ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಪಟ್ಟು: ದೇಶವ್ಯಾಪಿ ಹೋರಾಟದ ಎಚ್ಚರಿಕೆ ಕೊಟ್ಟ ಸಿಜೆಪಿ
x

ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಅಮೆರಿಕದಿಂದ ಭಾರತಕ್ಕೆ ವಾಪಸ್ ಪ್ರಯಾಣ ಬೆಳೆಸಿದ್ದಾರೆ.

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಪಟ್ಟು: ದೇಶವ್ಯಾಪಿ ಹೋರಾಟದ ಎಚ್ಚರಿಕೆ ಕೊಟ್ಟ ಸಿಜೆಪಿ

ಕೇಂದ್ರ ಸಚಿವರ ರಾಜೀನಾಮೆಗಾಗಿ ಒಂದು ವಾರಗಳ ಕಾಲ ಗಡುವು ನೀಡಲಿದ್ದೇವೆ. ಒಂದು ವೇಳೆ ಸರ್ಕಾರ ಯುವಕರ ಧ್ವನಿಗೆ ಕಿವಿಗೊಡದಿದ್ದರೆ, ಈ ಆಂದೋಲನವನ್ನು ದೇಶದ ಮೂಲೆ ಮೂಲೆಗೂ ವಿಸ್ತರಿಸಿ ತೀವ್ರಗೊಳಿಸುತ್ತೇವೆ ಎಂದು ಸಿಜೆಪಿ ಎಚ್ಚರಿಕೆ ನೀಡಿದೆ.


ನೀಟ್, ಸಿಬಿಎಸ್ಇ, ಸಿಯುಇಟಿ ಹಾಗೂ ಎಸ್ಎಸ್‌ಸಿ ಸೇರಿ ದೇಶದ ಪ್ರಮುಖ ಪರೀಕ್ಷೆಗಳು ಹಾಗೂ ಉದ್ಯೋಗ ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿರುವ ಸಾಲು ಸಾಲು ಅಕ್ರಮಗಳ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಹೇಳಿದ್ದಾರೆ.

ದೆಹಲಿಯ ಜಂತರ್ ಮಂತರ್‌ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿ ಭಾನುವಾರ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಇರುವ ತಮ್ಮ ನಿವಾಸಕ್ಕೆ ಮರಳಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

ಡಿಜಿಟಲ್ ಕ್ರಾಂತಿ To ರಸ್ತೆ ಹೋರಾಟ

ಕಳೆದ ಮೇ ತಿಂಗಳಲ್ಲಿ ಕೇವಲ ಸಾಮಾಜಿಕ ಜಾಲತಾಣದ ಅಭಿಯಾನವಾಗಿ ಆರಂಭಗೊಂಡು, ಇನ್‌ಸ್ಟಾಗ್ರಾಂನಲ್ಲಿ ಬರೋಬ್ಬರಿ 22 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದುವ ಮೂಲಕ ದೇಶದ ಯುವ ಸಮೂಹದಲ್ಲಿ ಜಾಗೃತಿ ಮೂಡಿಸಿದ್ದ 'ಕಾಕ್ರೋಚ್ ಜನತಾ ಪಾರ್ಟಿ' ಶನಿವಾರ ದೆಹಲಿಯ ರಸ್ತೆಗಿಳಿದಿತ್ತು.

"ದೆಹಲಿಯ ಜಂತರ್ ಮಂತರ್‌ನಲ್ಲಿ ಆಯೋಜಿಸಿದ್ದ ಶಾಂತಿಯುತ ಪ್ರತಿಭಟನೆ ಯಶಸ್ವಿಯಾಗಿದೆ. ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಸುಮಾರು 7 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪೋಷಕರು ಮತ್ತು ಯುವ ಉದ್ಯೋಗಾಕಾಂಕ್ಷಿಗಳು ಇದರಲ್ಲಿ ಭಾಗವಹಿಸಿದ್ದರು. ಕೇಂದ್ರ ಸಚಿವರ ರಾಜೀನಾಮೆಗಾಗಿ ಒಂದು ವಾರಗಳ ಕಾಲ ಗಡುವು ನೀಡಲಿದ್ದೇವೆ. ಒಂದು ವೇಳೆ ಸರ್ಕಾರ ಯುವಕರ ಧ್ವನಿಗೆ ಕಿವಿಗೊಡದಿದ್ದರೆ, ಈ ಆಂದೋಲನವನ್ನು ದೇಶದ ಮೂಲೆ ಮೂಲೆಗೂ ವಿಸ್ತರಿಸಿ ತೀವ್ರಗೊಳಿಸಲು ಕ್ರಿಯಾ ಯೋಜನೆ ರೂಪಿಸುತ್ತೇವೆ ಎಂದು ದೀಪ್ಕೆ ಎಚ್ಚರಿಸಿದ್ದಾರೆ.

ಸಂವಿಧಾನದ ಪ್ರತಿ ಹಿಡಿದಿದ್ದ ದೀಪ್ಕೆ!

ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆಗೆ ಕರೆ ನೀಡಿದ್ದ 30 ವರ್ಷದ ಯುವ ಹೋರಾಟಗಾರ ಅಭಿಜಿತ್ ದೀಪ್ಕೆ, ಉನ್ನತ ವ್ಯಾಸಂಗ ಮುಗಿಸಿ ಶನಿವಾರ ಮುಂಜಾನೆ ಅಮೆರಿಕದಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ವಿಮಾನ ನಿಲ್ದಾಣದಿಂದ ಹೊರಬರುವಾಗ ಅವರ ಕೈಯಲ್ಲಿ ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಆತ್ಮಚರಿತ್ರೆಯ ಪುಸ್ತಕದ ಪ್ರತಿ ಇತ್ತು.

"ಭಾರತಕ್ಕೆ ಬರುವಾಗ ನನ್ನನ್ನು ಬಂಧಿಸಬಹುದು ಎಂಬ ಆತಂಕ ಕುಟುಂಬಸ್ಥರಲ್ಲಿತ್ತು. ಜೈಲಿಗೆ ಹೆದರಿ ಎಷ್ಟು ದಿನ ಬದುಕಲು ಸಾಧ್ಯ? ದೇಶದ ಕೋಟ್ಯಂತರ ಯುವಕರ ಭವಿಷ್ಯ ಇಂದು ಕತ್ತಲಲ್ಲಿದೆ. ಅಧಿಕಾರಿಗಳು ನಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್ಗಳನ್ನು ಡಿಲೀಟ್ ಮಾಡಬಹುದು, ಆದರೆ ದೇಶದ ಯುವಕರ ಆಕ್ರೋಶವನ್ನಲ್ಲ," ಎಂದು ಅವರು ಪ್ರತಿಭಟನೆ ವೇಳೆ ಹೇಳಿದ್ದರು.

ತವರಲ್ಲಿ ಅದ್ಧೂರಿ ಸ್ವಾಗತ, ಭದ್ರತೆ ಹೆಚ್ಚಳ

ದೆಹಲಿಯ ಯಶಸ್ವಿ ಹೋರಾಟದ ಬಳಿಕ ಭಾನುವಾರ ಮಹಾರಾಷ್ಟ್ರದ ತಮ್ಮ ತವರು ಜಿಲ್ಲೆಯ ನಿವಾಸಕ್ಕೆ ಆಗಮಿಸಿದ ಅಭಿಜಿತ್ ದೀಪ್ಕೆ ಅವರನ್ನು ಅವರ ಕುಟುಂಬಸ್ಥರು ಮತ್ತು ಸ್ಥಳೀಯ ಬೆಂಬಲಿಗರು ಆರತಿ ಬೆಳಗಿ ಅದ್ಧೂರಿಯಾಗಿ ಬರಮಾಡಿಕೊಂಡರು. ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಈ ಯುವ ಚಳವಳಿಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ದೀಪೈ ಅವರ ನಿವಾಸದ ಸುತ್ತಮುತ್ತ ಮಹಾರಾಷ್ಟ್ರ ಪೊಲೀಸರು ಬಿಗಿ ಭದ್ರತೆಯನ್ನು ಕಲ್ಪಿಸಿದ್ದಾರೆ.

ಏನಿದು ಕಾಕ್ರೋಚ್ ಜನತಾ ಪಾರ್ಟಿ?

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಇತ್ತೀಚೆಗೆ ನೀಡಿದ್ದ ಪರೋಕ್ಷ ಹೇಳಿಕೆಯನ್ನು ವಿಡಂಬನಾತ್ಮಕವಾಗಿ ಬಳಸಿಕೊಂಡು ಯುವಕರು ಸೃಷ್ಟಿಸಿದ ಡಿಜಿಟಲ್ ಸಂಘಟನೆ ಇದಾಗಿದೆ.

ಕೇವಲ ಮೂರು ವಾರಗಳಲ್ಲಿ ದೇಶದ ಅತಿ ದೊಡ್ಡ ಯುವ ರಾಜಕೀಯ ರಂಗವಾಗಿ ಹೊರಹೊಮ್ಮಿರುವ ಸಿಜೆಪಿ, ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಶೈಕ್ಷಣಿಕ ವ್ಯವಸ್ಥೆಯ ಹಳಿ ತಪ್ಪುವಿಕೆ ವಿರುದ್ಧ ಇಡೀ ದೇಶದ ಯುವ ಸಮೂಹವನ್ನು ಒಂದೇ ವೇದಿಕೆಯಡಿ ತರುವಲ್ಲಿ ಯಶಸ್ವಿಯಾಗಿದೆ.

Read More
Next Story