
Five state election: ಪ.ಬಂಗಾಳದಲ್ಲಿ ಬಿಜೆಪಿ ಉದಯ, ಕೇರಳದಲ್ಲಿ ಕೈಗೆ ಅಧಿಕಾರ ?
ಪಂಚರಾಜ್ಯ ಸಮರದ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿದ್ದು, ಐದು ರಾಜ್ಯಗಳ ಪೈಕಿ ಮೂರು ರಾಜ್ಯಗಳಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಹೆಚ್ಚಿನ ಸ್ಥಾನಗಳು ಲಭ್ಯವಾಗಲಿವೆ ಎಂದು ಭವಿಷ್ಯ ನುಡಿದಿವೆ.
ದೇಶದ ಪಂಚರಾಜ್ಯ ಚುನಾವಣೆಗೆ ಮತದಾನ ಮುಕ್ತಾಯಗೊಂಡಿದ್ದು, ಐದು ಪ್ರಮುಖ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ. ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಅಧಿಕಾರ ಕಳೆದುಕೊಳ್ಳಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಅಸ್ಸಾಂನಲ್ಲಿ ಎನ್‌ಡಿಎ ಮೈತ್ರಿಕೂಟ ಅಧಿಕಾರ ಉಳಿಸಿಕೊಳ್ಳಲಿದೆ. ಕೇರಳದಲ್ಲಿ ಕಾಂಗ್ರೆಸ್ ಮೈತ್ರಿ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂದು ಹೇಳಲಾಗಿದೆ. ಪುದುಚೇರಿಯಲ್ಲಿ ಆಡಳಿತರೂಢ ಮೈತ್ರಿಕೂಟಕ್ಕೆ ಅಧಿಕಾರ ಚುಕ್ಕಾಣಿ ಹಿಡಿಯುವ ಸಾಧ್ಯತೆ ಇದೆ ಎಂದು ಸಮೀಕ್ಷೆಗಳು ಹೇಳಿವೆ.
ಪಶ್ಚಿಮಬಂಗಾಳದಲ್ಲಿ ಬಿಜೆಪಿಗೆ ಗೆಲುವು
ಚುನಾವಣೋತ್ತರ ಸಮೀಕ್ಷೆಗಳು ಈ ಬಾರಿ ದೊಡ್ಡ ರಾಜಕೀಯ ಬದಲಾವಣೆಯ ಮುನ್ಸೂಚನೆ ನೀಡಿವೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸುದೀರ್ಘ ಆಡಳಿತ ಅಂತ್ಯವಾಗಲಿದ್ದು, ಬಿಜೆಪಿ ಮೊದಲ ಬಾರಿಗೆ ಬಂಗಾಳದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಭವಿಷ್ಯ ನುಡಿದಿವೆ. ಮ್ಯಾಟ್ರಿಜ್ ಸಂಸ್ಥೆಯ ಅಂಕಿಅಂಶಗಳ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ನಡುವೆ ಅತ್ಯಂತ ಸಮಬಲದ ಹೋರಾಟ ಏರ್ಪಟ್ಟಿದ್ದರೂ, ಅಂತಿಮವಾಗಿ ಬಿಜೆಪಿ ಮುನ್ನಡೆ ಸಾಧಿಸಲಿದೆ. ಬಿಜೆಪಿ ಮೈತ್ರಿಕೂಟಕ್ಕೆ 146 ರಿಂದ 161 ಸ್ಥಾನಗಳು, ಟಿಎಂಸಿ ಮೈತ್ರಿಕೂಟವು 125 ರಿಂದ 140 ಸ್ಥಾನಗಳು. ಇತರರು 6 ರಿಂದ 10 ಸ್ಥಾನಗಳನ್ನುಪಡೆದು ಕೊಳ್ಳಲಿದ್ದಾರೆ.
ಪಿ-ಮಾರ್ಕ್ ಸಂಸ್ಥೆಯು ಸಹ ಬಿಜೆಪಿಗೆ ಸ್ಪಷ್ಟ ಬಹುಮತವನ್ನು ನೀಡಿದೆ. ಕಳೆದ ಬಾರಿಗಿಂತಲೂ ಬಿಜೆಪಿ ಈ ಬಾರಿ ಅತ್ಯುತ್ತಮ ಪ್ರದರ್ಶನ ನೀಡಲಿದೆ ಎಂದು ಅಂದಾಜಿಸಿದೆ. ಬಿಜೆಪಿ ಮೈತ್ರಿಕೂಟವು 150 ರಿಂದ 175 ಸ್ಥಾನಗಳು, ಟಿಎಂಸಿ ಮೈತ್ರಿಕೂಟ 118 ರಿಂದ 138 ಸ್ಥಾನಗಳು, ಇತರರು 2 ರಿಂದ 6 ಸ್ಥಾನಗಳನ್ನು ಪಡೆದುಕೊಳ್ಳಲಾಗಿದೆ ಎಂದು ಅಂದಾಜಿಸಲಾಗಿದೆ.
ಅಸ್ಸಾಂನಲ್ಲಿ ಎನ್‌ಡಿಎ ಮೈತ್ರಿಕೂಟ
ಅಸ್ಸಾಂ ವಿಧಾನಸಭಾ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಗಳು ಹೊರಬಂದಿದ್ದು, ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ರಾಜ್ಯದಲ್ಲಿ ಸತತವಾಗಿ ಅಧಿಕಾರದ ಚುಕ್ಕಾಣಿ ಹಿಡಿಯುವ ಸ್ಪಷ್ಟ ಮುನ್ಸೂಚನೆ ನೀಡಿದೆ. ಒಟ್ಟು 126 ಸ್ಥಾನಗಳ ಪೈಕಿ ಎನ್‌ಡಿಎ ಮೈತ್ರಿಕೂಟವು ಅತಿ ದೊಡ್ಡ ಅಂತರದ ಜಯ ಸಾಧಿಸುವ ಸಾಧ್ಯತೆಯಿದೆ. ಸಮೀಕ್ಷೆಯ ಪ್ರಕಾರ, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು 88 ರಿಂದ 100 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ.
ಕಳೆದ ಬಾರಿ 60 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ, ಈ ಬಾರಿ ತನ್ನ ಬಲವನ್ನು ಹೆಚ್ಚಿಸಿಕೊಂಡು 70 ರಿಂದ 80 ಸ್ಥಾನಗಳನ್ನು ಏಕಾಂಗಿಯಾಗಿ ಗೆಲ್ಲುವ ಸಾಧ್ಯತೆಯಿದೆ. ಬಿಪಿಎಫ್ ಕಳೆದ ಚುನಾವಣೆಯಲ್ಲಿ ಕೇವಲ 4 ಸ್ಥಾನ ಪಡೆದಿದ್ದು, ಈ ಬಾರಿ 9 ರಿಂದ 11 ಸ್ಥಾನಗಳನ್ನು ಪಡೆಯುವ ಮೂಲಕ ಮೈತ್ರಿಕೂಟಕ್ಕೆ ಬಲ ತುಂಬಲಿದೆ. ಅಸ್ಸಾಂ ಗಣ ಪರಿಷತ್ ಈ ಬಾರಿ 7 ರಿಂದ 9 ಸ್ಥಾನಗಳಲ್ಲಿ ಜಯಗಳಿಸಬಹುದು ಎಂದು ಅಂದಾಜಿಸಲಾಗಿದೆ.
ಹಿನ್ನಡೆ ಅನುಭವಿಸಿದ ಕಾಂಗ್ರೆಸ್ ಮೈತ್ರಿಕೂಟ
ವಿರೋಧ ಪಕ್ಷವಾದ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟವು ಈ ಬಾರಿಯೂ ಮ್ಯಾಜಿಕ್ ನಂಬರ್ ತಲುಪುವಲ್ಲಿ ವಿಫಲವಾಗಲಿದೆ ಎಂದು ಸಮೀಕ್ಷೆ ಹೇಳಿದೆ. ಕಳೆದ ಬಾರಿ 29 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್, ಈ ಬಾರಿ 22 ರಿಂದ 30 ಸ್ಥಾನಗಳಿಗೆ ಕುಸಿಯುವ ಸಾಧ್ಯತೆಯಿದೆ. ಇತರ ಮಿತ್ರಪಕ್ಷಗಳಾದ ರೈಜೋರ್ ದಳ (1-4), ಎಜೆಪಿ (1-2) ಮತ್ತು ಸಿಪಿಐ(ಎಂ) (0-1) ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಮೈತ್ರಿಕೂಟವು ಒಟ್ಟಾರೆಯಾಗಿ 24 ರಿಂದ 36 ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ಅಂದಾಜಿಸಲಾಗಿದೆ.
ತಮಿಳುನಾಡಿನಲ್ಲಿ ಡಿಎಂಕೆ ಮತ್ತೆ ಅಧಿಕಾರಕ್ಕೆ
ತಮಿಳುನಾಡಿನಲ್ಲಿ ಆಡಳಿತಾರೂಢ ಡಿಎಂಕೆ ಮೈತ್ರಿಕೂಟವು ತನ್ನ ಪ್ರಾಬಲ್ಯವನ್ನು ಮುಂದುವರಿಸಲಿದ್ದು, ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ. ಈ ಮೈತ್ರಿಕೂಟವು 125 ರಿಂದ 145 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ವಿರೋಧ ಪಕ್ಷವಾದ ಎಐಎಡಿಎಂಕೆ ಮೈತ್ರಿಕೂಟವು ತೀವ್ರ ಪೈಪೋಟಿ ನೀಡಿದರೂ ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾಗಬಹುದು. ಈ ಮೈತ್ರಿಕೂಟವು 65 ರಿಂದ 80 ಸ್ಥಾನಗಳನ್ನು ಪಡೆಯಬಹುದು ಎಂದು ಅಂದಾಜಿಸಲಾಗಿದೆ. ನಟ ವಿಜಯ್ ಅವರ ನೇತೃತ್ವದ ನೂತನ ಪಕ್ಷ 'ತಮಿಳಗ ವೆಟ್ರಿ ಕಳಗಂ' ತನ್ನ ಚೊಚ್ಚಲ ಚುನಾವಣೆಯಲ್ಲೇ ಭರ್ಜರಿ ಪ್ರದರ್ಶನ ನೀಡುವ ಸಾಧ್ಯತೆಯಿದೆ. ಸಮೀಕ್ಷೆಯ ಪ್ರಕಾರ, ಈ ಪಕ್ಷವು 18 ರಿಂದ 24 ಸ್ಥಾನಗಳನ್ನು ಗೆಲ್ಲುವ ಮೂಲಕ ತಮಿಳುನಾಡು ರಾಜಕಾರಣದಲ್ಲಿ ಅತ್ಯಂತ ನಿರ್ಣಾಯಕ ಶಕ್ತಿಯಾಗಿ ಹೊರಹೊಮ್ಮುವ ಸೂಚನೆ ನೀಡಿದೆ. ಸಮೀಕ್ಷೆಯು ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರವನ್ನು ಉಳಿಸಿಕೊಳ್ಳಲಿದೆ. ವಿಜಯ್ ಅವರ ರಾಜಕೀಯ ಪ್ರವೇಶವು ಸಾಂಪ್ರದಾಯಿಕ ದ್ರಾವಿಡ ಪಕ್ಷಗಳ ಮತಬ್ಯಾಂಕ್‌ಗೆ ಅಡ್ಡಿಯಾಗಲಿದೆ ಎನ್ನಲಾಗಿದೆ.
ಕೇರಳದಲ್ಲಿ ಕಾಂಗ್ರೆಸ್ ಪರ್ವ?
ಕೇರಳದಲ್ಲಿ ಈ ಬಾರಿ ಅಧಿಕಾರ ಬದಲಾವಣೆಯಾಗುವ ಸಾಧ್ಯತೆಯಿದೆ ಎಂದು ಸಮೀಕ್ಷೆ ಹೇಳಿದೆ. ಸತತ ಎರಡು ಅವಧಿಗೆ ಅಧಿಕಾರ ನಡೆಸಿದ್ದ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗದ (ಎಲ್‌ಡಿಎಫ್) ಆಡಳಿತಕ್ಕೆ ಈ ಬಾರಿ ಹಿನ್ನಡೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಯುಡಿಎಫ್ (ಕಾಂಗ್ರೆಸ್ ಮೈತ್ರಿಕೂಟ) 78 ರಿಂದ 90 ಸ್ಥಾನಗಳು ಎಲ್‌ಡಿಎಫ್ 49 ರಿಂದ 62 ಸ್ಥಾನಗಳು ಮತ್ತು ಬಿಜೆಪಿ 0 ರಿಂದ 3 ಸ್ಥಾನಗಳು ಲಭ್ಯವಾಗುವ ಸಾಧ್ಯತೆ ಇದೆ. ಸಮೀಕ್ಷೆಯ ಪ್ರಕಾರ, ಕೇರಳದ ಮತದಾರರು ಈ ಬಾರಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟಕ್ಕೆ ಒಲವು ತೋರಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾಗುವ ಮುನ್ಸೂಚನೆ ಇದೆ. ಎಡರಂಗವು ಎರಡನೇ ಸ್ಥಾನಕ್ಕೆ ಕುಸಿಯುವ ಸಾಧ್ಯತೆಯಿದೆ ಎನ್ನಲಾಗಿದೆ.
ಪುದುಚೇರಿಯಲ್ಲಿ ಆಡಳಿತರೂಢ ಮೈತ್ರಿಕೂಟ ಸಾಧ್ಯತೆ
ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಈ ಬಾರಿಯೂ ಆಡಳಿತರೂಢ ಮೈತ್ರಿಕೂಟವೇ ಅಧಿಕಾರ ಉಳಿಸಿಕೊಳ್ಳಲಿದೆ ಎಂಬುದು ಸಮೀಕ್ಷೆ ಹೇಳಿದೆ. ಪುದುಚೇರಿಯ ಒಟ್ಟು 30 ವಿಧಾನಸಭಾ ಸ್ಥಾನಗಳ ಪೈಕಿ ಎನ್. ರಂಗಸ್ವಾಮಿ ನೇತೃತ್ವದ ಎನ್‌ಆರ್ ಕಾಂಗ್ರೆಸ್ ಮತ್ತು ಬಿಜೆಪಿ ಒಳಗೊಂಡ ಎನ್‌ಡಿಎ ಮೈತ್ರಿಕೂಟವು 16 ರಿಂದ 20 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಪುದುಚೇರಿಯಲ್ಲಿ ಸರ್ಕಾರ ರಚಿಸಲು 16 ಸ್ಥಾನಗಳ ಸರಳ ಬಹುಮತದ ಅಗತ್ಯವಿದೆ.
ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟಕ್ಕೆ ಈ ಬಾರಿಯೂ ತೀವ್ರ ಹಿನ್ನಡೆಯಾಗುವ ಸಾಧ್ಯತೆ ಇದೆ. ಕೇವಲ 6 ರಿಂದ 8 ಸ್ಥಾನಗಳನ್ನು ಮಾತ್ರ ಪಡೆಯಬಹುದು ಎಂದು ಅಂದಾಜಿಸಲಾಗಿದೆ. ಸಮೀಕ್ಷೆಯು ನಿಜವಾದರೆ ಎನ್. ರಂಗಸ್ವಾಮಿ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವುದು ಬಹುತೇಕ ಖಚಿತವಾಗಲಿದೆ. ಬಿಜೆಪಿಯೊಂದಿಗೆ ಅವರ ಮೈತ್ರಿಯು ಮತದಾರರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಸಮೀಕ್ಷೆ ಹೇಳಿದೆ. ಉಳಿದ 2 ರಿಂದ 6 ಸ್ಥಾನಗಳು ಪಕ್ಷೇತರರು ಅಥವಾ ಸಣ್ಣ ಪಕ್ಷಗಳ ಪಾಲಾಗುವ ಸಾಧ್ಯತೆಯಿದೆ. ಆದರೆ, ಎನ್‌ಡಿಎ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ಸಿಗುವುದರಿಂದ ಈ ಇತರರ ಬೆಂಬಲ ಸರ್ಕಾರ ರಚನೆಗೆ ಅನಿವಾರ್ಯವಾಗದಿರಬಹುದು ಎನ್ನಲಾಗಿದೆ.

