
ಅಯೋಧ್ಯೆ ರಾಮ ಮಂದಿರ
ಅಯೋಧ್ಯೆ ಹಗರಣ: ಯುಪಿ ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಗೆ ರಾಜಕೀಯ ಹಿನ್ನಡೆ ಭೀತಿ!
ಅಯೋಧ್ಯೆಯಲ್ಲಿ ಒಂದು ಕಾಲದಲ್ಲಿ ಆಟೋ ಚಾಲಕನಾಗಿದ್ದ ಈತ, ಈಗ ಅಯೋಧ್ಯೆ ಮತ್ತು ಲಕ್ನೋದಲ್ಲಿ ಬರೋಬ್ಬರಿ 50 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾನೆ!
ಅಯೋಧ್ಯೆಯ ಭವ್ಯ ರಾಮ ಜನ್ಮಭೂಮಿ ದೇವಾಲಯವು ಮತ್ತೊಮ್ಮೆ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಭಕ್ತರು ಶ್ರೀರಾಮನಿಗೆ ಅರ್ಪಿಸಿದ ಸುಮಾರು 200 ಕೋಟಿ ರೂ. ಗೂ ಅಧಿಕ ಮೌಲ್ಯದ ಕಾಣಿಕೆ ಹಣ ಮತ್ತು ಚಿನ್ನಾಭರಣಗಳು ದುರುಪಯೋಗವಾಗಿರುವ ಭಾರಿ ಹಗರಣವೊಂದು ಈಗ ಹಂತ ಹಂತವಾಗಿ ಬೆಳಕಿಗೆ ಬರುತ್ತಿದ್ದು, ಬಿಜೆಪಿ ಮತ್ತು ಮಂದಿರ ಟ್ರಸ್ಟ್‌ಗೆ ಭಾರಿ ಮುಜುಗರ ಉಂಟುಮಾಡಿದೆ.
ಜೂನ್ ಆರಂಭದಲ್ಲಿ ರಾಮಮಂದಿರದ ಕಾಣಿಕೆ ಪೆಟ್ಟಿಗೆಗಳಿಂದ ಕೋಟ್ಯಂತರ ರೂ. ಹಣ ಕಾಣೆಯಾಗಿರುವ ವರದಿಗಳು ಬಿಡುಗಡೆಯಾಗಿದ್ದವು. ದೇವಾಲಯದಲ್ಲಿ ಕೇವಲ 14 ಸಾವಿರದಿಂದ 20 ಸಾವಿರ ರೂ. ಮಾಸಿಕ ಸಂಬಳಕ್ಕೆ ಕೆಲಸ ಮಾಡುತ್ತಿದ್ದ ಕೆಲವು ನಗದು ಎಣಿಕೆ ಸಿಬ್ಬಂದಿಯ ಜೀವನಶೈಲಿ ದಿಢೀರನೆ ಬದಲಾಗಿದ್ದು ಈ ಸಂಶಯಕ್ಕೆ ಕಾರಣವಾಗಿತ್ತು. ಕೇವಲ ಐದಾರು ವರ್ಷಗಳಲ್ಲಿ ಸಾಮಾನ್ಯ ನೌಕರರು ಕೋಟ್ಯಂತರ ರೂ. ಮೌಲ್ಯದ ಐಷಾರಾಮಿ ಕಾರುಗಳು, ಜಮೀನು ಮತ್ತು ಬಂಗಲೆಗಳನ್ನು ಖರೀದಿಸಿರುವುದು ಬೆಳಕಿಗೆ ಬಂದಿದೆ.
ಆಟೋ ಚಾಲಕನಿಂದ 50 ಕೋಟಿ ಒಡೆಯನಾದ!
ತನಿಖಾ ಸಂಸ್ಥೆಗಳ ರಾಡಾರ್‌ನಲ್ಲಿರುವ ಪ್ರಮುಖ ಹೆಸರುಗಳಲ್ಲಿ ಟಿನ್ನು ಯಾದವ್ ಎಂಬಾತನ ಹೆಸರು ಮುಂಚೂಣಿಯಲ್ಲಿದೆ. ಅಯೋಧ್ಯೆಯಲ್ಲಿ ಒಂದು ಕಾಲದಲ್ಲಿ ಆಟೋ ಚಾಲಕನಾಗಿದ್ದ ಈತ, ಈಗ ಅಯೋಧ್ಯೆ ಮತ್ತು ಲಕ್ನೋದಲ್ಲಿ ಬರೋಬ್ಬರಿ 50 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾನೆ! ವಿಮಾನ ನಿಲ್ದಾಣದ ಬಳಿ 70 ಕೊಠಡಿಗಳ ಬೃಹತ್ ಹಾಸ್ಟೆಲ್, ಮೂರು ರೆಸ್ಟೋರೆಂಟ್‌ಗಳು ಮತ್ತು ಫಾರ್ಚೂನರ್ ಕಾರು ಈತನ ಬಳಿ ಇರುವುದು ಪತ್ತೆಯಾಗಿದೆ.
ಇದೇ ರೀತಿ, ಕಾಣಿಕೆ ಆಭರಣಗಳ ದಾಖಲೆ ಇಡುತ್ತಿದ್ದ ಕೆ.ಡಿ. ತಿವಾರಿ (5 ಕೋಟಿ ರೂ. ಆಸ್ತಿ), ನೋಟು ಎಣಿಕೆ ಸಿಬ್ಬಂದಿ ರಾಜೇಶ್ ಪಾಠಕ್, ಅನುಕಲ್ಪ್ ಮಿಶ್ರಾ ಮತ್ತು ಒಂದು ಕಾಲದಲ್ಲಿ ಕಾರ್ ಮೆಕ್ಯಾನಿಕ್ ಆಗಿದ್ದ ಲವ್‌ಕುಶ್ ಮಿಶ್ರಾ ಅವರ ಆಸ್ತಿಗಳು ಕೂಡ ತನಿಖೆಯ ವ್ಯಾಪ್ತಿಯಲ್ಲಿವೆ. ಲವ್‌ಕುಶ್ ಮಿಶ್ರಾ ಅವರ ಮನೆಯ ಹಸುವಿನ ಸಗಣಿ ರಾಶಿಯ ಕೆಳಗೆ ಅಡಗಿಸಿಟ್ಟಿದ್ದ 10 ಲಕ್ಷ ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ರಹಸ್ಯ ಕೋಣೆಯಲ್ಲಿ ನಡೆಯುತ್ತಿತ್ತು ವಂಚನೆ!
ರಾಮ್ ಲಲ್ಲಾನ ಗರ್ಭಗುಡಿ ಮತ್ತು ದರ್ಶನ ಮಾರ್ಗದಲ್ಲಿ ಇರಿಸಲಾದ ಕಾಣಿಕೆ ಪೆಟ್ಟಿಗೆಗಳ ಹಣವನ್ನು ಅತ್ಯಂತ ರಹಸ್ಯ ಕೋಣೆಗೆ ಕೊಂಡೊಯ್ದು ಎಣಿಕೆ ಮಾಡಲಾಗುತ್ತಿತ್ತು. ಒಟ್ಟು 50 ಸಿಬ್ಬಂದಿ ಈ ಕಾರ್ಯದಲ್ಲಿದ್ದರು. ಟ್ರಸ್ಟ್‌ನ ಮಾಜಿ ಮುಖ್ಯ ಲೆಕ್ಕಪತ್ರ ಅಧಿಕಾರಿ ಮಹಿಪಾಲ್ ಸಿಂಗ್ ಅವರ ಪ್ರಕಾರ, 2020-21ರಿಂದಲೇ ಈ ವ್ಯವಸ್ಥಿತ ವಂಚನೆ ನಡೆಯುತ್ತಿದೆ. ನಗದು ಎಣಿಕೆ ಸಿಬ್ಬಂದಿ ಒಟ್ಟು ಮೊತ್ತದಲ್ಲಿ ಪ್ರತಿಬಾರಿಯೂ ಕೆಲವು ಲಕ್ಷ ರೂ. ಗಳನ್ನು ಕಡಿಮೆ ತೋರಿಸಿ ವೋಚರ್ ಎಂಟ್ರಿ ಮಾಡುತ್ತಿದ್ದರು. ಅಲ್ಲದೆ, ಭಕ್ತರು ನೀಡಿದ ಚಿನ್ನ-ಬೆಳ್ಳಿ ಆಭರಣಗಳಿದ್ದ 10 ಪ್ರತ್ಯೇಕ ಪೆಟ್ಟಿಗೆಗಳನ್ನು ಯಾವುದೇ ರಶೀದಿ ಇಲ್ಲದೆ ಸಾಗಿಸಲಾಗಿದೆ. ಇದನ್ನು ಪ್ರಶ್ನಿಸಿದ ಹಿನ್ನೆಲೆಯಲ್ಲಿಯೇ ತಮ್ಮನ್ನು ಕೆಲಸದಿಂದ ತೆಗೆದುಹಾಕಲಾಯಿತು ಎಂದು ಮಹಿಪಾಲ್ ಸಿಂಗ್ ಆರೋಪಿಸಿದ್ದಾರೆ.
ತನಿಖೆಗಿಳಿದ ಎಸ್‌ಐಟಿ
ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಉತ್ತರ ಪ್ರದೇಶ ಸರ್ಕಾರವು ಶನಿವಾರ (ಜೂ. 13) ಮೂವರು ಸದಸ್ಯರ ವಿಶೇಷ ತನಿಖಾ ತಂಡವನ್ನು ರಚಿಸಿದೆ. ಲಕ್ನೋ ವಿಭಾಗೀಯ ಆಯುಕ್ತ ವಿಜಯ್ ವಿಶ್ವಾಸ್ ಪಂತ್ (ಐಎಎಸ್), ಡಿಜಿಪಿ ಕಿರಣ್ ಎಸ್ (ಐಪಿಎಸ್) ಮತ್ತು ಹಣಕಾಸು ಇಲಾಖೆಯ ವಿಶೇಷ ಕಾರ್ಯದರ್ಶಿ ನೀಲ್ ರತನ್ ಈ ತಂಡದಲ್ಲಿದ್ದಾರೆ. ಎಸ್‌ಐಟಿ 15 ದಿನಗಳ ಒಳಗಾಗಿ ವರದಿ ಸಲ್ಲಿಸಬೇಕಿದೆ. ಸದ್ಯಕ್ಕೆ ಇಬ್ಬರನ್ನು ಬಂಧಿಸಲಾಗಿದ್ದು, 2 ಕೋಟಿ ರೂ. ನಗದು ಮತ್ತು ಐಫೋನ್‌ಗಳನ್ನು ಜಪ್ತಿ ಮಾಡಲಾಗಿದೆ. ಏಳರಿಂದ ಎಂಟು ತಿಂಗಳ ಹಿಂದಿನ ಸಿಸಿಟಿವಿ ದೃಶ್ಯಾವಳಿಗಳನ್ನು ಉದ್ದೇಶಪೂರ್ವಕವಾಗಿ ಅಳಿಸಿಹಾಕಿರುವ ಕುರಿತೂ ತನಿಖೆ ನಡೆಯುತ್ತಿದೆ. ಈ ಪ್ರಕರಣದ ಕುರಿತು ಸಿಬಿಐ ತನಿಖೆ ಮತ್ತು ಸಿಎಜಿ ಆಡಿಟ್ ನಡೆಸಬೇಕೆಂದು ಕೋರಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಾಗಿದೆ.
ಬಿಜೆಪಿಗೆ ರಾಜಕೀಯ ಹಿನ್ನಡೆ ಭೀತಿ
ಬಿಜೆಪಿಯ ಹಿರಿಯ ನಾಯಕ ರಜನೀಶ್ ಸಿಂಗ್ ಅವರೇ ಮಂದಿರದ ಹಣಕಾಸು ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವಂತೆ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಇತ್ತ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, "ರಾಮ ಮಂದಿರದ ಕಾಣಿಕೆಯಲ್ಲೇ ಕಳ್ಳತನ ನಡೆದಿರುವುದು ಸನಾತನ ಧರ್ಮಕ್ಕೆ ಮಾಡಿದ ಅವಮಾನ. ಈ ಪಿತೂರಿಯ ಮೂಲ ಬೇರೆಲ್ಲೂ ಇಲ್ಲ, ತೀರಾ ಹತ್ತಿರದಲ್ಲೇ ಇದೆ" ಎಂದು ಸಾಮಾಜಿಕ ಜಾಲತಾಣದಲ್ಲಿ ತೀಕ್ಷ್ಣವಾಗಿ ಕುಟುಕಿದ್ದಾರೆ.
ರಾಜಕೀಯ ಹಿನ್ನೆಡೆ ಭೀತಿ
ಲೋಕಸಭಾ ಚುನಾವಣೆಯಲ್ಲಿ ಅಯೋಧ್ಯೆ ಒಳಗೊಂಡ ಫೈಜಾಬಾದ್ ಕ್ಷೇತ್ರವನ್ನು ಕಳೆದುಕೊಂಡಿದ್ದ ಬಿಜೆಪಿಗೆ, ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಹೊಸ್ತಿಲಿನಲ್ಲಿ ಈ ಬೃಹತ್ ಹಗರಣವು ಭಾರಿ ರಾಜಕೀಯ ಹೊಡೆತ ನೀಡುವ ಮುನ್ಸೂಚನೆ ನೀಡಿದೆ.

