
ಖ್ಯಾತ ಸಮಾಜ ಸೇವಕ ಹಾಗೂ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಅವರ ಆರೋಗ್ಯದಲ್ಲಿ ಏರುಪೇರಾಗಿದೆ.
ಅಣ್ಣಾ ಹಜಾರೆ ಆರೋಗ್ಯದಲ್ಲಿ ಏರುಪೇರು: ಮುಂಬೈ ಆಸ್ಪತ್ರೆಗೆ ದಾಖಲು
ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರಿಗೆ ತೀವ್ರ ವೈರಲ್ ಸೋಂಕು ಹಾಗೂ ನಿರ್ಜಲೀಕರಣದ ಸಮಸ್ಯೆಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮುಂಬೈಗೆ ಸ್ಥಳಾಂತರಿಸಲಾಗಿದೆ
ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಮುಂಬೈನ ಬಾಂಬೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿಅವರನ್ನು ಆಸ್ಪತ್ರೆಗೆ ಕರೆತರಲಾಗಿದ್ದು, ಸದ್ಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
87 ವರ್ಷದ ಅಣ್ಣಾ ಹಜಾರೆ ಅವರು ತಮ್ಮ ಸ್ವಗ್ರಾಮ ರಾಲೆಗಣ್ ಸಿದ್ಧಿ ಸಮೀಪದ ಆಸ್ಪತ್ರೆಯಲ್ಲಿ ಆರಂಭಿಕ ಚಿಕಿತ್ಸೆ ಪಡೆಯುತ್ತಿದ್ದರು. ತೀವ್ರ ವೈರಲ್ ಸೋಂಕು ಹಾಗೂ ನಿರ್ಜಲೀಕರಣದ ಸಮಸ್ಯೆಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮುಂಬೈಗೆ ಸ್ಥಳಾಂತರಿಸಲಾಗಿದೆ. ಅವರ ಮೂತ್ರಪಿಂಡದ ಸಮಸ್ಯೆಯ ಬಗ್ಗೆಯೂ ವೈದ್ಯರು ಪರಿಶೀಲನೆ ನಡೆಸುತ್ತಿದ್ದಾರೆ.
ವೈದ್ಯರಿಂದ ನಿರಂತರ ಆರೋಗ್ಯ ಮೇಲ್ವಿಚಾರಣೆ
ಬಾಂಬೆ ಆಸ್ಪತ್ರೆಯಲ್ಲಿ ವೈದ್ಯ ಗೌತಮ್ ಭನ್ಸಾಲಿ ಅವರ ಮೇಲ್ವಿಚಾರಣೆಯಲ್ಲಿ ಅಣ್ಣಾ ಹಜಾರೆ ಅವರಿಗೆ ಚಿಕಿತ್ಸೆ ಮುಂದುವರಿದಿದೆ. ಅವರ ಆರೋಗ್ಯ ಸ್ಥಿತಿಯನ್ನು ವೈದ್ಯರು ನಿರಂತರವಾಗಿ ಗಮನಿಸುತ್ತಿದ್ದು, ಹಲವು ಪ್ರಮುಖ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಪರೀಕ್ಷಾ ವರದಿಗಳ ಆಧಾರದ ಮೇಲೆ ಮುಂದಿನ ಚಿಕಿತ್ಸಾ ಕ್ರಮವನ್ನು ನಿರ್ಧರಿಸಲಾಗುವುದು ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ಶೀಘ್ರ ಚೇತರಿಕೆಗೆ ಹಾರೈಕೆ
ಅಣ್ಣಾ ಹಜಾರೆ ಅವರ ಆರೋಗ್ಯದ ಬಗ್ಗೆ ದೇಶಾದ್ಯಂತ ಅವರ ಬೆಂಬಲಿಗರು ಹಾಗೂ ಹಿತೈಷಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಅವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತಿದ್ದಾರೆ. ಸಂಪೂರ್ಣ ವೈದ್ಯಕೀಯ ತಪಾಸಣೆ ಪೂರ್ಣಗೊಂಡ ಬಳಿಕ ಅವರ ಆರೋಗ್ಯದ ಕುರಿತು ಅಧಿಕೃತ ಮಾಹಿತಿ ಹೊರಬರುವ ನಿರೀಕ್ಷೆಯಿದೆ.
ಭ್ರಷ್ಟಾಚಾರ ವಿರೋಧಿ ಹೋರಾಟದಿಂದ ರಾಷ್ಟ್ರಮಟ್ಟದ ಖ್ಯಾತಿ
ಭ್ರಷ್ಟಾಚಾರ ವಿರೋಧಿ ಹೋರಾಟಗಳು ಹಾಗೂ ಸಾಮಾಜಿಕ ಸುಧಾರಣಾ ಚಳವಳಿಗಳ ಮೂಲಕ ಅಣ್ಣಾ ಹಜಾರೆ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಮಹಾರಾಷ್ಟ್ರದ ರಾಲೆಗಣ್ ಸಿದ್ಧಿ ಗ್ರಾಮವನ್ನು ಜಲಸಂರಕ್ಷಣೆ, ಅರಣ್ಯೀಕರಣ, ಗ್ರಾಮೀಣ ಸ್ವಾವಲಂಬನೆ ಹಾಗೂ ವ್ಯಸನಮುಕ್ತಿಯಂತಹ ಕ್ರಮಗಳ ಮೂಲಕ ಮಾದರಿ ಗ್ರಾಮವನ್ನಾಗಿ ರೂಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.
ಮಾಹಿತಿ ಹಕ್ಕು ಕಾಯ್ದೆ (RTI) ಹಾಗೂ ಜನ ಲೋಕಪಾಲ್ ಮಸೂದೆ ಜಾರಿಗೆ ಒತ್ತಾಯಿಸಿ ನಡೆಸಿದ ಉಪವಾಸ ಸತ್ಯಾಗ್ರಹಗಳ ಮೂಲಕವೂ ಅವರು ದೇಶದ ಗಮನ ಸೆಳೆದಿದ್ದರು. ಸಾಮಾಜಿಕ ಹಾಗೂ ಗ್ರಾಮೀಣ ಅಭಿವೃದ್ಧಿಗೆ ನೀಡಿದ ಕೊಡುಗೆಗಾಗಿ 1992ರಲ್ಲಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಲಭಿಸಿವೆ.

