ಏರ್‌ ಇಂಡಿಯಾ ವಿಮಾನ ಕುಸಿತ: ಪೈಲಟ್‌ ಗಾಂಜಾ ಸೇವಿಸಿರುವುದು ಪರೀಕ್ಷೆಯಲ್ಲಿ ದೃಢ
x

ಫುಕೆಟ್-ದೆಹಲಿ ಏರ್ ಇಂಡಿಯಾ A320 NEO ವಿಮಾನದಲ್ಲಿ 4 ಸೆಕೆಂಡ್‌ ಪ್ರಮುಖ ನಿಯಂತ್ರಣ ವೈಫಲ್ಯ ಸಂಭವಿಸಿತ್ತು. 

ಏರ್‌ ಇಂಡಿಯಾ ವಿಮಾನ ಕುಸಿತ: ಪೈಲಟ್‌ ಗಾಂಜಾ ಸೇವಿಸಿರುವುದು ಪರೀಕ್ಷೆಯಲ್ಲಿ ದೃಢ

ಫುಕೆಟ್-ದೆಹಲಿ ಏರ್ ಇಂಡಿಯಾ ವಿಮಾನ 300 ಅಡಿಗಳಷ್ಟು ಕುಸಿದಿತ್ತು. ಅದೃಷ್ಟವಶಾತ್‌ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದರು. ವಿಮಾನದ, ಹೈಡ್ರಾಲಿಕ್ ದೋಷಗಳ ತನಿಖೆ ನಡೆಯುತ್ತಿದೆ.


Click the Play button to hear this message in audio format

ಫುಕೆಟ್‌ನಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ 300 ಅಡಿಗಳಷ್ಟು ಕುಸಿತ ಸಂಭವಿಸಿದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ವಿಮಾನದ ಪೈಲಟ್-ಇನ್-ಕಮಾಂಡ್‌ಗೆ ನಡೆಸಿದ ದೃಢೀಕರಣ ಪರೀಕ್ಷೆಯಲ್ಲಿ ಗಾಂಜಾ ಸೇವನೆಯ ಅಂಶ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಆಗಸ್ಟ್ 4ರಂದು AI2379 ವಿಮಾನವು ಫುಕೆಟ್‌ನಿಂದ ದೆಹಲಿಗೆ ತೆರಳುತ್ತಿದ್ದ ವೇಳೆ ಕ್ರೂಸ್ ಹಂತದಲ್ಲಿ ಏಕಾಏಕಿ ಸುಮಾರು 300 ಅಡಿ ಎತ್ತರದಿಂದ ನಿಯಂತ್ರಣ ಕಳೆದುಕೊಂಡಿತ್ತು. ಘಟನೆಯ ಬಳಿಕ ಇಬ್ಬರು ಪೈಲಟ್‌ಗಳಿಗೂ ಕಡ್ಡಾಯ ಸೈಕೋಆಕ್ಟಿವ್ ಸಬ್ಸ್ಟೆನ್ಸ್ ಪರೀಕ್ಷೆ ನಡೆಸಲಾಗಿತ್ತು. ಸಹ ಪೈಲಟ್‌ನ ಪರೀಕ್ಷೆಯಲ್ಲಿ ಯಾವುದೇ ಆತಂಕಕಾರಿ ಅಂಶ ಕಂಡುಬಂದಿರಲಿಲ್ಲ. ಆದರೆ ಪೈಲಟ್-ಇನ್-ಕಮಾಂಡ್‌ನ ಆರಂಭಿಕ ಪರೀಕ್ಷೆಯ ಫಲಿತಾಂಶವನ್ನು ಹೆಚ್ಚಿನ ದೃಢೀಕರಣಕ್ಕಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.

ಇದೀಗ ಪ್ರಯೋಗಾಲಯದ ದೃಢೀಕರಣ ಪರೀಕ್ಷೆಯಲ್ಲೂ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ ಎಂದು ಮೂಲಗಳು ಹೇಳಿವೆ. ತನಿಖೆ ಪೂರ್ಣಗೊಳ್ಳುವವರೆಗೆ ಇಬ್ಬರು ಪೈಲಟ್‌ಗಳನ್ನೂ ವಿಮಾನ ಹಾರಾಟದ ಕರ್ತವ್ಯದಿಂದ ದೂರ ಇಡಲಾಗಿದೆ.

300 ಅಡಿ ಎತ್ತರದಲ್ಲಿ ನಿಯಂತ್ರಣ ಕಳೆದುಕೊಂಡಿದ್ದ ವಿಮಾನ

VT-EXO ನೋಂದಣಿ ಸಂಖ್ಯೆಯ ಏರ್‌ಬಸ್ A320 ವಿಮಾನವು ಆಗಸ್ಟ್ 4ರಂದು ಫುಕೆಟ್‌ನಿಂದ ದೆಹಲಿಗೆ ಬರುತ್ತಿದ್ದಾಗ ಈ ಘಟನೆ ಸಂಭವಿಸಿತ್ತು. ವಿಮಾನದಲ್ಲಿ ಮೂವರು ಶಿಶುಗಳು ಸೇರಿದಂತೆ 137 ಪ್ರಯಾಣಿಕರು ಹಾಗೂ ಇಬ್ಬರು ಪೈಲಟ್‌ಗಳು ಮತ್ತು ಆರು ಕ್ಯಾಬಿನ್ ಸಿಬ್ಬಂದಿ ಸೇರಿ ಒಟ್ಟು ಎಂಟು ಮಂದಿ ಸಿಬ್ಬಂದಿ ಇದ್ದರು. ಸರ್ಕಾರದ ಇತ್ತೀಚಿನ ಮಾಹಿತಿಯ ಪ್ರಕಾರ, ಘಟನೆಯಲ್ಲಿ 20 ಪ್ರಯಾಣಿಕರು ಮತ್ತು ನಾಲ್ವರು ಕ್ಯಾಬಿನ್ ಸಿಬ್ಬಂದಿ ಗಾಯಗೊಂಡಿದ್ದರು. ಬಳಿಕ ವಿಮಾನ ನಿಯಂತ್ರಣಕ್ಕೆ ಬಂದು ಸುರಕ್ಷಿತವಾಗಿ ದೆಹಲಿಯಲ್ಲಿ ಲ್ಯಾಂಡ್ ಆಗಿತ್ತು.

ಪೈಲಟ್ ವರದಿ ಬಗ್ಗೆ ತೀರ್ಮಾನಕ್ಕೆ ಬರದಂತೆ AAIB ಎಚ್ಚರಿಕೆ

ಪೈಲಟ್‌ನ ಡ್ರಗ್ ಟೆಸ್ಟ್ ವರದಿ ಹೊರಬಂದಿದ್ದರೂ, ತನಿಖೆ ಪೂರ್ಣಗೊಳ್ಳುವ ಮುನ್ನ ಯಾವುದೇ ಒಂದು ಮಾಹಿತಿಯ ಆಧಾರದ ಮೇಲೆ ತೀರ್ಮಾನಕ್ಕೆ ಬರಬಾರದು ಎಂದು ಏರ್‌ಕ್ರಾಫ್ಟ್ ಆಕ್ಸಿಡೆಂಟ್ ಇನ್ವೆಸ್ಟಿಗೇಷನ್ ಬ್ಯೂರೋ (AAIB) ಎಚ್ಚರಿಸಿದೆ. ವಿಮಾನದಲ್ಲಿನ ತಾಂತ್ರಿಕ ಸಮಸ್ಯೆಗಳು, ಕಾರ್ಯಾಚರಣಾ ಅಂಶಗಳು, ವೈದ್ಯಕೀಯ ಮಾಹಿತಿ ಮತ್ತು ಮಾನವೀಯ ಅಂಶಗಳನ್ನು ಸಮಗ್ರವಾಗಿ ಪರಿಶೀಲಿಸಲಾಗುತ್ತಿದೆ. ಘಟನೆಯ ನಿಖರ ಕಾರಣ ಮತ್ತು ಅದಕ್ಕೆ ಕಾರಣವಾದ ಅಂಶಗಳನ್ನು ಪತ್ತೆಹಚ್ಚುವುದು ತನಿಖೆಯ ಉದ್ದೇಶವಾಗಿದೆ.

ತಾಂತ್ರಿಕ ದೋಷಗಳ ಬಗ್ಗೆಯೂ ತನಿಖೆ

ವಿಮಾನದಲ್ಲಿ ಆಟೋಪೈಲಟ್ ಡಿಸ್ಕನೆಕ್ಟ್, ಮೂರು ಹೈಡ್ರಾಲಿಕ್ ವ್ಯವಸ್ಥೆಗಳಲ್ಲಿ ದೋಷ ಸೇರಿದಂತೆ ಹಲವು ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡಿದ್ದವು ಎಂಬ ವರದಿಗಳೂ ತನಿಖೆಯಲ್ಲಿವೆ. ಆಟೋಪೈಲಟ್ ಸಂಪರ್ಕ ಕಡಿತಗೊಂಡ ಬಳಿಕ ಸಹ ಪೈಲಟ್ ವಿಮಾನದ ನಿಯಂತ್ರಣವನ್ನು ಕೈಗೆತ್ತಿಕೊಂಡಿದ್ದರು ಎನ್ನಲಾಗಿದೆ. ನಂತರ ಫ್ಲೈಟ್-ಕಂಟ್ರೋಲ್ ಸ್ಟಾಲ್ ಸಂದೇಶ ಕಾಣಿಸಿಕೊಂಡಿದ್ದು, ಕೆಲವು ಸೂಚಕ ಸ್ವಿಚ್‌ಗಳು ಕೆಲಕಾಲ ಕಾರ್ಯನಿರ್ವಹಿಸಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

ಈ ತಾಂತ್ರಿಕ ದೋಷಗಳು, ಪ್ರಕ್ಷುಬ್ಧ ವಾತಾವರಣ ಹಾಗೂ ವಿಮಾನದ ಏಕಾಏಕಿ ಎತ್ತರ ಕುಸಿತದ ನಡುವೆ ಯಾವುದೇ ಸಂಬಂಧವಿದೆಯೇ ಎಂಬುದನ್ನೂ ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಏರ್ ಇಂಡಿಯಾ ಸಿಇಒಗೆ ವಿಚಾರಣೆ

ಈ ನಡುವೆ ಏರ್ ಇಂಡಿಯಾದ ಸುರಕ್ಷತೆ ಮತ್ತು ಕಾರ್ಯಾಚರಣೆಗಳ ಮೇಲಿನ ಪರಿಶೀಲನೆಯನ್ನೂ ಸರ್ಕಾರ ಹೆಚ್ಚಿಸಿದೆ. ಏರ್ ಇಂಡಿಯಾದ ನಿರ್ಗಮಿಸುತ್ತಿರುವ ಸಿಇಒ ಕ್ಯಾಂಪ್ಬೆಲ್ ವಿಲ್ಸನ್ ಅವರನ್ನು ಮಂಗಳವಾರ ನಾಗರಿಕ ವಿಮಾನಯಾನ ಸಚಿವಾಲಯದ ಕೇಂದ್ರ ಕಚೇರಿಗೆ ಕರೆಸಿ ವಿಚಾರಣೆ ನಡೆಸಲಾಗಿದೆ.

AI2379 ಘಟನೆ ಸೇರಿದಂತೆ ಏರ್ ಇಂಡಿಯಾದ ಸುರಕ್ಷತೆ ಮತ್ತು ಕಾರ್ಯಾಚರಣೆಗೆ ಸಂಬಂಧಿಸಿದ ಹಲವು ವಿಚಾರಗಳ ಕುರಿತು ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ. ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು, ನಾಗರಿಕ ವಿಮಾನಯಾನ ಕಾರ್ಯದರ್ಶಿ ಹಾಗೂ ಡಿಜಿಸಿಎ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತಿರುವುದಾಗಿ ಏರ್ ಇಂಡಿಯಾ ತಿಳಿಸಿದೆ. ಫ್ರಾನ್ಸ್‌ನ ವಿಮಾನ ಅಪಘಾತ ತನಿಖಾ ಸಂಸ್ಥೆ BEA ಹಾಗೂ ಏರ್‌ಬಸ್‌ನ ತಾಂತ್ರಿಕ ಪ್ರತಿನಿಧಿಗಳು AAIB ತನಿಖೆಗೆ ಅಗತ್ಯ ತಾಂತ್ರಿಕ ಮಾಹಿತಿ ಮತ್ತು ವಿನ್ಯಾಸ ದಾಖಲೆಗಳನ್ನು ಒದಗಿಸುತ್ತಿದ್ದಾರೆ.

Read More
Next Story