
Assembly Election 2026 | ಬಂಗಾಳ, ತಮಿಳುನಾಡಿನಲ್ಲಿ ಐತಿಹಾಸಿಕ ಮತದಾನ: ಸ್ವಾತಂತ್ರ್ಯಾ ನಂತರದ ಗರಿಷ್ಠ ದಾಖಲೆ
ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಚುನಾವಣೆಯಲ್ಲಿ ಸ್ವಾತಂತ್ರ್ಯಾ ನಂತರದ ಗರಿಷ್ಠ ಮತದಾನ ದಾಖಲಾಗಿದೆ. ಬಂಗಾಳದಲ್ಲಿ ಶೇ. 92.72 ಮತ್ತು ತಮಿಳುನಾಡಿನಲ್ಲಿ ಶೇ. 85.14 ರಷ್ಟು ಮತದಾನವಾಗಿದೆ.
ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಹೊಸ ಇತಿಹಾಸ ಬರೆದಿದ್ದಾರೆ. ಸ್ವಾತಂತ್ರ್ಯದ ನಂತರದ ಈವರೆಗಿನ ಚುನಾವಣಾ ಇತಿಹಾಸದಲ್ಲೇ ಅತ್ಯಂತ ಗರಿಷ್ಠ ಪ್ರಮಾಣದ ಮತದಾನ ಈ ಎರಡೂ ರಾಜ್ಯಗಳಲ್ಲಿ ದಾಖಲಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಶ್ಲಾಘಿಸಿದ್ದಾರೆ.
ರಾಜ್ಯವಾರು ಮತದಾನದ ಪ್ರಮಾಣ
ಗುರುವಾರ ರಾತ್ರಿ 10.30ರ ವೇಳೆಗೆ ಲಭ್ಯವಾದ ಅಂಕಿಅಂಶಗಳ ಪ್ರಕಾರ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ಮತದಾನ ದಾಖಲಾಗಿದ್ದು, ಪಶ್ಚಿಮ ಬಂಗಾಳದಲ್ಲಿ ದಾಖಲೆಯ ಶೇ. 92.72 ರಷ್ಟು ಮತ್ತು ತಮಿಳುನಾಡಿನಲ್ಲಿ ದಾಖಲೆಯ ಶೇ. 85.14 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಎರಡೂ ರಾಜ್ಯಗಳಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿರುವುದು ವಿಶೇಷ. ಬಂಗಾಳದಲ್ಲಿ ಶೇ. 92.69 ರಷ್ಟು ಮತ್ತು ತಮಿಳುನಾಡಿನಲ್ಲಿ ಶೇ. 85.76 ರಷ್ಟು ಮಹಿಳಾ ಮತದಾರರು ಹಕ್ಕು ಚಲಾಯಿಸಿದ್ದಾರೆ.
ಪಶ್ಚಿಮ ಬಂಗಾಳ: 90ರ ಗಡಿ ದಾಟಿದ ಜಿಲ್ಲೆಗಳು
ಪಶ್ಚಿಮ ಬಂಗಾಳದ ಬಹುತೇಕ ಜಿಲ್ಲೆಗಳಲ್ಲಿ ಶೇ. 90ಕ್ಕೂ ಹೆಚ್ಚು ಭರ್ಜರಿ ಮತದಾನ ದಾಖಲಾಗಿದ್ದು, ಜಿಲ್ಲಾವಾರು ವಿವರಗಳ ಪ್ರಕಾರ ದಕ್ಷಿಣ ದಿನಾಜ್‌ಪುರ ಶೇ. 94.85 ರಷ್ಟು ಮತದಾನದೊಂದಿಗೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ. ಉಳಿದಂತೆ ಕೂಚ್ ಬೆಹಾರ್‌ನಲ್ಲಿ ಶೇ. 94.54, ಬೀರ್ಭೂಮ್‌ನಲ್ಲಿ ಶೇ. 93.70, ಜಲ್ಪೈಗುರಿಯಲ್ಲಿ ಶೇ. 93.23 ಮತ್ತು ಮುರ್ಷಿದಾಬಾದ್‌ನಲ್ಲಿ ಶೇ. 92.93 ರಷ್ಟು ಮತದಾನವಾಗಿದ್ದರೆ, ಕಾಲಿಂಪಾಂಗ್‌ನಲ್ಲಿ ಶೇ. 83 ರಷ್ಟು ಮತದಾನವಾಗುವ ಮೂಲಕ ರಾಜ್ಯದಲ್ಲೇ ಅತಿ ಕಡಿಮೆ ಪ್ರಮಾಣ ದಾಖಲಿಸಿದೆ.
ಬಂಗಾಳದಲ್ಲಿ ಅಲ್ಲಲ್ಲಿ ಸಣ್ಣಪುಟ್ಟ ಹಿಂಸಾಚಾರ ವರದಿಯಾಗಿದ್ದರೂ, ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಮತದಾನವು ಶಾಂತಿಯುತವಾಗಿ ನಡೆದಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ತಮಿಳುನಾಡು: ಸ್ಟಾರ್ ಅಭ್ಯರ್ಥಿಗಳ ಕ್ಷೇತ್ರದಲ್ಲಿ ಹೇಗಿದೆ ಮತದಾನ?
ತಮಿಳುನಾಡಿನಲ್ಲೂ ಮತದಾರರ ಉತ್ಸಾಹ ಮುಗಿಲು ಮುಟ್ಟಿದ್ದು, ಜಿಲ್ಲಾವಾರು ವಿವರಗಳ ಪ್ರಕಾರ ಕರೂರ್ ಶೇ. 92.62 ರಷ್ಟು ಮತದಾನದೊಂದಿಗೆ ರಾಜ್ಯದಲ್ಲೇ ಗರಿಷ್ಠ ಪ್ರಮಾಣ ದಾಖಲಿಸಿದ್ದರೆ, ಸೇಲಂನಲ್ಲಿ ಶೇ. 90.42 ಮತ್ತು ಕನ್ನಿಯಾಕುಮಾರಿಯಲ್ಲಿ ಅತ್ಯಂತ ಕಡಿಮೆ ಅಂದರೆ ಶೇ. 75.61 ರಷ್ಟು ಮತದಾನವಾಗಿದೆ; ಇನ್ನು ಪ್ರಮುಖ ಅಭ್ಯರ್ಥಿಗಳ ಕ್ಷೇತ್ರಗಳನ್ನು ಗಮನಿಸಿದರೆ, ನಟ ವಿಜಯ್ ಸ್ಪರ್ಧಿಸಿರುವ ಪೆರಂಬೂರ್‌ನಲ್ಲಿ ಶೇ. 89.73, ಸಿಎಂ ಎಂ.ಕೆ. ಸ್ಟಾಲಿನ್ ಅವರ ಕೊಲತ್ತೂರಿನಲ್ಲಿ ಶೇ. 86.11, ಇ.ಕೆ. ಪಳನಿಸ್ವಾಮಿ ಅವರ ಎಡಪ್ಪಾಡಿಯಲ್ಲಿ ಶೇ. 92.09, ಉದಯನಿಧಿ ಸ್ಟಾಲಿನ್ ಅವರ ಚೆಪಾಕ್-ತಿರುವಲ್ಲಿಕೇನಿಯಲ್ಲಿ ಶೇ. 84.34 ಹಾಗೂ ಮೈಲಾಪುರದಲ್ಲಿ ಚೆನ್ನೈ ಜಿಲ್ಲೆಯಲ್ಲೇ ಕನಿಷ್ಠ ಅಂದರೆ ಶೇ. 74.89 ರಷ್ಟು ಮತದಾನ ದಾಖಲಾಗಿದೆ.
ಸಂದೇಶ ಮತ್ತು ಮುಂದಿನ ಹಂತ:
"ಬಂಗಾಳ ಮತ್ತು ತಮಿಳುನಾಡಿನ ಪ್ರತಿ ಮತದಾರರಿಗೂ ಚುನಾವಣಾ ಆಯೋಗವು ಸಲ್ಯೂಟ್ ಮಾಡುತ್ತದೆ" ಎಂದು ಆಯುಕ್ತ ಜ್ಞಾನೇಶ್ ಕುಮಾರ್ ಹೇಳಿದ್ದಾರೆ. 2021ರ ಚುನಾವಣೆಯಲ್ಲಿ ಬಂಗಾಳದಲ್ಲಿ ಶೇ. 85.2 ಮತ್ತು ತಮಿಳುನಾಡಿನಲ್ಲಿ ಶೇ. 76.6 ಮತದಾನವಾಗಿತ್ತು. ಈ ಬಾರಿ ಆ ಎಲ್ಲಾ ದಾಖಲೆಗಳು ಪತನಗೊಂಡಿವೆ.
ತಮಿಳುನಾಡಿನ ಎಲ್ಲಾ 234 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ಮುಗಿದಿದ್ದರೆ, ಪಶ್ಚಿಮ ಬಂಗಾಳದ ಬಾಕಿ ಉಳಿದ 142 ಕ್ಷೇತ್ರಗಳಿಗೆ ಏಪ್ರಿಲ್ 29 ರಂದು ಮತದಾನ ನಡೆಯಲಿದೆ. ಮೇ 4 ರಂದು ಫಲಿತಾಂಶ ಪ್ರಕಟವಾಗಲಿದೆ.

