ಎಎಪಿಯಿಂದ ಬಿಜೆಪಿ ಸೇರಿದ 7 ಸಂಸದರು: ಅನರ್ಹತೆಗೆ ಒತ್ತಾಯಿಸಿ ಸಭಾಪತಿಗೆ ದೂರು
x

ಬಿಜೆಪಿ ಸೇರಲಿರುವ 7 ಸದಸ್ಯರ ಪೈಕಿ 6 ಮಂದಿ ಪಂಜಾಬ್‌ನಿಂದ ಆಯ್ಕೆಯಾದವರಾಗಿದ್ದಾರೆ.

ಎಎಪಿಯಿಂದ ಬಿಜೆಪಿ ಸೇರಿದ 7 ಸಂಸದರು: ಅನರ್ಹತೆಗೆ ಒತ್ತಾಯಿಸಿ ಸಭಾಪತಿಗೆ ದೂರು

ಬಿಜೆಪಿ ಸೇರಿರುವ ಸ್ವಾತಿ ಮಾಲಿವಾಲ್ ಅವರು ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. "ಪಕ್ಷವು ತನ್ನ ಮೂಲತತ್ವಗಳಿಂದ ದೂರ ಸರಿದಿದೆ.


Click the Play button to hear this message in audio format

ಆಮ್ ಆದ್ಮಿ ಪಕ್ಷ (ಎಎಪಿ) ತೊರೆದು ಬಿಜೆಪಿ ಸೇರ್ಪಡೆಯಾಗಲು ನಿರ್ಧರಿಸಿರುವ ತಮ್ಮ ಏಳು ರಾಜ್ಯಸಭಾ ಸಂಸದರನ್ನು ಅನರ್ಹಗೊಳಿಸುವಂತೆ ಕೋರಿ ಪಕ್ಷವು ರಾಜ್ಯಸಭಾ ಸಭಾಪತಿಗೆ ಅಧಿಕೃತವಾಗಿ ಪತ್ರ ಬರೆಯಲಿದೆ ಎಂದು ಎಎಪಿ ನಾಯಕ ಸಂಜಯ್ ಸಿಂಗ್ ಶನಿವಾರ ತಿಳಿಸಿದ್ದಾರೆ.

"ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಯಾವುದೇ ಗುಂಪುಗಾರಿಕೆ ಅಥವಾ ಒಡಕು ಮೂಡಿಸುವಂತಿಲ್ಲ ಎಂದು ಪಕ್ಷಾಂತರ ನಿಷೇಧ ಕಾಯ್ದೆ ಸ್ಪಷ್ಟವಾಗಿ ಹೇಳುತ್ತದೆ. ಒಂದು ಪಕ್ಷದ ಮೂರನೇ ಎರಡರಷ್ಟು (2/3) ಸದಸ್ಯರು ಪಕ್ಷಾಂತರಗೊಂಡರೂ ಅದಕ್ಕೆ ಕಾನೂನಿನ ಮಾನ್ಯತೆ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಈ ಏಳೂ ಸಂಸದರ ನಡೆ ಅಸಾಂವಿಧಾನಿಕ ಮತ್ತು ಕಾನೂನುಬಾಹಿರ" ಎಂದು ಸಂಜಯ್ ಸಿಂಗ್ ಪ್ರತಿಪಾದಿಸಿದ್ದಾರೆ.

ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್, ಸ್ವಾತಿ ಮಾಲಿವಾಲ್, ಹರಭಜನ್ ಸಿಂಗ್, ರಾಜಿಂದರ್ ಗುಪ್ತಾ ಮತ್ತು ವಿಕ್ರಂ ಸಾಹ್ನಿ ಅವರು ಎಎಪಿ ತೊರೆದು ಬಿಜೆಪಿ ಸೇರುವುದಾಗಿ ಶುಕ್ರವಾರ ಘೋಷಿಸಿದ್ದರು.

ರಾಷ್ಟ್ರಪತಿ ಭೇಟಿಗೆ ಮುಂದಾದ ಸಿಎಂ ಭಗವಂತ್ ಮಾನ್

ಬಿಜೆಪಿ ಸೇರಲಿರುವ 7 ಸದಸ್ಯರ ಪೈಕಿ 6 ಮಂದಿ ಪಂಜಾಬ್‌ನಿಂದ ಆಯ್ಕೆಯಾದವರಾಗಿದ್ದಾರೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಪಕ್ಷದ ಶಾಸಕರೊಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಲು ಸಮಯ ಕೋರಿದ್ದಾರೆ. ಬಿಜೆಪಿ ಸೇರಿದ ಸದಸ್ಯರನ್ನು ಹಿಂಪಡೆಯುವಂತೆ ಮನವಿ ಮಾಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಎಎಪಿಯಲ್ಲಿ ಒಡಕು ಮೂಡಿಸಲು ಬಿಜೆಪಿ ಯತ್ನಿಸುತ್ತಿದ್ದು, ಪಕ್ಷ ತೊರೆದವರು ಪಂಜಾಬ್ ಜನತೆಗೆ ದ್ರೋಹ ಬಗೆದಿದ್ದಾರೆ ಎಂದು ಮಾನ್ ಆರೋಪಿಸಿದ್ದಾರೆ.

ಕಾಂಗ್ರೆಸ್‌ನಿಂದ 'ವಾಷಿಂಗ್ ಮಷಿನ್' ಟೀಕೆ

ಎಎಪಿ ಸಂಸದರ ಪಕ್ಷಾಂತರವನ್ನು ಉಲ್ಲೇಖಿಸಿ ಕಾಂಗ್ರೆಸ್ ಪಕ್ಷವು ಬಿಜೆಪಿಯನ್ನು ತೀವ್ರವಾಗಿ ಟೀಕಿಸಿದೆ. "ಮೋದಿ ವಾಷಿಂಗ್ ಪೌಡರ್ ಜೊತೆ ಬಿಜೆಪಿ ವಾಷಿಂಗ್ ಮಷಿನ್ ಮತ್ತೆ ಶುರುವಾಗಿದೆ" ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ವ್ಯಂಗ್ಯವಾಡಿದ್ದಾರೆ. ಭ್ರಷ್ಟಾಚಾರದ ಆರೋಪ ಹೊತ್ತ ವಿಪಕ್ಷ ನಾಯಕರನ್ನು ಬಿಜೆಪಿಗೆ ಸೇರಿಸಿಕೊಂಡು ಅವರ ಮೇಲಿನ ತನಿಖೆಯನ್ನು ನಿಧಾನಗೊಳಿಸಲಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ವಿಶೇಷವೆಂದರೆ, ಪಕ್ಷಾಂತರ ಮಾಡುತ್ತಿರುವ ಸಂಸದ ಅಶೋಕ್ ಮಿತ್ತಲ್ ಅವರು ಇತ್ತೀಚೆಗಷ್ಟೇ ಇ.ಡಿ (ಜಾರಿ ನಿರ್ದೇಶನಾಲಯ) ದಾಳಿ ಎದುರಿಸಿದ್ದರು.

ಕೇಜ್ರಿವಾಲ್ ವಿರುದ್ಧ ಸ್ವಾತಿ ಮಾಲಿವಾಲ್ ಕಿಡಿ

ಬಿಜೆಪಿ ಸೇರಿರುವ ಸ್ವಾತಿ ಮಾಲಿವಾಲ್ ಅವರು ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. "ಪಕ್ಷವು ತನ್ನ ಮೂಲತತ್ವಗಳಿಂದ ದೂರ ಸರಿದಿದೆ. ಕೇಜ್ರಿವಾಲ್ ನಿವಾಸದಲ್ಲಿ ಅವರ ಆಪ್ತ ಸಹಾಯಕನಿಂದ ಹಲ್ಲೆಗೊಳಗಾದಾಗ ದೂರು ನೀಡದಂತೆ ನನ್ನನ್ನು ಬೆದರಿಸಲಾಯಿತು. ಪ್ರಕರಣ ಹಿಂಪಡೆಯುವಂತೆ 2 ವರ್ಷ ಒತ್ತಡ ಹೇರಿದ್ದಲ್ಲದೆ, ಸಂಸತ್ತಿನಲ್ಲಿ ಮಾತನಾಡಲೂ ನನಗೆ ಅವಕಾಶ ನೀಡಲಿಲ್ಲ" ಎಂದು ಅವರು ಆರೋಪಿಸಿದ್ದಾರೆ. ಆದರೆ, ಈ ಪಕ್ಷಾಂತರವನ್ನು ದೆಹಲಿ ಬಿಜೆಪಿ ನಾಯಕಿ ರೇಖಾ ಗುಪ್ತಾ, "ಇದು ಕೇಜ್ರಿವಾಲ್ ಅವರ ಸರ್ವಾಧಿಕಾರಿ ಧೋರಣೆಗೆ ಸಿಕ್ಕ ದೊಡ್ಡ ಪೆಟ್ಟು" ಎಂದು ವಿಶ್ಲೇಷಿಸಿದ್ದಾರೆ.

Read More
Next Story