
ಅಮರನಾಥ ಯಾತ್ರೆ ಆರಂಭವಾದ ಒಂದೇ ವಾರದಲ್ಲಿ ಕರಗಿದ ಪವಿತ್ರ ಹಿಮಲಿಂಗ- ಯಾರು ಹೊಣೆ?
ಅಮರನಾಥ ಹಿಮಲಿಂಗ ವೇಗವಾಗಿ ಕುಗ್ಗುತ್ತಿರುವುದು ಹೊಸ ಚರ್ಚೆಗೆ ಕಾರಣವಾಗಿದೆ. ದಾಖಲೆ ಯಾತ್ರಿಕರ ಸಂಖ್ಯೆ, ಹವಾಮಾನ ಬದಲಾವಣೆ ಮತ್ತು ಪರಿಸರದ ಮೇಲೆ ಅದರ ಪರಿಣಾಮದ ಸಂಪೂರ್ಣ ಮಾಹಿತಿ.
ಗುಹೆಯ ಹಿಮಾಲಯದ ಮಡಿಲಿನಲ್ಲಿರುವ ಪವಿತ್ರ ಅಮರನಾಥ ಗುಹೆಯ ಹಿಮಲಿಂಗವು ನಿಗದಿತ ಸಮಯಕ್ಕಿಂತ ಮೊದಲೇ ಕರಗುತ್ತಿರುವುದು ಭಕ್ತರಲ್ಲಿ ಮತ್ತು ಪರಿಸರ ಪ್ರೇಮಿಗಳಲ್ಲಿ ಆತಂಕ ಮೂಡಿಸಿದೆ. ಜುಲೈ ಆರಂಭದಲ್ಲೇ ದಾಖಲೆ ಪ್ರಮಾಣದ ಭಕ್ತರ ಆಗಮನ ಮತ್ತು ಸೂಕ್ಷ್ಮ ಹಿಮಾಲಯ ಪರಿಸರದಲ್ಲಿ ಹೆಚ್ಚುತ್ತಿರುವ ಮೂಲಸೌಕರ್ಯಗಳೇ ಇದಕ್ಕೆ ಕಾರಣವೇ ಎಂಬ ಹಳೆಯ ಚರ್ಚೆ ಈಗ ಮತ್ತೆ ಮುನ್ನೆಲೆಗೆ ಬಂದಿದೆ.
ಅಮರನಾಥ ಯಾತ್ರೆಯ ವೇಳೆ ಪವಿತ್ರ ಹಿಮಲಿಂಗವು ಕರಗುತ್ತಿರುವ ಚಿತ್ರಗಳನ್ನು ಹಂಚಿಕೊಂಡಿರುವ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (PDP) ನಾಯಕಿ ಇಲ್ತಿಜಾ ಮುಫ್ತಿ, ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಯಾತ್ರೆಯ ನಿರ್ವಹಣೆಯನ್ನು ಪ್ರಶ್ನಿಸಿರುವ ಅವರು, ಪರಿಸರದ ಮೇಲಾಗುತ್ತಿರುವ ಪರಿಣಾಮದ ಬಗ್ಗೆ ಕಳವಳ ವ್ಯಕ್ತಪಡಿಸಿ ಸರ್ಕಾರದ ಮಧ್ಯಪ್ರವೇಶಕ್ಕೆ ಆಗ್ರಹಿಸಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದಂತೆ ದಿನಕ್ಕೆ ಕೇವಲ 10,000 ಯಾತ್ರಿಕರಿಗೆ ಮಾತ್ರ ಅವಕಾಶ ನೀಡಬೇಕು ಎಂದು ಅವರು ನೆನಪಿಸಿದ್ದಾರೆ. ಕಳೆದ ವರ್ಷದ ಉಗ್ರರ ದಾಳಿಯ ನಡುವೆಯೂ ಭಕ್ತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿರುವುದನ್ನು ಅಧಿಕಾರಿಗಳು ಸಂಭ್ರಮಿಸುತ್ತಿರುವ ಬೆನ್ನಲ್ಲೇ ಮುಫ್ತಿ ಈ ಹೇಳಿಕೆ ನೀಡಿದ್ದಾರೆ.
ಅಮರನಾಥ ಗುಹೆಯ ಹಿನ್ನೆಲೆ
ಅಮರನಾಥ ಗುಹೆಯು ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಹಿಮಾಲಯದಲ್ಲಿ ಸುಮಾರು 3,888 ಮೀಟರ್ (12,756 ಅಡಿ) ಎತ್ತರದಲ್ಲಿದೆ. ಇದು ಕಾಶ್ಮೀರ ಹಿಮಾಲಯದ ಲಿಡ್ಡರ್ ಕಣಿವೆಯ ಕೆಳಭಾಗದಲ್ಲಿದೆ. ಯಾತ್ರಿಕರು ಸಾಂಪ್ರದಾಯಿಕ 48-ಕಿ.ಮೀ ಪಹಲ್ಗಾಮ್ ಮಾರ್ಗ ಅಥವಾ ಕಡಿದಾದ 14-ಕಿ.ಮೀ ಬಾಲ್ಟಾಲ್ ಮಾರ್ಗದ ಮೂಲಕ ಗುಹೆಯನ್ನು ತಲುಪಬಹುದು.
ನೈಸರ್ಗಿಕವಾಗಿ ರೂಪುಗೊಂಡ ಹಿಮಲಿಂಗವನ್ನು ಭಕ್ತರು ಇಲ್ಲಿ ಪೂಜಿಸುತ್ತಾರೆ. ಇದು ಗುಹೆಯ ಉಷ್ಣಾಂಶ ಮತ್ತು ಹವಾಮಾನ ವೈಪರೀತ್ಯಗಳಿಗೆ ಅನುಗುಣವಾಗಿ ಗಾತ್ರದಲ್ಲಿ ಬದಲಾಗುವ ಹಿಮದ ರಚನೆಯಾಗಿದೆ.
ಭಕ್ತರ ಸಂಖ್ಯೆ ಹೆಚ್ಚಳವೇ ಹಿಮಲಿಂಗ ಕರಗಲು ಕಾರಣನಾ?
ಏಪ್ರಿಲ್ 2025 ರಲ್ಲಿ 26 ನಾಗರಿಕರನ್ನು ಬಲಿಪಡೆದ ಪಹಲ್ಗಾಮ್ ಉಗ್ರರ ದಾಳಿಯ ನಂತರ, ಈ ವರ್ಷ ಜುಲೈ 3 ರಂದು ಅಭೂತಪೂರ್ವ ಭದ್ರತೆಯ ನಡುವೆ ಅಮರನಾಥ ಯಾತ್ರೆ ಪ್ರಾರಂಭವಾಯಿತು. ಭದ್ರತೆಯ ಆತಂಕದ ನಡುವೆಯೂ ಯಾತ್ರಿಕರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಮೊದಲ ನಾಲ್ಕು ದಿನಗಳಲ್ಲೇ ಕನಿಷ್ಠ 93,000 ಯಾತ್ರಿಕರು ಭೇಟಿ ನೀಡಿದ್ದಾರೆ.
'ದಿ ಹಿಂದೂ' ವರದಿ ಪ್ರಕಾರ, ಜುಲೈ 5 ರ ವೇಳೆಗೆ 32,000 ಕ್ಕೂ ಹೆಚ್ಚು ಭಕ್ತರು ಪ್ರಾರ್ಥನೆ ಸಲ್ಲಿಸಿದ್ದರು. ಯಾತ್ರೆಯ ಎರಡನೇ ದಿನವೇ 20,000 ಕ್ಕೂ ಹೆಚ್ಚು ಯಾತ್ರಿಕರು ಭೇಟಿ ನೀಡಿದ್ದು, ಇದು ಇತ್ತೀಚಿನ ವರ್ಷಗಳಲ್ಲೇ ಅತಿ ಹೆಚ್ಚು ಎನ್ನಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಹಾಗೂ ಶ್ರೀ ಅಮರನಾಥ ಶ್ರೈನ್ ಬೋರ್ಡ್ (SASB) ಮುಖ್ಯಸ್ಥ ಮನೋಜ್ ಸಿನ್ಹಾ ಅವರು ಈ ಬಾರಿ ಭಕ್ತರ ಸಂಖ್ಯೆಯಲ್ಲಿ "ಭಾರಿ ಏರಿಕೆ" ಕಂಡುಬಂದಿದೆ ಎಂದು ಹೇಳಿದ್ದಾರೆ.
ಆಡಳಿತದ ಕಳವಳ
ಕಡ್ಡಾಯ ಆರೋಗ್ಯ ಪ್ರಮಾಣಪತ್ರ ಅಥವಾ ಆರ್‌ಎಫ್‌ಐಡಿ (RFID) ನೋಂದಣಿ ಇಲ್ಲದೆ ಸಾವಿರಾರು ಯಾತ್ರಿಕರು ಆಗಮಿಸುತ್ತಿರುವುದಕ್ಕೆ ಆಡಳಿತ ಕಳವಳ ವ್ಯಕ್ತಪಡಿಸಿದೆ. ಇದು ಭದ್ರತೆ ಮತ್ತು ಮೂಲಸೌಕರ್ಯ ಎರಡಕ್ಕೂ ಹೊರೆಯಾಗುತ್ತಿದೆ ಎಂದು ಎಚ್ಚರಿಸಿದೆ.
"ನೋಂದಣಿಯಾಗದ ಯಾತ್ರಿಕರ ದೊಡ್ಡ ಒಳಹರಿವನ್ನು ನಾವು ನೋಡುತ್ತಿದ್ದೇವೆ. ಮುಂಚಿತವಾಗಿ ನೋಂದಾಯಿಸದವರು ತಾಳ್ಮೆಯಿಂದಿರಲು ಮತ್ತು ತಮ್ಮ ಸರದಿ ಬರುವವರೆಗೆ ಕಾಯುವಂತೆ ನಾನು ಬಲವಾಗಿ ವಿನಂತಿಸುತ್ತೇನೆ. ಸುಗಮ ಹಾಗೂ ಸುರಕ್ಷಿತ ಯಾತ್ರೆಯ ಅನುಭವಕ್ಕಾಗಿ ಈ ಸಹಕಾರ ಅತ್ಯಗತ್ಯ" ಎಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮನವಿ ಮಾಡಿದ್ದಾರೆ.
ಈ ಹಿಂದೆಯೂ ಹಿಮಲಿಂಗ ಕರಗಿತ್ತು
ಶ್ರೀನಗರ ಮೂಲದ ಉದ್ಯಮಿ ವಿನೀತ್ ಕೌಲ್ ಎಂಬುವವರು ಹೇಳುವ ಪ್ರಕಾರ, "ಹಿಮಲಿಂಗ ಈ ರೀತಿ ಬೇಗನೆ ಕರಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ 2004, 2006, 2007, 2016 ಮತ್ತು 2020 ರಲ್ಲೂ ಹೀಗೆಯೇ ಆಗಿತ್ತು. ಆದರೆ ಈ ಉದಾಹರಣೆಯನ್ನು ನೀಡಿ ನಾವು ಪರಿಸರ ಸಮಸ್ಯೆಯನ್ನು ನಿರ್ಲಕ್ಷಿಸಬಾರದು" ಎಂದು ನೆನಪಿಸಿದ್ದಾರೆ. ಅಲ್ಲದೆ, ಗುಹೆಯ ಬಳಿ ಪ್ರಸ್ತಾಪಿಸಲಾದ ರೋಪ್‌ವೇ ಯೋಜನೆಯನ್ನು ವಿರೋಧಿಸಿರುವ ಅವರು, ಮೂಲಸೌಕರ್ಯಗಳ ಜೊತೆಗೆ ಪರಿಸರದ ಪವಿತ್ರತೆಯನ್ನು ಕಾಪಾಡುವುದು ಮುಖ್ಯ ಎಂದಿದ್ದಾರೆ.
ಕೆಲವು ಮಾಧ್ಯಮ ವರದಿಗಳು ಹಿಮಲಿಂಗವು ಶೇಕಡಾ 90 ರಷ್ಟು ಕರಗಿದೆ ಎಂದು ಹೇಳುತ್ತಿದ್ದರೆ, ಇನ್ನು ಕೆಲವು ವರದಿಗಳು ಅದು ಸಂಪೂರ್ಣವಾಗಿ ಕಣ್ಮರೆಯಾಗಿದೆ ಎಂದು ಹೇಳುತ್ತಿವೆ. ಆದರೆ, ಈ ಬಗ್ಗೆ ಅಮರನಾಥ ದೇಗುಲದ ಆಡಳಿ ಮಂಡಳಿ (SASB) ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.
ಯಾತ್ರೆಯ ಆರಂಭದ ದಿನಗಳಲ್ಲೇ ದರ್ಶನ ಪಡೆದ ಮಧ್ಯಪ್ರದೇಶದ ಇಂದೋರ್‌ನ ಭಕ್ತರೊಬ್ಬರು ಮಾತನಾಡಿ, "ಹಿಮಲಿಂಗ ಕರಗಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಈ ವರ್ಷ ಎಂದಿಗಿಂತ ಬೇಗ ಕರಗಿದೆ. ಇದು ಭಕ್ತರ ನಂಬಿಕೆಯ ಮೇಲೂ ಪರಿಣಾಮ ಬೀರುತ್ತಿದೆ. ಏಕೆಂದರೆ ಹಿಂದೆಲ್ಲಾ ಬಾಬಾ ಬರ್ಫಾನಿ 40 ರಿಂದ 45 ದಿನಗಳ ಕಾಲ ದರ್ಶನ ನೀಡುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಇದು ಕೇವಲ 5 ರಿಂದ 7 ದಿನಗಳಿಗೆ ಸೀಮಿತವಾಗಿದೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಹವಾಮಾನ ಬದಲಾವಣೆಯೇ ಪ್ರಮುಖ ಕಾರಣ?
ಹಿಮಾಲಯ ಪರ್ವತ ಶ್ರೇಣಿಗಳು ವಿಶ್ವದ ಇತರ ಪರ್ವತಗಳಿಗಿಂತ ವೇಗವಾಗಿ ಬಿಸಿಯಾಗುತ್ತಿವೆ ಎಂದು ವಿಜ್ಞಾನಿಗಳು ಪದೇ ಪದೆ ಎಚ್ಚರಿಸುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚುತ್ತಿರುವ ಸರಾಸರಿ ತಾಪಮಾನ, ಬದಲಾಗುತ್ತಿರುವ ಹಿಮಪಾತದ ಮಾದರಿ ಮತ್ತು ಕರಗುತ್ತಿರುವ ಹಿಮನದಿಗಳು ಇದಕ್ಕೆ ಸಾಕ್ಷಿಯಾಗಿವೆ. ಸಮುದ್ರ ಮಟ್ಟದಿಂದ ಸುಮಾರು 3,900 ಮೀಟರ್ ಎತ್ತರದಲ್ಲಿರುವ ಅಮರನಾಥ ಗುಹೆಯ ಸುತ್ತಮುತ್ತಲಿನ ತಾಪಮಾನ ಮತ್ತು ಆರ್ದ್ರತೆಯಲ್ಲಿ ಉಂಟಾಗುವ ಸಣ್ಣ ಬದಲಾವಣೆಗಳು ಸಹ ಹಿಮಲಿಂಗದ ಮೇಲೆ ನೇರ ಪರಿಣಾಮ ಬೀರುತ್ತವೆ.

