,121 ಅಮೆರಿಕನ್ ಡಾಲರ್ (USD).
• 'ರಾಮರಾಜ್ಯ ಕೋಶ' ಕ್ಯೂಆರ್ ಕೋಡ್: ಆರೋಪಿ ಅವಿನಾಶ್ ಶುಕ್ಲಾ ವಾಸವಿದ್ದ ಯೋಗ ಕೇಂದ್ರದಿಂದ ಪೇಟಿಎಂ ಕ್ಯೂಆರ್ ಕೋಡ್ ಹೊಂದಿದ್ದ 'ರಾಮರಾಜ್ಯ ಕೋಶ' ಎಂಬ ನಕಲಿ ದೇಣಿಗೆ ಪೆಟ್ಟಿಗೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈವರೆಗೆ ಪ್ರಕರಣಕ್ಕೆ ಸಂಬಂಧಿಸಿ 8 ಜನರನ್ನು ಬಂಧಿಸಲಾಗಿದೆ.
ಇದು ಕಲಿಯುಗವಲ್ಲ ವಂಚನೆಯ ಯುಗ: ಧೀರೆಂದ್ರ ಕೃಷ್ಣ ಶಾಸ್ತ್ರಿ
ದೇಣಿಗೆ ದುರುಪಯೋಗದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಾಗೇಶ್ವರ ಧಾಮ್ ಮುಖ್ಯಸ್ಥ ಆಚಾರ್ಯ ಧೀರೆಂದ್ರ ಕೃಷ್ಣ ಶಾಸ್ತ್ರಿ, "ತಪ್ಪು ಮಾಡಿದವರಿಗೆ ದೇವರು ಮತ್ತು ದೇಶದ ಕಾನೂನು ಖಂಡಿತ ಶಿಕ್ಷೆ ನೀಡುತ್ತದೆ. ಪ್ರಸ್ತುತ ಕಾಲವು ಕಲಿಯುಗ ಮಾತ್ರವಲ್ಲ, ಇದು ವಂಚನೆಯ ಯುಗ. ಇಂತಹ ಸಮಯದಲ್ಲಿ ಮಠ, ಮಂದಿರಗಳು ಮತ್ತು ಸಂತರನ್ನು ವ್ಯವಸ್ಥಿತವಾಗಿ ಟಾರ್ಗೆಟ್ ಮಾಡಲಾಗುತ್ತಿದೆ. ನಮಗೆ ಎಸ್‌ಐಟಿ ತನಿಖೆಯ ಮೇಲೆ ಸಂಪೂರ್ಣ ಭರವಸೆಯಿದೆ" ಎಂದಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡಿ ಟ್ರಸ್ಟ್ ಅಧ್ಯಕ್ಷರ ಆರೋಗ್ಯ ವಿಚಾರಿಸಿದ ಸಿಎಂ ಯೋಗಿ!
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಲಕ್ನೋದ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ, ಮೂತ್ರನಾಳದ ಸೋಂಕು ಮತ್ತು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ರಾಮಮಂದಿರ ಟ್ರಸ್ಟ್ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ (89) ಅವರ ಆರೋಗ್ಯ ವಿಚಾರಿಸಿದರು. ಜುಲೈ 6ರ ಟ್ರಸ್ಟ್ ಸಭೆಯ ನೇತೃತ್ವವನ್ನು ಇವರೇ ವಹಿಸಬೇಕಾಗಿದ್ದು, ಸದ್ಯ ಇವರ ಆರೋಗ್ಯ ಸ್ಥಿರವಾಗಿದೆ ಎನ್ನಲಾಗಿದೆ. ಜೂನ್ 7 ರಂದು ಈ ಹಗರಣ ಮೊದಲ ಬಾರಿಗೆ ಬೆಳಕಿಗೆ ಬಂದಿತ್ತು.

