ಆತ್ಮಹತ್ಯೆ ವಿದ್ಯಾರ್ಥಿಗಳ ಕುಟುಂಬಗಳಿಗೆ 1 ಕೋಟಿ ಪರಿಹಾರ ನೀಡುವಂತೆ ಸಿಜೆಪಿ ಆಗ್ರಹ
x

ಆತ್ಮಹತ್ಯೆ ವಿದ್ಯಾರ್ಥಿಗಳ ಕುಟುಂಬಗಳಿಗೆ 1 ಕೋಟಿ ಪರಿಹಾರ ನೀಡುವಂತೆ ಸಿಜೆಪಿ ಆಗ್ರಹ

ದೇಶದಲ್ಲಿ ಸುಮಾರು 11 ವಿದ್ಯಾರ್ಥಿಗಳು ಪರೀಕ್ಷೆಯ ಅನಿಶ್ಚಿತತೆಯ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿಗಳು ಸಾವನ್ನಪ್ಪಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಎತ್ತಿ ತೋರಿಸುತ್ತದೆ.


Click the Play button to hear this message in audio format

ದೇಶದಲ್ಲಿ ಪದೇ ಪದೇ ನಡೆಯುತ್ತಿರುವ ಪರೀಕ್ಷಾ ಅಕ್ರಮಗಳು ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳಿಂದಾಗಿ ವಿದ್ಯಾರ್ಥಿಗಳಲ್ಲಿ ಉಂಟಾಗಿರುವ ತೀವ್ರ ಹತಾಶೆ ಹಾಗೂ ಮಾನಸಿಕ ಒತ್ತಡದ ಹಿನ್ನೆಲೆಯಲ್ಲಿ, ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರ ನೀಡಬೇಕೆಂದು ಕೇಂದ್ರ ಸರ್ಕಾರವನ್ನು 'ಕಾರ್ಕೋಚ್‌ ಜನತಾ ಪಾರ್ಟಿ' (ಸಿಜೆಪಿ) ಸಂಸ್ಥಾಪಕ ಅಭಿಜಿತ್ ಡಿಪ್ಕೆ ಆಗ್ರಹಿಸಿದ್ದಾರೆ.

ಜೂನ್ 20 ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆಗೆ ಮುನ್ನ, ಅಭಿಜಿತ್ ಡಿಪ್ಕೆ ಅವರು ಪ್ರಧಾನಿಯವರಿಗೆ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ. ನಮ್ಮ ರಾಷ್ಟ್ರದ ಭವಿಷ್ಯವನ್ನೇ ಬೆದರಿಸುತ್ತಿರುವ ಒಂದು ಗಂಭೀರ ಬಿಕ್ಕಟ್ಟಿನತ್ತ ನಿಮ್ಮ ಗಮನ ಸೆಳೆಯಲು ಈ ಪತ್ರ ಬರೆಯುತ್ತಿದ್ದೇನೆ. ವಿದ್ಯಾರ್ಥಿಗಳ ಜೀವನ ಮತ್ತು ಅವರ ಮಾನಸಿಕ ಆರೋಗ್ಯ ಅತ್ಯಂತ ಸಂಕಷ್ಟದಲ್ಲಿದೆ ಎಂದು ಡಿಪ್ಕೆ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಆತ್ಮಹತ್ಯೆಗಳ ಸರಮಾಲೆ: ಆತಂಕಕಾರಿ ಸ್ಥಿತಿ

ಕಳೆದ ಕೆಲವು ವಾರಗಳಲ್ಲಿ ದೇಶಾದ್ಯಂತ ಸುಮಾರು 11 ವಿದ್ಯಾರ್ಥಿಗಳು ಪರೀಕ್ಷೆಯ ಅನಿಶ್ಚಿತತೆಯ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇವಲ ಕಳೆದ 48 ಗಂಟೆಗಳ ಅವಧಿಯಲ್ಲೇ ಐವರು ವಿದ್ಯಾರ್ಥಿಗಳು ಸಾವನ್ನಪ್ಪಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಎತ್ತಿ ತೋರಿಸುತ್ತದೆ. ಪರೀಕ್ಷೆಗಳ ಮರುಪರೀಕ್ಷೆಯ ಅನಿಶ್ಚಿತತೆ ಹಾಗೂ ಪರೀಕ್ಷಾ ವ್ಯವಸ್ಥೆಯ ಮೇಲಿನ ನಂಬಿಕೆ ಕಳೆದುಕೊಂಡಿರುವುದು ವಿದ್ಯಾರ್ಥಿಗಳನ್ನು ತೀವ್ರ ಹತಾಶೆಗೆ ದೂಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

1 ಕೋಟಿ ರೂ. ಪರಿಹಾರದ ಬೇಡಿಕೆ

ಪರೀಕ್ಷಾ ಅಕ್ರಮಗಳು ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಘಟನೆಗಳಿಂದಾಗಿ ದೇಶದ ಅನೇಕ ಕುಟುಂಬಗಳು ಭಾರಿ ಸಂಕಷ್ಟಕ್ಕೆ ಸಿಲುಕಿವೆ. ಸಾಲ ಮಾಡಿ ಮಕ್ಕಳನ್ನು ಓದಿಸುತ್ತಿದ್ದ ಪೋಷಕರು, ಈಗ ಮಕ್ಕಳನ್ನೇ ಕಳೆದುಕೊಂಡು ಬೀದಿಪಾಲಾಗಿದ್ದಾರೆ. ತಮ್ಮ ಸಂಪೂರ್ಣ ಬದುಕಿನ ಉಳಿತಾಯವನ್ನು ಮಕ್ಕಳ ಶಿಕ್ಷಣಕ್ಕಾಗಿ ವೆಚ್ಚ ಮಾಡಿದ ಪೋಷಕರಿಗೆ, ಈಗ ಆ ಮಕ್ಕಳೇ ಇಲ್ಲದಂತಾಗಿದೆ. ಇಂತಹ ಕುಟುಂಬಗಳು ಅಕ್ಷರಶಃ ನಿರ್ಗತಿಕವಾಗಿವೆ. ಈ ಹಿನ್ನೆಲೆಯಲ್ಲಿ, ಸಂತ್ರಸ್ತ ಕುಟುಂಬಗಳಿಗೆ ಸರ್ಕಾರ ತಲಾ 1 ಕೋಟಿ ರೂ. ಪರಿಹಾರ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯನ್ನು ಸಿಜೆಪಿ ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಆಗ್ರಹಿಸುತ್ತಿದೆ. ದೇಶದಾದ್ಯಂತ ಪ್ರತಿಭಟನೆಗಳನ್ನು ನಡೆಸುತ್ತಿದೆಯಾದರೂ, ಸರ್ಕಾರ ಮೌನ ವಹಿಸಿದೆ. "ವಿದ್ಯಾರ್ಥಿಗಳ ಜೀವದ ನಷ್ಟಕ್ಕೆ ಉತ್ತರದಾಯಿತ್ವ ಬೇಕು. ಶಿಕ್ಷಣ ವ್ಯವಸ್ಥೆಯ ಮೇಲೆ ವಿದ್ಯಾರ್ಥಿಗಳು ಮತ್ತು ಪೋಷಕರು ಹೊಂದಿರುವ ನಂಬಿಕೆಯನ್ನು ಮರುಸ್ಥಾಪಿಸಲು, ಸಚಿವರನ್ನು ವಜಾಗೊಳಿಸುವುದು ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.

ಶಿಕ್ಷಣ ಸಚಿವರನ್ನು ವಜಾಗೊಳಿಸುವುದು ಸರ್ಕಾರದ ದೌರ್ಬಲ್ಯವಲ್ಲ, ಬದಲಾಗಿ ಉತ್ತರದಾಯಿತ್ವದ ಕಡೆಗಿನ ಮಹತ್ವದ ಹೆಜ್ಜೆಯಾಗಿದೆ̤ ಅವರು ನಿಮ್ಮ ಇಚ್ಛೆಯ ಮೇರೆಗೆ ಅಧಿಕಾರದಲ್ಲಿ ಮುಂದುವರಿಯುತ್ತಿದ್ದಾರೆ, ಆದರೆ ಅಂತಿಮವಾಗಿ ಇದರ ಹೊಣೆಗಾರಿಕೆ ಪ್ರಧಾನಿಯವರದ್ದೇ ಆಗಿದೆ. ಜೂನ್ 20 ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ದೇಶದ ನಾನಾ ಭಾಗಗಳಿಂದ ಸಾವಿರಾರು ವಿದ್ಯಾರ್ಥಿಗಳು ಸೇರಲಿದ್ದಾರೆ. ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದೆ ಮಂಡಿಸಲು ಮತ್ತು ವಿದ್ಯಾರ್ಥಿಗಳ ಆಕ್ರೋಶವನ್ನು ತಲುಪಿಸಲು ಈ ಪ್ರತಿಭಟನೆ ವೇದಿಕೆಯಾಗಲಿದೆ. ಕಳೆದ ಜೂನ್ 6 ರಂದೂ ಸಹ ಸಿಜೆಪಿ ಕರೆ ನೀಡಿದ್ದ ಬೃಹತ್ ಪ್ರತಿಭಟನೆಯಲ್ಲಿ ನೂರಾರು ವಿದ್ಯಾರ್ಥಿಗಳು ಮತ್ತು ಯುವ ವೃತ್ತಿಪರರು ಭಾಗವಹಿಸಿದ್ದರು. ಅಂದಿನಿಂದೀಚೆಗೆ ಈ ಆಂದೋಲನವು ದೇಶದ ಹಲವು ನಗರಗಳಿಗೆ ವ್ಯಾಪಿಸಿದ್ದು, ಪ್ರತಿಭಟನೆಗಳು ತೀವ್ರಗೊಂಡಿವೆ.

ರಚನಾತ್ಮಕ ಸುಧಾರಣೆಗೆ ಆಗ್ರಹ

ಕೇವಲ ರಾಜೀನಾಮೆ ಮತ್ತು ಪರಿಹಾರಕ್ಕೆ ಸೀಮಿತವಾಗದೆ, ಶಿಕ್ಷಣ ವ್ಯವಸ್ಥೆಯಲ್ಲಿ ಮೂಲಭೂತ ಬದಲಾವಣೆಗಳನ್ನು ತರಬೇಕೆಂದು ಸಿಜೆಪಿ ಆಗ್ರಹಿಸಿದೆ. ವಿದ್ಯಾರ್ಥಿಗಳ ಮಾನಸಿಕ ಆರೋಗ್ಯವನ್ನು ಆದ್ಯತೆಯಾಗಿ ಪರಿಗಣಿಸಬೇಕು ಮತ್ತು ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಕಠಿಣ ಕಾನೂನುಗಳನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ. ಇನ್ನು ಮುಂದೆ ಯಾವುದೇ ಯುವ ಜೀವಗಳು ಶೈಕ್ಷಣಿಕ ಹತಾಶೆಯಿಂದ ಬಲಿಯಾಗದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ ಎಂದು ಡಿಪ್ಕೆ ಪತ್ರದ ಮೂಲಕ ಎಚ್ಚರಿಸಿದ್ದಾರೆ.

Read More
Next Story