Air India AI-171 flight crash; Final investigation report to be released soon!
x

ಅಹಮದಾಬಾದ್‌ನಲ್ಲಿ ಕಳೆದ ವರ್ಷ ದುರಂತಕ್ಕೀಡಾಗಿದ್ದ ಏರ್‌ ಇಂಡಿಯಾ ವಿಮಾನ 

ಏರ್ ಇಂಡಿಯಾ AI-171 ವಿಮಾನ ದುರಂತ; ಶೀಘ್ರದಲ್ಲೇ ಅಂತಿಮ ತನಿಖಾ ವರದಿ ಪ್ರಕಟ!

ಕಳೆದ ವರ್ಷ ಜೂ. 12 ರಂದು ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ಸಮಯದಲ್ಲೇ ಏರ್ ಇಂಡಿಯಾ AI-171 ವಿಮಾನ ದುರಂತಕ್ಕೀಡಾಗಿತ್ತು.


Click the Play button to hear this message in audio format

ಕಳೆದ ವರ್ಷ ಜೂನ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ AI-171 ವಿಮಾನ ಅಪಘಾತದ ಅಂತಿಮ ತನಿಖಾ ವರದಿಯನ್ನು ವಿಮಾನ ಅಪಘಾತ ತನಿಖಾ ಬ್ಯೂರೋ (ಎಎಐಬಿ) "ಶೀಘ್ರದಲ್ಲೇ" ಪ್ರಕಟಿಸಲಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ತಿಳಿಸಿದ್ದಾರೆ. ತನಿಖೆಯಲ್ಲಿ ಯಾವುದೇ ಲೋಪವಾಗದಂತೆ ಅಂತರರಾಷ್ಟ್ರೀಯ ಪ್ರೋಟೋಕಾಲ್‌ಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದ್ದು, ಅನಗತ್ಯ ಆತುರಕ್ಕೆ ಆಸ್ಪದ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವೇಗಕ್ಕಿಂತ ಪ್ರೋಟೋಕಾಲ್‌ಗೆ ಆದ್ಯತೆ

ಸೋಮವಾರ (ಜೂ. 15) ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ನಾಯ್ಡು, "ವರದಿಗಾಗಿ ನಾವೆಲ್ಲರೂ ಕಾಯುತ್ತಿದ್ದೇವೆ. ಆದರೆ ಎಎಐಬಿ ಅಂತರರಾಷ್ಟ್ರೀಯ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕಾಗಿರುವುದರಿಂದ ಯಾವುದೇ ಹಂತದಲ್ಲೂ ಆತುರ ಪಡುತ್ತಿಲ್ಲ. ತನಿಖೆಯು ಅತ್ಯಂತ ಕೂಲಂಕಷವಾಗಿ ನಡೆಯಬೇಕಿರುವುದರಿಂದ ಸೂಕ್ತ ಸಮಯವನ್ನು ತೆಗೆದುಕೊಳ್ಳಲಾಗುತ್ತಿದೆ. ಪ್ರಸ್ತುತ ತನಿಖೆಯು ಅಂತಿಮ ಹಂತ ತಲುಪಿದ್ದು, ಶೀಘ್ರದಲ್ಲೇ ಅಂತಿಮ ವರದಿಯನ್ನು ನಮಗೆ ಸಲ್ಲಿಸಲಿದ್ದಾರೆ," ಎಂದು ತಿಳಿಸಿದರು.

ತನಿಖೆಯಲ್ಲಿ 'ಗಣನೀಯ ಪ್ರಗತಿ'

ಕಳೆದ ವರ್ಷ ಜೂ. 12 ರಂದು ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ಸಮಯದಲ್ಲೇ ಏರ್ ಇಂಡಿಯಾ AI-171 ವಿಮಾನ ದುರಂತಕ್ಕೀಡಾಗಿತ್ತು. ಈ ಭೀಕರ ಅಪಘಾತದಲ್ಲಿ 229 ಪ್ರಯಾಣಿಕರು, 12 ಸಿಬ್ಬಂದಿ ಹಾಗೂ ನೆಲದ ಮೇಲಿದ್ದ 19 ವ್ಯಕ್ತಿಗಳು ಸೇರಿದಂತೆ ಒಟ್ಟು 260 ಮಂದಿ ದುರ್ಮರಣಕ್ಕೀಡಾಗಿದ್ದರು. ದುರಂತಕ್ಕೆ ಸಂಬಂಧಿಸಿದಂತೆ ಮಹತ್ವದ ಪುರಾವೆಗಳನ್ನು ಪರಿಶೀಲಿಸುವಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ ಎಂದು ಎಎಐಬಿ ಇತ್ತೀಚೆಗೆ ತಿಳಿಸಿತ್ತು.

ವರ್ಷಪೂರ್ತಿ ನಡೆದ ತೀವ್ರ ಮೌಲ್ಯಮಾಪನ

ತನಿಖೆಯ ಮಧ್ಯಂತರ ವರದಿಯಲ್ಲಿ ಮಾಹಿತಿ ನೀಡಿರುವ ಎಎಐಬಿ, ಕಳೆದ ಒಂದು ವರ್ಷದಿಂದ ತನ್ನ ವಿಶೇಷ ತಂಡವು ಅಪಘಾತದ ತಾಂತ್ರಿಕ, ಕಾರ್ಯಾಚರಣೆ ಮತ್ತು ಮಾನವ ತಪ್ಪುಗಳೂ ಸೇರಿದಂತೆ ಎಲ್ಲಾ ಆಯಾಮಗಳ ಬಗ್ಗೆ ವಿವರವಾದ ಮೌಲ್ಯಮಾಪನ ನಡೆಸಿದೆ. ವಿಮಾನದ ಸಿಸ್ಟಮ್ಸ್, ಬ್ಲಾಕ್ ಬಾಕ್ಸ್, ಎಂಜಿನ್ ಘಟಕಗಳು, ನಿರ್ವಹಣಾ ದಾಖಲೆಗಳು ಮತ್ತು ಕಾರ್ಯಾಚರಣೆಯ ದಾಖಲೆಗಳ ಸಂಪೂರ್ಣ ಪರೀಕ್ಷೆ ಮತ್ತು ವಿಶ್ಲೇಷಣೆಯಲ್ಲಿ ತನಿಖಾಧಿಕಾರಿಗಳು ಗಣನೀಯ ಯಶಸ್ಸು ಕಂಡಿದ್ದಾರೆ. ಎಲ್ಲಾ ಅಂತರರಾಷ್ಟ್ರೀಯ ಪರಿಶೀಲನಾ ಪ್ರಕ್ರಿಯೆಗಳು ಮುಗಿದ ತಕ್ಷಣವೇ ಸಂಪೂರ್ಣ ಸಾಕ್ಷ್ಯಾಧಾರಿತ ವರದಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಬ್ಯೂರೋ ತಿಳಿಸಿದೆ. ಇದೇ ವೇಳೆ ಅಪಘಾತದಲ್ಲಿ ಮಡಿದವರ ಕುಟುಂಬಗಳಿಗೆ ಸಂಸ್ಥೆಯು ಮತ್ತೊಮ್ಮೆ ತೀವ್ರ ಸಂತಾಪ ಸೂಚಿಸಿದೆ.

Read More
Next Story