
ತಿರುಪತಿ ಜಿಲ್ಲೆಯ ಶ್ರೀಸಿಟಿಯ ಟಿಐಎಲ್ ಹೆಲ್ತ್ಕೇರ್ ಘಟಕದಲ್ಲಿ ಬೆಳಗ್ಗೆ ಭಾರೀ ಸ್ಫೋಟ ಸಂಭವಿಸಿದ್ದು, ಹಲವು ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ತಿರುಪತಿ ಸಮೀಪ ಫಾರ್ಮಾ ಕಂಪನಿಯಲ್ಲಿ ಬಾಯ್ಲರ್ ಸ್ಫೋಟ: 5 ಮಂದಿ ಸಾವು
ಬಾಯ್ಲರ್ ಸ್ಫೋಟಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ತಾಂತ್ರಿಕ ದೋಷ, ಸುರಕ್ಷತಾ ವ್ಯವಸ್ಥೆಯಲ್ಲಿನ ವೈಫಲ್ಯ ಅಥವಾ ಕಾರ್ಯಾಚರಣೆಯಲ್ಲಿನ ಲೋಪ ಸೇರಿದಂತೆ ವಿವಿಧ ಆಯಾಮಗಳಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ತಿರುಪತಿ ಜಿಲ್ಲೆಯ ಸತ್ಯವೇಡು ಮಂಡಲದ ವ್ಯಾಪ್ತಿಯಲ್ಲಿರುವ ಶ್ರೀಸಿಟಿ ಕೈಗಾರಿಕಾ ಪ್ರದೇಶದ ಟಿಐಎಲ್ ಹೆಲ್ತ್ಕೇರ್ (TIL Healthcare) ಫಾರ್ಮಾ ಕಂಪನಿಯಲ್ಲಿ ಶನಿವಾರ ಹಠಾತ್ತನೆ ಬಾಯ್ಲರ್ ಸ್ಫೋಟಗೊಂಡು ಭೀಕರ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ ಐದು ಮಂದಿ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದು, 10ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಸ್ಫೋಟದ ತೀವ್ರತೆಗೆ ಕಾರ್ಮಿಕರು ತೀವ್ರ ಗಾಯಗೊಂಡಿದ್ದು, ಕೂಡಲೇ ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರ ಗುರುತು ಪತ್ತೆ ಮತ್ತು ಕನ್ನೈ ಚಿಕಿತ್ಸೆ ದುರಂತದಲ್ಲಿ ಮೃತಪಟ್ಟವರ ಪೈಕಿ ಗೌರಬ್ ರಾಯ್ (35), ಚಿನ್ನ ಮಸ್ತಾನ್ (36) ಮತ್ತು ರಮೇಶ್ (40) ಎಂಬ ಮೂವರನ್ನು ಅಧಿಕಾರಿಗಳು ಗುರುತಿಸಿದ್ದಾರೆ. ಮತ್ತೊಂದು ಮೃತದೇಹದ ಗುರುತು ಇನ್ನೂ ಪತ್ತೆಯಾಗಬೇಕಿದೆ. ಇನ್ನು ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಾಸು (36) ಎಂಬ ಕಾರ್ಮಿಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಅಪಘಾತ ಸಂಭವಿಸಿದ ಸಮಯದಲ್ಲಿ ಕಾರ್ಖಾನೆಯಲ್ಲಿ ಎಷ್ಟು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು ಮತ್ತು ಸ್ಫೋಟಕ್ಕೆ ನಿಖರ ಕಾರಣ ಏನೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ಬಾಯ್ಲರ್ನಲ್ಲಿ ಉಂಟಾದ ತಾಂತ್ರಿಕ ದೋಷವೇ ಈ ಸ್ಫೋಟಕ್ಕೆ ಕಾರಣವೇ ಅಥವಾ ಬೇರೇನಾದರೂ ಕಾರಣವಿದೆಯೇ ಎಂಬುದನ್ನು ಪತ್ತೆಹಚ್ಚಲು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕುತ್ತಿದ್ದಾರೆ. ಪ್ರಸ್ತುತ ಘಟನಾ ಸ್ಥಳದಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳು ಭರದಿಂದ ಸಾಗುತ್ತಿವೆ.
ಸಂತ್ರಸ್ತರ ಕುಟುಂಬಗಳಿಗೆ ಸರ್ಕಾರದ ನೆರವಿನ ಭರವಸೆ
ಸಚಿವ ನಾರಾ ಲೋಕೇಶ್ಖಾಸಗಿ ಫಾರ್ಮಾ ಕಂಪನಿಯಲ್ಲಿ ನಡೆದ ಈ ಬಾಯ್ಲರ್ ಸ್ಫೋಟದ ಘಟನೆಗೆ ಆಂಧ್ರಪ್ರದೇಶದ ಸಚಿವ ನಾರಾ ಲೋಕೇಶ್ ತೀವ್ರ ಕಂಬನಿ ಮಿಡಿದಿದ್ದಾರೆ. ಕಾರ್ಮಿಕರು ಜೀವ ಕಳೆದುಕೊಂಡಿರುವುದು ಮತ್ತು ಹಲವರು ಗಾಯಗೊಂಡಿರುವುದು ಅತ್ಯಂತ ದುಃಖಕರ ಸಂಗತಿ ಎಂದು ತಿಳಿಸಿರುವ ಅವರು, ಶೋಕತಪ್ತ ಕುಟುಂಬಗಳಿಗೆ ತಮ್ಮ ಸಾಂತ್ವನ ವ್ಯಕ್ತಪಡಿಸಿದ್ದಾರೆ. ಗಾಯಗೊಂಡವರಿಗೆ ಸೂಕ್ತ ಮತ್ತು ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಮೃತರ ಕುಟುಂಬಗಳಿಗೆ ಸರ್ಕಾರ ಸಂಪೂರ್ಣ ಬೆಂಬಲ ಮತ್ತು ನೆರವು ನೀಡಲಿದೆ ಎಂದು ಭರವಸೆ ನೀಡಿದ್ದಾರೆ.

