ಅಭಿನಂದನ್ ವರ್ಧಮಾನ್ ಹೊಸ ಇನ್ನಿಂಗ್ಸ್; ಕಮರ್ಷಿಯಲ್ ಪೈಲಟ್ ಆಗಿ ಸೇರ್ಪಡೆ
x

ಅಭಿನಂದನ್ ವರ್ಧಮಾನ್ ಹೊಸ ಇನ್ನಿಂಗ್ಸ್; ಕಮರ್ಷಿಯಲ್ ಪೈಲಟ್ ಆಗಿ ಸೇರ್ಪಡೆ

ಗೋವಾ ಮೂಲದ ಪ್ರಾದೇಶಿಕ ವಿಮಾನಯಾನ ಸಂಸ್ಥೆ FLY91ಗೆ ಕಮರ್ಷಿಯಲ್ ಪೈಲಟ್ ಆಗಿ ಸೇರ್ಪಡೆಯಾಗಿರುವ ಅಭಿನಂದನ್ ವರ್ಧಮಾನ್ ಅವರು ಸದ್ಯ ಗೋವಾ-ಹೈದರಾಬಾದ್ ಮಾರ್ಗದಲ್ಲಿ ತರಬೇತಿ ಪಡೆಯುತ್ತಿದ್ದಾರೆ.


Click the Play button to hear this message in audio format

ಭಾರತೀಯ ವಾಯುಪಡೆಯ ಮಾಜಿ ಗ್ರೂಪ್ ಕ್ಯಾಪ್ಟನ್ ಹಾಗೂ ವೀರ ಚಕ್ರ ಪ್ರಶಸ್ತಿ ಪುರಸ್ಕೃತ ಅಭಿನಂದನ್ ವರ್ಧಮಾನ್ ಇದೀಗ ಹೊಸ ವೃತ್ತಿಜೀವನಕ್ಕೆ ಕಾಲಿಟ್ಟಿದ್ದಾರೆ. ಅವರು ಗೋವಾ ಮೂಲದ ಪ್ರಾದೇಶಿಕ ವಿಮಾನಯಾನ ಸಂಸ್ಥೆ FLY91ಗೆ ಕಮರ್ಷಿಯಲ್ ಪೈಲಟ್ ಆಗಿ ಸೇರ್ಪಡೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಭಿನಂದನ್ ವರ್ಧಮಾನ್ ಅವರು ಆಗಸ್ಟ್‌ನಲ್ಲಿ FLY91ಗೆ ಸೇರ್ಪಡೆಯಾಗಿದ್ದು, ಸದ್ಯ ಅಗತ್ಯ ತರಬೇತಿ ಪಡೆಯುತ್ತಿದ್ದಾರೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

ಗೋವಾ-ಹೈದರಾಬಾದ್ ಮಾರ್ಗದಲ್ಲಿ ತರಬೇತಿ

ಪ್ರಸ್ತುತ ಅಭಿನಂದನ್ ವರ್ಧಮಾನ್ ಅವರು ಗೋವಾ-ಹೈದರಾಬಾದ್ ಮಾರ್ಗದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಅಗತ್ಯ ತರಬೇತಿ ಪೂರ್ಣಗೊಳಿಸಿ, ನಿಯಂತ್ರಣ ಸಂಸ್ಥೆಗಳ ಅನುಮೋದನೆಗಳನ್ನು ಪಡೆದ ಬಳಿಕ ಅವರು FLY91 ಪರವಾಗಿ ATR ವಿಮಾನವನ್ನು ಹಾರಿಸುವ ನಿರೀಕ್ಷೆಯಿದೆ.

ಅಭಿನಂದನ್ ಅವರು ಸಂಸ್ಥೆಯೊಂದಿಗೆ ಸೇರ್ಪಡೆಯಾಗಿರುವುದನ್ನು FLY91 ದೃಢಪಡಿಸಿದೆ. ಆದರೆ ಅವರ ತರಬೇತಿ ಅಥವಾ ಮುಂದಿನ ವಿಮಾನ ಹಾರಾಟದ ವೇಳಾಪಟ್ಟಿಗೆ ಸಂಬಂಧಿಸಿದ ಹೆಚ್ಚಿನ ವಿವರಗಳನ್ನು ನೀಡಲು ಸಂಸ್ಥೆ ನಿರಾಕರಿಸಿದೆ.

ಮಾಜಿ ಫೈಟರ್ ಪೈಲಟ್ ವಾಣಿಜ್ಯ ವಿಮಾನ ಹಾರಾಟ ಯಾವಾಗ ಆರಂಭಿಸಲಿದ್ದಾರೆ ಮತ್ತು ಮುಂದಿನ ದಿನಗಳಲ್ಲಿ ಯಾವ ಮಾರ್ಗಗಳಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ FLY91, ತಮ್ಮ ವೃತ್ತಿಜೀವನ ಅಥವಾ ವೈಯಕ್ತಿಕ ಪ್ರಯಾಣದ ಕುರಿತು ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲು ಅಭಿನಂದನ್ ಅವರು ಇಚ್ಛಿಸಿಲ್ಲ ಎಂದು ತಿಳಿಸಿದೆ.

2019ರ ವಾಯು ಸಂಘರ್ಷದಲ್ಲಿ ಅಭಿನಂದನ್ ಪಾತ್ರ

2019ರ ಫೆಬ್ರವರಿ 27ರಂದು ನಡೆದ ಭಾರತ-ಪಾಕಿಸ್ತಾನ ವೈಮಾನಿಕ ದಾಳಿ ಬಳಿಕ ಅಭಿನಂದನ್ ಅವರ ಹೆಸರು ದೇಶಾದ್ಯಂತ ಚರ್ಚೆಗೆ ಬಂದಿತ್ತು. ಅಂದು MiG-21 Bison ಯುದ್ಧವಿಮಾನದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಅಭಿನಂದನ್ ಅವರ ವಿಮಾನವನ್ನು ಹೊಡೆದುರುಳಿಸಲಾಗಿತ್ತು. ಬಳಿಕ ಅವರು ವಿಮಾನದಿಂದ ಸುರಕ್ಷಿತವಾಗಿ ಹೊರಬಂದು ಪಾಕಿಸ್ತಾನದ ಭೂಪ್ರದೇಶದಲ್ಲಿ ಇಳಿದಿದ್ದರು.

ಅವರನ್ನು ಪಾಕಿಸ್ತಾನಿ ಪಡೆಗಳು ವಶಕ್ಕೆ ಪಡೆದಿದ್ದು, ಸುಮಾರು ಮೂರು ದಿನಗಳ ಕಾಲ ಬಂಧನದಲ್ಲಿಟ್ಟಿದ್ದವು. ಬಳಿಕ ಅವರನ್ನು ಭಾರತಕ್ಕೆ ಹಸ್ತಾಂತರಿಸಲಾಗಿತ್ತು. ಅವರ ಧೈರ್ಯ ಮತ್ತು ಶೌರ್ಯವನ್ನು ಗುರುತಿಸಿ ಭಾರತ ಸರ್ಕಾರವು 2021ರಲ್ಲಿ ಅಭಿನಂದನ್ ವರ್ತಮಾನ್ ಅವರಿಗೆ ದೇಶದ ಮೂರನೇ ಅತ್ಯುನ್ನತ ಯುದ್ಧಕಾಲದ ಶೌರ್ಯ ಪ್ರಶಸ್ತಿಯಾದ ವೀರ ಚಕ್ರ ನೀಡಿ ಗೌರವಿಸಿತು.

ಯುದ್ಧ ಕಾರ್ಯಾಚರಣೆಯಿಂದ ಕಮರ್ಷಿಯಲ್ ಪೈಲಟ್‌ವರೆಗೆ

2019ರ ಘಟನೆ ಬಳಿಕ ಭಾರತದ ಅತ್ಯಂತ ಪರಿಚಿತ ಸೇನಾ ವ್ಯಕ್ತಿಗಳಲ್ಲಿ ಒಬ್ಬರಾದ ಅಭಿನಂದನ್ ಸಾರ್ವಜನಿಕ ಜೀವನದಿಂದ ಬಹುತೇಕ ದೂರವೇ ಉಳಿದಿದ್ದರು. ಇದೀಗ 2019ರ ವಾಯು ಸಂಘರ್ಷಕ್ಕೆ ಏಳು ವರ್ಷಗಳ ಬಳಿಕ ಅವರು ಮತ್ತೊಮ್ಮೆ ಕಾಕ್‌ಪಿಟ್‌ಗೆ ಮರಳಲು ಸಜ್ಜಾಗಿದ್ದಾರೆ. ಆದರೆ ಈ ಬಾರಿ ಯುದ್ಧವಿಮಾನವಲ್ಲ—FLY91ನ ಕಮರ್ಷಿಯಲ್ ಪೈಲಟ್ ಆಗಿ ಪ್ರಯಾಣಿಕರನ್ನು ಹೊತ್ತೊಯ್ಯುವ ವಿಮಾನವನ್ನು ಹಾರಿಸಲಿದ್ದಾರೆ. ಯುದ್ಧವಿಮಾನ ಪೈಲಟ್ ಆಗಿ ದೇಶದ ಗಮನ ಸೆಳೆದಿದ್ದ ಅಭಿನಂದನ್ ಅವರ ವೃತ್ತಿಜೀವನದ ಈ ಹೊಸ ಅಧ್ಯಾಯ ಇದೀಗ ಕುತೂಹಲ ಮೂಡಿಸಿದೆ.

Read More
Next Story