ಆಪರೇಷನ್ ಸಿಂಧೂರ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್‌ ವಾಯುಪಡೆ ಮುಖ್ಯಸ್ಥ
x

ಜಾಗ್ವಾರ್ ಮತ್ತು ಮಿಗ್-27 ವಿಮಾನಗಳ ಏವಿಯಾನಿಕ್ಸ್ ಉನ್ನತೀಕರಣ ಸೇರಿದಂತೆ ದೇಶೀಯ ವಿಮಾನ ಅಭಿವೃದ್ಧಿ ಮತ್ತು ತಾಂತ್ರಿಕ ಸುಧಾರಣಾ ಯೋಜನೆಗಳಲ್ಲೂ ದೀಕ್ಷಿತ್ ಕೊಡುಗೆ ನೀಡಿದ್ದಾರೆ.

ಆಪರೇಷನ್ ಸಿಂಧೂರ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್‌ ವಾಯುಪಡೆ ಮುಖ್ಯಸ್ಥ

ದೀಕ್ಷಿತ್ ಅವರು ಆಪರೇಷನ್ ಸಫೇದ್ ಸಾಗರ್, ಆಪರೇಷನ್ ರಕ್ಷಕ್ ಮತ್ತು ಆಪರೇಷನ್ ಸಿಂಧೂರ್ ಸೇರಿದಂತೆ ಹಲವು ಪ್ರಮುಖ ಕಾರ್ಯಾಚರಣೆಗಳು ಹಾಗೂ ಸೇನಾ ಅಭ್ಯಾಸಗಳಲ್ಲಿ ಭಾಗವಹಿಸಿದ್ದಾರೆ.


Click the Play button to hear this message in audio format

ಭಾರತೀಯ ವಾಯುಪಡೆಯ ಮುಂದಿನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್ ಅವರು ನೇಮಕಗೊಂಡಿದ್ದಾರೆ. ರಕ್ಷಣಾ ಸಚಿವಾಲಯ ಮಂಗಳವಾರ ಈ ನೇಮಕಾತಿಯನ್ನು ಪ್ರಕಟಿಸಿದ್ದು, ಪ್ರಸ್ತುತ ವಾಯುಪಡೆ ಮುಖ್ಯಸ್ಥರಾಗಿರುವ ಏರ್ ಚೀಫ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ಅವರ ನಿವೃತ್ತಿಯ ಬಳಿಕ ಅಕ್ಟೋಬರ್ 31ರ ಮಧ್ಯಾಹ್ನ ದೀಕ್ಷಿತ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಸುಮಾರು ನಾಲ್ಕು ದಶಕಗಳ ವೃತ್ತಿಜೀವನ ಹೊಂದಿರುವ ಅಶುತೋಷ್ ದೀಕ್ಷಿತ್ ಅವರು ಪ್ರಸ್ತುತ ಭಾರತೀಯ ವಾಯುಪಡೆಯ ಉಪ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿವಿಧ ಕಮಾಂಡ್, ಸಿಬ್ಬಂದಿ ಮತ್ತು ತರಬೇತಿ ವಿಭಾಗಗಳಲ್ಲಿ ಅವರು ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. 1966ರ ಡಿಸೆಂಬರ್ 9ರಂದು ಜನಿಸಿದ ದೀಕ್ಷಿತ್ ಅವರು 1986ರ ಡಿಸೆಂಬರ್ 6ರಂದು ಭಾರತೀಯ ವಾಯುಪಡೆಯ ಫೈಟರ್ ವಿಭಾಗಕ್ಕೆ ಸೇರ್ಪಡೆಯಾಗಿದ್ದರು. ನ್ಯಾಷನಲ್ ಡಿಫೆನ್ಸ್ ಅಕಾಡೆಮಿ, ಬಾಂಗ್ಲಾದೇಶದ ಡಿಫೆನ್ಸ್ ಸ್ಟಾಫ್ ಸರ್ವಿಸ್ ಕಾಲೇಜು ಹಾಗೂ ನ್ಯಾಷನಲ್ ಡಿಫೆನ್ಸ್ ಕಾಲೇಜಿನಲ್ಲಿ ತರಬೇತಿ ಪಡೆದಿದ್ದಾರೆ.

20ಕ್ಕೂ ಹೆಚ್ಚು ವಿಮಾನಗಳಲ್ಲಿ 3,500 ಗಂಟೆಗಳ ಹಾರಾಟ

ಅಶುತೋಷ್ ದೀಕ್ಷಿತ್ ಅವರು 20ಕ್ಕೂ ಹೆಚ್ಚು ಬಗೆಯ ವಿಮಾನಗಳಲ್ಲಿ 3,500ಕ್ಕೂ ಅಧಿಕ ಗಂಟೆಗಳ ಹಾರಾಟದ ಅನುಭವ ಹೊಂದಿದ್ದಾರೆ. ಮಿರಾಜ್-2000, ಮಿಗ್ ಸರಣಿಯ ವಿಮಾನಗಳು, ಕಿರಣ್, ಜಾಗ್ವಾರ್, ಐಎಲ್-78, ಹಾಕ್ ಮತ್ತು ತೇಜಸ್ ಸೇರಿದಂತೆ ಹಲವು ವಿಮಾನಗಳನ್ನು ಅವರು ಹಾರಿಸಿದ್ದಾರೆ. ಅವರು ಪ್ರಾಯೋಗಿಕ ಪರೀಕ್ಷಾ ಪೈಲಟ್ ಹಾಗೂ ಅರ್ಹ ಫ್ಲೈಯಿಂಗ್ ಇನ್‌ಸ್ಟ್ರಕ್ಟರ್ ಕೂಡ ಆಗಿದ್ದಾರೆ.

ಆಪರೇಷನ್ ಸಿಂಧೂರ್‌ನಲ್ಲೂ ಪ್ರಮುಖ ಪಾತ್ರ

ದೀಕ್ಷಿತ್ ಅವರು ಆಪರೇಷನ್ ಸಫೇದ್ ಸಾಗರ್, ಆಪರೇಷನ್ ರಕ್ಷಕ್ ಮತ್ತು ಆಪರೇಷನ್ ಸಿಂಧೂರ್ ಸೇರಿದಂತೆ ಹಲವು ಪ್ರಮುಖ ಕಾರ್ಯಾಚರಣೆಗಳು ಹಾಗೂ ಸೇನಾ ಅಭ್ಯಾಸಗಳಲ್ಲಿ ಭಾಗವಹಿಸಿದ್ದಾರೆ. ರಕ್ಷಣಾ ಯೋಜನೆ ಮತ್ತು ಕಾರ್ಯತಂತ್ರ ರೂಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.

ಹಲವು ಪ್ರಮುಖ ಹುದ್ದೆಗಳ ನಿರ್ವಹಣೆ

ಉಪ ವಾಯುಪಡೆ ಮುಖ್ಯಸ್ಥರಾಗುವ ಮೊದಲು ಅವರು ಚೀಫ್ಸ್ ಆಫ್ ಸ್ಟಾಫ್ ಕಮಿಟಿಯ ಅಧ್ಯಕ್ಷರಿಗೆ ಸಂಬಂಧಿಸಿದ ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್‌ನ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. ಇದಕ್ಕೂ ಮೊದಲು ಸೆಂಟ್ರಲ್ ಏರ್ ಕಮಾಂಡ್‌ನ ಏರ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿದ್ದರು. ಪಶ್ಚಿಮ ವಲಯದ ಮುಂಚೂಣಿ ಫೈಟರ್ ಏರ್‌ಬೇಸ್ ಹಾಗೂ ದಕ್ಷಿಣ ವಲಯದ ಪ್ರಮುಖ ಫೈಟರ್ ತರಬೇತಿ ನೆಲೆಯ ಕಮಾಂಡನ್ನೂ ಅವರು ವಹಿಸಿದ್ದರು.

ಜಾಗ್ವಾರ್ ಮತ್ತು ಮಿಗ್-27 ವಿಮಾನಗಳ ಏವಿಯಾನಿಕ್ಸ್ ಅಪ್‌ಗ್ರೇಡೇಶನ್‌ ಸೇರಿದಂತೆ ದೇಶೀಯ ವಿಮಾನ ಅಭಿವೃದ್ಧಿ ಮತ್ತು ತಾಂತ್ರಿಕ ಸುಧಾರಣಾ ಯೋಜನೆಗಳಲ್ಲೂ ದೀಕ್ಷಿತ್ ಕೊಡುಗೆ ನೀಡಿದ್ದಾರೆ. ಅವರ ಸೇವೆಯನ್ನು ಗುರುತಿಸಿ ವಾಯು ಸೇನಾ ಪದಕ, ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ ಹಾಗೂ 2026ರಲ್ಲಿ ಪರಮ ವಿಶಿಷ್ಟ ಸೇವಾ ಪದಕ ನೀಡಿ ಗೌರವಿಸಲಾಗಿದೆ.

Read More
Next Story