ವಿದ್ಯಾರ್ಥಿಗಳ ಪರ ಅಣ್ಣಾ ಹಜಾರೆ ಧ್ವನಿ: 2 ಗಂಟೆ ಮೌನ ಪ್ರತಿಭಟನೆ
x

ವಿದ್ಯಾರ್ಥಿಗಳ ಪರ ಅಣ್ಣಾ ಹಜಾರೆ ಧ್ವನಿ: 2 ಗಂಟೆ 'ಮೌನ ಪ್ರತಿಭಟನೆ'

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸುದೀರ್ಘ ಪತ್ರ ಬರೆದಿರುವ ಅಣ್ಣಾ ಹಜಾರೆ, ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಹಿಂಸಾಚಾರ ಮತ್ತು ಪೊಲೀಸ್ ಕಾರ್ಯಾಚರಣೆಯ ವರದಿಗಳು ಅತ್ಯಂತ ನೋವು ತಂದಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.


ದೇಶಾದ್ಯಂತ ಭಾರೀ ಸದ್ದು ಮಾಡುತ್ತಿರುವ ದೆಹಲಿಯ 'ನೀಟ್' (NEET) ಪರೀಕ್ಷಾರ್ಥಿಗಳು ಮತ್ತು ವಿದ್ಯಾರ್ಥಿ ಸಂಘಟನೆಗಳ ಪ್ರತಿಭಟನೆಗೆ ಇದೀಗ ಹಿರಿಯ ಸಮಾಜಸೇವಕ ಅಣ್ಣಾ ಹಜಾರೆ ಬೆಂಬಲ ಸೂಚಿಸಿದ್ದಾರೆ. ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ ಮಹಾರಾಷ್ಟ್ರದ ಅಹಿಲ್ಯಾ ನಗರದಲ್ಲಿ ಅವರು 2 ಗಂಟೆಗಳ ಕಾಲ 'ಮೌನ ಪ್ರತಿಭಟನೆ' ನಡೆಸಿದ್ದಾರೆ.

89 ವರ್ಷದ ಅಣ್ಣಾ ಹಜಾರೆ ಅವರು ಅಹಿಲ್ಯಾ ನಗರದ ಮಹಾತ್ಮ ಗಾಂಧಿ ಪ್ರತಿಮೆಯ ಬಳಿ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಮೌನ ವ್ರತ ಆಚರಿಸಿ, ನಂತರ ತಮ್ಮ ಸ್ವಗ್ರಾಮ ರಾಳೆಗಣ ಸಿದ್ಧಿಗೆ ತೆರಳಿದರು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಅವರು, ಕೇಂದ್ರ ಸರ್ಕಾರದ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಮೋದಿಗೆ ಅಣ್ಣಾ ಹಜಾರೆ ಪತ್ರ

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸುದೀರ್ಘ ಪತ್ರ ಬರೆದಿರುವ ಅಣ್ಣಾ ಹಜಾರೆ, ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಹಿಂಸಾಚಾರ ಮತ್ತು ಪೊಲೀಸ್ ಕಾರ್ಯಾಚರಣೆಯ ವರದಿಗಳು ಅತ್ಯಂತ ನೋವು ತಂದಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. "ಪ್ರತಿಭಟನಾಕಾರರ ಆಕ್ರೋಶವನ್ನು ಬರಿ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯಾಗಿ ನೋಡಬೇಡಿ. ಇದು ಸಮಾಜದ ತೀವ್ರ ವೇದನೆ ಮತ್ತು ಸರ್ಕಾರದ ಮೇಲಿರುವ ನಿರೀಕ್ಷೆಯ ಪ್ರತಿಫಲನ," ಎಂದು ಹಜಾರೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ವಿದ್ಯಾರ್ಥಿಗಳ ಮಾತನ್ನು ಸರ್ಕಾರ ತಾಳ್ಮೆಯಿಂದ ಕೇಳಬೇಕು, ನಂಬಿಕೆಯ ವಾತಾವರಣವನ್ನು ನಿರ್ಮಿಸಬೇಕು ಮತ್ತು ಸಕಾರಾತ್ಮಕ ಚರ್ಚೆಯ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯ ಕುರಿತು ಮಾತನಾಡಿದ ಅಣ್ಣಾ ಹಜಾರೆ, "ಒಂದು ವೇಳೆ ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡಿದರೆ ಸರ್ಕಾರವೇನೂ ಬಿದ್ದುಹೋಗುವುದಿಲ್ಲ. ಬದಲಿಗೆ, ಇದರಿಂದ ಸರ್ಕಾರದ ಕಾರ್ಯವೈಖರಿ ಮತ್ತಷ್ಟು ಹೊಣೆಗಾರಿಕೆಯಿಂದ ಮತ್ತು ಪರಿಣಾಮಕಾರಿಯಾಗಿ ಮೂಡಿಬರುತ್ತದೆ," ಎಂದು ನೇರವಾಗಿ ಹೇಳಿದ್ದಾರೆ.

ಪ್ರಧಾನಿ ಮೋದಿ ದೇಶದ ಸುಪ್ರೀಂ ನಾಯಕರಾಗಿರುವುದರಿಂದ, ಸಾರ್ವಜನಿಕರ ನಿಜವಾದ ಸಮಸ್ಯೆಗಳನ್ನು ಅವರ ಗಮನಕ್ಕೆ ತರುವುದು ತಮ್ಮ ಕರ್ತವ್ಯ ಎಂದು ಹಜಾರೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಜಂತರ್ ಮಂತರ್‌ನಲ್ಲಿ ಇಂಟರ್ನೆಟ್ ಸೇವೆ ಬಂದ್

ಇನ್ನೊಂದೆಡೆ ಜಂತರ್ ಮಂತರ್‌ನಲ್ಲಿ ಧರಣಿ ನಡೆಸುತ್ತಿರುವ ಕಾಕ್ರೋಚ್ ಜನತಾ ಪಾರ್ಟಿ (CJP) ಸರ್ಕಾರ ಹಾಗೂ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದೆ. ಪ್ರತಿಭಟನಾ ಸ್ಥಳದ ಸುತ್ತಮುತ್ತ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದ್ದು, ಸರ್ಕಾರ ಮತ್ತೊಂದು ಸುತ್ತಿನ ಪೊಲೀಸ್ ದಾಳಿಗೆ ಸಂಚು ರೂಪಿಸುತ್ತಿದೆಯೇ ಎಂದು ಪ್ರಶ್ನಿಸಿದೆ.

Read More
Next Story