
ಟ್ರಂಪ್ ಎಚ್ಚರಿಕೆ ಬೆನ್ನಲ್ಲೇ ಇರಾನ್ ಮೇಲೆ ಅಮೆರಿಕ ವೈಮಾನಿಕ ದಾಳಿ
ಅಮೆರಿಕದ ಸೆಂಟ್ರಲ್ ಕಮಾಂಡ್ ನೀಡಿರುವ ಮಾಹಿತಿಯ ಪ್ರಕಾರ, ಭಾರತೀಯ ಕಾಲಮಾನಕ್ಕೆ ಅನುಗುಣವಾಗಿ ಮಧ್ಯರಾತ್ರಿ ಆರಂಭವಾದ ಈ ದಾಳಿಗಳು "ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಪಡೆಗಳ ಮೇಲೆ ಇರಾನ್ ನಡೆಸಿದ ದಾಳಿಗೆ ನೀಡಿದ ಪ್ರಬಲ ಪ್ರತಿಕ್ರಿಯೆ" ಎಂದು ತಿಳಿಸಿದೆ.
ಜೋರ್ಡನ್‌ನಲ್ಲಿರುವ ಅಮೆರಿಕದ ಸೇನಾ ನೆಲೆ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿಗೆ ಪ್ರತಿಯಾಗಿ ಅಮೆರಿಕ ಇರಾನ್‌ನ ಹಲವು ಗುರಿಗಳ ಮೇಲೆ ಭಾರೀ ವಾಯುದಾಳಿ ನಡೆಸಿದೆ. ಕಳೆದ ವಾರ ಮಾತುಕತೆಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಬಾಂಬ್ ದಾಳಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ದಾಳಿಯ ಬಳಿಕ ಮತ್ತೆ ಸೇನಾ ಕಾರ್ಯಾಚರಣೆಗೆ ಆದೇಶ ನೀಡಿದ್ದಾರೆ.
ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ನೀಡಿರುವ ಮಾಹಿತಿಯ ಪ್ರಕಾರ, ಭಾರತೀಯ ಕಾಲಮಾನಕ್ಕೆ ಅನುಗುಣವಾಗಿ ಮಧ್ಯರಾತ್ರಿ ಆರಂಭವಾದ ಈ ದಾಳಿಗಳು "ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಪಡೆಗಳ ಮೇಲೆ ಇರಾನ್ ನಡೆಸಿದ ದಾಳಿಗೆ ನೀಡಿದ ಪ್ರಬಲ ಪ್ರತಿಕ್ರಿಯೆ" ಎಂದು ತಿಳಿಸಿದೆ.
ದಾಳಿಗೆ ಕೆಲವೇ ಗಂಟೆಗಳ ಮೊದಲು ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು. "ಈಗ ನಮ್ಮ ಸರದಿ. ನಾವು ಅವರಿಗೆ ತೀವ್ರ ತಿರುಗೇಟು ನೀಡುತ್ತೇವೆ. ಇರಾನ್ ತನ್ನ ದಾಳಿಯನ್ನು ಬಹಿರಂಗವಾಗಿ ಒಪ್ಪಿಕೊಂಡಿರುವುದು ದೊಡ್ಡ ತಪ್ಪಾಗಿದೆ," ಎಂದು ಟ್ರಂಪ್ ಹೇಳಿದ್ದಾರೆ.
ಜೋರ್ಡನ್‌ನಲ್ಲಿ ಅಮೆರಿಕದ ನೆಲೆ ಗುರಿಯಾಗಿತ್ತು
ಕಳೆದ ಶುಕ್ರವಾರ ಅಮೆರಿಕ ದಾಳಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಿ ಮಾತುಕತೆಗೆ ಅವಕಾಶ ನೀಡಿತ್ತು. ಆದರೆ ಐದು ದಿನಗಳಲ್ಲೇ ಪರಿಸ್ಥಿತಿ ಬದಲಾಯಿತು. ಇರಾನ್ ಜೋರ್ಡನ್‌ನಲ್ಲಿರುವ ಅಮೆರಿಕದ ಸೇನಾ ನೆಲೆಯನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿದ ಬಳಿಕ ಅಮೆರಿಕ ಮತ್ತೆ ವಾಯುದಾಳಿಯನ್ನು ಆರಂಭಿಸಿದೆ.
ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಈ ದಾಳಿಯ ಹೊಣೆ ಹೊತ್ತುಕೊಂಡಿದ್ದು, ಜೋರ್ಡನ್‌ನಲ್ಲಿರುವ ಅಮೆರಿಕದ ವಾಯುನೆಲೆ ಹಾಗೂ ಕಮಾಂಡ್ ಸೆಂಟರ್‌ಗಳನ್ನು ಗುರಿಯಾಗಿಸಿಕೊಂಡಿದ್ದೇವೆ ಎಂದು ಹೇಳಿದೆ. ಆದರೆ ಅಮೆರಿಕ ಸೇನೆ, ಇರಾನ್ ಹಾರಿಸಿದ್ದ ಎಲ್ಲಾ ಕ್ಷಿಪಣಿಗಳನ್ನು ಯಶಸ್ವಿಯಾಗಿ ತಡೆಹಿಡಿಯಲಾಗಿದೆ ಎಂದು ಸ್ಪಷ್ಟಪಡಿಸಿದೆ.
ಇರಾನ್ ಎಚ್ಚರಿಕೆ
ಇರಾನ್‌ನ ಸರ್ಕಾರಿ ಮಾಧ್ಯಮಗಳ ಪ್ರಕಾರ, ಅಮೆರಿಕ ತನ್ನ ಬೆದರಿಕೆ ಮತ್ತು ಸೇನಾ ಒತ್ತಡವನ್ನು ಮುಂದುವರಿಸಿದರೆ ಪ್ರತಿರೋಧವೂ ಮುಂದುವರಿಯಲಿದೆ ಎಂದು ಟೆಹ್ರಾನ್ ಎಚ್ಚರಿಕೆ ನೀಡಿದೆ. ಜೊತೆಗೆ ಅಮೆರಿಕ ಅಧಿಕಾರಿಗಳು ಇರಾನ್ ವಿರುದ್ಧದ ಬೆದರಿಕೆ ಭಾಷೆಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದೆ.
ಇದರ ಮಧ್ಯೆ, ಐಆರ್‌ಜಿಸಿಯ ನೌಕಾಪಡೆ, ಇರಾನ್ ಅನುಮೋದಿಸದ ಮಾರ್ಗದ ಮೂಲಕ ಹೋರ್ಮುಜ್ ಜಲಸಂಧಿಯತ್ತ ಸಾಗುತ್ತಿದ್ದ ಮೂರು ತೈಲ ಟ್ಯಾಂಕರ್‌ಗಳನ್ನು ಗುರಿಯಾಗಿಸಿಕೊಂಡು ಕ್ರಮ ಕೈಗೊಂಡಿರುವುದಾಗಿ ಹೇಳಿಕೊಂಡಿದೆ.

