ಆರ್ಟ್ ಆಫ್ ಲಿವಿಂಗ್‌ಗೆ ಸುಪ್ರೀಂ ಕೋರ್ಟ್ ರಿಲೀಫ್- 5 ಕೋಟಿ ರೂ. ದಂಡ ಮರುಪಾವತಿಗೆ ಆದೇಶ
x

ಆರ್ಟ್ ಆಫ್ ಲಿವಿಂಗ್‌ಗೆ ಸುಪ್ರೀಂ ಕೋರ್ಟ್ ರಿಲೀಫ್- 5 ಕೋಟಿ ರೂ. ದಂಡ ಮರುಪಾವತಿಗೆ ಆದೇಶ

2016ರಲ್ಲಿ ನಡೆದ ‘ವರ್ಲ್ಡ್ ಕಲ್ಚರ್ ಫೆಸ್ಟಿವಲ್’ ಕಾರ್ಯಕ್ರಮದಿಂದ ಯಮುನಾ ನದಿಯ ದಡದಲ್ಲಿ ಪರಿಸರ ಹಾನಿಯಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಆದರೆ ಇದಕ್ಕೆ ನೇರ ಸಾಕ್ಷಿ ಇಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.


Click the Play button to hear this message in audio format

ಶ್ರೀ ರವಿಶಂಕರ್ ನೇತೃತ್ವದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಗೆ ಸುಪ್ರೀಂ ಕೋರ್ಟ್ ಶನಿವಾರ ಮಹತ್ವದ ರಿಲೀಫ್ ನೀಡಿದೆ. 2016ರ ಪರಿಸರ ಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಿಸಲಾಗಿದ್ದ 5 ಕೋಟಿ ರೂ. ದಂಡವನ್ನು ಮರುಪಾವತಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.

2016ರಲ್ಲಿ ನಡೆದ ‘ವರ್ಲ್ಡ್ ಕಲ್ಚರ್ ಫೆಸ್ಟಿವಲ್’ ಕಾರ್ಯಕ್ರಮದಿಂದ ಯಮುನಾ ನದಿಯ ಸೂಕ್ಷ್ಮ ಪರಿಸರ ವ್ಯವಸ್ಥೆಗೆ ಹಾನಿಯಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) 2017ರ ಡಿಸೆಂಬರ್‌ನಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯನ್ನು ಹಾನಿಗೆ ಹೊಣೆಗಾರ ಎಂದು ಪರಿಗಣಿಸಿ 5 ಕೋಟಿ ರೂ. ದಂಡ ವಿಧಿಸಿತ್ತು.

ಕೋರ್ಟ್‌ ಆದೇಶದಲ್ಲೇನಿದೆ?

ಆದರೆ ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಸಾಂಸ್ಕೃತಿಕ ಕಾರ್ಯಕ್ರಮದಿಂದ ಯಮುನಾ ನದಿಯ ಸೂಕ್ಷ್ಮ ಪರಿಸರ ವ್ಯವಸ್ಥೆಗೆ ಹಾನಿಯಾಗಿದೆ ಎಂಬುದಕ್ಕೆ ನೇರ ಸಾಕ್ಷ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಹೀಗಾಗಿ ಆರ್ಟ್ ಆಫ್ ಲಿವಿಂಗ್‌ನ ಅಧೀನದಲ್ಲಿರುವ ನೋಂದಾಯಿತ ಸಾರ್ವಜನಿಕ ದತ್ತಿ ಸಂಸ್ಥೆ ‘ವ್ಯಕ್ತಿ ವಿಕಾಸ ಕೇಂದ್ರ’ ಪಾವತಿಸಿದ್ದ 5 ಕೋಟಿ ರೂ. ಮೊತ್ತವನ್ನು ದೆಹಲಿ ಅಭಿವೃದ್ಧಿ ಪ್ರಾಧಿಕಾರ (DDA) ಮರುಪಾವತಿಸಬೇಕು ಎಂದು ನಿರ್ದೇಶಿಸಿದೆ.

ಇದೇ ವೇಳೆ, ಯಮುನಾ ಪ್ರವಾಹ ಪ್ರದೇಶವನ್ನು ರಕ್ಷಿಸುವಲ್ಲಿ DDA ತನ್ನ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿಲ್ಲ ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ. ಅಲ್ಲದೆ, ಯಮುನಾ ಪ್ರವಾಹ ಪ್ರದೇಶದ ಪುನಶ್ಚೇತನಕ್ಕೆ ಎನ್‌ಜಿಟಿ ನೀಡಿದ್ದ ನಿರ್ದೇಶನದಂತೆ ಕಾರ್ಯ ಮುಂದುವರಿಸುವಂತೆ ಡಿಡಿಎಗೆ ಸೂಚಿಸಿದೆ.

2016ರಲ್ಲಿ ನಡೆದಿತ್ತು ‘ವರ್ಲ್ಡ್ ಕಲ್ಚರ್ ಫೆಸ್ಟಿವಲ್’

ಯಮುನಾ ನದಿ ತೀರದಲ್ಲಿ ಆರ್ಟ್ ಆಫ್ ಲಿವಿಂಗ್ ಆಯೋಜಿಸಿದ್ದ ‘ವರ್ಲ್ಡ್ ಕಲ್ಚರ್ ಫೆಸ್ಟಿವಲ್’ 2016ರ ಮಾರ್ಚ್ 11ರಿಂದ 13ರವರೆಗೆ ನಡೆದಿತ್ತು. ಕಾರ್ಯಕ್ರಮಕ್ಕೆ ಮುನ್ನ ಯಮುನಾ ಪ್ರವಾಹ ಪ್ರದೇಶದಲ್ಲಿ ಭಾರಿ ಪ್ರಮಾಣದ ಸಿದ್ಧತೆಗಳನ್ನು ಕೈಗೊಳ್ಳಲಾಗಿತ್ತು. ಇದರಿಂದ ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಹಾನಿಯಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು.

ಕಾರ್ಯಕ್ರಮ ನಡೆಸಲು NGT ಅನುಮತಿ ನೀಡಿದ್ದರೂ, ಆರ್ಟ್ ಆಫ್ ಲಿವಿಂಗ್ ಸಂಸ್ಥೆ ದಂಡದ ಮೊತ್ತವನ್ನು ಸಂಪೂರ್ಣವಾಗಿ ಪಾವತಿಸಬೇಕೆಂಬ ಷರತ್ತು ವಿಧಿಸಲಾಗಿತ್ತು. 2016ರ ಮಾರ್ಚ್ 11ರಂದು ಕಾರ್ಯಕ್ರಮದ ಉದ್ಘಾಟನಾ ದಿನವೇ ಆಯೋಜಕರು NGT ಮುಂದೆ ಅರ್ಜಿ ಸಲ್ಲಿಸಿ, ಸಂಪೂರ್ಣ ದಂಡದ ಮೊತ್ತ ಪಾವತಿಸಲು ನಾಲ್ಕು ವಾರಗಳ ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದರು.

NGT ಅಂದು 25 ಲಕ್ಷ ರೂ.ಗಳನ್ನು ಪಾವತಿಸಲು ಅವಕಾಶ ನೀಡಿ, ಉಳಿದ ಮೊತ್ತವನ್ನು ಪಾವತಿಸಲು ಮೂರು ವಾರಗಳ ಕಾಲಾವಕಾಶ ನೀಡಿತ್ತು. 25 ಲಕ್ಷ ರೂ. ಸಂಸ್ಥೆ ತಕ್ಷಣ ಪಾವತಿಸಿತ್ತು. ಬಳಿಕ ಉಳಿದ 4.75 ಕೋಟಿ ರೂ.ಗಳನ್ನು ದಂಡವಾಗಿ ಪಾವತಿಸುವ ಬದಲು ಬ್ಯಾಂಕ್ ಗ್ಯಾರಂಟಿಯಾಗಿ ಪರಿಗಣಿಸಬೇಕು ಮತ್ತು ಆ ಹಣವನ್ನು ಯಮುನಾ ಪ್ರದೇಶದಲ್ಲಿ ಜೀವವೈವಿಧ್ಯ ಉದ್ಯಾನವನ ನಿರ್ಮಾಣಕ್ಕೆ ಬಳಸಬೇಕು ಎಂದು ಆರ್ಟ್ ಆಫ್ ಲಿವಿಂಗ್ ಮನವಿ ಮಾಡಿತ್ತು. ಆದರೆ ಅಂತಿಮವಾಗಿ ದಂಡದ ಸಂಪೂರ್ಣ 5 ಕೋಟಿ ರೂ. ಮೊತ್ತವನ್ನು ಪಾವತಿಸಲಾಯಿತು.

ಇದರ ಬಳಿಕ ಆರ್ಟ್ ಆಫ್ ಲಿವಿಂಗ್ ಸಂಸ್ಥೆ NGT ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಇದರಿಂದಾಗಿ ಪ್ರಕರಣ ಹಲವು ವರ್ಷಗಳ ಕಾಲ ಕಾನೂನು ಹೋರಾಟಕ್ಕೆ ಕಾರಣವಾಗಿತ್ತು. ಇದೀಗ ಸುಪ್ರೀಂ ಕೋರ್ಟ್, ಯಮುನಾ ಪ್ರವಾಹ ಪ್ರದೇಶಕ್ಕೆ ಕಾರ್ಯಕ್ರಮದಿಂದ ಹಾನಿಯಾಗಿದೆ ಎಂಬುದಕ್ಕೆ ನೇರ ಸಾಕ್ಷ್ಯವಿಲ್ಲ ಎಂದು ಹೇಳಿ, ಪಾವತಿಸಲಾಗಿದ್ದ 5 ಕೋಟಿ ರೂ. ದಂಡವನ್ನು ಮರಳಿ ನೀಡುವಂತೆ ಆದೇಶಿಸಿರುವುದು ಆರ್ಟ್ ಆಫ್ ಲಿವಿಂಗ್ ಸಂಸ್ಥೆಗೆ ಮಹತ್ವದ ಕಾನೂನು ಜಯವಾಗಿದೆ.

Read More
Next Story